ಪಾದಯಾತ್ರೆ ಅಂದ್ರೆ ಓಡೋದು, ಬಸ್ಕಿ ಹೊಡಿಸೋದಲ್ಲ, ಗಾಂಭೀರ್ಯ ಬೇಕು: ಕಾಂಗ್ರೆಸ್ ಪಾದಯಾತ್ರೆಗೆ ಸಚಿವ ಆರ್ ಅಶೋಕ್ ವ್ಯಂಗ್ಯ
ಜನರು ಮಾತನಾಡುವುದನ್ನೇ ಯಡಿಯೂರಪ್ಪ ಹೇಳಿದ್ದಾರೆ. ಪಾದಯಾತ್ರೆಗೆ ಒಂದು ಗಾಂಭೀರ್ಯ ಇರಬೇಕು ಎಂದು ಪುನರುಚ್ಚರಿಸಿದರು.
ಬೆಂಗಳೂರು: ರಾಹುಲ್ ಗಾಂಧಿ (Rahul Gandhi) ನೇತೃತ್ವದಲ್ಲಿ ಕಾಂಗ್ರೆಸ್ ನಡೆಸುತ್ತಿರುವ ಭಾರತ್ ಜೋಡೋ ಪಾದಯಾತ್ರೆ (Bharat Jodo Yatra) ಬಗ್ಗೆ ಸಚಿವ ಆರ್.ಆಶೋಕ್ (R Ashok) ವ್ಯಂಗ್ಯವಾಡಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಪಾದಯಾತ್ರೆ ಎಂದರೆ ಓಡೋದು, ಬಸ್ಕಿ ಹೊಡಿಸೋದು ಎಂಬಂತೆ ಆಗಿದೆ. ಪಾದಯಾತ್ರೆ ಎಂದರೆ ಅದಕ್ಕೆ ತನ್ನದೇ ಆದ ಒಂದು ಗಾಂಭೀರ್ಯ ಇರಬೇಕು. ಕಾಂಗ್ರೆಸ್ ಒಂದು ಕುಟುಂಬದ ಪಕ್ಷ. ಮಗ ರಾಹುಲ್ ಗಾಂಧಿಯನ್ನು ನೋಡಲು ತಾಯಿ ಸೋನಿಯಾ (Sonia Gandhi) ಬಂದು ಹೋಗಿದ್ದಾರೆ. ಅದೇ ಸಿದ್ದರಾಮಯ್ಯ ಪಾದಯಾತ್ರೆ ಮಾಡಿದರೆ ಸೋನಿಯಾ ಬರಲಿಲ್ಲ. ಇದು ಮಗನ ಮೇಲಿನ ಪ್ರೀತಿಗೆ ಬಂದು ಹೋದ ವೈಖರಿಯಷ್ಟೇ ಎಂದು ಅಶೋಕ್ ವಿಶ್ಲೇಷಿಸಿದರು.
ಯಡಿಯೂರಪ್ಪನವರು 50 ವರ್ಷ ಪಾದಯಾತ್ರೆ ಮಾಡಿದ್ದಾರೆ. ಜನರು ಮಾತನಾಡುವುದನ್ನೇ ಯಡಿಯೂರಪ್ಪ ಹೇಳಿದ್ದಾರೆ. ಪಾದಯಾತ್ರೆಗೆ ಒಂದು ಗಾಂಭೀರ್ಯ ಇರಬೇಕು ಎಂದು ಪುನರುಚ್ಚರಿಸಿದರು. ಯಡಿಯೂರಪ್ಪ, ಬೊಮ್ಮಾಯಿ ಅವರಿಗೆ ಕಾಂಗ್ರೆಸ್ ನಾಯಕರು ಸವಾಲು ಹಾಕಿರುವ ಬಗ್ಗೆ ಅವರೇ ಮಾತನಾಡಲಿದ್ದಾರೆ ಎಂದು ಅಶೋಕ್ ಹೇಳಿದರು.
ಹಿಜಾಬ್ ಬಗ್ಗೆ ಸುಪ್ರೀಂಕೋರ್ಟ್ನಲ್ಲಿ ಭಿನ್ನ ತೀರ್ಪು ಬಂದಿದೆ. ಹಿಜಾಬ್ ವಿಚಾರದಲ್ಲಿ ಸರ್ಕಾರದ ನಿಲುವು ಬದಲಾಗುವುದಿಲ್ಲ. ಸರ್ಕಾರಿ ಶಾಲೆಗೆ ಬರುವವರು ಸಮವಸ್ತ್ರ ಪಾಲನೆ ಮಾಡಬೇಕು. ವಿದ್ಯಾರ್ಥಿಗಳು ಮನೆಯಲ್ಲಿ ಏನು ಬೇಕಾದರೂ ವಸ್ತ್ರ ಧರಿಸಲಿ. ಶಾಲೆಗೆ ಬರುವಾಗ ಸಮವಸ್ತ್ರ ಕಡ್ಡಾಯವಾಗಿದೆ ಎಂದರು.
ಈ ಮೊದಲು ಹೈಕೋರ್ಟ್ ಸರ್ಕಾರದ ಪರವಾಗಿ ತೀರ್ಪು ನೀಡಿತ್ತು. ಮುಖ್ಯ ನ್ಯಾಯಮೂರ್ತಿಗಳ ಪೀಠದಲ್ಲಿಯೂ ಸರ್ಕಾರವು ಈ ಮೊದಲಿನಂತೆ ತನ್ನ ನಿಲುವು ಸ್ಪಷ್ಟಪಡಿಸಲಿದೆ. ಅಲ್ಲಿ ಕೂಡಾ ಸರ್ಕಾರದ ನಿಲುವು ಇದೇ ರೀತಿ ಇರುತ್ತದೆ. ವಿದ್ಯಾರ್ಥಿಗಳು ಮನೆಯಲ್ಲಿ ಏನು ಬೇಕಾದರೂ ವಸ್ತ್ರ ಹಾಕಲಿ. ಆದರೆ ಶಾಲೆಯಲ್ಲಿ ಮಾತ್ರ ಸಮವಸ್ತ್ರ ಕಡ್ಡಾಯವಾಗಿದೆ. ಖಾಸಗಿ ಶಾಲೆಗಳಿಗೂ ಸಮವಸ್ತ್ರದ ಸಂಹಿತೆ ಇದೆ. ಅಲ್ಲಿಯೂ ಅದು ಪಾಲನೆಯಾಗುತ್ತದೆ. ಇರಾನ್ನಲ್ಲಿ ಮುಸ್ಲಿಮ್ ಯುವತಿಯರೇ ಹಿಜಾಬ್ ಕಿತ್ತು ಬಿಸಾಡುತ್ತಿದ್ದಾರೆ ಎಂದರು.