ಬೆಂಗಳೂರು, ಆಗಸ್ಟ್ 31: ‘ನಮ್ಮಲ್ಲಿಂದ ಯಾರೂ ಕಾಂಗ್ರೆಸ್ ಪಕ್ಷಕ್ಕೆ ಹೋಗುವುದಿಲ್ಲ. 10 ಜನ ಹೋದರೂ ಅದಕ್ಕೆ ಸಮನಾದ ಒಬ್ಬರನ್ನು ಕರೆತರಬಹುದು. ನನ್ನ ಜೊತೆಯೇ ಸಂಪರ್ಕದಲ್ಲಿ 40 – 45 ಜನ ಇದ್ದಾರೆ. ದೆಹಲಿಯವರು ಒಪ್ಪಿಗೆ ಕೊಟ್ಟರೆ ನಾಳೆ ಒಂದು ದಿನದ ಕೆಲಸ ಅಷ್ಟೆ. ಆದರೆ ನಮಗೆ ಈಗ ಅಗತ್ಯವಿಲ್ಲ. ನಾವು ಈಗ ಸರ್ಕಾರ ಮಾಡಬೇಕಾಗಿಲ್ಲ’ ಎಂದು ಬಿಜೆಪಿ (BJP) ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ (BL Santhosh) ಹೇಳಿದರು. ಬೆಂಗಳೂರಿನ ಮಲ್ಲೇಶ್ವರಂನ ರಾಜ್ಯ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಭಾರತೀಯ ಜನತಾ ಪಕ್ಷದಿಂದ ಯಾರೂ ಕಾಂಗ್ರೆಸ್ಗೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
‘ಬಾಂಬೆ ಬಾಯ್ಸ್’ ಎಂದು ಕರೆಯಲಾಗುತ್ತಿರುವ, ಅಂದು ನಮ್ಮ ಜೊತೆ ಬಂದವರನ್ನು ನಾವೇ ಹಾಗೆಲ್ಲ ಹೇಳುವುದು ಬೇಡ. ಅವರು ಕಷ್ಟ ಕಾಲಕ್ಕೆ ನಮ್ಮ ಜೊತೆ ಬಂದಿದ್ದಾರೆ. ಅವರು ಹೋಗುತ್ತಾರೆ ಎಂದು ನಾವೇ ಹೇಳುವುದು ಸರಿಯಲ್ಲ. ಹಾಗೆಂದು ಬಿಟ್ಟು ಹೋಗುವವರ ಬಗ್ಗೆ ಚಿಂತೆ ಬೇಡ. ಅಷ್ಟಕ್ಕೂ ಯಾರೂ ಕೂಡಾ ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ಸಂತೋಷ್ ಹೇಳಿದರು.
ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ನನಗೆ ಅರಿವಿದೆ. ಪ್ರತಿಪಕ್ಷ ನಾಯಕನ ನೇಮಕ ಆಗಿಲ್ಲ ಅನ್ನುವುದನ್ನೇ ದೊಡ್ಡದು ಮಾಡಿ ಚರ್ಚಿಸುವ ಅಗತ್ಯವೇನು? ಮನೆಯಲ್ಲಿ ಮದುವೆ ಆಗದ ಮಗಳು ಇದ್ದರೆ ಹೊರಹಾಕಲು ಆಗುತ್ತಾ? ಕೆಲಸ ಸಿಗದ ಮಗ ಇದ್ದರೆ ಮನೆಯಿಂದ ಹೊರಹಾಕುತ್ತೀರಾ. ತಡವಾಗಿದೆ ಎಂಬುದು ಎಷ್ಟು ಸತ್ಯವೋ ನೇಮಕ ಆಗುವುದೂ ಅಷ್ಟೇ ಸತ್ಯ. ಈ ಹಿಂದೆ ಪಕ್ಷ ಪೂರ್ಣ ನೆಲಸಮವಾಗುತ್ತದೆ ಎಂದಿದ್ದರು. ಆಗ 40 ಸ್ಥಾನ ಗೆದ್ದೆವು, ಈ ಚುನಾವಣೆಯಲ್ಲಿ 66 ಸ್ಥಾನ ಗೆದ್ದಿದ್ದೇವೆ. ಈಗ ವಿಪಕ್ಷವಾಗಿ ಇನ್ನಷ್ಟು ಶಕ್ತಿಯುತವಾಗಿದ್ದೇವೆ. ರಾಜ್ಯಾಧ್ಯಕ್ಷ, ವಿಪಕ್ಷ ನಾಯಕನ ಚರ್ಚೆ ಬಿಟ್ಟು ಸಂಘಟನೆಯಲ್ಲಿ ತೊಡಗಿ ಎಂದು ಅವರು ಪಕ್ಷದ ನಾಯಕರಿಗೆ ಸೂಚನೆ ನೀಡಿದರು.
ಸೆಪ್ಟೆಂಬರ್ 17 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ. ಅಲ್ಲಿಂದ ಅಕ್ಟೋಬರ್ 2 ರ ಗಾಂಧಿ ಜಯಂತಿವರೆಗೆ ಸೇವಾ ಪಾಕ್ಷಿಕ ಆಚರಣೆ ಮಾಡಲಾಗುವುದು ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಬಿಎಲ್ ಸಂತೋಷ್ ಇದ್ದ ಸಭೆಗೆ ಎಸ್ಟಿ ಸೋಮಶೇಖರ್, ಹೆಬ್ಬಾರ್, ರೇಣುಕಾಚಾರ್ಯ ಗೈರು
ಬಿಎಲ್ ಸಂತೋಷ್ ಅವರು ನಡೆಸಿದ ಸಭೆಯಲ್ಲಿ ಸಂಸದರು, ಶಾಸಕರು, ಪರಾಜಿತ ಅಭ್ಯರ್ಥಿಗಳು, ಪದಾಧಿಕಾರಿಗಳು ಭಾಗವಹಿಸಿದ್ದರು. ಶಾಸಕರಾದ ಎಸ್.ಟಿ. ಸೋಮಶೇಖರ್, ಶಿವರಾಮ ಹೆಬ್ಬಾರ್, ಮಾಜಿ ಸಚಿವರಾದ ಶಂಕರ ಪಾಟೀಲ್ ಮುನೇನಕೊಪ್ಪ, ವಿ ಸೋಮಣ್ಣ ಗೈರಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ. ಆಪರೇಷನ್ ಹಸ್ತದ ವದಂತಿಯಲ್ಲಿ ಇವರೆಲ್ಲರ ಹೆಸರು ಕೇಳಿಬಂದಿತ್ತು ಎಂಬುದೂ ಗಮನಾರ್ಹ.
ಈ ಮಧ್ಯೆ, ಸಂತೋಷ್ ನೇತೃತ್ವದ ಸಭೆಗೆ ಕೆಲವರು ಗೈರಾದ ವಿಚಾರವಾಗಿ ದೆಹಲಿಯಲ್ಲಿ ಬಿಜೆಪಿಯ ಮಾಜಿ ಶಾಸಕ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದು, ನಾನು ಮಧ್ಯಪ್ರದೇಶಕ್ಕೆ ಹೋಗಬೇಕಿದ್ದರಿಂದ ಸಭೆಯಲ್ಲಿ ಭಾಗಿಯಾಗಿಲ್ಲ. ಸಭೆಗೆ ಗೈರಾಗುವ ಬಗ್ಗೆ ಮುಂಚೆಯೇ ಅನುಮತಿ ಪಡೆದುಕೊಂಡಿದ್ದೆ. ಉಳಿದಂತೆ ಸಭೆಗೆ ಗೈರಾದವರು ಯಾಕೆ ಗೈರಾದರು ಅನ್ನೋದು ಗೊತ್ತಿಲ್ಲ ಎಂದು ಹೇಳಿದ್ದಾರೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ