ಜಗದೀಶ್ ಶೆಟ್ಟರ್ ಭೇಟಿಯಾಗಿದ್ದನ್ನು ಒಪ್ಪಿಕೊಂಡ ರಮೇಶ್ ಜಾರಕಿಹೊಳಿ: ಒಂದಲ್ಲ, ಎರಡಲ್ಲ ಆರು ಬಾರಿ ನಡೆದಿತ್ತು ಮಾತುಕತೆ!
Ramesh Jarkiholi Meets Jagadish Shettar: ಸತತವಾಗಿ ಆರನೇ ಬಾರಿ ಅವರನ್ನು ಭೇಟಿಯಾಗಿದ್ದೇನೆ. ಈ ಬಾರಿ ಭೇಟಿಯಾದ ವಿಚಾರ ಸೋರಿಕೆ ಆಗಿದೆ. ಬಹಳ ಸಲ ಅವರನ್ನು ಭೇಟಿಯಾಗಿದ್ದೇನೆ. ಜಗದೀಶ್ ಶೆಟ್ಟರ್ ನಮ್ಮ ಪಕ್ಷ ಬಿಡಬಾರದಾಗಿತ್ತು, ದುರ್ದೈವ. ಮುಂದಿನ ದಿನಗಳಲ್ಲಿ ನೋಡೋಣ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಚಿಕ್ಕೋಡಿ, ಅಕ್ಟೋಬರ್ 23: ಮಾಜಿ ಸಿಎಂ, ಕಾಂಗ್ರೆಸ್ (Congress) ನಾಯಕ ಜಗದೀಶ್ ಶೆಟ್ಟರ್ (Jagdish Shettar) ಅವರನ್ನು ಭೇಟಿಯಾಗಿದ್ದು ನಿಜ ಎಂದು ಬಿಜೆಪಿ (BJP) ನಾಯಕ, ಗೋಕಾಕ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ (Ramesh Jarkiholi) ಒಪ್ಪಿಕೊಂಡಿದ್ದಾರೆ. ನಂದಗಾಂವ ಗ್ರಾಮದಲ್ಲಿ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ನಮ್ಮ ಪ್ರೀತಿಯ ವ್ಯಕ್ತಿ. ಅವರು ಎಲ್ಲೇ ಇದ್ದರೂ ನಮ್ಮ ಹಿರಿಯರು, ಅವರ ಬಗ್ಗೆ ಗೌರವ ಇದೆ. ಜಗದೀಶ್ ಶೆಟ್ಟರ್ ಭೇಟಿ ಹಿಂದೆ ರಾಜಕಾರಣ ಇಲ್ಲ ಎಂದು ಹೇಳಿದ್ದಾರೆ.
ಸತತವಾಗಿ ಆರನೇ ಬಾರಿ ಅವರನ್ನು ಭೇಟಿಯಾಗಿದ್ದೇನೆ. ಈ ಬಾರಿ ಭೇಟಿಯಾದ ವಿಚಾರ ಸೋರಿಕೆ ಆಗಿದೆ. ಬಹಳ ಸಲ ಅವರನ್ನು ಭೇಟಿಯಾಗಿದ್ದೇನೆ. ಜಗದೀಶ್ ಶೆಟ್ಟರ್ ನಮ್ಮ ಪಕ್ಷ ಬಿಡಬಾರದಾಗಿತ್ತು, ದುರ್ದೈವ. ಮುಂದಿನ ದಿನಗಳಲ್ಲಿ ನೋಡೋಣ. ರಾಜಕೀಯ ವಿಚಾರವಾಗಿ ಒಂದು ಶಬ್ದವೂ ಚರ್ಚೆ ಆಗಿಲ್ಲ, ಅದೆಲ್ಲ ಸುಳ್ಳು. ವೈಯಕ್ತಿಕವಾಗಿ ಭೇಟಿಯಾಗಿದ್ದು ಅಷ್ಟೇ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ರಮೇಶ್ ಜಾರಕಿಹೊಳಿ ಅವರು ಶೆಟ್ಟರ್ ಅವರನ್ನು ಭೇಟಿಯಾದ ಬಗ್ಗೆ ಇತ್ತೀಚೆಗೆ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಯಾಗಿತ್ತು. ಆಪರೇಷನ್ ಹಸ್ತದ ವದಂತಿಗಳ ಮಧ್ಯೆ, ಶೆಟ್ಟರ್ ಅವರು ಬಿಜೆಪಿ ಶಾಸಕರ ಸಂಪರ್ಕದಲ್ಲಿದ್ದು ಕಾಂಗ್ರೆಸ್ಗೆ ಸೆಳೆಯಲು ಯತ್ನಿಸುತ್ತಿದ್ದಾರೆ ಎಂಬ ಊಹಾಪೋಹಗಳ ಮಧ್ಯೆಯೇ ಉಭಯ ನಾಯಕರ ಭೇಟಿ ಬಗ್ಗೆ ಚರ್ಚೆಯಾಗಿತ್ತು. ಬಳಿಕ ಆ ಕುರಿತು ಸ್ಪಷ್ಟನೆ ನೀಡಿದ್ದ ಶೆಟ್ಟರ್, ರಮೇಶ್ ಜಾರಕಿಹೊಳಿ ಅವರು ತಮ್ಮನ್ನು ಭೇಟಿಯಾಗಿಲ್ಲ. ಆ ಕುರಿತ ಸುದ್ದಿಗಳು ಕೇವಲ ವದಂತಿಯಷ್ಟೇ ಎಂದಿದ್ದರು. ಇದೀಗ ಜಾರಕಿಹೊಳಿ ಅವರೇ ಶೆಟ್ಟರ್ ಅವರನ್ನು ಭೇಟಿಯಾಗಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಆಗಾಗ ಭೇಟಿಯಾಗುತ್ತಿರುತ್ತಾರೆ ಅದರೆ ನಾವು ರಾಜಕೀಯ ಚರ್ಚೆ ಮಾಡೋದಿಲ್ಲ: ಜಗದೀಶ್ ಶೆಟ್ಟರ್
ತಮ್ಮ ನಡುವೆ ಹಿತಕರ ಮತ್ತು ಆರೋಗ್ಯಕರ ಗೆಳೆತನ ಈಗಲೂ ಇದೆ, ಹಾಗಾಗಿ ರಮೇಶ್ ಜಾರಕಿಹೊಳಿ ಅವರು ಆಗಾಗ ನನ್ನನ್ನು ಭೇಟಿಯಾಗುತ್ತಿರುತ್ತಾರೆ ಎಂದು ಕೆಲವು ದಿನಗಳ ಹಿಂದಷ್ಟೇ ಹೇಳಿದ್ದರು ಎಂಬುದೂ ಗಮನಾರ್ಹ.
ಲಕ್ಷ್ಮಣ ಸವದಿ ಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿ ಶಕ್ತಿ ಪ್ರದರ್ಶನ
ಕಾಂಗ್ರೆಸ್ ನಾಯಕ ಲಕ್ಷ್ಮಣ ಸವದಿ ಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನಂದಗಾಂವ್ ದಸರಾ ಕಾರ್ಯಕ್ರಮಕ್ಕೆ ಆಗಮಿಸಿದ ರಮೇಶ್ ಜಾರಕಿಹೊಳಿಗೆ ಅದ್ಧೂರಿ ಸ್ವಾಗತ ದೊರೆತಿದೆ. ನಂದಗಾಂವ್ ಗ್ರಾಮ ಅಥಣಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲೇ ಬರುತ್ತದೆ. ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಪ್ರತಿನಿಧಿಸುವ ಕ್ಷೇತ್ರವಾಗಿದೆ ಅಥಣಿ.
ಬೆಂಬಲಿಗರು 2 ಜೆಸಿಬಿ ಮೇಲೆ ನಿಂತು ರಮೇಶ್ಗೆ ಹೂವಿನ ಮಳೆಗರೆದಿದ್ದಾರೆ. ಇದೇ ವೇಳೆ ತೆರೆದ ವಾಹನದಲ್ಲಿ ರಮೇಶ್ ಜಾರಕಿಹೊಳಿ ಮೆರವಣಿಗೆ ನಡೆಸಲಾಯಿತು. ರಮೇಶ್ ಜಾರಕಿಹೊಳಿಗೆ ಮಾಜಿ ಸಚಿವ ಶ್ರೀಮಂತ ಪಾಟೀಲ ಸಾಥ್ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ