ನಟಿ ಪೂನಂ ಕೌರ್ ಕೈ ಹಿಡಿದು ನಡೆದ ರಾಹುಲ್ ಗಾಂಧಿ; ಟಾಂಗ್ ಕೊಟ್ಟ ಬಿಜೆಪಿಯ ಪ್ರೀತಿ ಗಾಂಧಿಗೆ ಕಾಂಗ್ರೆಸ್ ತಿರುಗೇಟು

| Updated By: Rakesh Nayak Manchi

Updated on: Oct 30, 2022 | 10:28 AM

ನಟಿ ಪೂನಂ ಕೌರ್ ಅವರ ಕೈ ಹಿಡಿದು ನಡೆದ ರಾಹುಲ್ ಗಾಂಧಿಯ ಫೋಟೋವನ್ನು ಮುಂದಿಟ್ಟು ಬಿಜೆಪಿ ಪ್ರೀತಿ ಗಾಂಧಿ ಟಾಂಗ್ ಕೊಟ್ಟಿದ್ದರು. ಇದಕ್ಕೆ ಕೌರ್ ಸೇರಿದಂತೆ ಕಾಂಗ್ರೆಸ್ ತಿರುಗೇಟು ನೀಡಿದೆ.

ನಟಿ ಪೂನಂ ಕೌರ್ ಕೈ ಹಿಡಿದು ನಡೆದ ರಾಹುಲ್ ಗಾಂಧಿ; ಟಾಂಗ್ ಕೊಟ್ಟ ಬಿಜೆಪಿಯ ಪ್ರೀತಿ ಗಾಂಧಿಗೆ ಕಾಂಗ್ರೆಸ್ ತಿರುಗೇಟು
ನಟಿ ಪೂನಂ ಕೌರ್ ಕೈ ಹಿಡಿದು ನಡೆದ ರಾಹುಲ್ ಗಾಂಧಿ
Follow us on

ದೆಹಲಿ: ತೆಲಂಗಾಣದಲ್ಲಿ ನಡೆದ ಭಾರತ್ ಜೋಡೋ ಯಾತ್ರೆ (Bharat Jodo Yatra)ಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ನಟಿ ಪೂನಂ ಕೌರ್ (Poonam Kaur) ಅವರ ಕೈ ಹಿಡಿದಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Photo) ಆಗುತ್ತಿದ್ದು, ವಿವಿಧ ರೀತಿಯ ಕಾಮೆಂಟ್​ಗಳನ್ನು ಮಾಡಲಾಗುತ್ತಿದೆ. ಫೋಟೋವನ್ನು ಟ್ವಿಟರ್​ನಲ್ಲಿ ಹಂಚಿಕೊಂಡ ಬಿಜೆಪಿಯ ಪ್ರೀತಿ ಗಾಂಧಿ (Priti Gandhi), “ಅವರ ಮುತ್ತಜ್ಜನ ಹೆಜ್ಜೆಗಳನ್ನು ಅನುಸರಿಸುತ್ತಿದ್ದಾರೆ” ಎಂದು ಹೇಳಿದ್ದರು. ಇದಕ್ಕೆ ಪ್ರತಿಟ್ವೀಟ್ ಮಾಡಿದ ಪೂನಂ ಕೌರ್, “ಇದು ನಿಮಗೆ ಸಂಪೂರ್ಣವಾಗಿ ಅವಮಾನಕರವಾಗಿದೆ, ಪ್ರಧಾನಿ ನಾರಿಶಕ್ತಿ ಬಗ್ಗೆ ಮಾತನಾಡಿದ್ದು ನೆನಪಿರಲಿ” ಎಂದು ಹೇಳಿದ್ದಾರೆ. ಇನ್ನು ಕಾಂಗ್ರೆಸ್​ನ ಜೈರಾಮ್ ರಮೇಶ್ ಅವರು ವಿಕೃತ ಮತ್ತು ಅನಾರೋಗ್ಯದ ಮನಸ್ಸು ಎಂದು ಪ್ರೀತಿ ಗಾಂಧಿಯನ್ನು ಜರಿದಿದ್ದಾರೆ.

ಇನ್ನು ಪ್ರೀತಿ ಗಾಂಧಿಯ ಟೀಕೆಯನ್ನು ಸಕಾರಾತ್ಮಕವಾಗಿ ತೆಗೆದುಕೊಂಡ ಕಾಂಗ್ರೆಸ್ ಪಕ್ಷದ ವಕ್ತಾರ ಸುಪ್ರಿಯಾ ಶ್ರಿನಾಟೆ, “ರಾಹುಲ್ ಗಾಂಧಿ ಅವರು ನಿಜವಾಗಿಯೂ ತಮ್ಮ ಅಜ್ಜನ ಹಾದಿಯಲ್ಲಿ ಸಾಗುತ್ತಿದ್ದಾರೆ ಮತ್ತು ದೇಶವನ್ನು ಒಗ್ಗೂಡಿಸಿದ್ದಾರೆ” ಎಂದರು. ಕಾಂಗ್ರೆಸ್ ಮುಖಂಡ ಪವನ್ ಖೇರಾ, “ನಿಮಗೆ ಚಿಕಿತ್ಸೆಯ ಅಗತ್ಯವಿದೆ, ನಿಮ್ಮ ಮಾನಸಿಕ ಸ್ಥಿತಿಯು ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ಹಾನಿಕಾರಕವಾಗಿದೆ” ಎಂದು ಟ್ವೀಟ್ ಮಾಡಿದ್ದಾರೆ.

ಶಿವಸೇನಾ ನಾಯಕಿ ಪ್ರಿಯಾಂಕಾ ಚತುರ್ವೇದಿ ಅವರು ಅಜ್ಜನ ಹೆಜ್ಜೆಗಳನ್ನು ಸಮರ್ಥಿಸಿಕೊಂಡು ಟ್ವೀಟ್ ಮಾಡಿ, “ನೀವು ಹೇಳುವುದಾದರೆ, ಇದು ಮಹಿಳೆಯರು ಪುರುಷರೊಂದಿಗೆ ಹೆಗಲಿಗೆ ಹೆಗಲು ಹಿಡಿದು ನಡೆಯಲು ಮತ್ತು ರಾಷ್ಟ್ರವನ್ನು ಬಲಪಡಿಸಲು ಮತ್ತು ಮುಂದಕ್ಕೆ ಕೊಂಡೊಯ್ಯಲು ಕಾರಣವಾಗುತ್ತದೆ. ಪಂಡಿತ್ ನೆಹರೂ ಅವರ ಭಾರತದ ದೃಷ್ಟಿ ಮಾತ್ರವಲ್ಲ, ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಸಮಾನ ಭಾರತದ ಕನಸು ನನಸಾಗುತ್ತದೆ” ಎಂದರು.

ಬಿಜೆಪಿಯ ಪ್ರೀತಿ ಗಾಂಧಿ ಅವರು ಮಹಿಳೆಯರನ್ನು ಈ ಮಟ್ಟಕ್ಕೆ ದೂಡುವ ಸಿದ್ಧಾಂತದ ಬಲಿಪಶು ಎಂದು ಕಾಂಗ್ರೆಸ್ ಸಂಸದೆ ಜೋತಿಮಣಿ ಹೇಳಿದ್ದಾರೆ. “ಆಳವಾಗಿ ಬೇರೂರಿರುವ ದ್ವೇಷದಿಂದ ನಿಮ್ಮಂತಹ ಜನರನ್ನು ರಕ್ಷಿಸಲು ರಾಹುಲ್ ಗಾಂಧಿ ನಿಖರವಾಗಿ ಅದೇ ಆರ್​ಎಸ್​ಎಸ್​ ಸಿದ್ಧಾಂತದ ವಿರುದ್ಧ ನಡೆಯುತ್ತಿದ್ದಾರೆ. ದಯವಿಟ್ಟು ಬನ್ನಿ ಮತ್ತು ನಮ್ಮೊಂದಿಗೆ ಒಂದು ದಿನ ನಡೆಯಿರಿ. ನೀವು ಉತ್ತಮವಾಗುತ್ತೀರಿ” ಎಂದು ಟ್ವೀಟ್ ಮಾಡಿದ್ದಾರೆ.

ತೆಲಂಗಾಣದ ನೇಕಾರರೊಂದಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂವಾದ ನಡೆಸುತ್ತಿದ್ದಂತೆ ನಟಿ ಪೂನಂ ಕೌರ್ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡು ರಾಹುಲ್ ಗಾಂಧಿಯೊಂದಿಗೆ ಹೆಜ್ಜೆ ಹಾಕಿದರು. “ಮಹಿಳೆಯರ ಬಗ್ಗೆ ಅವರ ಕಾಳಜಿ, ಗೌರವ ಮತ್ತು ರಕ್ಷಣಾತ್ಮಕ ಸ್ವಭಾವವು ನನ್ನ ಹೃದಯವನ್ನು ಮುಟ್ಟಿದೆ. ನೇಕಾರರ ಸಮಸ್ಯೆಗಳನ್ನು ಆಲಿಸಿದ್ದಕ್ಕಾಗಿ ನೇಕಾರರ ತಂಡದೊಂದಿಗೆ ನಾನು ರಾಹುಲ್ ಗಾಂಧಿ ಅವರಿಗೆ ಹೃತ್ಪೂರ್ವಕವಾಗಿ ಧನ್ಯವಾದಗಳು” ಎಂದು ಪೂನಂ ಕೌರ್ ಟ್ವೀಟ್ ಮಾಡಿದ್ದಾರೆ.

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:28 am, Sun, 30 October 22