ದಾವಣಗೆರೆ: ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Assembly Elections 2023) ಕಾಂಗ್ರೆಸ್ ಬಿಡುಗಡೆ ಮಾಡಿದ 2ನೇ ಪಟ್ಟಿಯಲ್ಲಿ ಜಿಲ್ಲೆಯಲ್ಲೇ ಕುತೂಹಲ ಕೆರಳಿಸಿದ್ದ ಚನ್ನಗಿರಿ(channagiri) ಕ್ಷೇತ್ರಕ್ಕೆ ಹೊಸಮುಖಕ್ಕೆ ಆದ್ಯತೆ ನೀಡಿ ಯುವ ಅಭ್ಯರ್ಥಿಗೆ ಮಣೆ ಹಾಕಿದೆ. ಯುವ ಪ್ರತಿಭೆ, ರೈತ ಮುಖಂಡ ಶಿವಗಂಗಾ ಬಸವರಾಜ್‌ಗೆ ಟಿಕೆಟ್ ಭಾಗ್ಯ ಒಲಿದಿದ್ದು, ಕಳೆದ ಒಂದು ತಿಂಗಳಿನಿಂದ ಕೈ ಅಭ್ಯರ್ಥಿ ಯಾರೆಂಬ ಗೊಂದಲಕ್ಕೆ ಗುರುವಾರ ತೆರೆಬಿದ್ದಿದೆ. ಇನ್ನು ಬಿಜೆಪಿಯ ಹಾಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಲಂಚ ಪ್ರಕರಣದಲ್ಲಿ ಜೈಲು ಸೇರಿದ್ದು, ಈ ಬಾರಿ ಅವರಿಗೆ ಟಿಕೆಟ್ ಕಷ್ಟ ಸಾಧ್ಯ. ಈ ಹಿನ್ನೆಲೆಯಲ್ಲಿ ಚನ್ನಗಿರಿಯಲ್ಲಿ ಹೊಸ ಮುಖ ಪರಿಚಯಿಸಲು ಈ ಬಾರಿ ಬಿಜೆಪಿ ತಂತ್ರರೂಪಿಸಿದೆ. ಇದರೊಂದಿಗೆ ಮೂರು ದಶಕಗಳ ಕಾಲ ಚನ್ನಗಿರಿಯನ್ನಾಳಿದ ಮಾಡಾಳ್ – ವಡ್ನಾಳ್ ಜೋಡಿಯನ್ನು ತೆರೆ ಮರೆಗೆ ಸರಿಸಲಾಗಿದೆ.
ಹೌದು… ಚನ್ನಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಮುಖ ಪಕ್ಷಗಳಾಗಿ ಗುರುತಿಸಿಕೊಂಡಿದ್ದು, ಕ್ಷೇತ್ರದ ಮತದಾರರು ಕಳೆದ ಎರಡು ದಶಕದಲ್ಲಿಒಂದೊಂದು ಬಾರಿ ಒಂದೊಂದು ಪಕ್ಷದ ಕೈ ಹಿಡಿದಿದ್ದಾರೆ. ಚನ್ನಗಿರಿ ಕ್ಷೇತ್ರದ ಸಾಂಪ್ರದಾಯಿಕ ಎದುರಾಳಿಗಳಾಗಿ ಹಲವು ವರ್ಷಗಳಿಂದ ಸೆಣಸಾಡುತ್ತಾ ಬಂದಿದ್ದಾರೆ. ಆದ್ರೆ, ಇದೀಗ ಭ್ರಷ್ಟಾಚಾರ ಪ್ರಕರಣದಲ್ಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಸಿಲುಕಿ ಜೈಲುಪಾಲಾಗಿದ್ದಾರೆ. ಇನ್ನು ಒಂದು ಕಾಲದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಹಾಲಿ ಸಿಎಂ ಜೆಎಚ್ ಪಟೇಲ್ ರನ್ನ ಸೋಲಿಸಿ ವಿಧಾನಸಭೆ ಪ್ರವೇಶ ಮಾಡಿದ್ದ ವಡ್ನಾಳ್ ರಾಜಣ್ಣ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಈ ಮೂಲಕ ಈ ಇಬ್ಬರು ನಾಯಕರ ರಾಜಕೀಯ ಬಹುತೇಕ ಸಂಧ್ಯಾಕಾಲಕ್ಕೆ ತಲುಪಿದೆ.
ಮಾಡಾಳ್ ವಿರೂಪಾಕ್ಷಪ್ಪ 2004ರಲ್ಲಿ ಮೊದಲ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಸೋಲುಕಂಡಿದ್ದರು. ಬಳಿಕ 2008ರಲ್ಲಿ ಗೆಲ್ಲುವ ಮೂಲಕ ಚನ್ನಗಿರಿಯಲ್ಲಿ ಕಮಲ ಅರಳಿಸುವಲ್ಲಿ ಯಶಸ್ವಿಯಾಗಿದ್ದರು. ನಂತರ 2013ರಲ್ಲಿ ಯಡಿಯೂರಪ್ಪನವರ ಹಿಂದೆ ಹೋಗಿ ಕೆಜೆಪಿಯಿಂದ ಸ್ಪರ್ಧಿಸಿದ್ದ ಮಾಡಾಳ್, ವಡ್ನಾಳ್ ರಾಜಣ್ಣ ವಿರುದ್ಧ ಸೋಲು ಅನುಭವಿಸಿದ್ದರು. ಇನ್ನು ಕಳೆದ ಚುನಾವಣೆಯಲ್ಲಿ ಅಂದ್ರೆ 2028ರಲ್ಲಿ ನಡೆದ ಚುನಾವಣೆಯಲ್ಲಿ ಮತ್ತೆ ವಾಪಸ್ ಬಿಜೆಪಿಯಿಂದ ಕಣಕ್ಕಿಳಿದು ವಡ್ನಾಳ್ ರಾಜಣ್ಣ ವಿರುದ್ಧ ವಿಜಯ ಪತಾಕೆ ಹಾರಿಸಿದ್ದರು. ಈ ಮೂಲಕ ಸೋಲಿ ಸೇಡು ತೀರಿಸಿಕೊಂಡಿದ್ದರು. ಹೀಗೆ ಈ ಇಬ್ಬರು ಪ್ರತಿಸ್ಪರ್ಧಿಗಳಾಗಿ ಒಮ್ಮೆ ವಡ್ನಾಳ್ ರಾಜಣ್ಣ ಮತ್ತೊಮ್ಮೆ ಮಾಡಾಳ್ ಗೆಲ್ಲುತ್ತಾ ಬಂದಿದ್ದಾರೆ. ಆದ್ರೆ, ಈ ಬಾರಿ ಮಾಡಾಳ್ ಜೈಲು ಸೇರಿದ್ದು, ಬಿಜೆಪಿ ಟಿಕೆಟ್ ಬೇರೆಯವರ ಪಾಲಾಗುವ ಸಾಧ್ಯತೆಗಳು ಹೆಚ್ಚಿವೆ.
ವಡ್ನಾಳ್ ರಾಜಣ್ಣ ಅವರು ಬಿಜೆಪಿಯಿಂದಲೇ ರಾಜಕಾರಣ ಪ್ರವೇಶ ಮಾಡಿದ್ದು, 1994ರಲ್ಲಿ ಅವರು ಬಿಜೆಪಿ ಅಭ್ಯರ್ಥಿಯಾಗಿದ್ದರು. ಜನತಾದಳ ಜೆ.ಎಚ್.ಪಟೇಲ್, ಕಾಂಗ್ರೆಸ್ನ ಎಚ್.ಜಿ. ಹಾಲಪ್ಪ ಅವರಿಗೆ ಸ್ಪರ್ಧೆಯೊಡ್ಡಿದ್ದರು. ಆದ್ರೆ, ಆ ಚುನಾವಣೆಯಲ್ಲಿ ಜೆ.ಎಚ್.ಪಟೇಲ್ ಗೆದ್ದು ಬೀಗಿದ್ದರು. ಬಳಿಕ 1999ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜೆ.ಎಚ್ ಪಟೇಲರನ್ನು ಸೋಲಿಸಿದ್ದರು. ಈ ಮೂಲಕ ರಾಜ್ಯಾದ್ಯಂತ ವಡ್ನಾಳ್ ರಾಜಣ್ಣ ಯಾರು ಎಂದು ಮನೆಮಾತಾಗಿದ್ದರು. ಬಳಿಕ ಕಾಂಗ್ರೆಸ್ ಸೇರಿದ ರಾಜಣ್ಣ 2004ರಲ್ಲಿ ಕೈಯಿಂದ ಸ್ಪರ್ಧಿಸಿ ಸೋತ್ತಿದ್ದರು. ಇನ್ನು 2008ರಲ್ಲೂ ಸಹ ರಾಜಣ್ಣ ವಡ್ನಾಳ್ ಮಾಡಾಳ್ ವಿರುದ್ಧ ಮಂಡಿಯೂರಿದ್ದರು. ಇನ್ನು 2013ರ ಚುನಾವಣೆಯಲ್ಲಿ ಗೆದ್ದು 2ನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು. ಆದ್ರೆ, ಕಳೆದ ಚುನಾವಣೆಯಲ್ಲಿ ವಡ್ನಾಳ್ ಅವರನ್ನು ಮಾಡಾಳ್ ಮಣಿಸಿದ್ದರು. ಹೀಗೆ ಸೋಲು-ಗೆಲುವುಗಳ ಮೂಲಕ ರಾಜಕಾರಣದಲ್ಲಿದ್ದ ವಡ್ನಾಳ್ ರಾಜಣ್ಣಗೆ ಈ ಬಾರಿ ಕಾಂಗ್ರೆಸ್ ಟಿಕೆಟ್ ಕೈತಪ್ಪಿದೆ.
ಚನ್ನಗಿರಿಯಿಂದ ಮಾಜಿ ಶಾಸಕ ವಡ್ನಾಳ್ ರಾಜಣ್ಣ ಸ್ಪರ್ಧಿಸುವುದಿಲ್ಲಎಂಬ ಕಾರಣಕ್ಕೆ ತನ್ನ ಬದಲು ಅಣ್ಣನ ಮಕ್ಕಳಾದ ಅಶೋಕ ವಡ್ನಾಳ್ ಜಗದೀಶ ವಡ್ನಾಳ್ ಗೆ ಟಿಕೆಟ್ ಕೊಡಿಸುವ ಒಲವು ತೊರಿದ್ದರು. ಇನ್ನು ಕಾಂಗ್ರೆಸ್ ಟಿಕೆಟ್ ರೈತ ಮುಖಂಡ ತೇಜಸ್ವಿ ಪಟೇಲ್‌ಗೆ ಟಿಕೆಟ್ ಒಲಿಯಬಹದು ಎಂದು ಹೇಳಲಾಗಿತ್ತು. ಆದರೆ, ಇತ್ತೀಚೆಗೆ ಪ್ರಜಾಧ್ವನಿ ಯಾತ್ರೆಯಲ್ಲಿ ಸ್ವತಃ ಸಿದ್ದರಾಮಯ್ಯರೇ ವಡ್ನಾಳ್ ರಾಜಣ್ಣ ಗೆಲ್ಲಿಸಿ ಎಂದು ಕರೆ ನೀಡಿ ಹೋಗಿದ್ದು, ಜನತಾ ಪರಿವಾರದ ತೇಜಸ್ವೀ ಅವರ ಸಂಭಾವ್ಯತೆ ಮೇಲೆ ಮೋಡ ಕವಿದಿತ್ತು. ವಡ್ನಾಳ್ ರಾಜಣ್ಣರಿಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ ಎನ್ನುವ ಸುದ್ದಿ ಮತ್ತೆ ಹರಡಿತ್ತು. ಆದರೆ, ಕಾಂಗ್ರೆಸ್ ಎರಡನೇ ಪಟ್ಟಿಯಲ್ಲಿ ಪ್ರಕಟಿಸಿದ ಹೊಸ ಹೆಸರು ಚನ್ನಗಿರಿ ಚುನಾವಣಾ ಅಖಾಡದ ಚಿತ್ರಣವನ್ನೆ ಬದಲಿಸಿದೆ.
ಇದರೊಂದಿಗೆ ಅಡಿಕೆ ನಾಡು ಚನ್ನಗಿರಿಯಲ್ಲಿ ಮೂವತ್ತು ವರ್ಷ ರಾಜಕೀಯ ಮಾಡಿದ ವಡ್ನಾಳ್ ಮತ್ತು ಮಡಾಳ್ ಇಬ್ಬರು ನಾಯಕರು ತೆರೆಮೆರೆಗೆ ಸರಿದಂತಾಗಿದೆ.
ಇನ್ನಷ್ಟು ಕರ್ನಾಟಕ ವಿಧಾನಸಭೆ ಚುನಾವಣೆ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 3:54 pm, Fri, 7 April 23