ಸಮಾವೇಶದ ಹೆಸರು ಏನು ಬೇಕಾದರೂ ಬದಲಾಯಿಸಿಕೊಳ್ಳಲಿ, ತನಿಖೆ ಏನಾಯ್ತು ಹೇಳಿ ಮೊದಲು: ಡಿ.ಕೆ.ಶಿವಕುಮಾರ್

| Updated By: Rakesh Nayak Manchi

Updated on: Sep 10, 2022 | 1:44 PM

ಸಮಾವೇಶಕ್ಕೆ ಹೆಸರು ಹೇಗೆ ಬೇಕಾದರೂ ಬದಲಾಯಿಸಿಕೊಳ್ಳಲಿ, ಆದರೆ ಸೋಲಾರ್ ಪ್ಲ್ಯಾಂಟ್​​ನ ತನಿಖೆಯನ್ನು ಯಾಕೆ ತಡ ಮಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪ್ರಶ್ನಿಸಿದ್ದಾರೆ.

ಸಮಾವೇಶದ ಹೆಸರು ಏನು ಬೇಕಾದರೂ ಬದಲಾಯಿಸಿಕೊಳ್ಳಲಿ, ತನಿಖೆ ಏನಾಯ್ತು ಹೇಳಿ ಮೊದಲು: ಡಿ.ಕೆ.ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
Follow us on

ಬೆಂಗಳೂರು: ರಾಜ್ಯ ಸರ್ಕಾರದ ಸಾಧನೆಗಳನ್ನು ಜನರ ಮುಂದಿಡುವ ನಿಟ್ಟಿನಲ್ಲಿ ಬಿಜೆಪಿ ಸಮಾವೇಶವೊಂದನ್ನ ನಡೆಸಲು ಮುಂದಾಗಿ ಅದಕ್ಕೆ ಜನೋತ್ಸವ ಎಂದು ನಾಮಕರಣ ಮಾಡಿ ಕೊನೆಯಲ್ಲಿ ಜನಸ್ಪಂದನ ಎಂಬ ಟೈಟಲ್​ನೊಂದಿಗೆ ಕಾರ್ಯಕ್ರಮ ನಡೆಸುತ್ತಿದೆ. ಈ ಬಗ್ಗೆ ಹೇಳಿಕೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(D.K.Shivakumar), ಅವರು ಸಮಾವೇಶಕ್ಕೆ ಹೆಸರು ಹೇಗೆ ಬೇಕಾದರೂ ಬದಲಾಯಿಸಿಕೊಳ್ಳಲಿ, ಆದರೆ ಸೋಲಾರ್ ಪ್ಲ್ಯಾಂಟ್​​ನ ತನಿಖೆಯನ್ನು ಯಾಕೆ ತಡ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ನಗರದಲ್ಲಿ ಹೇಳಿಕೆ ನೀಡಿದ ಶಿವಕುಮಾರ್, ಮೂರು ವರ್ಷ ಜನರ ಜೊತೆ ಇಲ್ಲವೆಂಬುದನ್ನು ಒಪ್ಪಿಕೊಂಡಿದ್ದಾರೆ. ಈಗ ಜನಸ್ಪಂದನೆ ಸಮಾವೇಶ ಮೂಲಕ ನಾವು ನಿಮ್ಮೊಂದಿಗೆ ಇದ್ದೇವೆ ಎಂದು ತೋರಿಸುತ್ತಿದ್ದಾರೆ. ಈ ಬಗ್ಗೆ ನಾನು ಕಾಮೆಂಟ್ ಮಾಡಲು ಹೋಗುವುದಿಲ್ಲ, ಸಮಾವೇಶ ಹೆಸರು ಏನು ಬೇಕಾದರೂ ಬದಲಾಯಿಸಿಕೊಳ್ಳಲಿ. ಆದರೆ ಸೋಲಾರ್ ಪ್ಲ್ಯಾಂಟ್​​ನ ತನಿಖೆ ಯಾಕೆ ತಡ ಮಾಡ್ತಿದ್ದಾರೆ ಎಂದು ಹೇಳಲಿ, ಆರೋಪದ ಬಗ್ಗೆ ಸಿಐಡಿ ತನಿಖೆ ಅಷ್ಟೇ ಅಲ್ಲ, ಸಿಬಿಐ ತನಿಖೆಯೂ ಮಾಡಲಿ, ಇಡಿ ತನಿಖೆಯಾದರೂ ಮಾಡಲಿ, ಯಾಕೆ ತಡ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು. ಅಲ್ಲದೆ ನಾನೇ ದಾರಾನು ಕೊಡಿಸುತ್ತೇನೆ, ಗಲ್ಲಿಗಾದರೂ ಹಾಕಲಿ ಎಂದು ಟಾಂಗ್ ಕೊಟ್ಟರು.

ಬಿಜೆಪಿ ಕತ್ತರಿ, ರಾಹುಲ್ ಗಾಂಧಿ ಸೂಜಿ

ರಾಹುಲ್ ಗಾಂಧಿ ಐರನ್ ಲೆಗ್ ಎಂಬ ಬಿಜೆಪಿ ನಾಯಕರ ಟೀಕೆ ವಿಚಾರಕ್ಕೆ ತಿರುಗೇಟು ನೀಡಿದ ಡಿ.ಕೆ ಶಿವಕುಮಾರ್, ಕಬ್ಬಿಣ ಎರಡು ರೀತಿಯಲ್ಲಿ ಉಪಯೋಗಕ್ಕೆ ಬರುತ್ತದೆ. ಕಬ್ಬಿಣದಿಂದ ಕತ್ತರಿಸಲೂ ಬಳಸಬಹುದು ಕತ್ತರಿಗೂ ಬಳಸಲಾಗುತ್ತದೆ ಮತ್ತು ಹೊಲಿಯುವ ಸೂಜಿ ನಿರ್ಮಾಣಕ್ಕೂ ಬಳಸಲಾಗುತ್ತದೆ. ಇಲ್ಲಿ ಬಿಜೆಪಿಯವರು ಕತ್ತರಿಯಾಗಿದ್ದು, ಅವರು ಕತ್ತರಿಸುವ ಕೆಲಸ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಸೂಚಿ ತರಹ, ಅವರು ದೇಶವನ್ನು ಹೊಲಿದು ಜೋಡಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

ರಾಹುಲ್ ಗಾಂಧಿ ಧರಿಸಿದ ಟೀಶರ್ಟ್ ಬಗ್ಗೆ ಬಿಜೆಪಿ ನಾಯಕರು ಟೀಕೆ ಮಾಡಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ರಾಹುಲ್ ಗಾಂಧಿಯವರ ಟೀಶರ್ಟ್ ಬಗ್ಗೆಯೂ ಚರ್ಚೆಯಾಗಲಿ, ಪ್ಯಾಂಟ್ ಬಗ್ಗೆಯೂ ಚರ್ಚೆಯಾಗಲಿ, ಚಡ್ಡಿ ಬಗ್ಗೆಯೂ ಚರ್ಚೆಯಾಗಲಿ ಅವರು ಮಲಗುವ ಕೋಣೆಯ ಬಗ್ಗೆಯೂ ಚರ್ಚೆಯಾಗಲಿ ಅಥವಾ ಏನಾದರೂ ಚರ್ಚೆಯಾಗಲಿ, ಆದರೆ ರಾಹುಲ್ ಗಾಂಧಿ 3500 ಕಿಮೀ ನಡೆಯೋದನ್ನು ಅವರಿಂದ ತಡೆಯಲು ಸಾಧ್ಯವಿಲ್ಲ ಎಂದರು.

ಮುಂದುವರೆದು ಮಾತನಾಡಿದ ಅವರು, ರಾಹುಲ್ ಗಾಂಧಿ 10 ಲಕ್ಷದ ಸೂಟ್ ಹಾಕಿಲ್ಲ ಅಲ್ವಾ? ಅವರು ಏನು ಹಾಕಬೇಕು ಎನ್ನೋದು ಅವರ ಆಯ್ಕೆಗೆ ಬಿಟ್ಟ ವಿಚಾರವಾಗಿದೆ. ನನ್ನ ಹತ್ರಾನು 2 ಲಕ್ಷದ ರೋಲೆಕ್ಸ್ ವಾಚ್ ಇದೆ, ಈಗ ಅದರ ವ್ಯಾಲ್ಯೂ 20 ಲಕ್ಷ ಇರಬಹುದು. ನಾನು ಹಾಕುತ್ತಿರುವ ಬಾಟಾ ಚಪ್ಪಲಿ, 900ರೂಪಾಯಿ ಮಾತ್ರ, ಇವೆಲ್ಲವೂ ನನ್ನ ಸ್ವಂತ ದುಡ್ಡಲ್ಲಿ ಖರೀದಿಸಿರುವುದು ಎಂದರು.

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ