ಬೆಂಗಳೂರು: ತಾಜ್ ವೆಸ್ಟೆಂಡ್ ಹೋಟೆಲ್ನಲ್ಲಿ ನಿನ್ನೆ ಪ್ರತಿಪಕ್ಷಗಳ ಸಭೆ ವೇಳೆ ವಿಧಾನಸಭೆ ಸ್ವೀಕರ್ ಯು.ಟಿ ಖಾದರ್ (Speaker UT Khader) ಭೇಟಿ ನೀಡಿದ್ದನ್ನು ವಿರೋಧಿಸಿ ಅವರ ವಿರುದ್ಧ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಅವಿಶ್ವಾಸ ನಿರ್ಣಯಕ್ಕೆ ನೋಟಿಸ್ ನೀಡಿವೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಹೆಚ್.ಡಿ ಕುಮಾರಸ್ವಾಮಿ ಸೇರಿದಂತೆ ಹಲವು ಬಿಜೆಪಿ ಮತ್ತು ಜೆಡಿಎಸ್ ಶಾಸಕರು ನೋಟಿಸ್‌ಗೆ ಸಹಿ ಹಾಕಿದ್ದಾರೆ ಎಂದು ನ್ಯೂಸ್ 9 ವರದಿ ಮಾಡಿದೆ.
ಸ್ವೀಕರ್ ಸ್ಥಾನ ಸಾಂವಿಧಾನಿಕವಾಗಿದ್ದು, ಇತರೆ ಯಾವುದೇ ಪಕ್ಷಗಳೊಂದಿಗೆ ಗುರುತಿಸಕೊಳ್ಳುವಂತಿಲ್ಲ. ಆದರೆ ವಿಧಾನಸಭೆಯ ಎಲ್ಲಾ ಸದಸ್ಯರಿಂದ ಆಯ್ಕೆಯಾದ ಸ್ಪೀಕರ್ ಸದನದ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ. ಹಾಗಾಗಿ ಅವರನ್ನು ಪದಚ್ಯುತಗೊಳಿಸಬೇಕು ಮತ್ತು 169 ರ ಅಡಿಯಲ್ಲಿ ಸದನದಲ್ಲಿ ನಿರ್ಣಯವನ್ನು ತರಲು ಸಮಯ ನೀಡುವಂತೆ ನಾವು ವಿನಂತಿಸುತ್ತೇವೆ ಎಂದು ವಿಧಾನಸಭೆ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: BJP MLAs Suspended: ಸದನದಲ್ಲಿ ಅತಿರೇಕದ ವರ್ತನೆ; ಹತ್ತು ಮಂದಿ ಬಿಜೆಪಿ ಶಾಸಕರ ಅಮಾನತು
ಯು.ಟಿ ಖಾದರ್ ಅವರು ಈ ವರ್ಷ ಮೇ 24 ರಂದು ಸ್ಪೀಕರ್ ಆಗಿ ಸರ್ವಾನುಮತದಿಂದ ಆಯ್ಕೆಯಾದರು. ಪ್ರತಿಪಕ್ಷಗಳ ವಿರೋಧದ ನಡುವೆಯೂ ಅಧಿವೇಶನ ಮುಂದುವರಿಸಿದ್ದಕ್ಕಾಗಿ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಖಾದರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಧಾನಸಭೆ ಕಲಾಪದ ಮೇಳೆ ಬಿಜೆಪಿ ಸದಸ್ಯರಿಂದ ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಲಮಾಣಿ ಮೇಲೆ ಕಾಗದ ಪತ್ರ ಹರಿದು ಎಸೆಯಲಾಗಿದೆ. ಈ ಹಿನ್ನೆಲೆ ಸ್ಪೀಕರ್ಗೆ ಬಿಜೆಪಿ ಶಾಸಕರ ವಿರುದ್ಧ ಕಾಂಗ್ರೆಸ್ ಸದಸ್ಯರು ದೂರು ನೀಡಿದ್ದು, 10 ಬಿಜೆಪಿ ಶಾಸಕರನ್ನು ಅಧಿವೇಶನ ಮುಗಿಯುವವರೆಗೂ ಅಮಾನತು ಮಾಡಿ ಸ್ಪೀಕರ್ ಯು.ಟಿ ಖಾದರ್ ಆದೇಶಿಸಿದ್ದಾರೆ.
ಇದನ್ನೂ ಓದಿ: ಬಂಧಿತರನ್ನು ಈಗಲೇ ಉಗ್ರರು ಎನ್ನಲಾಗದು: ಗೃಹ ಸಚಿವ ಪರಮೇಶ್ವರ್ ಹೀಗೆಂದಿದ್ದು ಯಾಕೆ?
ಬೆಂಗಳೂರಿನ ಪದ್ಮನಾಭನಗರ ಕ್ಷೇತ್ರದ ಶಾಸಕ ಆರ್.ಅಶೋಕ್, ಬೆಂಗಳೂರಿನ ಮಲ್ಲೇಶ್ವರಂ ಶಾಸಕ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ, ಮಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ವೇದವ್ಯಾಸ ಕಾಮತ್, ಬೆಂಗಳೂರು ಗ್ರಾ. ಜಿಲ್ಲೆ ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು, ಉಡುಪಿ ಕ್ಷೇತ್ರದ ಬಿಜೆಪಿ ಶಾಸಕ ಯಶಪಾಲ್ ಸುವರ್ಣ, ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ್, ಉಡುಪಿ ಜಿಲ್ಲೆಯ ಕಾರ್ಕಳ ಕ್ಷೇತ್ರದ ಶಾಸಕ ವಿ.ಸುನೀಲ್ ಕುಮಾರ್, ಮೂಡಬಿದಿರೆ ಕ್ಷೇತ್ರದ ಬಿಜೆಪಿ ಶಾಸಕ ಉಮಾನಾಥ್ ಕೋಟ್ಯಾನ್, ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ, ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ವೈ.ಭರತ್ ಶೆಟ್ಟಿ ಅಮಾನತುಗೊಳಗಾದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:39 pm, Wed, 19 July 23