ಬೆಂಗಳೂರು: ಚುನಾವಣಾ ಪ್ರಮಾಣಪತ್ರದಲ್ಲಿ ತಪ್ಪು ಮಾಹಿತಿ ನೀಡಿದ ಪ್ರಕರಣದಲ್ಲಿ ಬಿಜೆಪಿ ಶಾಸಕ ಉದಯ್ ಗರುಡಾಚಾರ್ಗೆ ಕೋರ್ಟ್ 2 ತಿಂಗಳು ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿತ್ತು, ಇದರ ಬೆನ್ನಲ್ಲೇ ಅದೇ ಕೋರ್ಟ್ನಿಂದ ಗರುಡಾಚಾರ್ ಜಾಮೀನು ಪಡೆದುಕೊಂಡಿದ್ದಾರೆ.
ಇನ್ನು ಈ ಕೋರ್ಟ್ ಆದೇಶದ ಬಗ್ಗೆ ಮಾಧ್ಯಮಗಳಿಗೆ ಮೊದಲ ಪ್ರತಿಕ್ರಿಯೆ ಕೊಟ್ಟಿರುವ ಉದಯ್ ಗರುಡಾಚಾರ್, ವಕೀಲರ ಸಲಹೆಯಂತೆ ಚುನಾವಣಾ ಅಫಿಡವಿಟ್ನಲ್ಲಿ ಕೇಸ್ಗಳ ಬಗ್ಗೆ ಉಲ್ಲೇಖಿಸಿದ್ದೆ. ನಾನು ನಾನು ಹೈಕೋರ್ಟ್ ಗೆ ಮೇಲ್ಮನವಿ ಹೋಗುತ್ತೇನೆ. ನನ್ನ ವಿರುದ್ಧ ಕೇಸ್ ರದ್ದತಿಗೆ ಹೈಕೋರ್ಟ್ಗೆ ಮೇಲ್ಮನವಿ ಅರ್ಜಿ ಸಲ್ಲಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.
ಚುನಾವಣಾ ಪ್ರಮಾಣಪತ್ರದಲ್ಲಿ ತಪ್ಪು ಮಾಹಿತಿ ಆರೋಪ: ಶಾಸಕ ಉದಯ್ ಗರುಡಾಚಾರ್ಗೆ ಜಾಮೀನು
ವಕೀಲರ ಸಲಹೆಯಂತೆ ಎಲ್ಲಾ ಕೇಸ್ಗಳ ವಿಚಾರ ಉಲ್ಲೇಖಿಸಿದ್ದೆ. ಪತ್ನಿ ಬ್ಯಾಂಕ್ ಅಕೌಂಟ್ನಿಂದ 2,500 ರೂಪಾಯಿ ಕಡಿತವಾಗಿತ್ತು. ಇದೆಲ್ಲಾ ಸೇರಿದಂತೆ ಇಂದು(ಅ.13) ಕೋರ್ಟ್ನಿಂದ ಆದೇಶ ಬಂದಿದೆ, ನ್ಯಾಯಾಲಯ ನನಗೆ ಒಂದು ತಿಂಗಳ ಸಮಯಾವಕಾಶ ನೀಡಿದೆ. ದೂರುದಾರರು ಯಾಕೆ ಕೇಸ್ ಹಾಕಿದ್ದರೋ ಎಂಬುದು ಗೊತ್ತಿಲ್ಲ. ನನ್ನ ವಿರುದ್ಧ ಕೇಸ್ ಹಾಕಿದ್ದವರಿಗೆ ಒಳ್ಳೆಯದಾಗಲಿ ಎಂದರು.
ಏನಿದು ಪ್ರಕರಣ?
2018ರ ವಿಧಾನಸಭೆ ಚುನಾವಣಾ ಪ್ರಮಾಣಪತ್ರದಲ್ಲಿ ತಪ್ಪು ಮಾಹಿತಿ ಆರೋಪದ ಮೇಲೆ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯ, ಬೆಂಗಳೂರಿನ ಚಿಕ್ಕಪೇಟೆ ಬಿಜೆಪಿ ಶಾಸಕ ಗರುಡಾಚಾರ್ಗೆ 2 ತಿಂಗಳು ಜೈಲು ಹಾಗೂ 10 ಸಾವಿರ ದಂಡ ವಿಧಿಸಿ ಇಂದು(ಅಕ್ಟೋಬರ್. 13) ಆದೇಶ ಹೊರಡಿಸಿತ್ತು,
2018 ರಲ್ಲಿ ಚಿಕ್ಕಪೇಟೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ ಪ್ರಮಾಣಪತ್ರದಲ್ಲಿ ಕ್ರಿಮಿನಲ್ ಕೇಸ್ ಗಳ ಮಾಹಿತಿ ನೀಡಿರುವುದಿಲ್ಲ. ಈ ಬಗ್ಗೆ ಪ್ರಕಾಶ್ ಎಂ ಶೆಟ್ಟಿ ಎಂಬುವರು ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಆರ್‌ಒಸಿಯಿಂದ ಉದಯ್ ಗರುಡಾಚಾರ್ ಹಾಗೂ ಪತ್ನಿ ಅನರ್ಹಗೊಂಡಿದ್ದರು. ಈ ಮಾಹಿತಿಯನ್ನು ಪ್ರಮಾಣಪತ್ರದಿಂದ ಮುಚ್ಚಿಟ್ಟಿದ್ದರು. ಮೆವರಿಕ್ ಹೋಲ್ಡಿಂಗ್ಸ್ ನಲ್ಲಿ ಎಂಡಿ ಯಾಗಿದ್ದರೂ ಹೂಡಿಕೆದಾರ ಎಂದು ನಮೂದು. ಪತ್ನಿ ನಿರ್ದೇಶಕರಾಗಿರುವುದನ್ನು ನಮೂದಿಸದ ಆರೋಪ. ಪತ್ನಿಯ ಬ್ಯಾಂಕ್ ವಿವರ ನೀಡದೇ ಮುಚ್ಚಿಟ್ಟ ಆರೋಪ. ಈ ಎಲ್ಲದರ ಬಗ್ಗೆ ಹೆಚ್.ಜಿ.ಪ್ರಶಾಂತ್ ಅವರು ದೂರು ದಾಖಲಿಸಿದ್ದರು.
ಈ ಎಲ್ಲಾ ಆರೋಪಗಳು ಸಾಬೀತಾಗಿರುವುದರಿಂದ ಬೆಂಗಳೂರಿನ 42 ನೇ ಎಸಿಎಂಎಂ ಕೋರ್ಟ್ ಉದಯ್ ಗರುಡಾಚಾರ್ ಗೆ 2 ತಿಂಗಳು ಜೈಲು ಹಾಗೂ 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿತ್ತು. ಬಳಿಕ ಜಾಮೀನು ಸಹ ನೀಡಿದೆ.
Published On - 6:43 pm, Thu, 13 October 22