ಮೋದಿ ಭೇಟಿ: ಭಾರತಾಂಬೆಯ ಮಹಾನ್ ಸುಪುತ್ರನ ದರ್ಶನ ಪಡೆದ ಅನುಭವವಾಯಿತು ಎಂದ ವಿಜಯೇಂದ್ರ

ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ವಿಜಯೇಂದ್ರ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದು, ಸಂತ ತೇಜಸ್ಸಿನ ಭಾರತಾಂಬೆಯ ಮಹಾನ್ ಸುಪುತ್ರನ ದರ್ಶನ ಪಡೆದ ಅನುಭವವಾಯಿತು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.

ಮೋದಿ ಭೇಟಿ: ಭಾರತಾಂಬೆಯ ಮಹಾನ್ ಸುಪುತ್ರನ ದರ್ಶನ ಪಡೆದ ಅನುಭವವಾಯಿತು ಎಂದ ವಿಜಯೇಂದ್ರ
ಮೋದಿ ಭೇಟಿಯಾದ ವಿಜಯೇಂದ್ರ

Updated on: Dec 21, 2023 | 3:47 PM

ನವದೆಹಲಿ, (ಡಿಸೆಂಬರ್ 21): ಜೆಡಿಎಸ್​ ನಾಯಕರಾದ ಹೆಚ್​ಡಿ ದೇವೇಗೌಡ (HD Devegowda), ಕುಮಾರಸ್ವಾಮಿ, ರೇವಣ್ಣ ಅವರು ಇಂದು(ಡಿಸೆಂಬರ್ 21) ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರನ್ನು ಭೇಟಿ ಮಾಡಿ ಲೋಕಸಭಾ ಚುನಾವಣೆ ಸಂಬಂಧ ಮಹತ್ವದ ಚರ್ಚೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಅವರು ಸಹ ಮೋದಿಯವರನ್ನು ಭೇಟಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಇನ್ನು ರಾಜ್ಯಾಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಭೇಟಿಯಾಗಿರುವುದು ವಿಶೇಷ.

ಮೋದಿ ಭೇಟಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹಂಚಿಕೊಂಡಿರುವ ವಿಜಯೇಂದ್ರ, ರಾಜ್ಯಾಧ್ಯಕ್ಷನಾಗಿ ಜವಾಬ್ದಾರಿ ವಹಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಂದು ಭೇಟಿಯಾಗಿ ಆಶೀರ್ವಾದ ಪಡೆದ ಸಂದರ್ಭ ಸಂತ ತೇಜಸ್ಸಿನ ಭಾರತಾಂಬೆಯ ಮಹಾನ್ ಸುಪುತ್ರನ ದರ್ಶನ ಪಡೆದ ಅನುಭವವಾಯಿತು ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿಯಾದ ಜೆಡಿಎಸ್ ವರಿಷ್ಠ ಹೆಚ್​ಡಿ ದೇವೇಗೌಡ, ಕುಮಾರಸ್ವಾಮಿ, ರೇವಣ್ಣ: ಲೋಕಸಭೆ ಟಿಕೆಟ್ ಹಂಚಿಕೆ ಚರ್ಚೆ

ರಾಷ್ಟ್ರ ಭಕ್ತಿ, ಸಂಘ ನಿಷ್ಠೆ, ಸಮರ್ಪಣೆ, ಶಿಸ್ತು, ಬದ್ಧತೆ, ಕ್ರಿಯಾಶೀಲತೆ, ಸಾಧಿಸುವ ಛಲದ ಗುರಿ ಇವೆಲ್ಲಕ್ಕೂ ಭಾರತದ ಇತಿಹಾಸದಲ್ಲಿ ಉದಾಹರಿಸಬಲ್ಲ ಏಕೈಕ ವ್ಯಕ್ತಿತ್ವ ಮಾನ್ಯ ಮೋದಿ ಜೀ ಅವರದು, ಅವರ ಸ್ವಾವಲಂಬಿ ಹಾಗೂ ಬಲಿಷ್ಠ ಭಾರತ ಕಟ್ಟುವ ಮಹಾನ್ ಸಂಕಲ್ಪ ಪರಿಪೂರ್ಣವಾಗಿ ಈಡೇರಿದರೆ ವಿಶ್ವಮಟ್ಟದಲ್ಲಿ ನಮ್ಮ ಭವ್ಯ ಭಾರತ ಅಗ್ರಸ್ಥಾನದಲ್ಲಿ ನಿಲ್ಲಲಿದೆ. ಈ ನಿಟ್ಟಿನಲ್ಲಿ ಅವರೊಂದಿಗೆ ಹೆಗಲು ಕೊಡುವ ಪುಣ್ಯದ ಕಾರ್ಯದಲ್ಲಿ ಸಮರ್ಪಿಸಿಕೊಳ್ಳಲು ‘ಬಿಜೆಪಿ-ಕರ್ನಾಟಕ’ದ ರಥ ಮುನ್ನಡೆಸುವ ಜವಾಬ್ದಾರಿ ವಹಿಸಿಕೊಟ್ಟಿರುವುದು ನನ್ನ ಸೌಭಾಗ್ಯ ಎಂಬುದು ನನ್ನ ವಿನಮ್ರ ಭಾವವಾಗಿದೆ ಎಂದಿದ್ದಾರೆ.


2024 ರ ಮಹಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಅತಿ ಹೆಚ್ಚು ಲೋಕಸಭಾ ಸ್ಥಾನಗಳನ್ನು ಮೋದಿ ಅವರ ಮಡಿಲಿಗೆ ಸಮರ್ಪಿಸಬೇಕೆಂಬ ನನ್ನ ಹೆಗ್ಗುರಿಯ ಹೆಜ್ಜೆಗೆ ಇಂದಿನ ಭೇಟಿಯ ಅವರ ಪ್ರೇರಣೆಯ ಮಾತುಗಳು ನನ್ನಲ್ಲಿ ಅದಮ್ಯ ಆತ್ಮ ವಿಶ್ವಾಸ ಮೂಡಿಸಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ