ನಾಮಪತ್ರ ಹಿಂಪಡೆಯಲು ಜೆಡಿಎಸ್ ಅಭ್ಯರ್ಥಿಗೆ ಗೂಟದ ಕಾರು ಆಮಿಷ, ಆಡಿಯೋ ವೈರಲ್ ಬಗ್ಗೆ ಸೋಮಣ್ಣ ಹೇಳಿದ್ದಿಷ್ಟು
ನಾಮಪತ್ರ ಹಿಂಪಡೆಯಲು ಜೆಡಿಎಸ್ ಅಭ್ಯರ್ಥಿಗೆ ಗೂಟದ ಕಾರು ಆಮಿಷದ ಆಡಿಯೋ ವೈರಲ್ ಬಗ್ಗೆ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಸ್ಪಷ್ಟನೆ ಕೊಟ್ಟಿದ್ದಾರೆ. ಹಾಗಾದ್ರೆ, ಸೋಮಣ್ಣ ಆಡಿಯೋ ಬಗ್ಗೆ ಹೇಳಿದ್ದೇನು? ನೋಡಿ

ಮೈಸೂರು: ಸಚಿವ ವಿ ಸೋಮಣ್ಣ (V Somanna) ಅವರು ಬೆಂಗಳೂರು ನಗರ ಜಿಲ್ಲೆಯ ಗೋವಿಂದರಾಜ ನಗರ ಕ್ಷೇತ್ರ ಬಿಟ್ಟು ಈ ಬಾರಿಯ ವಿಧಾನಸಭೆ ಚುನಾವಣೆಗೆ ಚಾಮರಾಜನಗರ ಕ್ಷೇತ್ರಕ್ಕೆ ವಲಸೆ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಚಾಮರಾಮನಗರ ವಿಧಾನಸಭಾ ಕ್ಷೇತ್ರ ಜಿದ್ದಾಜಿದ್ದಿ ಹೋರಾಟದ ಅಖಾಡವಾಗಿ ಬದಲಾಗಿದೆ. ಇದರ ಮಧ್ಯೆ ಚಾಮರಾಜನಗರದ ಜೆಡಿಎಸ್ ಅಭ್ಯರ್ಥಿ ಆಲೂರು ಮಲ್ಲಿಕಾರ್ಜುನ ಸ್ವಾಮಿ ಅವರಿಗೆ ನಾಮಪತ್ರ ವಾಪಸ್ ಪಡೆದುಕೊಳ್ಳಲು ಸೋಮಣ್ಣ ಆಮಿಷವೊಡ್ಡಿದ್ದಾರೆ ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಇದರಿಂದ ಎಚ್ಚೆತ್ತ ಸೋಮಣ್ಣ ಅವರು ಆಡಿಯೋ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್‌ಗೆ ಮತ ಹಾಕಿ ಎಂದ ಹೆಚ್ಡಿ ಕುಮಾರಸ್ವಾಮಿ ಪರಮಾಪ್ತ: ವಿಡಿಯೋ ಬೆನ್ನಲ್ಲೇ ಫೋಟೋ ವೈರಲ್
ಈ ಬಗ್ಗೆ ಇಂದು(ಏಪ್ರಿಲ್ 26) ವರುಣಾ ಕ್ಷೇತ್ರದಲ್ಲಿ ಪ್ರಚಾರದ ಸಮಯದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ವಿ.ಸೋಮಣ್ಣ, ಆಡಿಯೋಗೂ ನನಗೂ ಸಂಬಂಧವಿಲ್ಲ. ನಾನು ಯಾವುದೋ ನಾಯಿ ನರಿಗಳಿಗೆ ಮಾತಿಗೆ ಮಾತನಾಡುವ ಪರಿಸ್ಥಿತಿಯಲ್ಲಿ ಇಲ್ಲ. ನಾನೇನೂ ದಡ್ಡ ಅಲ್ಲ. 45 ವರ್ಷ ರಾಜಕಾರಣ ಮಾಡಿದ್ದೇನೆ. ಚುನಾವಣಾ ಮುಗಿದ ಮೇಲೆ ಆಡಿಯೋ ಬಗ್ಗೆ ಮಾತನಾಡುತ್ತೇನೆ. ನನಗೂ ಅದಕ್ಕೂ ಸಂಬಂಧ ಇಲ್ಲ. ಯಾರೋ ಹೊಟ್ಟೆ ಪಾಡಿಗಾಗಿ ಮಾಡಿರಬಹುದು ಎಂದು ಸ್ಪಷ್ಟಪಡಿಸಿದರು. ಈ ಮೂಲಕ ಆಡಿಯೋ ಬಗ್ಗೆ ಇದ್ದ ಗೊಂದಲಗಳಿಗೆ ತೆರೆ ಎಳೆದರು.
ಆಡಿಯೋನಲ್ಲೇನಿದೆ?
ನಿನಗೆ ಗೂಟದ ಕಾರು ಕೋಡ್ತೀವಿ, ಮೊದಲು ನಾಮಪತ್ರ ವಾಪಸ್ ತಗೊ. ಆಮೇಲೆ ಎಲ್ಲ ಮಾತನಾಡೋಣ. ನಿನ್ನ ಬದುಕಿಗೆ ಏನು ಬೇಕೋ ಅದು ಮಾಡ್ತೇನೆ. ಹಿತ ಕಾಪಾಡ್ತೇನೆ ಎಂದು ಸೋಮಣ್ಣ ಹೇಳಿರುವುದು ಆಡಿಯೋದಲ್ಲಿದೆ. ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾದ ಸೋಮವಾರ ಇದು ನಡೆದಿದೆ ಎನ್ನಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಕ್ಷೇತ್ರದಲ್ಲಿ ಭಾರೀ ಚರ್ಚೆ
ಜೆಡಿಎಸ್ ಅಭ್ಯರ್ಥಿ ಮಲ್ಲಿಕಾರ್ಜುನ ಸ್ವಾಮಿ ಅವರು ಲಿಂಗಾಯತ ಸಮುದಾಯಕ್ಕೆ ಸೇರಿದ್ದಾರೆ. ಚಾಮರಾಜನಗರದಲ್ಲಿ ಲಿಂಗಾಯತ ಸಮುದಾಯದ ಮತಗಳು ಸಹ ಅಧಿಕವಾಗಿವೆ. ಹೀಗಾಗಿ ಮಲ್ಲಿಕಾರ್ಜು ಸ್ವಾಮಿ ಅವರು ಸಹ ಲಿಂಗಾಯತ ಮತಗಳನ್ನು ಕಸಿದುಕೊಳ್ಳಬಹುದು. ಹೀಗಾಗಿ ಸೋಮಣ್ಣ ಅವರು ಮಲ್ಲಿಕಾರ್ಜುನ ಅವರಿಗೆ ನಾಮಪತ್ರ ವಾಪಸ್ ಪಡೆದುಕೊಳ್ಳಲು ಒತ್ತಡ ಹಾಕಿದ್ದಾರೆ ಎನ್ನುವ ಚರ್ಚೆಗಳು ನಡೆಯುತ್ತಿವೆ.
ಇನ್ನು ಈ ಆಡಿಯೋ ತುಣುಕನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್, ಬಿಜೆಪಿಯ ಹರಕೆಯ ಕುರಿಯಾಗಿರುವ ಸೋಮಣ್ಣ ಎರಡೂ ಕಡೆ ಬಲಿಯಾಗುವ ಭಯದಲ್ಲಿ ವಿಲವಿಲ ಒದ್ದಾಡುತ್ತಿದ್ದಾರೆ. ಜೆಡಿಎಸ್ ಅಭ್ಯರ್ಥಿಯಲ್ಲಿ ಕೈ ಮುಗಿಯುತ್ತೇನೆ ನಾಮಪತ್ರ ವಾಪಸ್ ತಗೊ. ಗೂಟದ ಕಾರು ಕೊಡಿಸುತ್ತೇನೆ ಎಂದು ಬೇಡುತ್ತಾ ಆಪರೇಷನ್ ಕಮಲಕ್ಕೆ ಮುಂದಾಗಿದ್ದಾರೆ. ರಾಜ್ಯ ಬಿಜೆಪಿಗೆ ಅಡ್ಜೆಸ್ಟ್ಮೆಂಟ್ ರಾಜಕಾರಣವಿಲ್ಲದೆ ಗೆಲ್ಲುವ ಧೈರ್ಯ ಇಲ್ಲವೇಕೆ? ಎಂದು ಪ್ರಶ್ನಿಸಿದೆ. ಇದೀಗ ಸ್ವತಃ ಸೋಮಣ್ಣ ಆಡಿಯೋ ಬಗ್ಗೆ ಸ್ಪಷ್ಟನೆ ನೀಡುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:17 pm, Wed, 26 April 23




