ಚಿಕ್ಕೋಡಿ, ಅಕ್ಟೋಬರ್ 23: ಡಿಸಿಎಂ ಡಿಕೆ ಶಿವಕುಮಾರ್ ಇರುವವರೆಗೂ ನಮಗೆ ಪ್ರತಿಪಕ್ಷವಾಗಿ ವರದಾನ ಎಂದು ಬಿಜೆಪಿ (BJP) ನಾಯಕ, ಗೋಕಾಕ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ (Ramesh Jarkiholi) ಹೇಳಿದ್ದಾರೆ. ನಂದಗಾಂವ ಗ್ರಾಮದಲ್ಲಿ ಮಾತನಾಡಿದ ಅವರು, ಡಿಕೆ ಎಷ್ಟು ದಿನ ಇರ್ತಾರೋ ನಮಗೆ ವಿಪಕ್ಷದಲ್ಲಿ ಅಷ್ಟು ದಿನ ವರದಾನ ಎಂದು ಟಾಂಗ್ ಕೊಟ್ಟಿದ್ದಾರೆ. ಅಲ್ಲದೆ, ಕಾಂಗ್ರೆಸ್ ಸರ್ಕಾರ ಬಂದು 6 ತಿಂಗಳಾಗಿವೆ. ಸಿಎಂ ಸಿದ್ದರಾಮಯ್ಯ ಒಳ್ಳೆಯದನ್ನು ಮಾಡ್ತಾರೆಂಬ ಆಸೆ ಇದೆ. ಆದ್ರೆ ನಡೆದುಕೊಳ್ಳುವ ರೀತಿ ನೋಡಿದ್ರೆ ಸಿದ್ದರಾಮಯ್ಯ ಮೊದಲಿನಂತಿಲ್ಲ. ಹೀಗಾಗಿ ಸಿಎಂ ಸಿದ್ದರಾಮಯ್ಯರಿಗೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
2013-2018ರವರೆಗೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ನಾನು ಸಚಿವನಾಗಿದ್ದೆ. ಆಗಿನ ಅವರ ಮಾತಿನ ದರ್ಪ, ಆ ಗಂಭೀರತೆ ಇವತ್ತು ಕಾಣುತ್ತಿಲ್ಲ. ಮುಂದಿನ ದಿನಗಳಲ್ಲಿ ನೋಡೋಣ. ಏಕೆ ಹೀಗೆ ಮಾಡುತ್ತಿದ್ದಾರೋ ಗೊತ್ತಿಲ್ಲ. ಸಿದ್ದರಾಮಯ್ಯ ಒಳ್ಳೆಯ ಮುಖ್ಯಮಂತ್ರಿ, ಅವರ ಬಗ್ಗೆ ಗೌರವ ಇದೆ. ಬಹುಶಃ ಹೈಕಮಾಂಡ್ ಹಾಗೂ ಕೆಲವು ಜನ ಅವರನ್ನು ಫ್ರೀ ಬಿಟ್ಟಿಲ್ಲ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್, ಸತೀಶ್ ಜಾರಕಿಹೊಳಿ ಮಧ್ಯೆ ಶೀತಲ ಸಮರ ನಡೆಯುತ್ತಿದೆ ಎಂಬ ವರದಿಗಳ ಬಗ್ಗೆ ಪ್ರತಿಕ್ರಿಯಿಸಿದ ರಮೇಶ್ ಜಾರಕಿಹೊಳಿ, ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೇ ಸತೀಶ್ ಪರಿಸ್ಥಿತಿ ಈ ರೀತಿ ಇದೆ. ಬೇರೆಯವರು ಸಿಎಂ ಆದ್ರೆ ಪರಿಸ್ಥಿತಿ ಏನು ಎಂದು ಪ್ರಶ್ನಿಸಿದ್ದಾರೆ.
ಹಿಂದೆ ನಾನು ಬಂಡಾಯವೆದ್ದಾಗ ಜನ ನನ್ನನ್ನು ಬೈದಿದ್ದರು. ಸಚಿವರಾಗಿದ್ದರು, ಇವರಿಗೇಕೆ ಬೇಕು ಸುಮ್ಮನಿರಬೇಕಲ್ಲ ಅಂತಾ ಹೇಳಿದ್ರು. ನನ್ನನ್ನು ಬೈದಿದ್ದ ಆ ಜನರಿಗೆ ಈಗ ಉತ್ತರ ಸಿಕ್ಕಿದೆ. ರಮೇಶ್ ಜಾರಕಿಹೊಳಿ ಏಕೆ ಬಂಡಾಯವೆದಿದ್ರು ಅಂತಾ ಜನರಿಗೆ ಗೊತ್ತಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಜಗದೀಶ್ ಶೆಟ್ಟರ್ ಭೇಟಿಯಾಗಿದ್ದನ್ನು ಒಪ್ಪಿಕೊಂಡ ರಮೇಶ್ ಜಾರಕಿಹೊಳಿ: ಒಂದಲ್ಲ, ಎರಡಲ್ಲ ಆರು ಬಾರಿ ನಡೆದಿತ್ತು ಮಾತುಕತೆ!
ಕಿತ್ತೂರು ಉತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲು ಬಾರದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ನನಗೂ ಗೊತ್ತಿಲ್ಲಮ ನಾನು ದೇವಸ್ಥಾನಕ್ಕೆ ಹೋಗಿದ್ದೆ. ಕಳೆದ ಎರಡ್ಮೂರು ತಿಂಗಳಿಂದ ಕೇವಲ ದೇವಸ್ಥಾನ ಅಡ್ಡಾಡುತ್ತಿದ್ದೇನೆ. ಜಾಸ್ತಿ ರಾಜಕಾರಣ ಮಾಡಿಲ್ಲ, ಮುಂದಿನ ದಿನಗಳಲ್ಲಿ ರಾಜಕಾರಣ ಮಾಡ್ತೀನಿ ನೋಡೋಣ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ