Ramesh Jarkiholi Audio: ಡಿ.ಕೆ.ಶಿವಕುಮಾರ್ ವಿರುದ್ಧ ಆಡಿಯೋ ಬಿಡುಗಡೆ ಮಾಡಿದ ರಮೇಶ್ ಜಾರಕಿಹೊಳಿ: ಆ 18 ಸೆಕೆಂಡ್ ಆಡಿಯೋದಲ್ಲೇನಿದೆ?
ರಾಜಕೀಯ ಬದ್ಧ ವೈರಿಗಳಾದ ರಮೇಶ್ ಜಾರಕಿಹೊಳಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಡುವೆ ಮತ್ತೊಂದು ಮಾತಿನ ಸಮರ ಶುರುವಾಗಿದೆ. ಇದೀಗ ರಮೇಶ್ ಜಾರಕಿಹೊಳಿ ಅವರು ಡಿಕೆಶಿ ವಿರುದ್ಧ ಆಡಿಯೋ ಬಾಂಬ್ ಸ್ಫೋಟಿಸಿದ್ದಾರೆ.
ಬೆಂಗಳೂರು: ವಿಧಾನಸಭೆ ಚುನಾವಣೆ ಹೊತ್ತಲ್ಲೇ ಆಡಿಯೋ ಪಾಲಿಟಿಕ್ಸ್ ಶುರುವಾಗಿದೆ. ತಮ್ಮನ್ನು ಸಿ.ಡಿ ಪ್ರಕರಣದಲ್ಲಿ (CD Case) ಸಿಲುಕಿಸಿದ್ದೇ ಡಿ.ಕೆ ಶಿವಕುಮಾರ್ (KPCC President DK Shivakumar) ಆ್ಯಂಡ್ ಕಂಪನಿ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi) ಎಂದು ಆರೋಪಿಸಿದ್ದಾರೆ. ಇದರ ಬೆನ್ನಲ್ಲೇ ಇದೀಗ ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ವಿರುದ್ಧ ಆಡಿಯೋ ಬಾಂಬ್ ಸಿಡಿಸಿದ್ದಾರೆ. ಇದರೊಂದಿಗೆ ಬೆಳಗಾವಿ ಸಾಹುಕಾರ್ ಡಿಕೆಶಿ ಮಾತನಾಡಿದ್ದಾರೆ ಎನ್ನಲಾದ 18 ಸೆಕೆಂಡ್ ಆಡಿಯೋ ಬಿಡುಗಡೆ ಮಾಡಿ ರಾಜ್ಯ ರಾಜಕಾರಣದಲ್ಲಿ ಹಲ್ ಚಲ್ ಎಬ್ಬಿಸಿದ್ದಾರೆ.
ಇಂದು (ಜ.30) ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಮೇಶ್ ಜಾರಕಿಹೊಳಿ, ತಮ್ಮ ವಿರುದ್ಧದ ಸಿಡಿ ಬಗ್ಗೆ ಪ್ರಾಸ್ತಾಪಿಸಿದರು. ಅಲ್ಲದೇ ಡಿಕೆ ಶಿವಕುಮಾರ್ ವಿರುದ್ಧ ಆಡಿಯೋ ಬಿಡುಗಡೆ ಮಾಡಿದರು. ನಮ್ಮ ಮನೆಯಲ್ಲಿ ರೇಡ್ ಆದಾಗ 45 ಕೋಟಿ ರೂ. ಸೀಜ್ ಆಗಿತ್ತು. ನನಗೆ ದುಬೈ, ಲಂಡನ್, ಮುಂಬೈನಲ್ಲಿ ಫ್ಲ್ಯಾಟ್ ಇದೆ. ನಮ್ಮ ಮನೆಯ ಮೇಲೆ ದಾಳಿ ಆದಾಗ ಹಣ ಸೀಜ್ ಆಗಿತ್ತು ಎಂದು ಮಾತನಾಡಿರುವುದು ಈ ಆಡಿಯೋದಲ್ಲಿದ್ದು, ಇದು ಡಿಕೆ ಶಿವಕುಮಾರ ಅವರದ್ದೇ ಎಂದು ರಮೇಶ್ ಜಾರಕಿಹೊಳಿ ಆಡಿಯೋ ರಿಲೀಸ್ ಮಾಡಿದ್ದಾರೆ.
ಇನ್ನು ಡಿಕೆಶಿ ಅತ್ತ ಶ್ರೀನಗರದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಿದ್ದು, ಈ ಬಗ್ಗೆ ಇದುವರೆಗೂ ಯಾವುದೇ ಪ್ರತಿಕ್ರಿಯಿಸಿಲ್ಲ. ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿರುವ ಡಿಕೆ ಶಿವಕುಮಾರ್ ವಿರುದ್ಧ ರಮೇಶ್ ಜಾರಕಿಹೊಳಿ ಆಡಿಯೋ ಅಸ್ತ್ರ ಪ್ರಯೋಗಿಸಿದ್ದು, ಇದು ಮುಂದಿನ ದಿನಗಳಲ್ಲಿ ಯಾವ ಹಂತಕ್ಕೆ ತಲುಪಲಿದೆ ಎನ್ನುವುದನ್ನು ಕಾದುನೋಡಬೇಕಿದೆ.
Published On - 2:31 pm, Mon, 30 January 23