ಬೆಂಗಳೂರು: ಕುಕ್ಕರ್ ಬಾಂಬ್ ಸ್ಫೋಟದ ವಿಚಾರದಲ್ಲಿ ನೀಡಿದ ಹೇಳಿಕೆ ಸತ್ಯಾಂಶದಿಂದ ಕೂಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K.Shivakumar) ಹೇಳುವ ಮೂಲಕ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸತ್ಯಾಂಶವನ್ನು ಹೇಳಿದ್ದೇನೆ. ನಿನ್ನೆ ಬಿ.ಎಸ್.ಯಡಿಯೂರಪ್ಪ (B.S.Yediyurappa) ಹಾಗೂ ಬಿಜೆಪಿ (BJP) ವಿಷಯ ಇತ್ತು. ಬಿಜೆಪಿಯವರು ತಕ್ಷಣ ಈ ಹೇಳಿಕೆಯನ್ನು ಮುಂದಿಟ್ಟುಕೊಂಡು ಜಂಪ್ ಮಾಡಿದರು. ಪ್ರಕರಣವನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದೇನೆ. ಇಂತಹ ರಾಜಕಾರಣದಿಂದ ಎಲ್ಲರಿಗೂ ದ್ರೋಹ ಬಗೆಯುತ್ತಿದ್ದಾರೆ ಎಂದು ಟೀಕಿಸಿದರು.
ದೇಶದ ಐಕ್ಯತೆ ಹಾಗೂ ಸಮಗ್ರತೆಗಾಗಿ ನಮ್ಮ ಪಕ್ಷ ಯಾವತ್ತೂ ಬದ್ಧವಾಗಿದೆ. ನಮ್ಮ ನಾಯಕರನ್ನೇ ನಾವು ಕಳೆದುಕೊಂಡಿದ್ದೇವೆ. ಯಡಿಯೂರಪ್ಪ ಬಗ್ಗೆ ಮಾತ್ರವಲ್ಲ ಇಡೀ ಬಿಜೆಪಿಯಲ್ಲಿ ಒಬ್ಬರಿಗೊಬ್ಬರು ಕುದಿತ ಇದೆ. ಯಡಿಯೂರಪ್ಪರನ್ನು ಬಿಜೆಪಿ ಲೆಕ್ಕಕ್ಕೇ ಇಟ್ಟುಕೊಂಡಿಲ್ಲ. ಚುನಾವಣೆವರೆಗೆ ಯಡಿಯೂರಪ್ಪರನ್ನು ತಳ್ಳಿಕೊಂಡು ಹೋಗುತ್ತಿದ್ದಾರೆ. ಯಡಿಯೂರಪ್ಪ ಅವರ ಮಾತಲ್ಲೇ ದುಗುಡ, ನೋವು ಗೊತ್ತಾಗುತ್ತಿತ್ತು ಎಂದರು.
ಇದನ್ನೂ ಓದಿ: ಕೊಪ್ಪಳ ಜಿಲ್ಲೆಯನ್ನೇ ಟಾರ್ಗೆಟ್ ಮಾಡಿದ ಬಿಜೆಪಿ ಮತ್ತು ಕಾಂಗ್ರೆಸ್; ಜಿಲ್ಲೆಯಲ್ಲಿ ಎರಡೂ ಪಕ್ಷಗಳ ರಾಜಕೀಯ ಚದುರಂಗದಾಟ
ಕಾಂಗ್ರೆಸ್ ಭಯೋತ್ಪಾಕದಕರ ಪರ ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡಿದ ಹೇಳಿಕೆಗೆ ತಿರುಗೇಟು ನೀಡಿದ ಕೆಪಿಸಿಸಿ ಅಧ್ಯಕ್ಷರು, ಮುಖ್ಯಮಂತ್ರಿಯವರು ಮಾರ್ಕೆಟ್ನಲ್ಲಿರಬೇಕು. ಹೀಗಾಗಿ ಕಾಂಗ್ರೆಸ್ ಪಕ್ಷದ ಮೇಲೆ ಆರೋಪ ಮಾಡುತ್ತಾರೆ. ಹಾಗಾದರೆ ಭ್ರಷ್ಟಾಚಾರ ವಿಚಾರ, ಓಟರ್ ಐಡಿ ವಿಚಾರ ಅದರ ಬಗ್ಗೆ ಅವರು ಮಾತಾಡಲಿ ನೋಡೋಣ ಎಂದು ಸವಾಲು ಹಾಕಿದರು.
ಮತಪಟ್ಟಿ ಅಕ್ರಮ ಹಾಗೂ ಭ್ರಷ್ಟಾಚಾರದ ಆರೋಪವನ್ನು ಡೈವರ್ಟ್ ಮಾಡಲು ರಾಜ್ಯ ಬಿಜೆಪಿ ಸರ್ಕಾರ ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ ಮಾಡಿಸಿದೆ ಎಂದು ಡಿಕೆ ಶಿವಕುಮಾರ್ ಅವರು ಗಂಭೀರ ಆರೋಪ ಮಾಡಿದ್ದರು. ಮತ ಮಾಹಿತಿ ಕಳವು ಅಕ್ರಮ ವಿಚಾರದಿಂದ ಜನರ ಗಮನ ಬೇರೆಡೆ ಸೆಳೆಯಲು ಕುಕ್ಕರ್ ಬಾಂಬ್ ಬ್ಲಾಸ್ಟ್ ವಿಚಾರ ತಂದರು. ಎಲ್ಲಿಂದ ಭಯೋತ್ಪಾದಕರು ಬಂದು ಬ್ಲಾಸ್ಟ್ ಮಾಡಿದರು? ಡಿಜಿ ಆತುರದಲ್ಲಿ ಭಯೋತ್ಪಾದಕ ಕೃತ್ಯ ಎಂದರು. ಕೇವಲ ವಿಚಾರ ಬೇರೆಡೆ ಸೆಳೆಯುವ ಪ್ರಯತ್ನವಾಗಿದೆ ಎಂದು ಡಿಕೆಶಿವಕುಮಾರ್ ಅವರು ಹೇಳಿಕೆ ನೀಡಿದ್ದರು.
ಇದನ್ನೂ ಓದಿ: ಕೇಸರಿ ಬಿಕಿನಿ ವಿವಾದ: ದೀಪಿಕಾ ಪಡುಕೋಣೆ ಸ್ಥಾನದಲ್ಲಿ ಬಿಂದು ಗೌಡ ಫೋಟೋ ಎಡಿಟ್ ಮಾಡಿ ವೈರಲ್ ಮಾಡಿದ ಕಿಡಿಗೇಡಿಗಳು
ಕುಕ್ಕರ್ ಬ್ಲಾಸ್ಟ್ ಪೂರ್ವನಿಯೋಜಿತ ಎಂದು ಹೇಗೆ ಹೇಳುತ್ತೀರಿ ಎಂಬ ಮಾಧ್ಯಮದವರ ಪ್ರಶ್ನೆಗೆ ಕುಕ್ಕರ್ ಬ್ಲಾಸ್ಟ್ ಪ್ರಕರಣದ ತನಿಖೆಗೂ ಮುನ್ನವೇ ಅಧಿಕಾರಿಗಳು ಇದನ್ನು ಭಯೋತ್ಪಾದಕ ಕೃತ್ಯ ಎಂದು ಹೇಗೆ ಘೋಷಿಸಿದರು? ಇದರ ಹಿಂದೆ ಯಾವ ಉಗ್ರನಿದ್ದಾನೆ? ಯಾವ ಸಂಘಟನೆ ಇದೆ? ಯಾರ ವಿರುದ್ಧ ಯಾವ ಕ್ರಮ ಕೈಗೊಂಡಿದ್ದಾರೆ. ತನಿಖೆ ಏನಾಯ್ತು ಎಂದು ಪ್ರಶ್ನಿಸಿದರು. ಮತ ಮಾಹಿತಿ ಕಳವು ಪ್ರಕರಣವನ್ನು ಮುಚ್ಚಿಹಾಕಲು ಈ ಷಡ್ಯಂತ್ರ ರೂಪಿಸಿದ್ದಾರೆ ಎಂದಿದ್ದರು.
ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ