ಸ್ಫೋಟವಾಗುತ್ತಾ ಬಿಜೆಪಿ ಭಿನ್ನಮತ? ವಿಜಯೇಂದ್ರ ಆಯ್ಕೆ ಬಗ್ಗೆ ವಿ ಸೋಮಣ್ಣ ಮಾರ್ಮಿಕ ಮಾತು ಹೀಗಿದೆ ನೋಡಿ

ತಮ್ಮದೇ ಪಕ್ಷದ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ವಿ ಸೋಮಣ್ಣ , ಪಕ್ಷಕ್ಕೆ ನನ್ನದೂ ದುಡಿಮೆ,‌ ಶ್ರಮ ಇದೆ. ನನಗೆ ಡಬಲ್ ಗೇಮ್ ಮಾಡೋದು ಗೊತ್ತಿಲ್ಲ. ಅಭಿಪ್ರಾಯವನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ ಎಂದು ಹೇಳಿದ್ದಾರೆ.

ಸ್ಫೋಟವಾಗುತ್ತಾ ಬಿಜೆಪಿ ಭಿನ್ನಮತ? ವಿಜಯೇಂದ್ರ ಆಯ್ಕೆ ಬಗ್ಗೆ ವಿ ಸೋಮಣ್ಣ ಮಾರ್ಮಿಕ ಮಾತು ಹೀಗಿದೆ ನೋಡಿ
ವಿ ಸೋಮಣ್ಣ
Edited By:

Updated on: Nov 16, 2023 | 3:33 PM

ಬೆಂಗಳೂರು, ನವೆಂಬರ್ 16: ಬಿಜೆಪಿ ಕರ್ನಾಟಕ ಘಟಕದ ಅಧ್ಯಕ್ಷರಾಗಿ ಬಿವೈ ವಿಜಯೇಂದ್ರ (BY Vijayendra) ಅವರ ನೇಮಕ ಮಾಡಿರುವ ವಿಚಾರವಾಗಿ ಹಿರಿಯ ನಾಯಕ, ಮಾಜಿ ಸಚಿವ ವಿ ಸೋಮಣ್ಣ (V Somanna) ಕೊನೆಗೂ ಮೌನಮುರಿದಿದ್ದಾರೆ. ‘ಟಿವಿ9’ಗೆ ಹೇಳಿಕೆ ನೀಡಿರುವ ಅವರು, ವಿಜಯೇಂದ್ರ ಬಗ್ಗೆ ಮಾತನಾಡಲು ಇನ್ನೂ ಕಾಲ ಬಂದಿಲ್ಲ. ವಿಜಯೇಂದ್ರ ವಿಚಾರಕ್ಕೆ ಕಾಲವೇ‌ ಉತ್ತರ ಕೊಡಲಿದೆ ಎಂದು ಹೇಳಿದ್ದಾರೆ.

ಸಿದ್ಧಗಂಗಾ ಮಠದಲ್ಲಿ ಆಯೋಜಿಸಲಾಗುತ್ತಿರುವ ಕಾರ್ಯಕ್ರಮ ಪವಿತ್ರವಾದದ್ದು. ಶಕ್ತಿ ಪ್ರದರ್ಶನಕ್ಕಾಗಿ ಆ ಕಾರ್ಯಕ್ರಮ ನಡೆಸುತ್ತಿಲ್ಲ. ಪೂರ್ವ ನಿರ್ಧರಿತ ಕಾರ್ಯಕ್ರಮ. ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸುವ ಬಗ್ಗೆ ಯೋಚಿಸಿಲ್ಲ ಎಂದು ಸೋಮಣ್ಣ ಹೇಳಿದ್ದಾರೆ.

ಆದಾಗ್ಯೂ ತಮ್ಮದೇ ಪಕ್ಷದ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಪಕ್ಷಕ್ಕೆ ನನ್ನದೂ ದುಡಿಮೆ,‌ ಶ್ರಮ ಇದೆ. ನನಗೆ ಡಬಲ್ ಗೇಮ್ ಮಾಡೋದು ಗೊತ್ತಿಲ್ಲ. ಅಭಿಪ್ರಾಯವನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ. ಒಬ್ಬ ಕೆಲಸ ಮಾಡುವವನಿಗೆ, ಪಾಪ್ಯುಲರ್ ಆದವರಿಗೆ ಮುಜುಗರದ ಸಂಗತಿಗಳು ಎದುರಾಗುತ್ತವೆ. ನಾನು ಯಾವುದೇ ಲೋಕಸಭಾ ಟಿಕೆಟ್ ಆಕಾಂಕ್ಷಿ ಅಲ್ಲ ಎಂದು ಅವರು ಹೇಳಿದ್ದಾರೆ.

ಡಿಸಿಎಂ ಡಿಕೆ ಶಿವಕುಮಾರ್ ಚರ್ಚೆ ನಡೆಸಿರುವ ವಿಚಾರದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಅದೆಲ್ಲಾ ನಡೆಯುತ್ತಿರುತ್ತೆ. ಆದರೆ ಕಾಂಗ್ರೆಸ್ ಸೇರುವ ಅವಶ್ಯಕತೆ ನನಗೆ ಈಗಿಲ್ಲ ಎಂದು ಹೇಳಿದ್ದಾರೆ.

ಡಿಸೆಂಬರ್‌ನಲ್ಲಿ ತುಮಕೂರಿನಲ್ಲಿ ಸೋಮಣ್ಣ ಶಕ್ತಿ ಪ್ರದರ್ಶನ

ಡಿಸೆಂಬರ್ 6ರಂದು ಮಾಜಿ ಸಚಿವ ಸೋಮಣ್ಣ ನೇತೃತ್ವದಲ್ಲಿ ಸಿದ್ದಗಂಗಾ ಮಠದಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿದೆ. ಸ್ವಾಮೀಜಿಗಳ ಅತಿಥಿಗೃಹ ಉದ್ಘಾಟನಾ ನೆಪದಲ್ಲಿ ಸೋಮಣ್ಣ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಸಚಿವರಾದ ಪರಮೇಶ್ವರ್‌, ಕೆಎನ್​ ರಾಜಣ್ಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಲಿಂಗಾಯತ ಸಮುದಾಯದ ಪ್ರಮುಖ ಮುಖಂಡರಿಗೂ ಆಹ್ವಾನ ನೀಡಲಾಗಿದೆ.

ಇದನ್ನೂ ಓದಿ: ಹಿರಿಯ ನಾಯಕರಿಗೆ ಅಸಮಾಧಾನವಿಲ್ಲ, ಎಲ್ಲರನ್ನೂ ಭೇಟಿಯಾಗಿ ಆಶೀರ್ವಾದ ಪಡೆಯುವೆ: ಬಿವೈ ವಿಜಯೇಂದ್ರ, ನಿಯೋಜಿತ ಬಿಜೆಪಿ ರಾಜ್ಯಾಧ್ಯಕ್ಷ

ಈ ಮಧ್ಯೆ, ತುಮಕೂರು ಲೋಕಸಭಾ ಕ್ಷೇತ್ರದಿಂದ ಸೋಮಣ್ಣ ಅಭ್ಯರ್ಥಿಯಾಗಬಹುದೆಂಬ ವದಂತಿಗಳ ನಡುವೆ ತುಮಕೂರಿನಲ್ಲಿಯೇ ಕಾರ್ಯಕ್ರಮ ಆಯೋಜನೆಯಾಗುತ್ತಿದೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ