BS Yediyurappa: ಮಾಸ್ ಲೀಡರ್ ಯಡಿಯೂರಪ್ಪಗೆ ಮಹತ್ವದ ಜವಾಬ್ದಾರಿ; ದಕ್ಷಿಣ ಭಾರತ ಗೆಲ್ಲುವ ಬಿಜೆಪಿ ಕನಸಿಗೆ ಬಲ

|

Updated on: Aug 19, 2022 | 3:01 PM

Karnataka Political Analysis: ಮುಂದಿನ ಲೋಕಸಭಾ ಚುನಾವಣೆ ಹಾಗೂ ಬಿಜೆಪಿ ಸಂಸದೀಯ ಮಂಡಳಿಗೆ ಬಿ.ಎಸ್.ಯಡಿಯೂರಪ್ಪ ಸೇರ್ಪಡೆಯ ವಿದ್ಯಮಾನಗಳಿಗೆ ಒಂದು ಮಹತ್ವದ ದಿನಾಂಕದೊಂದಿಗೆ ಸಂಬಂಧವಿದೆ.

BS Yediyurappa: ಮಾಸ್ ಲೀಡರ್ ಯಡಿಯೂರಪ್ಪಗೆ ಮಹತ್ವದ ಜವಾಬ್ದಾರಿ; ದಕ್ಷಿಣ ಭಾರತ ಗೆಲ್ಲುವ ಬಿಜೆಪಿ ಕನಸಿಗೆ ಬಲ
ಕರ್ನಾಟಕದ ಮಾಸ್​ ಲೀಡರ್ ಯಡಿಯೂರಪ್ಪ
Follow us on

ಒಂದು ಮ್ಯಾಜಿಕ್ ದಿನಾಂಕವಿದೆ. ಈ ದಿನಾಂಕಕ್ಕೂ ಮುಂದಿನ ಲೋಕಸಭಾ ಚುನಾವಣೆಗೂ, ಇದೀಗ ನಡೆದ ಬಿಜೆಪಿ ಸಂಸದೀಯ ಮಂಡಳಿ ಪುನರ್​ ರಚನೆಗೂ, ಸಂಸದೀಯ ಮಂಡಳಿ ಹಾಗೂ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಗೆ ಬಿ.ಎಸ್.ಯಡಿಯೂರಪ್ಪ  (BS Yediyurappa) ಸೇರ್ಪಡೆಗೂ ಇರುವ ಸಂಬಂಧ ಊಹಿಸಬಲ್ಲಿರಾ? ಆ ಮ್ಯಾಜಿಕ್ ದಿನಾಂಕ 27ನೇ ಸೆಪ್ಟೆಂಬರ್ 2025. ರೋಮನ್ ಪದ್ಧತಿಯ ಕ್ಯಾಲೆಂಡರ್ ಪ್ರಕಾರ ಆ ದಿನಾಂಕಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (Rashtriya Swayamsevak Sangha – RSS) ಆರಂಭವಾಗಿ 100 ವರ್ಷಗಳಾಗುತ್ತವೆ. ರೋಮನ್ ದಿನಾಂಕವನ್ನು ಆರ್​ಎಸ್​ಎಸ್​ನವರು ಪರಿಗಣಿಸುವುದಿಲ್ಲ ಬಿಡಿ. ಪ್ರತಿವರ್ಷವು ವಿಜಯದಶಮಿಯನ್ನು ಸಂಘ ಪರಿವಾರ, ಅಂದರೆ ಆರ್​ಎಸ್​ಎಸ್​ ಮತ್ತು ಅದರ ಅಂಗಸಂಸ್ಥೆಗಳು ವಾರ್ಷಿಕೋತ್ಸವವಾಗಿ ಆಚರಿಸುವುದೇ ವಾಡಿಕೆ. ಈ ಲೆಕ್ಕದಲ್ಲಿ 2025ರ ವಿಜಯದಶಮಿ (2ನೇ ಅಕ್ಟೋಬರ್ 2025) ಸಂಘಪರಿವಾರ ಶತಮಾನೋತ್ಸವ ಆಚರಣೆಯ ದಿನಾಂಕವಾಗುತ್ತದೆ.

ಶತಮಾನೋತ್ಸವದ ಹೊತ್ತಿಗೆ ಆರ್​ಎಸ್​ಎಸ್​ನಲ್ಲಿ ಪೂರ್ಣಾವಧಿ ಪ್ರಚಾರಕರ ಸಂಖ್ಯೆ ಕನಿಷ್ಠ 10,000 ದಾಟಿರಬೇಕು ಎನ್ನುವ ಗುರಿಯೊಂದಿಗೆ ಇತರ ಹತ್ತಾರು ಗುರಿಗಳನ್ನೂ ಆರ್​ಎಸ್​ಎಸ್​ ಇರಿಸಿಕೊಂಡಿದೆ. ಈ ಪೈಕಿ ಬಿಜೆಪಿಯನ್ನು ಕೇಂದ್ರ ಮತ್ತು ಹಲವು ರಾಜ್ಯಗಳಲ್ಲಿ ಬಿಜೆಪಿಯು ಅಧಿಕಾರದಲ್ಲಿ ಇರುವಂತೆ ಮಾಡುವುದು ಸಹ ಒಂದು. ಹೀಗಾಗಿಯೇ 2024ರ ಲೋಕಸಭಾ ಚುನಾವಣೆ, ಅದಕ್ಕೆ ಮೊದಲು ಮತ್ತು 2025ರ ಆಸುಪಾಸಿನಲ್ಲಿ ನಡೆಯುವ ಎಲ್ಲ ವಿಧಾನಸಭಾ ಚುನಾವಣೆಗಳನ್ನು ಬಿಜೆಪಿ ಯಾವುದೇ ಚೌಕಾಸಿಯಿಲ್ಲದೆ ವೀರಾವೇಷದಿಂದ ಎದುರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಬಿಜೆಪಿಯ ಸೈದ್ಧಾಂತಿಕ ಗುರು ಆರ್​ಎಸ್​ಎಸ್​ ಸಹ ಇಂಬುಕೊಡುತ್ತಿದೆ. ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಅವರನ್ನೂ ಈಗಾಗಲೇ ಘೋಷಿಸುವ ಮೂಲಕ ಕಾರ್ಯಕರ್ತರಿಗೆ ಅತಿಮುಖ್ಯ ಸಂಕೇತವೊಂದನ್ನು ಅಮಿತ್ ಶಾ ರವಾನಿಸಿದ್ದಾರೆ.

ಭಾರತದ ರಾಷ್ಟ್ರ ರಾಜಕಾರಣದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿಗೆ ಪ್ರಬಲ ಎದುರಾಳಿಗಳಿಲ್ಲ. ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಗಳ ಫಲಿತಾಂಶಗಳ ಬಗ್ಗೆ ಒಂದಿಷ್ಟು ಚರ್ಚೆ, ಗೊಂದಲಗಳು ಇರುತ್ತವೆಯಾದರೂ 2024ರ ಲೋಕಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ಬಹುತೇಕ ಯಾರಿಗೂ ಪ್ರಶ್ನೆಗಳಿಲ್ಲ. ಅಮಿತ್​ ಶಾ-ನರೇಂದ್ರ ಮೋದಿ ಜೋಡಿ ಸಾರಥ್ಯದಲ್ಲಿ ನಡೆಯುತ್ತಿರುವ ಬಿಜೆಪಿ ವಿಜಯಯಾತ್ರೆ ಇನ್ನಷ್ಟು ದಿನ ಮುಂದುವರಿಯುವುದು ಬಹುತೇಕ ನಿರೀಕ್ಷಿತವೇ ಆಗಿದೆ.

‘ರೆ’ ಸಾಮ್ರಾಜ್ಯದಲ್ಲಿ ಸಾಧ್ಯತೆಗಳ ಲೆಕ್ಕಾಚಾರ

ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ, ಬಿಹಾರದಲ್ಲಿ ನಿತೀಶ್ ಕುಮಾರ್, ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್, ಪಂಜಾಬ್ ಮತ್ತು ದೆಹಲಿಯಲ್ಲಿ ಅರವಿಂದ ಕೇಜ್ರಿವಾಲ್, ಕೇರಳದಲ್ಲಿ ಪಿಣರಾಯಿ ವಿಜಯನ್, ಒಡಿಶಾದಲ್ಲಿ ನವೀನ್ ಪಟ್ನಾಯಕ್, ತಮಿಳುನಾಡಿನಲ್ಲಿ ಸ್ಟಾಲಿನ್, ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ತೊಡಕುಂಟು ಮಾಡಬಹುದು. ಆದರೆ ಉಳಿದ ರಾಜ್ಯಗಳಲ್ಲಿ ಪರಿಸ್ಥಿತಿ ಬಿಜೆಪಿ ಪರವಾಗಿಯೇ ಇರುವುದರಿಂದ ಯಾವ ರೀತಿ ಲೆಕ್ಕ ಹಾಕಿದರೂ, ಸದ್ಯದ ಮಟ್ಟಿಗೆ ಮುಂದಿನ ಚುನಾವಣೆಯ ಫಲಿತಾಂಶ ಬಿಜೆಪಿ ಪರವಾಗಿಯೇ ಇರುವಂತೆ ಕಾಣಿಸುತ್ತದೆ. ಆದರೆ ಇದು ರಾಜಕೀಯ ನೋಡಿ. ಯಾವಾಗ ಏನಾಗುತ್ತೆ ಎಂದು ಹೇಳಲು ಆಗುವುದಿಲ್ಲ.

ಅಪ್ಪಿತಪ್ಪಿ ವಿರೋಧ ಪಕ್ಷಗಳು ಸರ್ವಸಮ್ಮತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ, ಕಾಂಗ್ರೆಸ್ ಕೊಡವಿ ನಿಂತು ಹೋರಾಟಕ್ಕೆ ಮುಂದಾದರೆ, ಬಿಜೆಪಿಯ ಮತಬ್ಯಾಂಕ್​ಗೆ ಆಪ್ ಕನ್ನ ಕೊರೆದರೆ, ನಿರುದ್ಯೋಗ ಮತ್ತಿತರ ಕಾರಣಗಳಿಂದ ಯುವಕರು ಹಿಂದುತ್ವದ ಭಾವೋದ್ರೇಕ ಕೈಬಿಟ್ಟರೆ… ಹೀಗೆ ‘ರೆ’ಗಳ ಸಾಮ್ರಾಜ್ಯವನ್ನು ಬಿಜೆಪಿ ನಾಯಕರು ಲೆಕ್ಕ ಹಾಕುತ್ತಿದ್ದಾರೆ. ಬಿ.ಎಸ್.ಯಡಿಯೂರಪ್ಪ ಅವರನ್ನು ಸಂಸದೀಯ ಮಂಡಳಿ ಹಾಗೂ ಕೇಂದ್ರ ಚುನಾವಣಾ ಸಮಿತಿಗೆ ಸೇರಿಸಿಕೊಳ್ಳುವುದರ ಹಿಂದೆ ಈ ಎಲ್ಲ ಲೆಕ್ಕಾಚಾರಗಳೂ ಕೆಲಸ ಮಾಡಿವೆ. ಈ ಎರಡೂ ಸಮಿತಿಗಳು ಬಿಜೆಪಿ ಹೈಕಮಾಂಡ್​ ಚುನಾವಣೆಗೆ ಸಂಬಂಧಿಸಿದಂತೆ ತೆಗೆದುಕೊಳ್ಳುವ ಪ್ರಮುಖ ನಿರ್ಧಾರಗಳಲ್ಲಿ ಪ್ರಧಾನ ಪಾತ್ರ ನಿರ್ವಹಿಸುತ್ತವೆ.

ಹಿಂದಿ ಭಾಷಿಕ ಪ್ರದೇಶಗಳು, ಈಶಾನ್ಯ ಭಾರತ ಮತ್ತು ಪಶ್ಚಿಮ ಭಾರತದಲ್ಲಿ ಬಿಜೆಪಿಗೆ ಅಂಥ ಸವಾಲು ಇಲ್ಲ. ಆದರೆ ದಕ್ಷಿಣ ಭಾರತದಲ್ಲಿ ಮಾತ್ರ ಬಿಜೆಪಿಗೆ ಸುರಕ್ಷೆಯ ಭಾವ ಈವರೆಗೂ ಬಂದಿಲ್ಲ. ಹೀಗಾಗಿಯೇ ವಿವಿಧ ಹಂತಗಳಲ್ಲಿ ಎಷ್ಟೇ ವಿರೋಧ, ಭಿನ್ನ ಚಿಂತನೆ ಮತ್ತು ವಿರಸಗಳಿದ್ದರೂ ಸ್ವತಂತ್ರ ಮನೋಭಾವದ ನಾಯಕ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಂಸದೀಯ ಮಂಡಳಿಯಲ್ಲಿ ಸ್ಥಾನ ನೀಡುವ ಮೂಲಕ ಹೈಕಮಾಂಡ್ ಮತ್ತೆ ಮಣೆಹಾಕಿದೆ. ‘ನನ್ನ ಮಗನಿಗೆ ಶಿಕಾರಿಪುರ ಕ್ಷೇತ್ರ ಬಿಟ್ಟುಕೊಡುತ್ತೇನೆ’ ಎಂದು ಚುನಾವಣೆ ಘೋಷಣೆಗೂ ಮುನ್ನವೇ ಯಡಿಯೂರಪ್ಪ ಪ್ರಕಟಿಸಿದರೂ ಅವರ ವಿರುದ್ಧ ಹೈಕಮಾಂಡ್​ ತುಟಿಕ್​ಪಿಟಿಕ್ ಎಂದಿಲ್ಲ. ಯಡಿಯೂರಪ್ಪ ಹೊರತುಪಡಿಸಿ ಬೇರೆ ಯಾವುದೇ ನಾಯಕ ಹೀಗೆ ಘೋಷಿಸಿದ್ದರೂ ಇಷ್ಟು ಹೊತ್ತಿಗೆ ರಂಪ-ರಾದ್ಧಾಂತ ಆಗಿರುತ್ತಿತ್ತು.

ದಕ್ಷಿಣ ಭಾರತಕ್ಕೆ ಯಡಿಯೂರಪ್ಪ ಅನಿವಾರ್ಯ

ಬಿಜೆಪಿ ಹೈಕಮಾಂಡ್​ಗೆ ಯಡಿಯೂರಪ್ಪ ಮತ್ತು ಯಡಿಯೂರಪ್ಪಗೆ ಬಿಜೆಪಿ ಹೈಕಮಾಂಡ್ ಪರಸ್ಪರ ಅನಿವಾರ್ಯ. ಒಬ್ಬರನ್ನು ಬಿಟ್ಟರೆ ಮತ್ತೊಬ್ಬರು ಮುಗ್ಗರಿಸುವ ಅಪಾಯ ತಪ್ಪಿದ್ದಲ್ಲ. ಇದು ಈಗಾಗಲೇ ಹಲವು ಬಾರಿ ಸಾಬೀತೂ ಆಗಿದೆ. ಯಡಿಯೂರಪ್ಪ ಅವರನ್ನು ಸಂಸದೀಯ ಮಂಡಳಿಗೆ ಸೇರಿಸಿಕೊಂಡ ಬೆಳವಣಿಗೆಯನ್ನು ಈ ಹಿನ್ನೆಲೆಯಲ್ಲಿಯೇ ವ್ಯಾಖ್ಯಾನಿಸಬೇಕು. ದಕ್ಷಿಣ ಭಾರತದಲ್ಲಿ ಬಿಜೆಪಿ ಸ್ವತಂತ್ರವಾಗಿ ಅಧಿಕಾರದಲ್ಲಿರುವ ಏಕೈಕ ರಾಜ್ಯ ಕರ್ನಾಟಕ. ಇಂಥ ರಾಜ್ಯದಲ್ಲಿ ಸರ್ವ ಸಮುದಾಯಗಳನ್ನು ಜೊತೆಗೆ ಕರೆದೊಯ್ಯಬಲ್ಲ ಮತ್ತು ಕರ್ನಾಟಕದ ಭೌಗೋಳಿಕ ಚೌಕಟ್ಟು ಮೀರಿ ಅನುಯಾಯಿಗಳನ್ನು ಹೊಂದಿರುವ ಸಮೂಹ ನಾಯಕ (ಮಾಸ್ ಲೀಡರ್) ಯಡಿಯೂರಪ್ಪ.

ಇದೀಗ ಬಿಜೆಪಿಗೆ ತೆಲಂಗಾಣದಲ್ಲಿ ಸ್ವತಂತ್ರ ಸರ್ಕಾರ ರಚಿಸುವ ಸಾಧ್ಯತೆಗಳು ತೆರೆದುಕೊಳ್ಳುತ್ತಿವೆ. ಅಣ್ಣಾಮಲೈ ಚುರುಕಾದ ನಂತರ ತಮಿಳುನಾಡಿನಲ್ಲಿ ಸಂಘಟನೆ ಪ್ರಬಲವಾಗುತ್ತಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆಯಿಂದ ಸಿಡಿದ ಏಕನಾಥ ಶಿಂದೆ ಬಣದ ಜೊತೆಗೆ ಬಿಜೆಪಿಯೂ ಪಾಲುದಾರ ಪಕ್ಷವಾಗಿ ಅಧಿಕಾರಕ್ಕೆ ಬಂದಿದೆ. ಕರ್ನಾಟಕದಲ್ಲಿ ಪ್ರಬಲ ಜನನಾಯಕನಿಗೆ ಕೇಂದ್ರ ಸಮಿತಿಯಲ್ಲಿ ಅಧಿಕಾರ ಸಿಕ್ಕರೆ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಸ್ವತಂತ್ರವಾಗಿ ವಿಜಯ ಪತಾಕೆಯನ್ನು ಸುಲಭವಾಗಿ ಹಾರಿಸಬಹುದು ಎನ್ನುವುದು ಬಿಜೆಪಿ ಹೈಕಮಾಂಡ್ ಲೆಕ್ಕಾಚಾರ.

ಯಡಿಯೂರಪ್ಪನವರ ಮಾತು ಸಹ ಇದೇ ಧಾಟಿಯಲ್ಲಿರುವುದನ್ನು ಗಮನಿಸಬಹುದು. ತಮ್ಮನ್ನು ಸಂಸದೀಯ ಮಂಡಳಿಗೆ ನೇಮಕ ಮಾಡಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಯಡಿಯೂರಪ್ಪ, ‘ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದಷ್ಟೇ ಅಲ್ಲ, ಇಡೀ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಬಲ ತುಂಬುತ್ತೇನೆ’ ಎಂದು ಪ್ರತಿಜ್ಞೆ ಮಾಡಿದ್ದರು. ಸರಿಯಾಗಿ ಒಂದು ವರ್ಷದ ಹಿಂದೆ ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಹೈಕಮಾಂಡ್ ಕೆಳಗಿಳಿಸಿತ್ತು. ನಂತರದ ದಿನಗಳಲ್ಲಿ ಸಂಘಟನೆ ಮತ್ತು ಪಕ್ಷದ ಚಟುವಟಿಕೆಯಲ್ಲಿ ತುಸು ಮಂಕಾಗಿದ್ದ ಯಡಿಯೂರಪ್ಪ ಅವರಿಗೆ ಈ ನೇಮಕಾತಿ ಹೊಸ ಉತ್ಸಾಹ ತುಂಬಿರುವುದಂತೂ ಸುಳ್ಳಲ್ಲ.

ಲಿಂಗಾಯತರ ಮನಗೆಲ್ಲುವ ತಂತ್ರ

ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಗಾದಿಯಿಂದ ಕೆಳಗಿಳಿಸಿದ ನಂತರ ಕರ್ನಾಟಕದ ಲಿಂಗಾಯತರಲ್ಲಿ ಅಸಮಾಧಾನದ ಅಲೆ ಬೀಸುತ್ತಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ವತಃ ಲಿಂಗಾಯತರು ಹಾಗೂ ಯಡಿಯೂರಪ್ಪ ಪರ ನಿಷ್ಠ ಹೊಂದಿದ್ದವರಾಗಿದ್ದರೂ ಅವರಿಗೆ ಯಡಿಯೂರಪ್ಪಗೆ ಇರುವಂಥ ಮಾಸ್​ ಲೀಡರ್​ನ ಚರಿಷ್ಮಾ ಇಲ್ಲ. ಇಂದಿಗೂ ಲಿಂಗಾಯತ ವಲಯದಲ್ಲಿ ಬೊಮ್ಮಾಯಿ ಅವರನ್ನು ‘ಹೈಕಮಾಂಡ್ ಕ್ಯಾಂಡಿಡೇಟ್’ ಎಂದು ಗುರುತಿಸುತ್ತಾರೆಯೇ ವಿನಃ ಸಮುದಾಯದ ನಾಯಕ ಎಂದು ಅಲ್ಲ. ಲಿಂಗಾಯತ ಸಮುದಾಯದಲ್ಲಿ ಮೇಲೆದ್ದಿದ್ದ ಈ ಅಸಮಾಧಾನವನ್ನು ಮತಗಳಾಗಿ ಪರಿವರ್ತಿಸಿಕೊಳ್ಳಲು ಕಾಂಗ್ರೆಸ್​ನ ಎಂ.ಬಿ.ಪಾಟೀಲ್ ಪ್ರಯತ್ನಿಸುತ್ತಿರುವುದು ಗುಟ್ಟಾಗಿ ಉಳಿದಿರಲಿಲ್ಲ. ಸಮುದಾಯವನ್ನು ತನ್ನೊಂದಿಗೆ ಉಳಿಸಿಕೊಳ್ಳಲು ತಕ್ಷಣಕ್ಕೆ ಏನಾದರೂ ಮಾಡಬೇಕು ಎನ್ನುವ ಪರಿಸ್ಥಿತಿಯಲ್ಲಿ ಬಿಜೆಪಿ ಇತ್ತು. ಇದೀಗ ಯಡಿಯೂರಪ್ಪ ಅವರಿಗೆ ಸಿಕ್ಕಿರುವ ಉನ್ನತ ಸ್ಥಾನಮಾನವು ಸಮುದಾಯದ ಅಸಮಾಧಾನ ತಣಿಸುವುದರೊಂದಿಗೆ ಬಿಜೆಪಿಗೆ ಇದ್ದ ಆತಂಕವನ್ನೂ ನಿವಾರಿಸಿದೆ.

ಯಡಿಯೂರಪ್ಪ ನೇಮಕವನ್ನು ಸಹಜವಾಗಿಯೇ ಕರ್ನಾಟಕದ ನಾಯಕರು ಸ್ವಾಗತಿಸಿದ್ದಾರೆ. ದಿವಂಗತ ಅನಂತಕುಮಾರ್ ಅವರು ಇದ್ದ ಕಾಲದಲ್ಲಿ ಅವರು ಮತ್ತು ಯಡಿಯೂರಪ್ಪ ನಡುವೆ ಪರೋಕ್ಷ ಹಗ್ಗಜಗ್ಗಾಟ ಇರುತ್ತಿತ್ತು. ನಂತರದ ದಿನಗಳಲ್ಲಿ ಯಡಿಯೂರಪ್ಪ ವೇಗಕ್ಕೆ ತಡೆಯೊಡ್ಡುವ ವ್ಯಕ್ತಿಯಾಗಿ ಬಿ.ಎಲ್.ಸಂತೋಷ್ ಕಾಣಿಸಿಕೊಂಡಿದ್ದರು. ಇದೀಗ ಹೈಕಮಾಂಡ್ ಮಟ್ಟದಲ್ಲಿಯೂ ಯಡಿಯೂರಪ್ಪ ಅವರಿಗೆ ಪ್ರಬಲ ಸ್ಥಾನಮಾನ ಸಿಕ್ಕಿರುವುದು ಬಿ.ಎಲ್.ಸಂತೋಷ್ ಅವರ ಪ್ರಭಾವವನ್ನು ತುಸುಮಟ್ಟಿಗೆ ಕಡಿಮೆ ಮಾಡಬಹುದು ಎಂಬ ಮಾತುಗಳೂ ಕೇಳಿಬರುತ್ತಿವೆ.

Published On - 2:57 pm, Fri, 19 August 22