ಬೆಂಗಳೂರು, ಆಗಸ್ಟ್ 18: ಈ ಹಿಂದಿನ ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ‘ಕೈ’ ತೊರೆದು ಕಮಲ ಹಿಡಿದ ಕೆಲವು ನಾಯಕರು ಇದೀಗ ಮತ್ತೆ ಮಾತೃ ಪಕ್ಷದತ್ತ ಮುಖ ಮಾಡಿದ ಬಗ್ಗೆ ಕಳೆದ ಕೆಲವು ದಿನಗಳಿಂದ ವರದಿಯಾಗುತ್ತಿದೆ. ಬಾಂಬೆ ಟೀಮ್ ಎಂದೇ ಕರೆಸಿಕೊಂಡಿದ್ದ ಬಿಜೆಪಿ ನಾಯಕರಾದ ಎಸ್ಟಿ ಸೋಮಶೇಖರ್ (ST Somashekhar), ಮುನಿರತ್ನ (Muniratna), ಗೋಪಾಲಯ್ಯ ಹಾಗೂ ಶಿವರಾಮ್ ಹೆಬ್ಬಾರ್ ಮತ್ತೆ ಕಾಂಗ್ರೆಸ್ (Congress) ಸೇರಲು ಮುಂದಾಗಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಈ ಪೈಕಿ ಶಿವರಾಮ ಹೆಬ್ಬಾರ್ ಅವರು ಕಾಂಗ್ರೆಸ್ ಸೇರುವ ವರದಿಗಳನ್ನು ನಿರಾಕರಿಸಿದ್ದಾರೆ. ಈ ಮಧ್ಯೆ, ಕೆಲವು ನಾಯಕರ ‘ಘರ್ ವಾಪ್ಸಿ’ಗೆ ಕಾಂಗ್ರೆಸ್ ಪಾಳಯದಲ್ಲಿ ಭಿನ್ನ ನಿಲುವು ವ್ಯಕ್ತವಾಗಿದೆ ಎನ್ನಲಾಗಿದೆ.
ಬೆಂಗಳೂರಿನ ಮೂರು ಶಾಸಕರನ್ನು ಕಾಂಗ್ರೆಸ್ಗೆ ಮರಳಿ ಕರೆತರುವ ವಿಚಾರದಲ್ಲಿ ಪಕ್ಷದಲ್ಲಿ ಭಿನ್ನ ನಿಲುವು ವ್ಯಕ್ತವಾಗಿದೆ. ಶಾಸಕ ಮುನಿರತ್ನ ಪಕ್ಷ ಸೇರ್ಪಡೆಗೆ ಡಿಕೆ ಸಹೋದರರು ಅಡ್ಡಗಾಲು ಹಾಕಿದ್ದಾರೆ ಎನ್ನಲಾಗಿದೆ. ಆದರೆ, ಅವರನ್ನು ಕರೆಸಿಕೊಳ್ಳುವ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಸಹಮತ ವ್ಯಕ್ತಪಡಿಸಿದ್ದಾರೆ. ಇನ್ನು ಎಸ್ಟಿ ಸೋಮಶೇಖರ್ ಸೇರ್ಪಡೆಗೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಇಬ್ಬರೂ ಸಮ್ಮತಿಸಿದ್ದಾರೆ. ಆದರೆ, ಕಾಂಗ್ರೆಸ್ ಸೇರ್ಪಡೆ ಆಗುತ್ತೇನೆ ಎಂದು ಕೇಳಿರುವ ಗೋಪಾಲಯ್ಯ ಅವರಿಗೆ ಇನ್ನೂ ಗ್ರೀನ್ ಸಿಗ್ನಲ್ ಸಿಕ್ಕಲ್ಲ ಎನ್ನಲಾಗಿದೆ. ಈ ಮಧ್ಯೆ, ಶಿವರಾಮ್ ಹೆಬ್ಬಾರ್ ಸೇರ್ಪಡೆಗೆ ಸಹಮತ ವ್ಯಕ್ತವಾಗಿದೆ. ಉಳಿದಂತೆ ಇನ್ನೂ ಕೆಲ ಕ್ಷೇತ್ರಗಳಲ್ಲಿ ಮಾತುಕತೆ ಹಂತದಲ್ಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಇನ್ನು ಭೈರತಿ ಬಸವರಾಜ್ ಕಾಂಗ್ರೆಸ್ ಸೇರ್ಪಡೆಗೆ ಸ್ವತಃ ಸಿಎಂ ಸಿದ್ದರಾಮಯ್ಯ ಅವರಿಂದಲೇ ವಿರೋಧ ವ್ಯಕ್ತವಾಗಿದೆ.
ಲೋಕಸಭೆ ಹಾಗೂ ಬಿಬಿಎಂಪಿ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಘರ್ ವಾಪ್ಸಿ ಮಾಡಲು ಕಾಂಗ್ರೆಸ್ ಮುಂದಾಗಿದೆ. ರಾಜಕಾರಣದಲ್ಲಿ ಕೆಲವೊಮ್ಮೆ ಹೊಂದಾಣಿಕೆ ಅನಿವಾರ್ಯ. ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಕೆಲವೊಂದು ನಿರ್ಧಾರಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಡಿಕೆ ಶಿವಕುಮಾರ್ ಇತ್ತೀಚೆಗೆ ಹೇಳಿದ್ದರು.
ಆಪರೇಷನ್ ಹಸ್ತ ವದಂತಿಗಳ ಬೆನ್ನಲ್ಲೇ ಎಸ್ಟಿ ಸೋಮಶೇಖರ್ ಅವರು ಬೆಂಗಳೂರಿನ ಆರ್ಟಿ ನಗರದಲ್ಲಿ ಮಾಜಿ ಸಿಎಂ, ಬಿಜೆಪಿ ನಾಯಕ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಒಂದು ಗಂಟೆಗೂ ಹೆಚ್ಚು ಕಾಲ ಉಭಯ ನಾಯಕರು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಆಪರೇಷನ್ ಹಸ್ತ: ಬಿಜೆಪಿ ನಾಯಕರು ಕಾಂಗ್ರೆಸ್ ಸೇರ್ಪಡೆ ಬಗ್ಗೆ ಗುಟ್ಟು ಬಿಟ್ಟುಕೊಟ್ಟ ಡಿಕೆ ಶಿವಕುಮಾರ್
ಪಕ್ಷ ಬಿಡುವ ಯೋಚನೆ ಏಕೆ, ಕಾಂಗ್ರೆಸ್ಗೆ ಈಗ ಹೋಗಿ ಏನು ಮಾಡ್ತೀರಿ? ಇರುವ ಸಣ್ಣಪುಟ್ಟ ಸಮಸ್ಯೆಗಳನ್ನು ಸರಿಪಡಿಸಿಕೊಂಡು ಹೋದರೆ ಆಯಿತು. ನಿಮಗೆ ಅಸಮಾಧಾನ ಇರುವವರನ್ನೂ ಕೂಡ ಕರೆದು ಮಾತನಾಡೋಣ ಎಂದು ಸೋಮಶೇಖರ್ ಬಳಿ ಬೊಮ್ಮಾಯಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದೇ ವೇಳೆ ಮಾತನಾಡಿದ ಸೋಮಶೇಖರ್, ನಮ್ಮ ಬೆಂಬಲಿಗರು ಅಸಮಾಧಾನ ಹೇಳಿಕೊಂಡಿದ್ದಾರೆ. ದೂರು ಕೊಟ್ಟರೂ ಕ್ರಮ ಆಗಿಲ್ಲ ಅಂದರೆ ಏನು ಅರ್ಥ? ಇಲ್ಲಿ ಬೆಲೆ ಇಲ್ಲದಿದ್ದರೆ ಯಾಕೆ ಇರಬೇಕು ಅಂತಾ ಪ್ರಶ್ನೆ ಮಾಡುತ್ತಿದ್ದಾರೆ. ನಾನು ಮಾತಾಡಿ ಸರಿ ಮಾಡುತ್ತೇನೆ ಎಂದು ಬೆಂಬಲಿಗರಿಗೆ ಹೇಳಿದ್ದೇನೆ ಎಂದು ಬೊಮ್ಮಾಯಿ ಬಳಿ ಸೋಮಶೇಖರ್ ಹೇಳಿದ್ದಾರೆ ಎನ್ನಲಾಗಿದೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ