BS Yediyurappa Resign: ರಾಜ್ಯಪಾಲರಿಗೆ ರಾಜೀನಾಮೆ ಪತ್ರ ಸಲ್ಲಿಸಿದ ಬಿ.ಎಸ್​.ಯಡಿಯೂರಪ್ಪ

| Updated By: Skanda

Updated on: Aug 29, 2021 | 12:50 PM

2019ನೇ ಇಸವಿಯ ಜುಲೈ 26ರ ಸಂಜೆ 6 ಗಂಟೆ ಪ್ರಮಾಣವಚನ ಸ್ವೀಕರಿಸಿದ್ದ ಬಿ.ಎಸ್.ಯಡಿಯೂರಪ್ಪ ಸರಿಯಾಗಿ ಎರಡು ವರ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

BS Yediyurappa Resign: ರಾಜ್ಯಪಾಲರಿಗೆ ರಾಜೀನಾಮೆ ಪತ್ರ ಸಲ್ಲಿಸಿದ ಬಿ.ಎಸ್​.ಯಡಿಯೂರಪ್ಪ
ಸಿಎಂ ಬಿ.ಎಸ್.ಯಡಿಯೂರಪ್ಪ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಬಿ.ಎಸ್.ಯಡಿಯೂರಪ್ಪ ರಾಜಭವನಕ್ಕೆ ಆಗಮಿಸಿ ರಾಜ್ಯಪಾಲ ಥಾವರಚಂದ್​ ಗೆಹಲೋತ್​ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. 2019ನೇ ಇಸವಿಯ ಜುಲೈ 26ರ ಸಂಜೆ 6 ಗಂಟೆ ಪ್ರಮಾಣವಚನ ಸ್ವೀಕರಿಸಿದ್ದ ಬಿ.ಎಸ್.ಯಡಿಯೂರಪ್ಪ ಸರಿಯಾಗಿ ಎರಡು ವರ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ವಜುಭಾಯಿ ವಾಲಾ ಅವರು ರಾಜ್ಯಪಾಲರಾಗಿದ್ದಾಗ ಪ್ರಮಾಣ ವಚನ ಸ್ವೀಕರಿಸಿದ್ದ ಬಿಎಸ್​ವೈ ಇಂದು ಥಾವರಚಂದ್​ ಗೆಹಲೋತ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.

ರಾಜೀನಾಮೆ ಬಳಿಕ ಮಾತನಾಡಿದ ಅವರು, ರಾಜ್ಯದ ಸ್ವಾಮೀಜಿಗಳು ನನಗೆ ಬೆಂಬಲವನ್ನು ಸೂಚಿಸಿದ್ದಾರೆ. 500ಕ್ಕೂ ಹೆಚ್ಚು ಮಠಾಧೀಶರು ಬೆಂಬಲ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಇಂತಹ ಬೆಂಬಲ ಯಾರಿಗೂ ಸಿಕ್ಕಿಲ್ಲ. ನನಗೆ ಬೆಂಬಲ ಸೂಚಿಸಿದ ಸ್ವಾಮೀಜಿಗಳಿಗೆ ಧನ್ಯವಾದ ಎಂದು ಹೇಳಿದ್ದಾರೆ. ಸ್ವಾಮೀಜಿಗಳು ಮುಂದಿನ ಸಿಎಂಗೂ ಸಹಕಾರ ನೀಡಬೇಕು. ಹೈಕಮಾಂಡ್ ನನಗೆ ರಾಜೀನಾಮೆ ಕೊಡಿ ಎಂದು ಹೇಳಿಲ್ಲ. ನಾನೇ ಸ್ವಯಂಪ್ರೇರಿತನಾಗಿ ರಾಜೀನಾಮೆ ಕೊಟ್ಟಿದ್ದೇನೆ. ರಾಜೀನಾಮೆ ನೀಡುವುದಕ್ಕೆ ನನಗೆ ಯಾವುದೇ ಒತ್ತಡ ಇರಲಿಲ್ಲ ಎಂದು ಇದೇ ವೇಳೆ ತಿಳಿಸಿದ್ದಾರೆ. ಬಳಿಕ ಸಿಎಂ ಅಧಿಕೃತ ನಿವಾಸ ಕಾವೇರಿಗೆ ತೆರಳಿದ್ದಾರೆ.

ಸಾಧನ ಸಮಾವೇಶದಲ್ಲಿ ಮಾತನಾಡಿದ ಯಡಿಯೂರಪ್ಪ, ರಾಜೀನಾಮೆ ನೀಡುದಾಗಿ ಘೋಷಿಸುವ ವೇಳೆ ಭಾವುಕರಾಗಿದ್ದರು. ರಾಜೀನಾಮೆ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸುತ್ತೇನೆ ಎಂದು ಹೇಳಿದ್ದ ಅವರು, ದುಃಖದಿಂದ ಸಿಎಂ ಸ್ಥಾನಕ್ಕೆ ನಾನು ರಾಜೀನಾಮೆ ನೀಡುತ್ತಿಲ್ಲ. ಸಂತೋಷದಿಂದ ಸಿಎಂ ಸ್ಥಾನಕ್ಕೆ ನಾನು ರಾಜೀನಾಮೆ ನೀಡುವೆ. ಸಿಎಂ ಆಗಿ ಅಧಿಕಾರ ನಡೆಸಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಪ್ರಧಾನಿ ಮೋದಿ, ಅಮಿತ್ ಶಾ, ಜೆ.ಪಿ.ನಡ್ಡಾಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದ್ದರು. 75 ವರ್ಷ ದಾಟಿದ ನನಗೆ ಪ್ರಧಾನಿ ಮೋದಿ, ಅಮಿತ್ ಶಾ, ಜೆ.ಪಿ.ನಡ್ಡಾ ನಂಬಿಕೆಯ ಕಾರಣಕ್ಕೆ ಸಿಎಂ ಸ್ಥಾನವನ್ನು ನೀಡಿದ್ದರು. 2 ವರ್ಷ ಆಡಳಿತ ನಡೆಸಲು ಅವಕಾಶವನ್ನು ನೀಡಿದ್ದರು. ಕೇವಲ ಶಬ್ದಗಳಲ್ಲೇ ಅಭಿನಂದನೆ ಸಲ್ಲಿಸುವುದಕ್ಕೆ ಆಗುವುದಿಲ್ಲ ಎಂದು ಭಾವುಕರಾಗಿ ಹೇಳಿದ್ದರು.

ನನ್ನ ಶಕ್ತಿ ಮೀರಿ ನನ್ನ ಕೆಲಸ ಮಾಡಿದ್ದೇನೆ. ಈಗ ತಾನೇ ಕೇಳಿದ್ದೀರಾ ಅನೇಕ ಮುಖಂಡರು ಅಭಿಮಾನದ ಮಾತುಗಳನ್ನಾಡಿದ್ದಾರೆ. ಜನಪ್ರತಿನಿಧಿಗಳು, ಅಧಿಕಾರಿಗಳ ಮೇಲೆ ನಂಬಿಕೆ ಕಡಿಮೆಯಾಗುತ್ತಿದೆ. ಆದರೆ ಪ್ರಧಾನಿ ಮೋದಿಯವರು ಪ್ರಾಮಾಣಿಕತೆಯಿಂದ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಸಾಧನಾ ಸಮಾವೇಶದಲ್ಲಿ ಮಾತನಾಡಿದ್ದರು.

(BS Yediyurappa submitted his resignation letter to Karnataka Governor Thawar Chand Gehlot)
ಇದನ್ನೂ ಓದಿ:
Next CM of Karnataka 2021: ಯಡಿಯೂರಪ್ಪ ನಿರ್ಗಮನ; ಕರ್ನಾಟಕದ ನೂತನ ಮುಖ್ಯಮಂತ್ರಿ ಯಾರು? 

BJP ಸಾಧನಾ ಸಮಾವೇಶದಲ್ಲಿ ಸಿಎಂ ಬಿಎಸ್​ ಯಡಿಯೂರಪ್ಪ ಕಣ್ಣೀರು

Published On - 12:48 pm, Mon, 26 July 21