ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರಾದರೂ ನಿರ್ಧಾರಕ್ಕಾಗಿ ಗಾಂಧಿ ಕುಟುಂಬಕ್ಕೆ ಜೋತು ಬಿದ್ದಿರುವ ಕಾಂಗ್ರೆಸ್: ಬಿಜೆಪಿ

| Updated By: Rakesh Nayak Manchi

Updated on: Dec 13, 2022 | 12:13 PM

ಕನ್ನಡಿಗ ಮಲ್ಲಿಕಾರ್ಜುನ ಖರ್ಗೆ ಅವರು ಅಧ್ಯಕ್ಷರಾಗಿದ್ದರೂ ನಿರ್ಧಾರಕ್ಕಾಗಿ ಗಾಂಧಿ ಕುಟುಂಬಕ್ಕೆ ಜೋತುಬಿದ್ದಿದೆ ಎಂದು ಕರ್ನಾಟಕ ಕಾಂಗ್ರೆಸ್ ವಿರುದ್ಧ ರಾಜ್ಯ ಬಿಜೆಪಿ ಟೀಕಿಸಿದೆ.

ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರಾದರೂ ನಿರ್ಧಾರಕ್ಕಾಗಿ ಗಾಂಧಿ ಕುಟುಂಬಕ್ಕೆ ಜೋತು ಬಿದ್ದಿರುವ ಕಾಂಗ್ರೆಸ್: ಬಿಜೆಪಿ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ
Follow us on

ಬೆಂಗಳೂರು: ಕನ್ನಡಿಗ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರೇ ಅಧ್ಯಕ್ಷರಾಗಿದ್ದರೂ ನಿರ್ಧಾರಕ್ಕಾಗಿ ಗಾಂಧಿ ಕುಟುಂಬಕ್ಕೆ ಜೋತುಬಿದ್ದಿದೆ ಎಂದು ಕರ್ನಾಟಕ ಕಾಂಗ್ರೆಸ್ (Karnataka Congress) ವಿರುದ್ಧ ರಾಜ್ಯ ಬಿಜೆಪಿ (Karnataka BJP) ಘಟಕ ಟೀಕಿಸಿದೆ. ರಾಜ್ಯ ಕಾಂಗ್ರೆಸ್ ನಾಯಕರ ದೆಹಲಿ ಭೇಟಿ ಬಗ್ಗೆ ಸರಣಿ ಟ್ವೀಟ್ ಮಾಡಿದ ಬಿಜೆಪಿ, ಕರ್ನಾಟಕ ಕಾಂಗ್ರೆಸ್‌ ಪಟಾಲಂ ದಿಲ್ಲಿಯಲ್ಲಿದೆ. ಈಗಲೂ ಕಾಂಗ್ರೆಸ್ ಗಾಂಧಿ ಕುಟುಂಬಕ್ಕೆ ಜೋತು ಬಿದ್ದಿದೆ. ಕನ್ನಡಿಗ ಮಲ್ಲಿಕಾರ್ಜುನ ಖರ್ಗೆ ಅವರೇ ಅಧ್ಯಕ್ಷರಾಗಿದ್ದರೂ ನಿರ್ಧಾರಕ್ಕಾಗಿ ಗಾಂಧಿ ಕುಟುಂಬಕ್ಕೆ ಜೋತು ಬಿದ್ದಿದೆ. ಸ್ವಂತಿಕೆಯನ್ನೇ ಮರೆತು ‘ಜೀ ಹುಜೂರ್​’ ಸಂಸ್ಕೃತಿಗೆ ಶರಣಾಗಿದ್ದಾರೆ ಎಂದು ಲೇವಡಿ ಮಾಡಿದೆ.

“ಕರ್ನಾಟಕ ಕಾಂಗ್ರೆಸ್‌ ಪಟಾಲಂ ದಿಲ್ಲಿಯಲ್ಲಿದೆ. ಕನ್ನಡಿಗ ಮಲ್ಲಿಕಾರ್ಜನ ಖರ್ಗೆ ಅವರೇ ಅಧ್ಯಕ್ಷರಾಗಿದ್ದರೂ ನಿರ್ಧಾರಕ್ಕೆ ಈಗಲೂ ಗಾಂಧಿ ಕುಟುಂಬಕ್ಕೇ ಜೋತು ಬಿದ್ದಿರುವ ಕಾಂಗ್ರೆಸ್ ನಾಯಕರು ಸ್ವಂತಿಕೆಯನ್ನೇ ಮರೆತು “ಜೀ ಹುಜೂರ್‌” ಸಂಸ್ಕೃತಿಗೆ ಶರಣಾಗಿದ್ದಾರೆ” ಎಂದು ಬಿಜೆಪಿ ಟ್ವೀಟ್ ಮಾಡಿದೆ.

“2013 ರಿಂದ 2018ರವರೆಗೆ ಏನಾಗಿತ್ತು ನೆನಪಿಸಿಕೊಳ್ಳಿ. ಕೆಸಿ ವೇಣುಗೋಪಾಲ್ ಎಂ ಪಿ ಎಂಬ ಸೋನಿಯಾ ಗಾಂಧಿಯವರ ಅಂಚೆಯಣ್ಣನ ಪಾದಾರವಿಂದಗಳಿಗೆ ರಾಜ್ಯದ ಅಂದಿನ ಕಾಂಗ್ರೆಸ್‌ ಸರ್ಕಾರವನ್ನು ಅರ್ಪಿಸಲಾಗಿತ್ತು. ಸಿದ್ದರಾಮಯ್ಯನವರು ಕನ್ನಡ ಅಸ್ಮಿತೆಯನ್ನು ಅವರ ಮುಂದೆ ನೈವೇದ್ಯಕ್ಕಿಟ್ಟಿದ್ದರು. ಈಗ ಅಧಿಕಾರವಿಲ್ಲದಿದ್ದರೂ ಅದೇ ಸಂಸ್ಕೃತಿ ಮರುಕಳಿಸಿದೆ” ಎಂದು ಟ್ವೀಟ್ ಮಾಡಿದೆ.

“ಈಗ ಅಧಿಕಾರವಿಲ್ಲದೇ ರಾಜಸ್ಥಾನದ ಹೊರತಾಗಿ ನೀರಿನಿಂದ ಹೊರತೆಗೆದ ಮೀನಿನಂತಾಗಿರುವ ಕಾಂಗ್ರೆಸ್, ಸಂಪತ್ಭರಿತವಾಗಿರುವ ನಮ್ಮ ರಾಜ್ಯವನ್ನು ತಮ್ಮ ನಾಯಕರ ತಿಜೋರಿಗಳನ್ನು ತುಂಬಿಸಿಕೊಳ್ಳಲು ಎಟಿಎಂನಂತೆ ಬಳಸಿಕೊಳ್ಳಲು ತುದಿಗಾಲಲ್ಲಿ ನಿಂತಿದೆ” ಎಂದು ಬಿಜೆಪಿ ಟ್ವೀಟ್ ಮೂಲಕ ಟೀಕಿಸಿದೆ.

“ರಾಜ್ಯಾಧ್ಯಕ್ಷರಿಂದ ಹಿಡಿದು ಯುವ ಕಾಂಗ್ರೆಸ್‌ ಅಧ್ಯಕ್ಷರವರೆಗೂ ಬೇಲ್‌ ಮೇಲೆ ಬಾಳು ಸಾಗಿಸುತ್ತಿರುವ ರಾಜ್ಯ ಕಾಂಗ್ರೆಸ್​ನ ನಾಯಕರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪಕ್ಕದ ರಾಜ್ಯದಿಂದ ನಾಯಕರನ್ನು ಆಮದು ಮಾಡಿಕೊಂಡು ಅವರಿಂದಲೂ ರಾಜ್ಯವನ್ನು ಲೂಟಿ ಹೊಡೆಸಿ ಗೃಹಮಂತ್ರಿಗಳನ್ನಾಗಿಯೂ ಮಾಡಿದ್ದರು” ಎಂದು ಬಿಜೆಪಿ ಟೀಕಿಸಿದೆ.

“ಡಬಲ್‌ ಎಂಜಿನ್‌ ವೇಗದ ಅಭಿವೃದ್ಧಿಯನ್ನು ರಾಜ್ಯಕ್ಕೆ ನೀಡಲು ತಲೆ ಕೆಳಗಾಗಿ ನಿಂತರೂ ಸಾಧ್ಯವಾಗದ ರಾಜ್ಯ ಕಾಂಗ್ರೆಸ್ ಯಾವ ಮಟ್ಟಕ್ಕಾದರೂ ಇಳಿದು ಅಧಿಕಾರಕ್ಕೆ ಬಂದು ರಾಜ್ಯವನ್ನು ATM ಆಗಿ ಮಾಡಿಕೊಂಡು ಲೂಟಿ ಹೊಡೆಯಲು ಹವಣಿಸುತ್ತಿದೆ. ಕನ್ನಡಿಗರು ಇದನ್ನು ಎಂದಿಗೂ ಸಾಧ್ಯವಾಗಿಸುವುದಿಲ್ಲ” ಎಂದು ಹೇಳಿದೆ.

“ಇದು ಹೊಸದೆನಲ್ಲ ತಲ ತಲಾಂತರದಿಂದ ನಡೆದು ಬಂದ ಸಂಸ್ಕೃತಿ ಇದಾಗಿದೆ, ಕಾಂಗ್ರೆಸ್ ನಾಯಕರು ಇದರಲ್ಲಿ ಪಾತ್ರದಾರಿ ಮಾತ್ರ, ಸೂತ್ರದಾರಿ ನಾಯಕಿ ಸೋನಿಯಾಗಾಂಧಿ ಅವರೇ. ಅದರಲ್ಲಿ ವಿಶೇಷತೆ ಏನಿಲ್ಲ” ಎಂದು ಬಿಜೆಪಿ ಕೊನೆಯ ಟ್ವೀಟ್ ಮಾಡಿದೆ.

ನಾವು ಕಾಂಗ್ರೆಸ್​​ಗೆ ಭಯ ಪಡುವ ಅಗತ್ಯವಿಲ್ಲ

ದೆಹಲಿಯಲ್ಲಿ ಕಾಂಗ್ರೆಸ್ ಸಭೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ನಮ್ಮ ಅಭಿವೃದ್ಧಿ ಯೋಜನೆಗಳಿಗೆ ಕಾಂಗ್ರೆಸ್ ಯಾತ್ರೆಗಳು ಪರ್ಯಾಯ ಆಗಲು ಸಾಧ್ಯವಿಲ್ಲ. ಅವರು ಯಾವ ಯಾತ್ರೆಯನ್ನಾದರೂ ಮಾಡಿಕೊಳ್ಳಲಿ. ನಾವು ಕಾಂಗ್ರೆಸ್​ಗೆ ಭಯ ಪಡುವ ಅಗತ್ಯವಿಲ್ಲ. ನಾವು‌ ನೋಡದಿರುವ ಮಲ್ಲಿಕಾರ್ಜುನ ಖರ್ಗೆ, ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಅಲ್ಲ. ಅವರವರ ಕ್ಷೇತ್ರಗಳಲ್ಲೇ ಅವರನ್ನು ನಾವು ಸೋಲಿಸಿದ್ದೇವೆ. ಈಗೇನೂ ಅತಿಮಾನುಷ ಶಕ್ತಿ ಬಂದಿಲ್ಲ ಅವರಿಗೆ. ನಾವು ಹೆದರುವ ಅಗತ್ಯವಿಲ್ಲ ಎಂದರು.

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಈದಲು ಇಲ್ಲಿ ಕ್ಲಿಕ್ ಮಾಡಿ

Published On - 12:13 pm, Tue, 13 December 22