ಬಳ್ಳಾರಿ: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ (Gali Janardhan Reddy)ಮತ್ತೆ ರಾಜಕೀಯಕ್ಕೆ ಎಂಟ್ರಿ ಕೊಡುವ ಸುಳಿವು ಕೊಟ್ಟಿದ್ದಾರೆ. ಒಂದೆಡೆ ಸುಪ್ರೀಂಕೋರ್ಟ್ ಸೂಚನೆ ಮೇರೆಗೆ ಬಳ್ಳಾರಿ ಜಿಲ್ಲೆ ತೊರೆಯುತ್ತಿರುವ ರೆಡ್ಡಿ, ಮತ್ತೆ ರಾಜಕೀಯ ಅಖಾಡಕ್ಕಿಳಿಯಲು ಸಜ್ಜಾಗಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ (Karnataka Assembly Election 2023) ರೆಡ್ಡಗಾರು ಸ್ಪರ್ಧೆ ಮಾಡೋದಕ್ಕೆ ಕ್ಷೇತ್ರ ಹುಡುಕಾಟ ಶುರು ಮಾಡಿದ್ದು, ಕೊಪ್ಪಳದ ಗಂಗಾವತಿ ಕ್ಷೇತ್ರದಿಂದ ಸ್ಪರ್ಧಿಸುವ ಮುನ್ಸೂಚನೆ ನೀಡಿದ್ದಾರೆ. ಇದರ ಜೊತೆ ರಾಯಚೂರು ಜಿಲ್ಲೆಯ ಕ್ಷೇತ್ರದ ಮೇಲೂ ಕಣ್ಣಿಟ್ಟಿದ್ದಾರೆ. ಇದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.
ಗಾಲಿ ಜನಾರ್ದನ ರೆಡ್ಡಿ, ಒಂದು ಕಾಲದಲ್ಲಿ ಸರ್ಕಾರವನ್ನು ಕೆಡವಿ ಮತ್ತೊಂದು ಸರ್ಕಾರವನ್ನು ಅಧಿಕಾರಕ್ಕೆ ತರುವ ಶಕ್ತಿ ಹೊಂದಿದ್ದ ರಾಜಕಾರಣಿ. ಆದ್ರೆ, ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಜೈಲು ಪಾಲಾಗಿ ಬಳ್ಳಾರಿಯಿಂದ ದೂರ ಆಗಿದ್ದ ರೆಡ್ಡಿಗಾರು ಮತ್ತೆ ಚುನಾವಣೆ ರಣಾಂಗಣಕ್ಕೆ ಧುಮುಕಲು ಸಜ್ಜಾಗಿದ್ದಾರೆ. ಒಂದೆಡೆ ನವಂಬರ್ 6ರ ನಂತರ ಬಳ್ಳಾರಿ ಜಿಲ್ಲೆಯಿಂದ ಹೊರಗಿರುವುವಂತೆ ಸುಪ್ರೀಂಕೋರ್ಟ ಸೂಚನೆ ನೀಡಿದ್ರು ರೆಡ್ಡಿ, ರಾಜಕೀಯ ಉತ್ಸಾಹ ಕುಂದಿಲ್ಲ. 12 ವರ್ಷಗಳ ಕಾಲ ರಾಜಕೀಯದಿಂದ ತೆರಮರೆಗೆ ಸರಿದಿದ್ದ ಜನಾಧನರೆಡ್ಡಿ ಇದೀಗ ಮತ್ತೆ ಎರಡನೇ ಇನ್ಸಿಂಗ್ ಆರಂಭಿಸುವುದಕ್ಕೆ ತಯಾರಿ ನಡೆಸುತ್ತಿದ್ದಾರೆ. ಹೀಗಾಗಿ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎನ್ನುವ ಲೆಕ್ಕಾಚಾರ ಹಾಕಿರುವ ರೆಡ್ಡಿ, ಬಳ್ಳಾರಿ ಜಿಲ್ಲೆಯಿಂದ ಹೊರಗಿದ್ದುಕೊಂಡೇ ಕೊಪ್ಪಳ (ಗಂಗಾವತಿ) ಹಾಗೂ ರಾಯಚೂರು(ಸಿಂಧನೂರು ಜಿಲ್ಲೆಯಿಂದ ಕಣಕ್ಕಿಳಿಯಲು ಸಿದ್ಧತೆ ನಡೆಸುತ್ತಿದ್ದಾರೆ.
ಬಳ್ಳಾರಿಯಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ನಾಣ್ಯದ ತುಲಾಭಾರ
ಅಭಿಮಾನಿಗಳಿಗೆ ಸುಳಿವು ಕೊಟ್ಟ ರೆಡ್ಡಿ
ಮೊನ್ನೇ ಅಷ್ಟೇ ಸುಪ್ರೀಂ ಕೋರ್ಟ್ ಅನುಮತಿ ಪಡೆದು ಬಳ್ಳಾರಿ ಜಿಲ್ಲೆಗೆ ಕಾಲಿಟ್ಟ ಜನಾರ್ಧನ ರೆಡ್ಡಿ ಅವರ ಅಭಿಮಾನಿಗಳು ತುಲಾಭಾರ ಮಾಡಿದ್ದರು. ಈ ವೇಳೆ ಮಾತನಾಡಿದ್ದ ರೆಡ್ಡಿ, ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಸುಳಿವು ನೀಡಿದ್ದರು. ಈ ಮೂಲಕ ರೆಡ್ಡಿ ಮತ್ತೆ ರಾಜ್ಯ ರಾಜಕಾರಣಕ್ಕೆ ಪ್ರವೇಶ ಮಾಡಲು ಆಸೆ ವ್ಯಕ್ತಪಡಿಸಿದ್ದಾರೆ. ಆದ್ರೆ, ಯಾವ ಕ್ಷೇತ್ರ ಅಖಾಡಕ್ಕಿಳಿಯುತ್ತಾರೆ ಎನ್ನುವುದು ಮಾತ್ರ ಬಿಟ್ಟುಕೊಟ್ಟಿಲ್ಲ. ಇದರಿಂದ ಜನಾರ್ಧನ ರೆಡ್ಡಿ ಮುಂದಿನ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಕಣಕ್ಕಿಳಿಯುತ್ತಾರೆ ಎನ್ನುವುದು ಅವರ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಅಲ್ಲದೇ ರೆಡ್ಡಿ ರಾಜಕೀಯ ನಡೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದಂತೂ ಸತ್ಯ.
ರೆಡ್ಡಿ ಮುಂದೆ ಎರಡು ಕ್ಷೇತ್ರಗಳು
ಹೌದು.. ರೆಡ್ಡಿ ಅವರೇ ಹೇಳ್ತಿರೋ ಹಾಗೆ ರೆಡ್ಡಿ ಅವರು ಗಂಗಾವತಿ ಇಲ್ಲವೇ ಸಿಂಧನೂರುನಿಂದ ಕಣಕ್ಕೆ ಇಳಿಯುವುದು ಬಹುತೇಕ ಖಚಿತವಾಗಿದೆ ಎನ್ನಲಾಗಿದೆ. ಬಳ್ಳಾರಿ ಜಿಲ್ಲೆಯಿಂದ ಹೊರಗಿರಬೇಕಾಗಿರುವ ರೆಡ್ಡಿ, ಈ ಎರಡು ಕ್ಷೇತ್ರದಲ್ಲಿದ್ದುಕೊಂಡು ಸ್ಪರ್ಧೆಗೆ ಸಿದ್ಧರಾಗುತ್ತಿದ್ದಾರೆ. ಕಳೆದ ಹನ್ನೆರಡು ವರ್ಷಗಳಿಂದ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಲುಕಿಕೊಂಡು ತೆರೆಮರೆಗೆ ಸರಿದ್ರು ರೆಡ್ಡಿ ರಾಜಕೀಯ ಉತ್ಸಾಹ ಮಾತ್ರ ಕುಂದಿಲ್ಲ. ಈ ಹಿನ್ನಲೆಯಲ್ಲಿ ಸುಪ್ರೀಂಕೋರ್ಟ್ ನಲ್ಲಿ ತಮ್ಮ ಕೇಸ್ ಗಳ ಪ್ರಕರಣಗಳನ್ನ ಇತ್ಯರ್ಥ ಮಾಡಲು ಅರ್ಜಿ ಸಲ್ಲಿಕೆ ಮಾಡಿ, ಆದಷ್ಟು ಬೇಗೆ ಪ್ರಕರಣ ಇತ್ಯರ್ಥ ಮಾಡುವಂತೆ ಮನವಿ ಮಾಡಿದ್ದಾರೆ. ಕಾರಣ ಚುನಾವಣೆ ಘೋಷಣೆ ಆಗುವ ಹೊತ್ತಿಗೆ ಅಕ್ರಮ ಗಣಿಗಾರಿಕೆ ಕೇಸ್ ನಿಂದ ಮುಕ್ತಿ ಪಡೆದು ಕ್ಲೀನ್ ಆಗಿ ತಮ್ಮ ರಾಜಕೀಯ ಎರಡನೇ ಇನ್ನಿಂಗ್ಸ್ ಆರಂಭ ಮಾಡುವ ತವಕದಲ್ಲಿ ಇದ್ದಾರೆ.
ಜನಾಧನರೆಡ್ಡಿ ಪ್ರಕರಣಗಳಲ್ಲಿ ಈಗಾಗಲೇ ಕೋರ್ಟ್ ಸಾಕಷ್ಟು ಷರತ್ತು ಸಡಿಲಿಕೆ ಮಾಡಿದೆ. ಈ ಮಧ್ಯೆ ರೆಡ್ಡಿ ತಮ್ಮ ವಿರುದ್ದದ ಪ್ರಕರಣಗಳನ್ನ ಬೇಗ ಮುಕ್ತಾಯ ಮಾಡುವಂತೆ ಮನವಿ ಮಾಡಿ ಕೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದ್ರೆ ರೆಡ್ಡಿ ತಮ್ಮ ರಾಜಕೀಯದ ಎರಡನೇ ಇನ್ನಿಂಗ್ಸ್ ಆರಂಭ ಮಾಡುವುದು ನಿಶ್ಚಿತವಾಗಿದೆ. ಅಲ್ಲದೇ ಸಹೋದರ ಸೋಮಶೇಖರೆಡ್ಡಿ. ಕರುಣಾಕರರೆಡ್ಡಿ ಜೊತೆಗೆ ತಾವೂ ಸಕ್ರಿಯ ರಾಜಕೀಯದಲ್ಲಿ ಧುಮುಕುವ ಉತ್ಸಾಹ ತೋರುತ್ತಿದ್ದಾರೆ. ಆದ್ರೆ ರೆಡ್ಡಿ ಗಂಗಾವತಿ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರೋ ಅಥವಾ ಸಿಂಧನೂರನಿಂದ ಅಖಾಡಕ್ಕಿಳಿಯುತ್ತಾರೋ ಎನ್ನುವುದು ಕುತೂಹಲ ಮೂಡಿಸಿದ್ದು, ಅಂತಿಮವಾಗಿ ರೆಡ್ಡಿ ಯಾವ ಕ್ಷೇತ್ರ ಆಯ್ಕೆ ಮಾಡಿಕೊಳ್ಳುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.
Published On - 8:18 pm, Wed, 26 October 22