Bengaluru Mysuru expressway: ಮೈಸೂರು ಬೆಂಗಳೂರು ಹೆದ್ದಾರಿಯಲ್ಲಿ ಸ್ವಚ್ಛಭಾರತ ಬೇಡವೇ; ನಿಖಿಲ್ ಕುಮಾರಸ್ವಾಮಿ ಪ್ರಶ್ನೆ

|

Updated on: Mar 16, 2023 | 3:06 PM

ಬೆಂಗಳೂರು ಮೈಸೂರು ಎಕ್ಸ್​​ಪ್ರೆಸ್ ವೇ ಟೋಲ್ ಸಂಗ್ರಹ ವಿರೋಧಿಸಿ ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಮತ್ತು ಪಕ್ಷದ ಕಾರ್ಯಕರ್ತರು ಕಣಿಮಿಣಿಕೆ ಬಳಿ ಭಾರೀ ಪ್ರತಿಭಟನೆ ನಡೆಸಿದ್ದು, ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರು: ಬೆಂಗಳೂರು ಮೈಸೂರು ಎಕ್ಸ್​​ಪ್ರೆಸ್ ವೇ (Bengaluru Mysuru expressway) ಟೋಲ್ ಸಂಗ್ರಹ ವಿರೋಧಿಸಿ ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಮತ್ತು ಪಕ್ಷದ ಕಾರ್ಯಕರ್ತರು ಕಣಿಮಿಣಿಕೆ ಬಳಿ ಭಾರೀ ಪ್ರತಿಭಟನೆ ನಡೆಸಿದ್ದು, ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗುರುವಾರ ಬೆಳಿಗ್ಗೆ ಟೋಲ್ ಪ್ಲಾಜಾ ಬಳಿ ಪ್ರತಿಭಟನೆ ಆರಂಭಿಸಿದ ನಿಖಿಲ್ ಹಾಗೂ ಬೆಂಬಲಿಗರು ಎಕ್ಸ್​​ಪ್ರೆಸ್ ವೇಯಲ್ಲಿ ಸಂಚಾರಕ್ಕೆ ತಡೆಯೊಡ್ಡಲು ಮುಂದಾದರು. ಪ್ರತಿಭಟನೆ ತೀವ್ರಗೊಳಿಸುತ್ತಿದ್ದಂತೆಯೇ ಸಂಚಾರ ದಟ್ಟಣೆಯೂ ಉಂಟಾಗತೊಡಗಿತು. ಬಳಿಕ ಪೊಲೀಸರು ಅವರನ್ನು ವಶಕ್ಕೆ ಪಡೆದರು. ಒಮ್ಮೆ ಟೋಲ್ ಸಂಗ್ರಹ ಆರಂಭಿಸಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಭಾರೀ ಪ್ರತಿಭಟನೆಯ ನಂತರ ಮುಂದೂಡಿಕೆ ಮಾಡಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಹೆದ್ದಾರಿಯನ್ನು ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ ಮತ್ತೆ ಆರಂಭಿಸಿದೆ.

ಆದರೆ, ಎಕ್ಸ್​​ಪ್ರೆಸ್​ ವೇ ಕಾಮಗಾರಿ ಶೇ 100ರಷ್ಟು ಪೂರ್ಣಗೊಂಡಿಲ್ಲ. ಸೂಕ್ತ ಸೌಲಭ್ಯಗಳೂ ಇಲ್ಲ. ಹೀಗಾಗಿ ಕಾಮಗಾರಿ ಸಂಪೂರ್ಣ ಮುಗಿದು, ಎಲ್ಲ ಅಗತ್ಯ ವ್ಯವಸ್ಥೆಗಳನ್ನು ಒದಗಿಸುವ ವರೆಗೆ ಟೋಲ್ ಸಂಗ್ರಹ ಮಾಡಬಾರದು ಎಂದು ಪ್ರತಿಪಕ್ಷಗಳು ಆಗ್ರಹಿಸಿವೆ.

ಶೌಚಾಲಯವೇ ಇಲ್ಲ; ನಿಖಿಲ್

ಸೂಕ್ತ ಸರ್ವೀಸ್ ರಸ್ತೆ ವ್ಯವಸ್ಥೆ ಇಲ್ಲ. ಟೋಲ್ ಸಂಗ್ರಹ ವಿಧಾನವೂ ವೈಜ್ಞಾನಿಕವಾಗಿಲ್ಲ. ಸೂಕ್ತ ಮೂಲಸೌಕರ್ಯ ಕಲ್ಪಿಸಲಾಗಿಲ್ಲ. ಸ್ವಚ್ಛ ಭಾರತದ ಬಗ್ಗೆ ಬಿಜೆಪಿ ನಾಯಕರು ಮಾತನಾಡುತ್ತಾರೆ. ಆದರೆ ಬೆಂಗಳೂರು ಮೈಸೂರು ಎಕ್ಸ್​ಪ್ರೆಸ್​​ ವೇಯಲ್ಲಿ ಸ್ವಚ್ಛಭಾರತ ಬೇಡವೇ? ಶೌಚಾಲಯ ವ್ಯವಸ್ಥೆ ಯಾಕೆ ಮಾಡಿಕೊಟ್ಟಿಲ್ಲ. ಶ್ರೀಮಂತರಷ್ಟೇ ಈ ರಸ್ತೆಯಲ್ಲಿ ಪ್ರಯಾಣಿಸಬಹುದೇ? ಬಡವರು ಸಂಚರಿಸಬಾರದೇ ಎಂದು ನಿಖಿಲ್ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಇದು ನಮ್ಮ ಹೋರಾಟದ ಆರಂಭವಷ್ಟೇ, ಮುಂದೆ ಇನ್ನೂ ತೀವ್ರ ಸ್ವರೂಪದ ಪ್ರತಿಭಟನೆ ನಡೆಸಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಟೋಲ್ ಸಂಗ್ರಹ ವ್ಯವಸ್ಥೆಯೂ ಸರಿಯಾಗಿಲ್ಲ. ಇಂದಿನಿಂದ ಟೋಲ್ ಸಂಗ್ರಹ ಮಾಡುತ್ತಾರೆ ಎಂಬುದು ತಿಳಿದಿರಲಿಲ್ಲ. ನಿನ್ನೆಯಷ್ಟೇ ಇದೇ ಮಾರ್ಗದ ಮೂಲಕ ಹಾದುಹೋಗಿದ್ದೆ. ಟೋಲ್ ಸಂಗ್ರಹದ ಮಾಹಿತಿ ಇರಲಿಲ್ಲ. ಕನಿಷ್ಠಪಕ್ಷ ಒಂದು ನೋಟಿಸ್ ಆದರೂ ಹಾಕಬಹುದಿತ್ತು ಎಂದು ವಾಹನ ಸವಾರ ಸತೀಶ್ ಎಂಬವರು ತಿಳಿಸಿದ್ದಾರೆ.

ಇದನ್ನೂ ಓದಿ: Bengaluru-Mysuru Expressway:ಇಂದಿನಿಂದಲೇ ಬೆಂಗಳೂರು ಮೈಸೂರು ಎಕ್ಸ್​ಪ್ರೆಸ್​ವೇನಲ್ಲಿ ಟೋಲ್​ ಶುರು, ಎಷ್ಟು ಹಣ ಪಾವತಿಸಬೇಕು?

ಟೋಲ್ ಪ್ಲಾಜಾದಲ್ಲಿರುವ ಫಾಸ್ಟ್​ಟ್ಯಾಗ್ ತಂತ್ರಜ್ಞಾನ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ ಎಂದು ಮತ್ತೊಬ್ಬರು ವಾಹನ ಸವಾರರು ದೂರಿದ್ದಾರೆ.

ಸದ್ಯ ಎಕ್ಸ್​​ಪ್ರೆಸ್​ ವೇಯಲ್ಲಿ ಲಘು ವಾಹನಗಳಿಗೆ 55 ಕಿಲೋಮೀಟರ್ ಪ್ರಯಾಣಕ್ಕೆ 155 ರೂ. ಟೋಲ್ ನಿಗದಿಯಾಗಿದೆ. ದ್ವಿಮುಖ ಸಂಚಾರಕ್ಕೆ ಸವಾರರು 300 ರೂ. ತೆರಬೇಕಾಗಿದೆ. ಬಸ್ ಹಾಗೂ ಭಾರೀ ವಾಹನಗಳಿಗೆ 460 ರೂ. ಹಾಗೂ 750ರಿಂದ 900 ರೂ.ವರೆಗೆ ಟೋಲ್ ಇದೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 2:57 pm, Thu, 16 March 23