ಬೆಳಗಾವಿ: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Election 2023) ಹೊಸ್ತಿಲಲ್ಲೇ ರಾಜ್ಯ ರಾಜಕಾರಣದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ (Ramesh Jarakiholi CD Case) ತಲ್ಲಣ ಉಂಟುಮಾಡಿದೆ. ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K.Shivakumar) ಮತ್ತು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ನಡುವೆ ಆರೋಪ ಪ್ರತ್ಯಾರೋಪ ಜೋರಾಗಿಯೇ ನಡೆಯುತ್ತಿದೆ. ಈ ಬಗ್ಗೆ ಗೋಕಾಕ್ನಲ್ಲಿ ಪ್ರತಿಕ್ರಿಯಿಸಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ (Balachandra Jarakiholi), ಸಿಡಿ ಪ್ರಕರಣದ ಆರೋಪ ಪ್ರತ್ಯಾರೋಪ ಮುಂದುವರೆದರೆ ಡಿ.ಕೆ.ಶಿವಕುಮಾರ್, ರಮೇಶ್ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಕುಟುಂಬಗಳಿಗೆ ಡ್ಯಾಮೇಜ್ ಆಗುತ್ತದೆ. ಮೂರೂ ಕುಟುಂಬಗಳು ದೊಡ್ಡದಿವೆ. ಸಿಡಿ ಪ್ರಕರಣವನ್ನು ಇಲ್ಲಿಗೆ ಬಿಡಿ, ಮುಂದುವರಿಸಬೇಡಿ ಎಂದು ಮನವಿ ಮಾಡಿದ್ದಾರೆ.
ಇನ್ನು ಮೂರು ತಿಂಗಳಲ್ಲಿ ಚುನಾವಣೆ ಬರಲಿದೆ. ಸಿಡಿ ಪ್ರಕರಣವನ್ನು ಮುಂದಿಟ್ಟುಕೊಂಡು ಸಾರ್ವಜನಿಕವಾಗಿ ಟೀಕೆಗಳನ್ನು ಮಾಡುವುದನ್ನು ಮೂವರು ನಿಲ್ಲಿಸಬೇಕು. ಎಲ್ಲರೂ ದೊಡ್ಡ ಮಟ್ಟಕ್ಕೆ ಬೆಳೆದಿದ್ದೀರಿ, ಇನ್ನೂ ಎತ್ತರಕ್ಕೆ ಬೆಳೆಯಬೇಕು. ನಾವೆಲ್ಲರು ಸೇರಿ ರಾಜಕೀಯವಾಗಿ ಹೋರಾಟ ಮಾಡೋಣ ಬನ್ನಿ. ಜನರಿಗೆ ಯಾರ ಮೇಲೆ ಪ್ರೀತಿ ಇದೆಯೋ ಅವರಿಗೆ ವೋಟ್ ಹಾಕುತ್ತಾರೆ ಎಂದರು.
ಕೆಲವು ವಿಚಾರವನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹಮಂತ್ರಿ ಆರಗ ಜ್ಞಾನೇಂದ್ರ ಅವರು ಆಹ್ವಾನಿಸಿದರೆ ಒಂದು ಕೊಠಡಿಯಲ್ಲಿ ಕುಳಿತು ಚರ್ಚೆ ಮಾತಾಡುತ್ತೇವೆ. ಇದನ್ನ ಸಾರ್ವಜನಿಕವಾಗಿ ಟೀಕೆ ಮಾಡುವುದನ್ನ ಮೂರು ಜನ ನಿಲ್ಲಿಸಬೇಕು. ಪಕ್ಷದಲ್ಲಿ ಈ ವಿಚಾರ ಕರೆದು ಕೇಳಿದರೆ ವರಿಷ್ಠರ ಮುಂದೆ ಹೇಳುತ್ತೇವೆ. ಮೂರು ಜನ ದಯಮಾಡಿ ಇದನ್ನ ಮುಂದುವರೆಸಬೇಡಿ ಎಂದು ವಿನಂತಿಸಿದರು.
ಮುಖ್ಯಮಂತ್ರಿ ಕುರ್ಚಿ ಮೇಲೆ ಕಣ್ಣಿಟ್ಟಿರುವ ಡಿ.ಕೆ.ಶಿವಕುಮಾರ್ ವಿರುದ್ಧ ಇದೀಗ ಜಿದ್ದಾಜಿದ್ದಿಗೆ ಬಿದ್ದಿರುವ ರಮೇಶ್ ಜಾರಕಿಹೊಳಿ, ಮೇಲಿಂದ ಮೇಲೆ ಗಂಭೀರ ಆರೋಪಗಳನ್ನು ಮಾಡುತ್ತಿದ್ದಾರೆ. ಸಿಡಿ ಪ್ರಕರಣದ ಹಿಂದೆ ಡಿ.ಕೆ.ಶಿವಕುಮಾರ್, ಶಾಸಕಿ ಕುಟುಂಬ ಇದೆ ಎಂದು ಆರೋಪಿಸಿದ್ದರು. ಅಲ್ಲದೆ ಐಟಿ, ಇಡಿ ದಾಳಿಗಳಲ್ಲಿಕೋಟ್ಯಾಂತರ ರೂಪಾಯಿ ಹಣ ಜಪ್ತಿ ಮಾಡಿರುವ ಬಗ್ಗೆ ಡಿ.ಕೆ.ಶಿವಕುಮಾರ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಬಿಡುಗಡೆ ಮಾಡಿದ್ದರು. ಇದಕ್ಕೂ ಮುನ್ನ ತನ್ನ ವಿರುದ್ಧ ಮಾಡಿದ ಸಿಡಿ ಷಡ್ಯಂತರದ ಹಿಂದೆ ಡಿ.ಕೆ.ಶಿವಕುಮಾರ್ ಮತ್ತು ಕಂಪನಿ ಇದೆ ಎಂದು ಆರೋಪಿಸಿದ್ದರು. ಈ ಎರಡು ಅಸ್ತ್ರಗಳನ್ನು ಡಿ.ಕೆ.ಶಿವಕುಮಾರ್ ಮೇಲೆ ಪ್ರಯೋಗಿಸಿದ ನಂತರ ಮೂರನೇ ಅಸ್ತ್ರವಾಗಿ ಬ್ಲೂ ಫಿಲ್ಮ್ ದಂಧೆ ಬಗ್ಗೆ ಪ್ರಯೋಗಿಸಿದರು. ಡಿಕೆಶಿ ರಾಜಕೀಯಕ್ಕೆ ಬರುವ ಮುನ್ನ ಕನಕಪುರದಲ್ಲಿ ಅಶ್ಲೀಲ ಸಿನಿಮಾ ಪ್ರದರ್ಶನದ ಮಾಡುತ್ತಿದ್ದರು ಎಂಬ ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: 100 ರೂಪಾಯಿಗೆ ಕನಕಪುರದಲ್ಲಿ ಬ್ಲೂ ಫಿಲ್ಮ್ ತೋರಿಸಿದ್ದ ಡಿ.ಕೆ.ಶಿವಕುಮಾರ್: ರಮೇಶ್ ಜಾರಕಿಹೊಳಿ ಗಂಭೀರ ಆರೋಪ
ಇನ್ನು ರಮೇಶ್ ಜಾರಕಿಹೊಳಿ ಆರೋಪಕ್ಕೆ ಸಂಬಂಧ ವಾಗ್ದಾಳಿ ನಡೆಸಿದ ಡಿಕೆ ಶಿವಕುಮಾರ್, ನಾನೇನು ಪ್ಯಾಂಟ್ ಬಿಚ್ಚು ಅಂತ ಹೇಳಿದ್ನಾ ಎಂದು ಹೇಳಿದ್ದರು. ಇನ್ನು ಪ್ಯಾಂಟ್ ಬಿಚ್ಚುವ ಹೇಳಿಕೆಗೆ ಪ್ರತಿಕ್ರಿಯಿಸಿದ ಎಂಎಲ್ಸಿ ಲಖನ್ ಜಾರಕಿಹೊಳಿ, ಡಿ.ಕೆ.ಶಿವಕುಮಾರ್ ಬೆಳಗಾವಿಗೆ ಬಂದಾಗ ಎಲ್ಲಿ ಪಂಚೆ ಬಿಚ್ಚುತ್ತಾರೆ, ಎಲ್ಲಿ ಪ್ಯಾಂಟ್ ಬಿಚ್ಚುತ್ತಾರೆ ಎಂದು ಗೊತ್ತಿದೆ. ಸಮಯ ಬಂದಾಗ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದಿದ್ದಾರೆ. ಇನ್ನು ಸಿಡಿ ಪ್ರಕರಣದ ಹಿಂದೆ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಇದ್ದಾರೆ ಎಂದು ಮಾಜಿ ಶಾಸಕ ನಾಗರಾಜ್ ಹೇಳಿದ್ದರು.
ಇನ್ನು ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ವಾಗ್ದಾಳಿ ನಡೆಸಿದ್ದ ರಮೇಶ್, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಹಾಳಾಗಲು ವಿಷಕನ್ಯೆಯೇ ಕಾರಣ. 2000ನೇ ಇಸವಿಯಿಂದ ರಾಜ್ಯದಲ್ಲಿ ಸಿಡಿ ಪ್ರಕರಣ ನಡೆಯುತ್ತಿದೆ. ಹಲವಾರು ರಾಜಕಾರಣಿಗಳು, ಅಧಿಕಾರಿಗಳನ್ನು ಸಿಲುಕಿಸಿದ್ದಾರೆ. ಸಿಡಿ ತೋರಿಸಿ ಬ್ಲಾಕ್ಮೇಲ್ ತಮ್ಮ ಕೆಲಸ ಮಾಡಿಕೊಂಡಿದ್ದಾರೆ. ಕೋ ಆಪರೇಟಿವ್ ಬ್ಯಾಂಕ್ನಲ್ಲಿ ಕೋಟ್ಯಂತರ ಅವ್ಯವಹಾರ ನಡೆದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಹಾಳಾಗಲು ವಿಷಕನ್ಯೆಯೇ ಕಾರಣ ಎಂದು ರಮೇಶ್ ಜಾರಕಿಹೊಳಿ ಆರೋಪಿಸಿದ್ದಾರೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:17 pm, Tue, 31 January 23