AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hindu Mythology Facts: ಶ್ರೀ ಕೃಷ್ಣನಿಗೆ 16 ಸಾವಿರ ಪತ್ನಿಯರು; ಇದರ ಹಿಂದಿನ ಸತ್ಯಾಂಶವೇನು?

Hindu Mythology Facts: ಶ್ರೀ ಕೃಷ್ಣನಿಗೆ 16 ಸಾವಿರ ಪತ್ನಿಯರು; ಇದರ ಹಿಂದಿನ ಸತ್ಯಾಂಶವೇನು?

ಅಕ್ಷತಾ ವರ್ಕಾಡಿ
|

Updated on:Mar 08, 2026 | 10:53 AM

Share

ಶ್ರೀ ಕೃಷ್ಣನಿಗೆ 16 ಸಾವಿರ ಪತ್ನಿಯರು ಎಂಬುದು ವಾಡಿಕೆಯ ಮಾತು. ಆದರೆ ಧರ್ಮಶಾಸ್ತ್ರಗಳ ಪ್ರಕಾರ, ನರಕಾಸುರನು ಬಂಧಿಸಿದ್ದ 16 ಸಾವಿರ ಮಹಿಳೆಯರನ್ನು ಶ್ರೀ ಕೃಷ್ಣನು ರಕ್ಷಿಸಿದನು. ಸಮಾಜದಲ್ಲಿ ಅವರ ಗೌರವ ಕಾಪಾಡಲು ಕೃಷ್ಣನು ತನ್ನ ಹೆಸರು ಹೇಳಿಕೊಳ್ಳಲು ಸೂಚಿಸಿದನೇ ಹೊರತು, ಅವರನ್ನು ವಿವಾಹವಾಗಿದ್ದಕ್ಕೆ ಯಾವುದೇ ಪುರಾವೆಗಳಿಲ್ಲ. ಕೃಷ್ಣ ಕೇವಲ ಅವರಿಗೆ ಆಶ್ರಯ ಮತ್ತು ರಕ್ಷಣೆ ನೀಡಿದನು ಎಂದು ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ.

ಶ್ರೀ ಕೃಷ್ಣ ಪರಮಾತ್ಮನಿಗೆ 16 ಸಾವಿರ ಗೋಪಿಕಾ ಸ್ತ್ರೀಯರು ಇದ್ದರು ಎಂಬ ಮಾತು ಸಾಮಾನ್ಯವಾಗಿ ಕೇಳಿಬರುತ್ತದೆ. ಇದು ನಿಜವೇ ಎಂಬ ಪ್ರಶ್ನೆ ಅನೇಕರಲ್ಲಿ ಮೂಡುವುದು ಸಹಜ. ಈ ಕುರಿತು ಧರ್ಮಶಾಸ್ತ್ರಗಳು ಮತ್ತು ಪುರಾಣಗಳು ಏನು ಹೇಳುತ್ತವೆ ಎಂಬುದರ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ.

ಗುರೂಜಿಯವರು ಹೇಳುವಂತೆ, ನಾಲ್ಕು ಯುಗಗಳಲ್ಲಿ ದೈವ ಸಂಭೂತರು ಹಾಗೂ ಪರಿಪೂರ್ಣ ವ್ಯಕ್ತಿತ್ವಗಳಾಗಿ ರಾಮ, ಕೃಷ್ಣರಂತಹ ಹೆಸರುಗಳನ್ನು ಸ್ಮರಿಸಲಾಗುತ್ತದೆ. ಶ್ರೀ ಕೃಷ್ಣ ಭಗವಾನನಿಗೆ 16 ಸಾವಿರ ಗೋಪಿಕಾ ಸ್ತ್ರೀಯರು ಇದ್ದುದು ನಿಜವೇ ಎಂಬ ಪ್ರಶ್ನೆ ಕೆಲವೊಮ್ಮೆ ವ್ಯಂಗ್ಯಕ್ಕೂ ಕಾರಣವಾಗುತ್ತದೆ. ಆದರೆ ಭಗವಂತನ ರೂಪ, ಅನುಗ್ರಹ ಮತ್ತು ಲೀಲೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಈ ಮಾತಿನ ಸತ್ಯಾಸತ್ಯತೆ ತಿಳಿದುಬರುತ್ತದೆ. ಧರ್ಮಶಾಸ್ತ್ರಗಳಲ್ಲಿ ಇದರ ಉಲ್ಲೇಖ ಏನು ಎಂಬುದನ್ನು ತಿಳಿದುಕೊಳ್ಳುವುದರಿಂದ ಶುಭವಾಗುತ್ತದೆ.

ವಾಸ್ತವವಾಗಿ, ಶ್ರೀ ಕೃಷ್ಣ ಭಗವಾನರು ನರಕಾಸುರನನ್ನು ಸಂಹಾರ ಮಾಡಿದಾಗ, ಆತನ ಸೆರೆಯಲ್ಲಿದ್ದ 16 ಸಾವಿರ ಗೋಪಿಕಾ ಸ್ತ್ರೀಯರು ಬಂಧಮುಕ್ತರಾದರು. ನರಕಾಸುರನು ಅವರನ್ನು ದೇಶದ ನಾನಾ ಮೂಲೆಗಳಿಂದ ಸೆರೆಹಿಡಿದು ಬಂಧನದಲ್ಲಿ ಇಟ್ಟಿದ್ದನು. ನರಕಾಸುರನಿಂದ ಬಂಧಮುಕ್ತರಾದಾಗ, ಆ ಸ್ತ್ರೀಯರಿಗೆ ಸಮಾಜದಲ್ಲಿ ತಮ್ಮ ರಕ್ಷಕರು ಯಾರು, ತಮ್ಮ ಜೀವನಕ್ಕೆ ಮುಂದಿನ ಆಸರೆ ಯಾರು ಎಂಬ ಪ್ರಶ್ನೆ ಎದುರಾಯಿತು. ಅವರಿಗೆ ಒಂದಷ್ಟು ಅವಮಾನ, ಜೀವನದ ಬಗ್ಗೆ ಭಯ ಮತ್ತು ಅಪಮಾನಗಳನ್ನು ಎದುರಿಸಬೇಕಾದ ಪರಿಸ್ಥಿತಿ ಉಂಟಾಯಿತು. ಯಾರದ್ದೋ ಮನೆಯಲ್ಲಿ ಇದ್ದು ಹೊರಗೆ ಬಂದಾಗ ಸಮಾಜದಲ್ಲಿ ಏನೇನೋ ಮಾತುಗಳು ಕೇಳಿಬರುವಂತೆ, ಆ ಯುಗದಲ್ಲೂ ಇಂತಹ ಸವಾಲುಗಳಿದ್ದವು.

ಇದನ್ನೂ ಓದಿ: ಈ ಒಂದು ವಸ್ತುವನ್ನು ಎಂದಿಗೂ ಯಾರಿಗೂ ಉಡುಗೊರೆಯಾಗಿ ನೀಡಬೇಡಿ; ಅಪಾಯ ತಪ್ಪಿದ್ದಲ್ಲ!

ಈ ಸಂದರ್ಭದಲ್ಲಿ, ಸಾಕ್ಷಾತ್ ಶ್ರೀ ಕೃಷ್ಣ ಭಗವಾನರು ಆ ಸ್ತ್ರೀಯರ ಜವಾಬ್ದಾರಿಯನ್ನು ಹೊತ್ತುಕೊಂಡರು. ಅವರು ಆ ಸ್ತ್ರೀಯರನ್ನು ರಕ್ಷಣೆ ಮಾಡಿದರು. ಸಮಾಜದ ಕೆಟ್ಟ ದೃಷ್ಟಿ, ಅಪಮಾನ ಮತ್ತು ಅವಮಾನಕ್ಕೆ ಒಳಗಾಗಬಾರದೆಂದು ಆ 16 ಸಾವಿರ ಗೋಪಿಕಾ ಸ್ತ್ರೀಯರಿಗೆ, “ನೀವು ನನ್ನ ಹೆಸರು ಹೇಳಿಕೊಳ್ಳಿ” ಎಂದು ಧೈರ್ಯ ತುಂಬಿದರು. ಇದರರ್ಥ, ಭಗವಂತನು ಅವರಿಗೆ ಆಶ್ರಯ, ರಕ್ಷಣೆ ಮತ್ತು ಗೌರವ ನೀಡಿದನೇ ಹೊರತು, ಅವರನ್ನು ವಿವಾಹವಾಗಿದ್ದಕ್ಕೆ ಯಾವುದೇ ಪುರಾವೆಗಳು ಧರ್ಮಶಾಸ್ತ್ರಗಳಲ್ಲಿ ಕಂಡುಬರುವುದಿಲ್ಲ ಎಂದು ಗುರೂಜಿ ತಿಳಿಸಿದ್ದಾರೆ.

ರಾಜನಾದವನು ತನ್ನ ಪ್ರಜೆಗಳನ್ನು ಮಕ್ಕಳಂತೆ ನೋಡಿಕೊಳ್ಳುತ್ತಾನೆ ಎಂಬಂತೆ, ಶ್ರೀ ಕೃಷ್ಣನು ಪ್ರಜಾಪಾಲಕನಾಗಿ, ರಾಜನಾಗಿ ಮತ್ತು ಭಗವಾನನಾಗಿ ಆ ಮಹಿಳೆಯರಿಗೆ ಆಸರೆ ಕಲ್ಪಿಸಿ, ಧೈರ್ಯ ತುಂಬಿದನು. ಅವರು ಅನಾಥ ರಕ್ಷಕರಾಗಿ, ದೀನಬಂಧುವಾಗಿ, ದೀನೋದ್ಧಾರಕರಾಗಿ ಕಾರ್ಯನಿರ್ವಹಿಸಿದರು. ಈಗಲೂ ಸಹ, ಭಕ್ತಿಯಿಂದ ಶ್ರೀ ಕೃಷ್ಣ ಭಗವಾನರನ್ನು ನೆನೆಸಿಕೊಂಡರೆ ನಮ್ಮ ಕಷ್ಟಗಳಿಗೆ ಪರಿಹಾರ ಅಥವಾ ಅನುಗ್ರಹ ಸಿಗುತ್ತದೆ ಎಂದು ಹೇಳಲಾಗುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Mar 08, 2026 10:51 AM
Follow Us