ಜೆಡಿಎಸ್ ಪಂಚರತ್ನ ಯಾತ್ರೆಗೆ ಇಂದು ಗವಿಗಂಗಾಧರ ದೇಗುಲದಲ್ಲಿ ಚಾಲನೆ: 1994ರಲ್ಲೂ ದೊಡ್ಡ ಗೌಡರು ಇಲ್ಲೇ ಪೂಜೆ ಸಲ್ಲಿಸಿದ್ದರು!
ನವೆಂಬರ್ 1ರಿಂದ ಪಂಚರತ್ನ ರಥಯಾತ್ರೆ ಆರಂಭಿಸಲು ಚಿಂತಿಸಿದ್ದೆ. ಇಂದು ಒಳ್ಳೇ ದಿನವಾದ್ದರಿಂದ ಪಂಚರತ್ನ ರಥಯಾತ್ರೆಗೆ ಇಂದೇ ಚಾಲನೆ ನೀಡಿದೆವು. ನಾಳೆ ಅಣ್ಣಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಗುವುದು - ಹೆಚ್ ಡಿ ಕುಮಾರಸ್ವಾಮಿ
ಬೆಂಗಳೂರು: ಮುಂದಿನ ವರ್ಷ ನಡೆಯಲಿರುವ ರಾಜ್ಯ ಅಸೆಂಬ್ಲಿ ಚುನಾವಣೆಗೆ ಜಾತ್ಯತೀತ ಜನತಾ ದಳ (ಜೆಡಿಎಸ್ -JDS) ಈಗಾಗಲೇ ಹಲವಾರು ಕಾರ್ಯಕ್ರಮಗಳ ಮೂಲಕ ಭರ್ಜರಿ ತಯಾರಿ ನಡೆಸಿದೆ. ಇಂದು ಐತಿಹಾಸಿಕ ಗವಿಗಂಗಾಧರಸ್ವಾಮಿ ದೇವಸ್ಥಾನದ (Gavi Gangadhareshwara Temple) ಬಳಿ ಜೆಡಿಎಸ್ ಪಕ್ಷದ ಪಂಚರತ್ನ ರಥಯಾತ್ರೆಗೆ (Pancharatna Yatra) ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಚಾಲನೆ ನಿಡಿದರು. ಗಮಾನರ್ಹವೆಂದರೆ 1994ರಲ್ಲಿನ ಅಸೆಂಬ್ಲಿ ಚುನಾವಣೆ ಸಂದರ್ಭದಲ್ಲಿ ಪಕ್ಷವು ಇಲ್ಲೇ ಪೂಜೆ ಸಲ್ಲಿಸಿತ್ತು. ಆಗ ಹೆಚ್.ಡಿ. ದೇವೇಗೌಡರ ನೇತೃತ್ವದಲ್ಲಿ ಚುನಾವಣೆಗೆ ಹೋಗಿದ್ದೆವು ಎಂದು ಕುಮಾರಸ್ವಾಮಿ ಈ ಸಂದರ್ಭದಲ್ಲಿ ಸ್ಮರಿಸಿದರು.
ನವೆಂಬರ್ 1ರಿಂದ ಪಂಚರತ್ನ ರಥಯಾತ್ರೆ ಆರಂಭಿಸಲು ಚಿಂತಿಸಿದ್ದೆ. ಇಂದು ಒಳ್ಳೇ ದಿನವಾದ್ದರಿಂದ ಪಂಚರತ್ನ ರಥಯಾತ್ರೆಗೆ ಇಂದೇ ಚಾಲನೆ ನೀಡಿದೆವು. ನಾಳೆ ಅಣ್ಣಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಗುವುದು. ನವೆಂಬರ್ 1ರಂದು ಕೋಲಾರದಲ್ಲಿ ಸಮಾವೇಶ ಆಯೋಜಿಸಿದ್ದೇವೆ ಎಂದು ಪಂಚರತ್ನ ರಥಯಾತ್ರೆಗೆ ಚಾಲನೆ ನೀಡಿ ಹೆಚ್ಡಿಕೆ ಹೇಳಿದರು.
ದೇವೇಗೌಡ ಮುಂದೆ ಯಾವುದೇ ಗಂಡೆದೆ ಮುಖ್ಯಮಂತ್ರಿ ಇಲ್ಲ:
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ ಸಚಿವ ಅಶೋಕ್ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು. SC-ST ಮೀಸಲಾತಿ ನಮ್ಮ ಗಂಡೆದೆ ಸಿಎಂ ಬೊಮ್ಮಾಯಿ ಅವರಿಂದ ಮಾತ್ರ ಕೋಡೊಕೆ ಆಯ್ತು ಎಂಬ ಸಚಿವ ಅಶೋಕ್ ಹೇಳಿಕೆ ಪ್ರಸ್ತಾಪಿಸಿದ ಅವರು ಮೀಸಲಾತಿ ವಿಚಾರದಲ್ಲಿ ಈಗ ಏನಾಗಿದೆ ಅದನ್ನು ಇದೇ ಗಂಡೆದೆ ಮುಖ್ಯಮಂತ್ರಿ ಆಗಿದ್ದವರು ಎರಡು ವರ್ಷದಿಂದ ಯಾಕೆ ಹೆಚ್ಚಳ ಮಾಡಲಿಲ್ಲ. ಇದೊಂದು ಚುನಾವಣೆ ಸ್ಟಂಟ್ ಅಷ್ಟೆ. ST ಸಮುದಾಯಕ್ಕೆ ಮೀಸಲಾತಿ ಅಂತ ಕೊಟ್ಟವರು ದೇವೇಗೌಡರು. ದೇವೇಗೌಡ ಮುಂದೆ ಯಾವುದೇ ಗಂಡೆದೆ ಮುಖ್ಯಮಂತ್ರಿ ಇಲ್ಲ. ಚುನಾವಣೆ ಹತ್ತಿರ ಬಂದಾಗ ಮೀಸಲಾತಿ ಕೊಟ್ಟಿದ್ದಾರೆ. ಇವರಿಗೆ ಗಂಡೆದೆ ಇದ್ದಿದ್ದರೆ ಶ್ರೀಗಳನ್ನ ಯಾಕೆ 252 ದಿನ ಧರಣಿ ಕೂರಿಸುತ್ತಿದ್ದರು. ಮೀಸಲಾತಿಗೆ ನಮ್ಮ ಸಹಕಾರವೂ ಇದೆ. ನಮ್ಮ ಸಹಕಾರಿದಿಂದ ಇವತ್ತು ಅವರ ಗಂಡೆದೆ ಹೊರ ಬಂದಿದೆ. ವಿಪಕ್ಷಗಳು ಸಹಕಾರ ಕೊಟ್ಟ ಕಾರಣ ಇವತ್ತು ಗಂಡೆದೆ ಹೊರಗೆ ಬಂದಿದೆ. ಇಲ್ಲದೆ ಹೋಗಿದ್ರೆ ಹೆಣ್ಣೆದೆ ಹೊರಗೆ ಬರ್ತಿತ್ತು ಎಂದ ಕುಮಾರಸ್ವಾಮಿ ನನಗೆ ಹೆಣ್ಣು ಮಕ್ಕಳ ಬಗ್ಗೆ ಗೌರವ ಇದೆ ಎಂದರು.
ಇ.ಡಿ ಸೀಜ್ ಮಾಡಿದ 14 ಕೋಟಿ ರೂ: ಮೋದಿ -ಶಾ ಅದರ ಬಗ್ಗೆ ಮಾತಾಡಲಿ
ಇನ್ನು, ತೆಲಂಗಾಣದಲ್ಲಿ ನಡೆದಿರುವ ಆಪರೇಷನ್ ಕಮಲ ವಿಚಾರ ಮಾತನಾಡಿ ಬಿಜೆಪಿ ವಿರುದ್ದ ಕುಮಾರಸ್ವಾಮಿ ಕಿಡಿಕಾರಿದರು. ಕರ್ನಾಟಕ ಮುಗೀತು, ರಾಜಸ್ಥಾನ ಆಯ್ತು, ಮಹಾರಾಷ್ಟ್ರಾಯ್ತು. ಈಗ ತೆಲಂಗಾದಲ್ಲಿ ಆಪರೇಷನ್ ಮಾಡ್ತಿದ್ದಾರೆ. ತೆಲಂಗಾಣದಲ್ಲಿ ಅಷ್ಟು ಸುಲಭಕ್ಕೆ ಆಪರೇಷನ್ ಆಗೊಲ್ಲ. ಹಣದ ಸಮೇತ ಸಿಕ್ಕಿ ಹಾಕಿಕೊಂಡಿದ್ದಾರೆ. ಆಪರೇಷನ್ ಕಮಲಕ್ಕೆ ಅಕ್ರಮದ ಹಣ ಸುರಿಯುತ್ತಿದ್ದಾರೆ. ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರುಗಳು ಇ.ಡಿ. ಸೀಜ್ ಮಾಡಿದ 14 ಕೋಟಿ ರೂಪಾಯಿ ಬಗ್ಗೆ ಮಾತಾಡಲಿ. ಇ.ಡಿ ಅವರು ಈಗ ಏನ್ ಮಾಡ್ತಿದ್ದಾರೆ ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದರು.
ಕಾಂಗ್ರೆಸ್ ಟ್ರ್ಯಾಕ್ಟರ್ ಱಲಿಗೆ ಹೆಚ್.ಡಿ.ಕುಮಾರಸ್ವಾಮಿ ಟಾಂಗ್
ರಾಜ್ಯದಲ್ಲಿ ಕಾಂಗ್ರೆಸ್ ಟ್ರ್ಯಾಕ್ಟರ್ ಱಲಿ ಹಮ್ಮಿಕೊಳ್ಲುವುದಕ್ಕೆ ಹೆಚ್.ಡಿ.ಕುಮಾರಸ್ವಾಮಿ ಟಾಂಗ್ ನೀಡಿದರು. ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ಱಲಿ ಮಾಡ್ತೀವಿ ಅಂತಾರೆ. 5 ವರ್ಷ ನಿಮ್ಮದೇ ಸರ್ಕಾರ ಇತ್ತು ಆಗ ಏನು ಮಾಡಿದ್ದೀರಿ? ನಿಮ್ಮ ಕೊಡುಗೆ ಏನಿದೆ ಎಂಬುದಕ್ಕೆ ಉತ್ತರ ಕೊಡಬೇಕು. ಅಧಿಕಾರವಿದ್ದಾಗ ಏನೂ ಮಾಡದೆ ಈಗ ಮಾಡ್ತೀವಿ ಅಂತಾರೆ. ರಾಜ್ಯದ ಜನತೆ ನಿಮ್ಮ ಸುಳ್ಳು ಭರವಸೆಗಳನ್ನು ನಂಬುವುದಿಲ್ಲ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.
ಜೆಡಿಎಸ್ ನಿಂದ ಕೆಂಪೇಗೌಡ ಯೂನಿವರ್ಸಿಟಿ ಪ್ರತ್ಯಾಸ್ತ್ರ
ಬಿಜೆಪಿಯ ಕೆಂಪೇಗೌಡ ಪ್ರತಿಮೆ ಸ್ಥಾಪನೆ ಅಸ್ತ್ರಕ್ಕೆ ಜೆಡಿಎಸ್ ನಿಂದ ಕೆಂಪೇಗೌಡ ಯೂನಿವರ್ಸಿಟಿ ಪ್ರತ್ಯಾಸ್ತ್ರ ಪ್ರಯೋಗಿಸಲಾಗಿದೆ. ಪಂಚರತ್ನ ಕಾರ್ಯಕ್ರಮದ ಚಾಲನೆ ಬಳಿಕ ಮಾಜಿ ಸಿಎಂ ಕುಮಾರಸ್ವಾಮಿ ಈ ವಿಷಯ ಪ್ರಕಟಿಸಿದರು. ಅಮಾರವತಿ ಕಟ್ಟಲು ದೆಹಲಿಯಿಂದ ಮೋದಿ ಮಣ್ಣು ತಂದ್ರು. ಆದರೆ ಆ ಅಮಾರವತಿ ಹೇಗೆ ಇದೆಯೋ ಅಂತಾ ನನಗೆ ಗೊತ್ತಿಲ್ಲ. ಆದರೆ ಕೆಂಪೇಗೌಡ ಕನಸನ್ನು ನಾನು ನನಸು ಮಾಡುತ್ತೇನೆ. ಕೆಂಪೇಗೌಡರ ಹೆಸರಿನಲ್ಲಿ ಯೂನಿವರ್ಸಿಟಿ ಮಾಡಿ, ಯುವಕರಿಗೆ ಶಿಕ್ಷಣ ಹಾಗೂ ಉದ್ಯೋಗ ಕೊಡುತ್ತೇನೆ ಎಂದು ಅವರು ಭರವಸೆ ನಿಡಿದರು.
ಕಾಂಗ್ರೆಸ್- ಬಿಜೆಪಿಯ ಪಾಪದ ಕೊಡ ತುಂಬಿದೆ. ಕಾಂಗ್ರೆಸ್ ನವರು ಯಾವ ಜೋಡೋ ಆದರೂ ಮಾಡಿಕೊಳ್ಳಲಿ. ಬಿಜೆಪಿ ಯವರು ಯಾವ ಸಂಕಲ್ಪ ಯಾತ್ರೆ ಆದರೂ ಮಾಡಿಕೊಳ್ಳಲಿ. 2023ಕ್ಕೆ ನಮ್ಮ ಪಕ್ಷವೇ ಅಧಿಕಾರಕ್ಕೆ ಬರೋದು ನಿಶ್ಚಿತ. ಜನರಿಂದ ಲೂಟಿ ಮಾಡಿದ ಹಣವನ್ನು ಹಂಚಲು ಬರ್ತಾರೆ. ಒಂದು ಮತಕ್ಕೆ 2,000 ರೂ. ಮತ್ತೆ ಕುಕ್ಕರ್ ಅಂತಾ ಬರ್ತಾರೆ. ಇದೆಲ್ಲ ಹಣ ರಾಜ್ಯದ ಜನರಿಂದ ಲೂಟಿ ಮಾಡಿರುವ ಹಣ. ಆದರೆ ನಾವು ಯಾರೂ ದುಡ್ಡು ಲೂಟಿ ಹೊಡೆದಿಲ್ಲ. ಭಾರತ್ ಜೋಡೋ ದಿಂದ ಜನರ ಸಮಸ್ಯೆ ಗಳ ಅರ್ಥ ಆಗಲ್ಲ. ಇವಾಗ ಏನೋ ಕಾಂಗ್ರೆಸ್ ನಾಯಕರು ಪಟ್ಟಿ ಮಾಡ್ತಾರಂತೆ. ಆದರೆ ಅವರಿಂದ ಏನು ಕೂಡ ಜನರ ಸಮಸ್ಯೆ ನಿವಾರಣೆ ಮಾಡೋಕೆ ಆಗಲ್ಲ ಎಂದು ಅವರು ಟಾಂಗ್ ನೀಡಿದರು.
Published On - 11:56 am, Thu, 27 October 22