ಬಸವರಾಜ ಬೊಮ್ಮಾಯಿ ಸಿಎಂ ಆದಮೇಲಂತೂ ರಾಜ್ಯಕ್ಕೆ ದೊಡ್ಡ ಕಳಂಕ ತಂದರು: ಸಿದ್ದರಾಮಯ್ಯ

| Updated By: Rakesh Nayak Manchi

Updated on: Jan 10, 2023 | 2:39 PM

ಕೋಟ್ಯಾಂತರ ರೂಪಾಯಿ ಪಾಪದ ಹಣ ಖರ್ಚು ಮಾಡಿ ಬಿಜೆಪಿಯವರು ಶಾಸಕರನ್ನು ಕೊಂಡುಕೊಂಡರು. ಪಾಪದ ಹಣ ಖರ್ಚು ಮಾಡಿದೆಲ್ಲ ಭ್ರಷ್ಟಾಚಾರದ ಹಣ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಬಸವರಾಜ ಬೊಮ್ಮಾಯಿ ಸಿಎಂ ಆದಮೇಲಂತೂ ರಾಜ್ಯಕ್ಕೆ ದೊಡ್ಡ ಕಳಂಕ ತಂದರು: ಸಿದ್ದರಾಮಯ್ಯ
ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Follow us on

ಬೆಂಗಳೂರು: ಬಿಜೆಪಿ ಸರ್ಕಾರದ ವಿರುದ್ದ ಚಾರ್ಜ್ ಶೀಟ್ (Charge Sheet) ಬಿಡುಗಡೆ ಮಾಡಿದ್ದೇವೆ. ಈ ಆರೋಪ ಪಟ್ಟಿಗೆ ಪಾಪದ ಪುರಾಣ ಅಂತ ನಾಮಕರಣ ಮಾಡಿದ್ದೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ (Karnataka BJP Govt) ಅನೈತಿಕ ಮಾರ್ಗದಿಂದ ಬಂದ ಅನೈತಿಕ ಸರ್ಕಾರವಾಗಿದೆ. 2018ರಲ್ಲಿ ಜನರು ಏನೂ ಆಶೀರ್ವಾದ ಮಾಡಿರಲಿಲ್ಲ. 104 ಸ್ಥಾನ ಮಾತ್ರ ಬಂದಿತ್ತು, ಆಪರೇಷನ್ ಕಮಲದ (Operation Kamala) ಮೂಲಕ ಅನೈತಿಕವಾಗಿ ರಾಜ್ಯದ ಜನರಿಗೆ ವಕ್ಕರಿಸಿಕೊಂಡರು ಎಂದರು.

ಬಿಜೆಪಿ ಕೋಟ್ಯಾಂತರ ರೂಪಾಯಿ ಪಾಪದ ಹಣ ಖರ್ಚು ಮಾಡಿ ಶಾಸಕರನ್ನು ಕೊಂಡುಕೊಂಡರು. ಪಾಪದ ಹಣ ಖರ್ಚು ಮಾಡಿದೆಲ್ಲ ಭ್ರಷ್ಟಾಚಾರದ ಹಣ. ಇವರು ಅಧಿಕಾರಕ್ಕೆ ಬಂದ ಮೇಲೆ ಭ್ರಷ್ಟಾಚಾರದ ಸಾಗರದಲ್ಲಿ ಮುಳುಗಿ ಹೋದರು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆದಮೇಲಂತೂ ರಾಜ್ಯಕ್ಕೆ ದೊಡ್ಡ ಕಳಂಕ ತಂದರು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಕೊರೋನಾ ಸಂದರ್ಭದಲ್ಲಿ 2ರಿಂದ 3ಸಾವಿರ ಕೋಟಿ ರೂಪಾಯಿಗಳನ್ನು ಭ್ರಷ್ಟಾಚಾರ ಮಾಡಿದ್ದರು. ಕೊನೆಗೆ ಉತ್ತರ ಕೊಡದೇ ಜಾರಿಕೊಂಡರು ಎಂದರು.

ಸುಮಾರು ಮೂರುವರೆ ಲಕ್ಷ ಜನ ಕೊರೋನಾದಿಂದಾಗಿ ಸಾವನ್ನಪ್ಪಿದರು. ಅದರಲ್ಲೂ ಸುಳ್ಳು ಹೇಳಿ ಪರಿಹಾರ ಕೊಡಲಿಲ್ಲ. ಬೊಮ್ಮಾಯಿ ಅವರು ಬರೀ ಭ್ರಷ್ಟ ಅಷ್ಟೇ ಅಲ್ಲ, ದುರ್ಬಲ ಮುಖ್ಯಮಂತ್ರಿಯಾಗಿದ್ದಾರೆ. ರಾಜ್ಯ ಕಂಡ ಅತ್ಯಂತ ದುರ್ಬಲ ಮುಖ್ಯಮಂತ್ರಿ ಯಾರಪ್ಪ ಅಂದರೆ ಅದು ಬೊಮ್ಮಾಯಿ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಸಿದ್ದರಾಮಯ್ಯ ಅಹಿಂದ ನಾಯಕನೇ ಅಲ್ಲ; ದಲಿತ ಸಮಾಜ ತಕ್ಕ ಪಾಠ ಕಲಿಸುತ್ತದೆ: ವರ್ತೂರ್​ ಪ್ರಕಾಶ್

ಕೇಂದ್ರ ಸರ್ಕಾರದ ಮುಂದೆ ಧ್ವನಿ ಎತ್ತಲಾಗದ ದುರ್ಬಲ ಸರ್ಕಾರ ಇದು. 15ನೇ ಹಣಕಾಸು ಆಯೋಗದಿಂದ ಅನುದಾನ ಬಂದಿಲ್ಲ. 15,498 ಕೋಟಿ ಹಣ ಕೊಡಿ ಅಂತ ಕೇಂದ್ರದ ಮುಂದೆ ಇವರು ಕೇಳಲೇ ಇಲ್ಲ. ಇವರ ಹೇಡಿತನದಿಂದ ರಾಜ್ಯಕ್ಕೆ ಅನ್ಯಾಯ ಆಯ್ತು. 3.5 ಲಕ್ಷ ಕೋಟಿ ಕರ್ನಾಟಕದಿಂದ ತೆರಿಗೆ ವಸೂಲಿ ಆಗುತ್ತದೆ. ಆದರೆ ನಮಗೆ ಬರುವುದು ಅತ್ಯಂತ ಕಡಿಮೆ ಹಣ. ರಾಜ್ಯದಲ್ಲಿ ಅದಕ್ಕಾಗಿ ಸಾಲ ಮಾಡಬೇಕಾದ ಸ್ಥಿತಿ ಇದೆ ಎಂದರು.

ಸ್ವಾತಂತ್ರ್ಯ ಬಂದಾಗಿನಿಂದ 2018ರವರೆಗೆ ಇದ್ದ 2.40 ಲಕ್ಷ ಕೋಟಿ ಸಾಲ ಈ ಮಾರ್ಚ್​​ಗೆ 5.40 ಲಕ್ಷ ಕೋಟಿಗೆ ಸಾಲ ಏರಿಕೆಯಾಗಿದೆ. ಇದರ ಪರಿಣಾಮವಾಗಿ ರಾಜ್ಯ ಸರ್ಕಾರ ಪ್ರತಿವರ್ಷ 43 ಸಾವಿರ ಕೋಟಿ ಅಸಲು ಬಡ್ಡಿ ಕಟ್ಟಬೇಕಾಗಿದೆ. ಸಾಲ ಜಾಸ್ತಿ ಮಾಡಿದಷ್ಟೂ ಅಭಿವೃದ್ಧಿ ಕುಂಠಿತವಾಗಿದೆ. ಪ್ರತಿ ಕನ್ನಡಿಗನ ಮೇಲೆ 86 ಸಾವಿರ ರೂ. ಸಾಲ ಇದೆ. ಇವರಿಂದ (ಬಿಜೆಪಿ) ಈ ರಾಜ್ಯ ಉಳಿತದಾ ಎಂದು ಪ್ರಶ್ನಿಸಿದರು.

ರಾಜ್ಯ ಉಳಿಸಲು ಜನರ ಕಷ್ಟ ಪರಿಹಾರ ಮಾಡಲು ಭ್ರಷ್ಟಾಚಾರದಿಂದ ಮುಕ್ತ ಮಾಡಲು ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ನಾವು ಅಧಿಕಾರಕ್ಕೆ ಬರಬೇಕು ನಾವು ಅಧಿಕಾರದಲ್ಲಿ ಇರಬೇಕು ಅಂತಲ್ಲ, ರಾಜ್ಯ ಉಳಿಸಬೇಕಾಗಿದೆ. ಬಿಜೆಪಿಯವರದ್ದು ಡೋಂಗಿತನ ಅನ್ನೋದು ಸ್ಪಷ್ಟವಾಗಿ ಅರ್ಥವಾಗುತ್ತದೆ. ನೇಮಕಾತಿ ಲಂಚ, ವರ್ಗಾವಣೆಯಲ್ಲಿ ಲಂಚ, ಪ್ರಮೋಷನ್​ಗಳಲ್ಲಿ ಲಂಚ, ಪಾಪ ಅಧಿಕಾರಿಗಳು ಬಾಯಿ ಬಿಡುತ್ತಿಲ್ಲ. ಆದರೆ ಅವರು ವೈಯಕ್ತಿಕವಾಗಿ ನಮಗೆ ಹೇಳುತ್ತಾರೆ. ಹೊಟೇಲ್​ನಲ್ಲಿ ಮೆನು ಕಾರ್ಡ್ ಇಟ್ಟ ರೀತಿ ಲಂಚ ತೆಗೆದುಕೊಳ್ಳುತ್ತಾರೆ. ಎಂದರು.

ಇದನ್ನೂ ಓದಿ: ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ವಿಚಾರ: ಕೊಂಕು ಮಾತನಾಡಿದ ಹೆಚ್​​.ಡಿ.ಕುಮಾರಸ್ವಾಮಿ

ಅಧಿಕಾರಿಗಳು ಜನರು ಬಿಜೆಪಿಯಿಂದ ಬೇಸತ್ತು ಹೋಗಿದ್ದಾರೆ. ದ್ವೇಷದ ರಾಜಕಾರಣದಿಂದ ಹಿಂದುಳಿದವರು ಬಡವರು ಅಲ್ಪಸಂಖ್ಯಾತರು ನೆಮ್ಮದಿ ಕಳೆದುಕೊಂಡು ಆತಂಕದಿಂದ ಬದುಕಬೇಕಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ. ಬಿಜೆಪಿಯವರು ರಾಜ್ಯವನ್ನು ಈ ದುಸ್ಥಿತಿಗೆ ತಂದಿದ್ದಾರೆ. ಎರಡು ದಶಕ ಹಿಂದಕ್ಕೆ ರಾಜ್ಯವನ್ನು ತೆಗೆದುಕೊಂಡು ಹೋಗಿದ್ದಾರೆ ಎಂದರು.

ಜನರನ್ನು ಭೇಟಿ ಮಾಡಿ ಅವರ ಧ್ವನಿ ಆಗಬೇಕು ಅಂತ ನಾವು ಪ್ರಜಾಧ್ವನಿ ಯಾತ್ರೆ ಹಮ್ಮಿಕೊಂಡಿದ್ದೇವೆ. ಜಿಲ್ಲಾ ಮಟ್ಟದಲ್ಲಿ ರಥಯಾತ್ರೆ ಮಾಡುತ್ತಿದ್ದೇವೆ. ಸಮಯದ ಕಡಿಮೆಯಿಂದ ಡಿ.ಕೆ.ಶಿವಕುಮಾರ್ ಹಾಗೂ ಹಿರಿಯರ ನೇತೃತ್ವದಲ್ಲಿ ಒಂದು ಟೀಂ, ನನ್ನ ಹಾಗೂ ಹಿರಿಯರ ಇನ್ನೊಂದು ತಂಡ ಯಾತ್ರೆ ಮಾಡುತ್ತೇವೆ. ಉತ್ತರ ಕರ್ನಾಟಕದ ಭಾಗದಲ್ಲಿ ನಾನು ಮೊದಲು ಯಾತ್ರೆ ಮಾಡುತ್ತೇನೆ. ಡಿಕೆಶಿಯವರು ಎರಡನೇ ಹಂತದಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಬರುತ್ತಾರೆ. ಎಲ್ಲ ಕ್ಷೇತ್ರದ ಮೂಲೆ ಮೂಲೆಗೆ ಬೇಟಿ ಕೊಟ್ಟು ಎಲ್ಲವನ್ನೂ ಜನರಿಗೆ ತಿಳಿಸುತ್ತೇವೆ ಎಂದರು.

ಮತ್ತಷ್ಟು ರಾಜಕೀಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:38 pm, Tue, 10 January 23