1.30 ಕೋಟಿ ರೂ. ಲಂಚ ಪಡೆದ ಆರೋಪ: ತನಿಖೆ ನಡೆಸುವಂತೆ ಬಿಜೆಪಿ ನಾಯಕನಿಗೆ ಸಿದ್ದರಾಮಯ್ಯ ಸವಾಲು

| Updated By: ರಮೇಶ್ ಬಿ. ಜವಳಗೇರಾ

Updated on: Oct 30, 2022 | 4:12 PM

ಮುಖ್ಯಮಂತ್ರಿ ಆಗಿದ್ದ ವೇಳೆ ಚೆಕ್ ಮೂಲಕ 1.30 ಕೋಟಿ ರೂ. ಲಂಚ ಪಡೆದಿದ್ದಾರೆ ಎನ್ನುವ ಬಿಜೆಪಿ ನಾಯಕ ಮಾಡಿರುವ ಆರೋಪಕ್ಕೆ ಸಿದ್ದರಾಮಯ್ಯ ಸ್ಪಷ್ಟನೆ ಕೊಟ್ಟಿದ್ದಾರೆ.

1.30 ಕೋಟಿ ರೂ. ಲಂಚ ಪಡೆದ ಆರೋಪ: ತನಿಖೆ ನಡೆಸುವಂತೆ ಬಿಜೆಪಿ ನಾಯಕನಿಗೆ  ಸಿದ್ದರಾಮಯ್ಯ ಸವಾಲು
ಸಿದ್ದರಾಮಯ್ಯ,
Follow us on

ಬೆಂಗಳೂರು: ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ವೇಳೆ ಚೆಕ್ ಮೂಲಕ 1.30 ಕೋಟಿ ರೂ. ಲಂಚ ಪಡೆದಿದ್ದಾರೆ ಎನ್ನುವ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಗಂಭೀರ ಆರೋಪಕ್ಕೆ ಸಿದ್ದು ತಿರುಗೇಟು ನೀಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಇಂದು(ಅ.30) ಸುದ್ದಿಗೋಷ್ಠಿಯಲ್ಲಿ ನಡೆಸಿ ಮಾತನಾಡಿದ ಸಿದ್ದರಾಮಯ್ಯ, ನಾನು ಸೈಟ್​ ಖರೀದಿ ಮಾಡಲು ಸಾಲ ತೆಗೆದುಕೊಂಡಿದ್ದು ಸತ್ಯ. ವಿವೇಕಾನಂದ ನನ್ನ ಸ್ನೇಹಿತ, ಅವರ ಬಳಿ ಸಾಲ ಪಡೆದಿದ್ದು ನಿಜ. ಸಾಲ ಪಡೆದು ನಾನು ಮೈಸೂರಿನಲ್ಲಿ ಸೈಟ್​ ತೆಗೆದುಕೊಂಡಿದ್ದು ಸತ್ಯ. ಸಾಲ ತೆಗೆದುಕೊಳ್ಳುವುದು ತಪ್ಪಾ ಎಂದು ಪ್ರಶ್ನಿಸುವ ಮೂಲಕ ಎನ್​ಆರ್ ರಮೇಶ್ ಆರೋಪಕ್ಕೆ ಸ್ಪಷ್ಟನೆ ನೀಡಿದರು.

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ 1.30 ಕೋಟಿ ಲಂಚ ಪಡೆದ ಆರೋಪ: ಸಿಬಿಐ ತನಿಖೆಗೆ ಬಿಜೆಪಿ ನಾಯಕ ರಮೇಶ್ ಆಗ್ರಹ

ಎನ್​.ಆರ್​.ರಮೇಶ್ ನನ್ನ ಮೇಲೆ 50 ಕೇಸ್​ ದಾಖಲಿಸಿದ್ದಾನೆ. ಎಲ್ಲಾ ಕೇಸ್​​ಗಳು ವಜಾ ಆಗಿದೆ. ಸಾಲ ಪಡೆದಿರುವ ಬಗ್ಗೆಯೂ ಬೇಕಾದ್ರೆ ತನಿಖೆ ಮಾಡಿಸಲಿ ಎಂದು ಸವಾಲು ಹಾಕಿದರು.

ಎನ್​ ಆರ್ ರಮೇಶ್ ಆರೋಪವೇನು?
ಕಿಂಗ್ಸ್​ಕೋರ್ಟ್​ನ ಎಲ್.ವಿವೇಕಾನಂದ ಎನ್ನುವವರಿಂದ ಸಿದ್ದರಾಮಯ್ಯ 1.30 ಕೋಟಿ ರೂಪಾಯಿ ಲಂಚ ಪಡೆದಿದ್ದರು. ಲಂಚದ ಹಣ ಸಂದಾಯವಾದ ನಂತರವೇ ಅವರು 2014ರಲ್ಲಿ ಟರ್ಫ್​ ಕ್ಲಬ್​ ಉಸ್ತುವಾರಿ ಹುದ್ದೆಗೆ ವಿವೇಕಾನಂದ ಅವರನ್ನು 3 ವರ್ಷಗಳ ಅವಧಿಗೆ ನೇಮಿಸಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ.

ವಿವೇಕಾನಂದ ಅವರಿಂದ ತಾವು ಸಾಲ ಪಡೆದಿರುವುದಾಗಿ ಸಿದ್ದರಾಮಯ್ಯ ಚುನಾವಣಾ ಆಯೋಗಕ್ಕೆ ಮಾಹಿತಿ ಕೊಟ್ಟಿದ್ದರು. ಆದರೆ ಇದು ಸಾಲವಾಗಿರಲಿಲ್ಲ. ಕೇಂದ್ರ ಗೃಹ ಇಲಾಖೆ ರೂಪಿಸಿರುವ ನಿಯಮಗಳ ಪ್ರಕಾರ ಯಾರಿಗಾದರೂ ಯಾವುದಾದರೂ ಹುದ್ದೆ ನೀಡುವುದಕ್ಕೆ ಪ್ರತಿಯಾಗಿ ಉಡುಗೊರೆ ಅಥವಾ ಚೆಕ್​ ಪಡೆಯುವಂತಿಲ್ಲ. ಈ ಸಂಬಂಧ ಸಿದ್ದರಾಮಯ್ಯ ವಿರುದ್ಧ ನಾಳೆ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು ಎಂದಿದ್ದಾರೆ.

ಭ್ರಷ್ಟಾಚಾರ ನಿಗ್ರಹ ಕಾಯ್ದೆ 1988ರ ಕಾಲಂ 7, 8, 9, 10, 13ರ ಅಡಿಯಲ್ಲಿ ಸಿದ್ದರಾಮಯ್ಯ ಅವರು ವಿವೇಕಾನಂದ ಅವರಿಂದ ಹಣ ಪಡೆದಿರುವುದು ಶಿಕ್ಷಾರ್ಹ ಅಪರಾಧವಾಗುತ್ತದೆ. ಸಿದ್ದರಾಮಯ್ಯ ಅವರ ವಿರುದ್ಧ ಮುಖ್ಯಮಂತ್ರಿ ಸ್ಥಾನದ ದುರುಪಯೋಗ, ಭ್ರಷ್ಟಾಚಾರ ಹಾಗೂ ವಂಚನೆ ಪ್ರಕರಣ ದಾಖಲಿಸುತ್ತೇವೆ. ಸಿದ್ದರಾಮಯ್ಯ ವಿರುದ್ಧ ಸಿಬಿಐ, ಸಿಐಡಿ, ನ್ಯಾಯಾಂಗ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು. ಹುದ್ದೆಗೆ ಪ್ರತಿಯಾಗಿ ಕಿಕ್​ಬ್ಯಾಕ್ ಪಡೆದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮನ ಸೆಳೆಯಲಾಗಿದೆ. ಈ ಬಗ್ಗೆ ಸೂಕ್ತ ತನಿಖೆಗೆ ಸಿಎಂ ಆದೇಶಿಸುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.