ಬಿಜೆಪಿ ಅಭಿಪ್ರಾಯ ಸಂಗ್ರಹಣೆ ಸಭೆ: ಮುಖಂಡರಿಂದ ಭಿನ್ನ ಅಭಿಪ್ರಾಯಗಳು ವ್ಯಕ್ತ, ಪುತ್ತೂರು ಕ್ಷೇತ್ರದ ಸೋಲಿನ ಬಗ್ಗೆ ಚರ್ಚೆ

| Updated By: Rakesh Nayak Manchi

Updated on: Jan 11, 2024 | 2:39 PM

ಲೋಕಸಭೆ ಚುನಾವಣೆ 2024ರಲ್ಲಿ ಕರ್ನಾಟಕದ ಜೆಡಿಎಸ್ ಜೊತೆಗಿನ ಮೈತ್ರಿ ಮೂಲಕ ಎಲ್ಲಾ 28 ಕ್ಷೇತ್ರಗಳಲ್ಲಿ ಗೆಲ್ಲಲು ಬಿಜೆಪಿ ಪ್ಲಾನ್ ಹಾಕಿಕೊಂಡಿದೆ. ಅದರಂತೆ, ಯಾವ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂದು ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಬೆಂಗಳೂರು ನಗರದ ಯಲಹಂಕದಲ್ಲಿರುವ ಖಾಸಗಿ ರೆಸಾರ್ಟ್​ನಲ್ಲಿ ಉಡುಪಿ-ಚಿಕ್ಕಮಗಳೂರು, ಉತ್ತರ ಕನ್ನಡ, ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ ಕ್ಷೇತ್ರಗಳ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ.

ಬಿಜೆಪಿ ಅಭಿಪ್ರಾಯ ಸಂಗ್ರಹಣೆ ಸಭೆ: ಮುಖಂಡರಿಂದ ಭಿನ್ನ ಅಭಿಪ್ರಾಯಗಳು ವ್ಯಕ್ತ, ಪುತ್ತೂರು ಕ್ಷೇತ್ರದ ಸೋಲಿನ ಬಗ್ಗೆ ಚರ್ಚೆ
ಬಿಜೆಪಿ ಅಭಿಪ್ರಾಯ ಸಂಗ್ರಹಣೆ ಸಭೆ: ಮುಖಂಡರಿಂದ ಭಿನ್ನ ಅಭಿಪ್ರಾಯಗಳು ವ್ಯಕ್ತ, ಪುತ್ತೂರು ಕ್ಷೇತ್ರದ ಸೋಲಿನ ಬಗ್ಗೆ ಹೆಚ್ಚು ಚರ್ಚೆ
Follow us on

ಬೆಂಗಳೂರು, ಜ.11: ಲೋಕಸಭೆ ಚುನಾವಣೆಗೆ (Lok Sabha Elections 2024) ಉಡುಪಿ-ಚಿಕ್ಕಮಗಳೂರು, ಉತ್ತರ ಕನ್ನಡ, ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ ಕ್ಷೇತ್ರಗಳಲ್ಲಿ ಯಾವ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂದು ಬಿಜೆಪಿ (BJP) ನಾಯಕರು ಬೆಂಗಳೂರು ನಗರದ ಯಲಹಂಕದಲ್ಲಿರುವ ಖಾಸಗಿ ರೆಸಾರ್ಟ್​ನಲ್ಲಿ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಆದರೆ, ಸಭೆಯಲ್ಲಿ ಪುತ್ತೂರು ಕ್ಷೇತ್ರದಲ್ಲಿ ಅರುಣ್ ಕುಮಾರ್ ಪುತ್ತಿಲ (Arun Kumar Puttila) ಬಂಡಾಯದ ಸ್ಪರ್ಧೆಯಿಂದ ಬಿಜೆಪಿ ಹೊಡೆತ ತಿಂದ ಬಗ್ಗೆ ಹೆಚ್ಚು ಚರ್ಚೆಯಾಗಿದೆ. ಇಂತಹ ತಪ್ಪು ನಿರ್ಧಾರ ಕೈಗೊಳ್ಳದಂತೆ ಮುಖಂಡರು ಎಚ್ಚರಿಕೆಯ ಸಲಹೆಯನ್ನು ನೀಡಿದ್ದಾರೆ.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭಿಪ್ರಾಯ ಸಂಗ್ರಹದ ವೇಳೆ ವಿಧಾನಸಭಾ ಚುನಾವಣೆಯಲ್ಲಿನ ಪುತ್ತೂರು ಕ್ಷೇತ್ರದಲ್ಲಿ ಪಕ್ಷದ ಸೋಲಿನ ಬಗ್ಗೆಯೇ ಹೆಚ್ಚು ಚರ್ಚೆ ನಡೆಯಿತು. ಸುಳ್ಯದಿಂದ ಅಭ್ಯರ್ಥಿ ಕರೆದುಕೊಂಡು ಬಂದು ಪುತ್ತೂರಿನಲ್ಲಿ ಟಿಕೆಟ್ ಕೊಟ್ಟಿದ್ದು ಸೋಲಿಗೆ ಕಾರಣವಾಗಿದೆ. ಆ ರೀತಿ ಮಾಡಬಾರದಿತ್ತು. ಪಕ್ಷೇತರ ಅಭ್ಯರ್ಥಿಯಾಗಿದ್ದ ಅರುಣ್ ಕುಮಾರ್ ಪುತ್ತಿಲ ಕೂಡಾ ನಮ್ಮವರೇ. ಲೋಕಸಭಾ ಚುನಾವಣೆಗೆ ಎಲ್ಲರೂ ಒಟ್ಟಿಗೆ ಹೋಗುವ ಕೆಲಸ ಆಗಬೇಕು ಎಂದು ಮುಖಂಡರು ಸಲಹೆ ನೀಡಿದ್ದಾರೆ.

ಸಭೆಗೆ ದಕ್ಷಿಣ ಕನ್ನಡ ಜಿಲ್ಲೆಯ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಗೈರಾಗಿದ್ದಾರೆ. ಜಿಲ್ಲೆಯಲ್ಲಿ ಕಟೀಲ್​ ಅವರಿಗೆ ಟಿಕೆಟ್ ನೀಡದಂತೆ ಬಿಜೆಪಿ ಕಾರ್ಯಕರ್ತರೇ ಹೇಳುತ್ತಿದ್ದಾರೆ. ಕಟೀಲ್ ಕೆಲಸದ ಬಗ್ಗೆಯೂ ಟೀಕಿಸುತ್ತಿದ್ದಾರೆ. ಈ ನಡುವೆ ಪುತ್ತೂರು ಕ್ಷೇತ್ರದಲ್ಲಿ ಬಿಜೆಪಿಯನ್ನು ಮೂರನೇ ಸ್ಥಾನಕ್ಕೆ ತಳ್ಳಿ ಕಾಂಗ್ರೆಸ್​ಗೆ ಪ್ರಬಲ ಪೈಪೋಟಿ ನಡೆಸಿ ಸೋಲುಂಡಿರುವ ಹಿಂದೂ ಯುವ ನಾಯಕ ಅರುಣ್ ಕುಮಾರ್ ಪುತ್ತಿಲ ಅವರು ಪುತ್ತೂರು ಮಾತ್ರವಲ್ಲದೆ ಜಿಲ್ಲಾದ್ಯಂತ ಪ್ರವಾಸ ಮಾಡುತ್ತಿದ್ದಾರೆ. ಇವರಿಗೆ ಟಿಕೆಟ್ ನೀಡಬೇಕು ಎಂದು ಪುತ್ತಿಲ ಪರಿವಾರ ಒತ್ತಾಯಿಸುತ್ತಾ ಬರುತ್ತಿದೆ.

ಇದನ್ನೂ ಓದಿ: ಭಗವಂತ ಖೂಬಾಗೆ ಟಿಕೆಟ್ ವಿರೋಧಸಿದ ಪ್ರಭುಚೌಹಾಣ್; ಗದ್ದಲದ ನಡುವೆ ಬಿಜೆಪಿ ಸಭೆಯಿಂದ ಹೊರನಡೆದ ಖೂಬಾ

ಉಡುಪಿ-ಚಿಕ್ಕಮಗಳೂರು ಅಭ್ಯರ್ಥಿ ಆಯ್ಕೆ ವೇಳೆ ಎಲ್ಲರ ಅಭಿಪ್ರಾಯ ಪಡೆದು ತೀರ್ಮಾನ ಮಾಡುವುದು ಸೂಕ್ತ. ಹಿಂದುತ್ವದ ಮೇಲೆಯೂ ಚುನಾವಣೆಗೆ ಹೋಗಬೇಕಾಗುತ್ತದೆ ಎಂದು ಉಡುಪಿ ಮತ್ತು ಚಿಕ್ಕಮಗಳೂರು ಕ್ಷೇತ್ರದ ಮುಖಂಡರು ಎರಡು ರೀತಿಯ ಅಭಿಪ್ರಾಯ ವ್ಯಕ್ತವಾಗಿದೆ.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್ ಅಭ್ಯರ್ಥಿಯಾದರೆ ಬಿಜೆಪಿ ಗೆಲುವಿಗೆ ಕಷ್ಟವಾಗಬಹುದು. ನಾವು ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಅಲ್ಲದೆ, ಅಭ್ಯರ್ಥಿ ಆಯ್ಕೆ ಮಾಡುವಾಗ ನೋಡಿ, ಯೋಚಿಸಿ ತೀರ್ಮಾನ ಮಾಡಿ ಎಂದು ಸಭೆಯಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸಲಹೆ ನೀಡಿದ್ದಾರೆ.

ಅನಂತ ಕುಮಾರ್ ಹೆಗಡೆ ಪರ ಬ್ಯಾಟಿಂಗ್

ಹಿಂದುತ್ವದ ಆಧಾರದಲ್ಲೇ ಚುನಾವಣೆ ಎದುರಿಸಬೇಕು ಎಂದು ಹೇಳುವ ಮೂಲಕ ಉತ್ತರ ಕನ್ನಡ ಬಿಜೆಪಿಯ ಒಂದು ಗುಂಪು ಪರೋಕ್ಷವಾಗಿ ಸಂಸದ ಅನಂತ ಕುಮಾರ್ ಹೆಗಡೆ ಪರ ಬ್ಯಾಟಿಂಗ್ ಮಾಡಿದೆ. ಅಲ್ಲದೆ, ಕ್ಷೇತ್ರದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳು ಸಮರ್ಪಕ ಜಾರಿಯಾಗಿಲ್ಲ. ಜನರು ಹಿಂದುತ್ವ ಮಾತ್ರ ಅಲ್ಲ, ಅಭಿವೃದ್ಧಿಯನ್ನೂ ಕೇಳುತ್ತಾರೆ ಎಂದು ಕೆಲವು ಮುಖಂಡರು ಹೇಳಿದ್ದಾರೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:20 pm, Thu, 11 January 24