ಬೆಂಗಳೂರು: ಹಲವು ತಿಂಗಳುಗಳ ಕಾಲ ಕೂಡಿ ಕಳೆದ ಬಳಿಕ ಬಿಜೆಪಿ ನಾಯಕರ ರಾಜ್ಯ ಪ್ರವಾಸಕ್ಕೆ ಮುಹೂರ್ತ ಕೂಡಿ ಬಂದಿದೆ. ಪೂರ್ವ ನಿರ್ಧಾರಿತವಾದಂತೆ ಒಟ್ಟು 104 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ನಡೆಯಲಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಒಂದು ತಂಡ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೇತೃತ್ವದ ಇನ್ನೊಂದು ತಂಡ ಪ್ರವಾಸ ನಡೆಸಲಿದೆ. ಇನ್ನು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರ ಪ್ರವಾಸವನ್ನು ಪ್ರತ್ಯೇಕವಾಗಿ ಜೋಡಿಸಬೇಕೋ ಅಥವಾ ರಾಜ್ಯಾಧ್ಯಕ್ಷರ ತಂಡದಲ್ಲೇ ಸೇರಿಸಬೇಕೋ ಎಂಬ ಬಗ್ಗೆ ಇನ್ನೂ ಬಿಜೆಪಿ ಸ್ಪಷ್ಟವಾಗಿ ತೀರ್ಮಾನ ಮಾಡಿಲ್ಲ.
ಇದನ್ನೂ ಓದಿ: ಕಾರ್ಯಕಾರಿಣಿ ಸಭೆಯಲ್ಲಿ ಚುನಾವಣೆ ತಂತ್ರಗಾರಿಕೆ: ಏನಿದು ಬಿಜೆಪಿಯ A,B,C ಪ್ಲಾನ್..?
ಹಾಗಂತ ಬಿಜೆಪಿ ನಾಯಕರು ಏಕಾಏಕಿ ಎದ್ದು ಪ್ರವಾಸ ಹೊರಟಿಲ್ಲ. ಸಾಕಷ್ಟು ವರ್ಕೌಟ್ ಮಾಡಿಯೇ ಫೀಲ್ಡ್ ಗೆ ಇಳಿದಿದ್ದಾರೆ. ಪ್ರವಾಸ ಮಾಡಬೇಕಿರುವ ಕ್ಷೇತ್ರದ ಸ್ಥಿತಿ ಗತಿಯನ್ನು ಅಧ್ಯಯನ ಮಾಡಿಕೊಂಡೇ ಹೊರಡುತ್ತಿದ್ದಾರೆ. ಎ, ಬಿ ಮತ್ತು ಸಿ ಎಂದು ಕ್ಷೇತ್ರಗಳನ್ನು ವಿಂಗಡಿಸಿಕೊಂಡು ಪ್ರವಾಸ ನಡೆಯುತ್ತಿದೆ. ಎ ಕೆಟಗರಿಯಲ್ಲಿ ಒಟ್ಟು 157 ವಿಧಾನಸಭಾ ಕ್ಷೇತ್ರಗಳನ್ನು ಗುರುತಿಸಿದ್ದು, ಬಿಜೆಪಿಗೆ ನೆಲೆ ಇರುವ ಮತ್ತು ಕನಿಷ್ಠ ಒಂದು ಬಾರಿ ಗೆದ್ದಿರುವ ಕ್ಷೇತ್ರಗಳು ಎ ಕೆಟಗರಿಗೆ ಸೇರ್ಪಡೆಯಾಗಿವೆ.
ಬಿ ಕೆಟಗರಿಯಲ್ಲಿ ಒಟ್ಟು 40 ಕ್ಷೇತ್ರಗಳನ್ನು ಗುರುತಿಸಿದ್ದು, ಸ್ವಲ್ಪ ಶ್ರಮ ಹಾಕಿದರೆ ಗೆಲ್ಲಬಹುದಾದ ಮತ್ತು 2018 ರಲ್ಲಿ ಕಡಿಮೆ ಅಂತರದಲ್ಲಿ ಸೋತಿರುವ ಕ್ಷೇತ್ರಗಳನ್ನು ಬಿ ಕೆಟಗರಿಗೆ ಸೇರ್ಪಡೆ ಮಾಡಲಾಗಿದೆ. ಉಳಿದಂತೆ ಬಿಜೆಪಿಗೆ ಗೆಲ್ಲಲು ಕಷ್ಟಸಾಧ್ಯ ಎಂದು ಪರಿಗಣಿಸಲ್ಪಟ್ಟಿರುವ ಮತ್ತು ಬಿಜೆಪಿ ನೆಲೆಯೇ ಇಲ್ಲದ ಕ್ಷೇತ್ರಗಳು ಸಿ ಕೆಟಗರಿಗೆ ಸೇರಿಸಲಾಗಿದೆ.
ಇನ್ನು 104 ಕ್ಷೇತ್ರಗಳ ಪೈಕಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಸಿಎಂ ಯಡಿಯೂರಪ್ಪ 52 ಕ್ಷೇತ್ರಗಳಲ್ಲಿ ಪ್ರವಾಸ ಮಾಡಲಿದ್ದಾರೆ. ಒಂದು ವಾರದಲ್ಲಿ ಮೂರು ದಿನ ಪ್ರವಾಸ ಮಾಡಲಿರುವ ಸಿಎಂ ಹಾಗೂ ಮಾಜಿ ಸಿಎಂ ನಂತರ ಬೆಂಗಳೂರಿಗೆ ವಾಪಸ್ ಆಗಿ ಮುಂದಿನ ವಾರದಿಂದ ಮತ್ತೆ ಪ್ರವಾಸ ಮುಂದುವರಿಸಲಿದ್ದಾರೆ. ಬೊಮ್ಮಾಯಿ ಮತ್ತು ಯಡಿಯೂರಪ್ಪ ಅವರದ್ದು ರಾಜಕೀಯ ಮತ್ತು ಸರ್ಕಾರದ ಯೋಜನೆಗಳ ಆಧಾರಿತ ಪ್ರವಾಸವಾಗಿರಲಿದ್ದರೆ, ನಳೀನ್ ಕುಮಾರ್ ಕಟೀಲ್ ಮತ್ತು ಅರುಣ್ ಸಿಂಗ್ ಅವರಿಂದ ಸಂಘಟನಾತ್ಮಕ ಪ್ರವಾಸ ನಡೆಯಲಿದೆ.
ಈ ಮಧ್ಯೆ ಪ್ರವಾಸದ ಸಂದರ್ಭದಲ್ಲಿ ಸಾರ್ವಜನಿಕ ಸಭೆಗಳು, ಫಲಾನುಭವಿಗಳ ಸಭೆಗಳು, ಪ್ರಮುಖ ಧಾರ್ಮಿಕ ಕೇಂದ್ರಗಳ ಭೇಟಿ, ಎಸ್ ಸಿ, ಎಸ್ ಟಿ, ಒಬಿಸಿ ಸಮುದಾಯಗಳ ಪ್ರಮುಖರ ಸಭೆ ಮತ್ತು ಅವರ ಮನೆಯಲ್ಲಿ ಉಪಹಾರವನ್ನೂ ಬಿಜೆಪೊ ನಾಯಕರು ಮಾಡಲಿದ್ದಾರೆ. ಅಲ್ಲದೇ ಮಂಡಲ ಸಮಿತಿ, ಬೂತ್ ಅಧ್ಯಕ್ಷರು, ಶಕ್ತಿ ಕೇಂದ್ರ ಮತ್ತು ಮಹಾ ಶಕ್ತಿ ಕೇಂದ್ರಗಳ ಪ್ರಮುಖರ ಸಭೆಗಳು ಕೂಡಾ ನಿಗದಿಯಾಗಿವೆ. ಪ್ರತಿ ನಾಯಕರ ಪ್ರವಾಸದ ಸಂಯೋಜಕತ್ವದ ಜವಾಬ್ದಾರಿಯನ್ನು ರಾಜ್ಯ ಪ್ರಧಾನ ಕಾರ್ಯದರ್ಶಿಗಳಿಗೆ ವಹಿಸಲಾಗಿದೆ.
ವಾಸ್ತವವಾಗಿ ಈ ಪ್ರವಾಸ ಎರಡು ತಿಂಗಳ ಹಿಂದೆಯೇ ಶುರುವಾಗಬೇಕಿತ್ತು. ಆರಂಭದಲ್ಲಿ ಸಿಎಂ ಬೊಮ್ಮಾಯಿ ಮತ್ತು ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಎರಡು ತಂಡಗಳಿಂದ ಮಾತ್ರ ಪ್ರವಾಸ ಎಂದು ನಿರ್ಧಾರವೂ ಆಗಿತ್ತು. ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಸಿಎಂ ತಂಡದಲ್ಲೇ ಸೇರ್ಪಡೆ ಮಾಡಿ ಪ್ರವಾಸ ಮಾಡಿಸುವ ಲೆಕ್ಕಾಚಾರವನ್ನೂ ರಾಜ್ಯ ನಾಯಕರು ಹಾಕಿದ್ದರು. ಮೊದಲ ಹಂತದಲ್ಲಿ ಪ್ರವಾಸದ ರೂಪು ರೇಷೆ ಸಿದ್ಧವಾಗುತ್ತಿದ್ದ ವೇಳೆಯೇ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಬಿಜೆಪಿ ಸಂಸದೀಯ ಮಂಡಳಿ ಮತ್ತು ಕೇಂದ್ರೀಯ ಚುನಾವಣಾ ಸಮಿತಿ ಸದಸ್ಯರನ್ನಾಗಿ ಹೈಕಮಾಂಡ್ ನೇಮಕ ಮಾಡಿತ್ತು. ಆಗ ಯಡಿಯೂರಪ್ಪ ಅವರನ್ನು ಬೇರೆ ತಂಡದಲ್ಲಿ ಸೇರ್ಪಡೆ ಮಾಡದೇ ಅವರದ್ದೇ ನೇತೃತ್ವದಲ್ಲೇ ಪ್ರತ್ಯೇಕ ತಂಡ ಜೋಡಿಸಬೇಕಾದ ಅನಿವಾರ್ಯತೆ ಬಿಜೆಪಿ ರಾಜ್ಯ ನಾಯಕರಿಗೆ ಸೃಷ್ಟಿಯಾಗಿತ್ತು.
ಆದರೆ ಇಡೀ ರಾಜ್ಯ ವ್ಯಾಪಿ ಯಡಿಯೂರಪ್ಪ ಅವರನ್ನು ಓಡಾಡಿಸುವುದು ಹೇಗೆ, ಯಡಿಯೂರಪ್ಪ ಈಗ ಪ್ರತಿ ಸಭೆಯಲ್ಲೂ ಕುಳಿತು ಸಂಘಟನಾ ಕೆಲಸ ಮಾಡುತ್ತಾರಾ ಎಂಬ ಜಿಜ್ಞಾಸೆ ರಾಜ್ಯ ನಾಯಕರಿಗೆ ಶುರುವಾಗಿತ್ತು. ಇದಕ್ಕೊಂದು ಪರಿಹಾರ ಹುಡುಕಿದ ಬಿಜೆಪಿ ನಾಯಕರು ಪಕ್ಷದ ಮೋರ್ಛಾಗಳ ರಾಜ್ಯ ಮಟ್ಟದ ಸಮಾವೇಶಗಳನ್ನು ಪ್ರವಾಸದ ಸಂದರ್ಭದಲ್ಲಿಯೇ ಏರ್ಪಡಿಸಿ ಅದಕ್ಕೆ ಯಡಿಯೂರಪ್ಪ ಅವರನ್ನು ಕರೆಸಿ ಭಾಷಣ ಮಾಡಿಸುವ ಯೋಜನೆಯೂ ಜಗನ್ನಾಥ ಭವನದಲ್ಲಿ ಸಿದ್ಧವಾಗಿತ್ತು.
ಆದರೆ ಮೋರ್ಛಾಗಳ ಸಮಾವೇಶಗಳೂ ವಿಳಂಬವಾದ ಕಾರಣ ಯಡಿಯೂರಪ್ಪ ಅವರನ್ನು ಸಮಾವೇಶಗಳಲ್ಲಷ್ಟೇ ಭಾಷಣ ಮಾಡಿಸುವ ಯೋಜನೆಯೂ ಸಕಾಲಕ್ಕೆ ಕಾರ್ಯಗತವಾಗಲಿಲ್ಲ. ಕೊನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಎಂದು ತಂಡವನ್ನು ರಾಜ್ಯ ಬಿಜೆಪಿ ಸಿದ್ಧಪಡಿಸಿ ಯಡಿಯೂರಪ್ಪ ಅವರನ್ನೂ ರಾಜ್ಯ ಪ್ರವಾಸಕ್ಕೆ ಸಜ್ಜಾಗಿಸಿದೆ.
ವರದಿ: ಕಿರಣ್ ಹನಿಯಡ್ಕ
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:41 pm, Sat, 8 October 22