ಮುಸ್ಲಿಂ ಮೀಸಲಾತಿ ವಿಚಾರ: ಸುರ್ಜೇವಾಲ ಟ್ವೀಟ್​ಗೆ ಸಿಎಂ ಬೊಮ್ಮಾಯಿ ತಿರುಗೇಟು

ಮುಸ್ಲಿಂ ಮೀಸಲಾತಿ 2ಬಿಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದ್ದ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ. ಕುರಿತಾಗಿ ರಣದೀಪ್ ಸಿಂಗ್ ಸುರ್ಜೇವಾಲ ಮಾಡಿದ್ದ ಟ್ವೀಟ್​​ಗೆ ಸಿಎಂ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

ಮುಸ್ಲಿಂ ಮೀಸಲಾತಿ ವಿಚಾರ: ಸುರ್ಜೇವಾಲ ಟ್ವೀಟ್​ಗೆ ಸಿಎಂ ಬೊಮ್ಮಾಯಿ ತಿರುಗೇಟು
ಸಿಎಂ ಬೊಮ್ಮಾಯಿ

Updated on: Apr 26, 2023 | 5:10 PM

ಬೆಂಗಳೂರು: ಮೀಸಲಾತಿ (Reservation) ವಿಚಾರವಾಗಿ ಬಿಜೆಪಿ ಮೋಸ ಮಾಡಿದೆ. ಡಬಲ್ ಇಂಜಿನ್ ಸರ್ಕಾರದಿಂದ ದ್ರೋಹವಾಗಿದೆ. ಲಿಂಗಾಯತರು, ಒಕ್ಕಲಿಗರಿಗೆ ಹಾಗೂ ಎಸ್​ಸಿ-ಎಸ್​ಡಿ ಸಮುದಾಯಕ್ಕೆ ಒಳ ಮೀಸಲಾತಿ ಹೆಚ್ಚಳ ಕುರಿತ ತನ್ನ ಆದೇಶವನ್ನು ಸಿಎಂ ಬೊಮ್ಮಾಯಿ ಸರ್ಕಾರವು ಅಫಿಡಿವಿಟ್​ ಸಲ್ಲಿಸಲು ವಿಫಲವಾದ ಕಾರಣ ನ್ಯಾಯಾಲಯವು ತಡೆ ನೀಡಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಟ್ವೀಟ್​ ಮಾಡಿದ್ದರು. ಜೊತೆಗೆ ಸಾಲು ಸಾಲು ಪ್ರಶ್ನೆಗಳನ್ನು ಕೇಳಿದ್ದರು. ಸದ್ಯ ಸಿಎಂ ಬೊಮ್ಮಾಯಿ ಸುರ್ಜೇವಾಲ ಪ್ರಶ್ರೆಗಳಿಗೆ ಟಾಂಗ್​ ನೀಡಿದ್ದಾರೆ. ಮೊದಲು ಈ ವಿಷಯವು ಸುಪ್ರೀಂ ಕೋರ್ಟ್​ನಲ್ಲಿದೆ. ಮತ್ತು ಸುರ್ಜೆವಾಲ ಅಥವಾ ಕಾಂಗ್ರೆಸ್ ಪಕ್ಷದ ಹೇಳಿಕೆಯು ನ್ಯಾಯಾಲಯವನ್ನು ಪೂರ್ವಾಗ್ರಹ ಪೀಡಿತಗೊಳಿಸುವ ಮತ್ತು ಆ ಮೂಲಕ ನ್ಯಾಯಕ್ಕೆ ಅಡ್ಡಿಪಡಿಸುವ ಪ್ರಯತ್ನವಾಗಿದೆ ಎಂದು ಕಿಡಿಕಾರಿದ್ದಾರೆ.

ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡುವ ಬಗ್ಗೆ ಸಂವಿಧಾನ ಎಂದಿಗೂ ಯೋಚಿಸಲಿಲ್ಲ. ಭಾರತದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರು 1 ನೇ ತಿದ್ದುಪಡಿಯನ್ನು ಪರಿಚಯಿಸುವ ಸಮಯದಲ್ಲಿ ಈ ಕುರಿತಾಗಿ ಭಾಷಣ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Muslim Reservation: ಮುಸ್ಲಿಮರ 2ಬಿ ಮೀಸಲಾತಿ ರದ್ದು ನಿರ್ಧಾರವನ್ನು ಸಮರ್ಥಿಸಿಕೊಂಡ ರಾಜ್ಯ ಸರ್ಕಾರ

ನ್ಯಾಯಾಲಯದ ಮುಂದೆ ಏಕೆ ಭರವಸೆ ನೀಡಲಾಯಿತು ಎಂಬ ನಿಮ್ಮ ಹೇಳಿಕೆ ಅಸ್ಪಷ್ಟವಾಗಿದೆ. ಮತ್ತು ನ್ಯಾಯಾಂಗ ಪ್ರಕ್ರಿಯೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ನಿಮ್ಮ ಪ್ರಬುದ್ಧತೆಯ ಕೊರತೆ ಎದ್ದು ಕಾಣುತ್ತಿದೆ ಎಂದು ವಾಗ್ದಾಳಿ ಮಾಡಿದ್ದಾರೆ.

ರಾಜ್ಯ ಕಾಂಗ್ರೆಸ್​ ಪಕ್ಷವು ಯಾವಾಗಲೂ ತುಷ್ಟೀಕರಣ ರಾಜಕೀಯದಲ್ಲಿ ನಿರತರಾಗಿದ್ದಾರೆ ಮತ್ತು ಸಾಮಾಜಿಕ ನ್ಯಾಯವನ್ನು ಒದಗಿಸುವ ಕುರಿತು ಎಂದಿಗೂ ಯೋಚಿಸಿಲ್ಲ. ವಾಸ್ತವವಾಗಿ, ಹಿರಿಯ ವಕೀಲರನ್ನು ನೇಮಿಸಿಕೊಳ್ಳುವ ಮೂಲಕ ಸರ್ಕಾರವು ತನ್ನ ನಿಲುವನ್ನು ಸಮರ್ಥವಾಗಿ ನಿಭಾಯಿಸಿದೆ.

ಇದನ್ನೂ ಓದಿ: Muslim Reservation: ಮುಸ್ಲಿಮರ 2ಬಿ ಮೀಸಲಾತಿ ರದ್ದು; ಕರ್ನಾಟಕ ಸರ್ಕಾರದ ಆದೇಶಕ್ಕೆ ತಡೆ ನೀಡಿದ ಸುಪ್ರೀಂಕೋರ್ಟ್

ಗೌರವಾನ್ವಿತ ಸುಪ್ರೀಂ ಕೋರ್ಟ್​ನಿಂದ ನ್ಯಾಯ ಪಡೆಯುವ ಭರವಸೆ ನಮಗಿದೆ. ಅಂತಹ ಹೇಳಿಕೆಗಳನ್ನು ನೀಡುವ ಮೂಲಕ ನೀವು ನ್ಯಾಯದ ಹರಿವನ್ನು ಕಲುಷಿತಗೊಳಿಸಲು ಪ್ರಯತ್ನಿಸಿದರೆ, ಅದು ತಿರಸ್ಕಾರಕ್ಕೆ ಸಮಾನವಾಗಿದೆ ಎಂದು ಸಿಎಂ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡುವುದು ಸಂವಿಧಾನ ಬಾಹಿರ

ಸುಪ್ರೀಂಕೋರ್ಟ್ ​ರಾಜ್ಯ ಸರ್ಕಾರದ 2ಬಿ ಮೀಸಲಾತಿ ರದ್ದು ಆದೇಶಕ್ಕೆ ತಡೆ ನೀಡಿತ್ತು. ಈ ಹಿನ್ನೆಲೆ ಸುಪ್ರೀಂಕೋರ್ಟ್​​ಗೆ ಸರ್ಕಾರ ಅಫಿಡವಿಟ್​​ ಸಲ್ಲಿಸಿದೆ. ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡುವುದು ಸಂವಿಧಾನ ಬಾಹಿರ. ಸಂವಿಧಾನದ 14, 15 ಮತ್ತು 16ನೇ ವಿಧಿ ಮತ್ತು ಸಾಮಾಜಿಕ ನ್ಯಾಯ ಮತ್ತು ಜಾತ್ಯತೀತತೆಯ ತತ್ವಗಳ ಆದೇಶಕ್ಕೆ ವಿರುದ್ಧವಾಗಿದೆ. ಈ ಹಿಂದೆ ಧರ್ಮದ ಆಧಾರದ ಮೇಲೆ ಮೀಸಲಾತಿಯನ್ನು ಒದಗಿಸಲಾಗಿದೆ ಎಂಬ ಕಾರಣಕ್ಕಾಗಿ ಅದನ್ನೆ ಶಾಶ್ವತವಾಗಿ ಮುಂದುವರೆಸಲು ಸಾಧ್ಯವಿಲ್ಲ ಎಂದು ಸರ್ಕಾರ ಅಫಿಡವಿಟ್​​ನಲ್ಲಿ ಹೇಳಿದೆ.

ರಾಜ್ಯದಲ್ಲಿ ಮೀಸಲಾತಿಗಳನ್ನು ನೀಡುವುದು ಮತ್ತು ಅದರ ಪರಿಷ್ಕೃರಣೆ ಸಂಪೂರ್ಣವಾಗಿ ನೆಲದ ವಾಸ್ತವಗಳ ಮೇಲೆ ಅವಲಂಬಿತವಾದ ಕಾರ್ಯವಾಗಿದೆ. ಯಾವ ಗುಂಪನ್ನು ಹಿಂದುಳಿದ ವರ್ಗ ಎಂದು ಪರಿಗಣಿಸಬೇಕು ಮತ್ತು ಅವರಿಗೆ ಯಾವ ಪ್ರಯೋಜನಗಳು ನೀಡಬೇಕು ಎನ್ನುವುದು ಪ್ರತಿ ರಾಜ್ಯದ ಸಾಂವಿಧಾನಿಕ ಕರ್ತವ್ಯವಾಗಿದೆ. ಮುಸ್ಲಿಮರನ್ನು ಹಿಂದುಳಿದವರೆಂದು ಸೇರಿಸಲು ಆಯೋಗಗಳು ಶಿಫಾರಸು ಮಾಡಿದರೂ ಕಾನೂನಿನ ಪ್ರಕಾರ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಸಮರ್ಥಿಸಿಕೊಂಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:10 pm, Wed, 26 April 23