ಬೆಂಗಳೂರು: ಎಐಸಿಸಿ (AICC) ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ (Mallikarjun kharge) ಆಯ್ಕೆಯಾಗಿದ್ದು, ಬಲಿಪಾಡ್ಯಮಿ ದಿನದಂದು ಅಂದರೆ ಅಕ್ಟೋಬರ್ 26ರಂದು ಅಧಿಕಾರ ಸ್ವೀಕಾರ ಮಾಡಲಿದ್ದಾರೆ. 7,897 ಮತಗಳ ನಂತರದಲ್ಲಿ ‘ಕೈ’ ನಾಯಕ ಶಶಿ ತರೂರ್ನ್ನು ಹಿಂದಿಕ್ಕಿ ಕನ್ನಡಿಗ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷ ಪಟ್ಟಗಿಟ್ಟಿಸಿಕೊಂಡಿದ್ದಾರೆ. 24 ವರ್ಷದ ಬಳಿಕ ಗಾಂಧಿಯೇತರ ನಾಯಕನಿಗೆ ಅಧ್ಯಕ್ಷ ಸ್ಥಾನ ಒದಗಿಬಂದಿದೆ. 9,385 ಮತಗಳು ಚಲಾವಣೆಯಾಗಿದ್ದು, 416 ಮತಗಳು ಅಮಾನ್ಯವಾಗಿವೆ. ಸದ್ಯ ಖರ್ಗೆ ಮುಂದೆ ನೂರಾರು ಸವಾಲುಗಳ್ಳಿದ್ದು ಅವುಗಳನ್ನು ಸಮರ್ಪಕವಾಗಿ ಎದುರಿಸಬೇಕಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಯಾಗಬೇಕಿದೆ. ಸತತ ಸೋಲುಗಳಿಂದ ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ಕುಸಿದಿದೆ. ಇದೀಗ ದೇಶಮಟ್ಟದಲ್ಲಿ ಪಕ್ಷಕ್ಕೆ ಸಂಘಟನೆ ಶಕ್ತಿ ತುಂಬವ ಕೆಲಸ ಮಲ್ಲಿಕಾರ್ಜುನ ಖರ್ಗೆ ಮಾಡಬೇಕಿದೆ.
ಗಾಂಧಿ ಕುಟುಂಬದ ರಬ್ಬರ್ ಸ್ಟಾಂಪ್ ಅಧ್ಯಕ್ಷ ಎಂಬ ಹಣೆಪಟ್ಟಿಯಿದ್ದು, ಅದನ್ನು ಕಳಚಬೇಕಿದೆ. ಇನ್ನು ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಸವಾಲು ಆಗಿರುವುದು ಪಕ್ಷದ ಆಂತರಿಕ ಭಿನ್ನಾಭಿಪ್ರಾಯವನ್ನು ಹೋಗಲಾಡಿಸಬೇಕಿದೆ. ರಾಷ್ಟ್ರೀಯ ಮಟ್ಟದಲ್ಲಿ ಜಿ 23 ಗುಂಪಿನ ನಾಯಕರ ಮನವೊಲಿಸುವುದು. ನಾಯಕ ಗುಲಾಮ್ ನಬಿ ಆಝಾದ್ ಪಕ್ಷ ತೊರೆದಿರುವುದು ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿತ್ತು. ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಾಗೂ ಸಿಎಂ ಸ್ಥಾನದ ಆಕಾಂಕ್ಷಿ ಸಚಿನ್ ಪೈಲಟ್ ನಡುವಿನ ಭಿನ್ನಾಭಿಪ್ರಾಯ ಸರಿಹೋಗಬೇಕಿದೆ. ಛತ್ತೀಸ್‌ಗಡದಲ್ಲೂ ಆಂತರಿಕ ಭಿನ್ನಾಭಿಪ್ರಾಯ ಪೂರ್ಣ ಪ್ರಮಾಣದಲ್ಲಿ ಆರಿಲ್ಲ.
ಅಧ್ಯಕ್ಷರಾದ ಬಳಿಕ ಇವೆಲ್ಲವನ್ನು ನಿಭಾಯಿಸುವುದು ಖರ್ಗೆ ಪಾಲಿಗೆ ಸವಾಲಿನ ಸಂಗತಿ ಎಂದು ಮೂಲಗಳು ಹೇಳುತ್ತಿವೆ.
ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಜಿದ್ದಾಜಿದ್ದಿ
ಕರ್ನಾಟಕ ಕಾಂಗ್ರೆಸ್ ಬಣಗಾರಿಕೆ ಬ್ರೇಕ್ ಹಾಕಬೇಕಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ವಿಪಕ್ಷದ ನಾಯಕ ಸಿದ್ದರಾಮಯ್ಯ ನಡುವೆ ಜಿದ್ದಾಜಿದ್ದಿ ಇದೆ ಎನ್ನಲಾಗುತ್ತಿದ್ದು, ಈ ಇಬ್ಬರ ನಡುವೆ ಸಮನ್ವಯ ಸಾಧಿಸುವ ದೊಡ್ಡ ಜವಾಬ್ದಾರಿ ಖರ್ಗೆ ಮೇಲಿದೆ. ಎಐಸಿಸಿ ಅಧ್ಯಕ್ಷ ಸ್ಥಾನದ ಜೊತೆ ಜೊತೆಗೆ ರಾಜ್ಯ ರಾಜಕಾರಣದಲ್ಲಿ ಹಿಡಿತ ಸಾಧಿಸಲು ಪ್ರಯತ್ನ ಮಾಡಬೇಕು.
ಮುಂಬರುವ ರಾಜ್ಯಗಳ ಚುನಾವಣೆ ಹಾಗೂ 2024 ಲೋಕಸಭಾ ಚುನಾವಣೆಗೆ ಕೈ ಪಡೆಯನ್ನು ಸಿದ್ದಪಡಿಸುವುದು
ಚುನಾವಣಾ ಕಾರ್ಯತಂತ್ರ ಹೆಣೆಯುವುದು, ಮೋದಿ, ಅಮೀತ್ ತಂತ್ರಗಳಿಗೆ, ಪ್ರತಿ ತಂತ್ರ ರೂಪಿಸಿಸುವುದು, ಹಿಮಾಚಲ ಪ್ರದೇಶ, ಗುಜರಾತ್ ಚುನಾವಣೆಗಳಲ್ಲಿ ಗಣನೀಯ ಪ್ರಗತಿ ಸಾಧಿಸಬೇಕಿದೆ. ಎಷ್ಟೇಲ್ಲ ಸವಾಲುಗಳನ್ನು ನೂತನ ಎಐಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಲಿರುವ ಮಲ್ಲಿಕಾರ್ಜುನ ಖರ್ಗೆ ಎದುರಿಸಬೇಕಿದೆ.
AICC ಅಧ್ಯಕ್ಷ ಸ್ಥಾನ ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ: ಮಲ್ಲಿಕಾರ್ಜುನ ಖರ್ಗೆ
ಅಧ್ಯಕ್ಷ ಸ್ಥಾನಕ್ಕೆ ನನ್ನನ್ನು ಆಯ್ಕೆ ಮಾಡಿದ ಎಲ್ಲರಿಗೂ ಧನ್ಯವಾದ. ಜೊತೆಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೂ ಧನ್ಯವಾದ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು. AICC ಚುನಾವಣೆ ಮುಗಿದ ಬಳಿಕ ದೆಹಲಿಯಲ್ಲಿ ಅವರು ಸುದ್ದಿಗೋಷ್ಠಿ ಮಾಡಿದರು. AICC ಅಧ್ಯಕ್ಷ ಸ್ಥಾನ ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ದೇಶಾದ್ಯಂತ ಪಕ್ಷವನ್ನು ಸಂಘಟಿಸಲು ಮತ್ತಷ್ಟು ಪ್ರಯತ್ನಿಸುವೆ. ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಲಾಗುತ್ತೆ. ಯುವ ನಾಯಕರು, ಹಿರಿಯ ನಾಯಕರ ಜತೆಗೂಡಿ ಪಕ್ಷ ಸಂಘಟನೆ ಮಾಡುತ್ತೇನೆ ಎಂದು ಹೇಳಿದರು.
ಇಂದು ನಾವೆಲ್ಲ ಒಟ್ಟಾಗಿ ಕೆಲಸ ಮಾಡಬೇಕು. ಇಲ್ಲಿ ಯಾರು ದೊಡ್ಡವರಲ್ಲ, ಯಾರು ಸಣ್ಣವರಲ್ಲ. ಕೋಮುವಾದದ ವಿರುದ್ಧ ಹೋರಾಡಬೇಕಿದೆ. ಸಂಘಟನೆಯನ್ನು ಬಲಿಷ್ಠ ಮಾಡಲಿದ್ದೇನೆ. ಸರ್ಕಾರದಲ್ಲಿರುವ ನಾಯಕರು ಮಾತು ಹೆಚ್ಚು ಮಾತನಾಡುತ್ತಾರೆ ಕೆಲಸ ಮಾಡಲ್ಲ ಎನ್ನಲಾಗುತ್ತಿದೆ. ಬಡ ಕುಟುಂಬದಲ್ಲಿ ಜನಿಸಿದ ನನಗೆ ಭರವಸೆ ಇಟ್ಟು ಆಯ್ಕೆ ಮಾಡಿದ್ದೀರಿ. ನಾನು ಆ ಭರವಸೆಯನ್ನು ಉಳಿಸಿಕೊಳ್ಳುತ್ತೇನೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:30 pm, Wed, 19 October 22