ಮೈಸೂರು: ಫೆಬ್ರವರಿ 14 ರಂದು ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡುವೆ. ಫೆಬ್ರವರಿ 14ರಂದೇ ಮುಂದಿನ ರಾಜಕೀಯ ನಿರ್ಧಾರ ಪ್ರಕಟ ಮಾಡುವೆ. ನಾನು ಹೊಸ ಪಕ್ಷ ಕಟ್ಟುವುದಿಲ್ಲ. ಜನಾಭಿಪ್ರಾಯ ಸಂಗ್ರಹಿಸಿ ಪಕ್ಷ ಆಯ್ಕೆ ಮಾಡಿಕೊಳ್ಳುವೆ ಎಂದು ಮೈಸೂರಿನಲ್ಲಿ ಎಂಎಲ್‌ಸಿ ಸಿ.ಎಂ. ಇಬ್ರಾಹಿಂ ಬುಧವಾರ ಹೇಳಿಕೆ ನೀಡಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್‌ನ ಅಧ್ಯಾಯ ಮುಗಿದು ಹೋಗಿದೆ. ಯಾರಿಗೆ ಏನು ಬೇಕೋ ಅದನ್ನು ತಗೊಂಡು ಹೋಗ್ತಿದ್ದಾರೆ. ಮಂಚ, ಬೆಡ್, ದಿಂಬು ತೆಗೆದುಕೊಂಡು ಹೋಗುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರೋದು ಕನಸಿನ ಮಾತು ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್‌ನವರು ಮೂರನೇ ಸ್ಥಾನದಲ್ಲಿ ಕೂತಿರುತ್ತಾರೆ. ಸಿದ್ದರಾಮಯ್ಯ ಕಾಂಗ್ರೆಸ್‌ನಲ್ಲಿ ಅಸಹಾಯಕರಾಗುತ್ತಿದ್ದಾರೆ. ನಾನಂತೂ ಹೋರಾಟ ಶುರು ಮಾಡಿದ್ದೇನೆ. ಫೆಬ್ರವರಿ 14 ಲವರ್ಸ್ ಡೇ, ಅಂದೇ MLC ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಅಂದೇ ಯಾವ ಪಕ್ಷದ ಮೇಲೆ ಲವ್ ಅಂತಾ ಹೇಳುತ್ತೇನೆ ಎಂದು ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ನನ್ನದೇ ಸ್ಥಿತಿ ಬರುತ್ತೆ. ನನ್ನ ಜೊತೆ ಸಿದ್ದರಾಮಯ್ಯ ಮಾತಾಡಿಲ್ಲ. ಅವರನ್ನ ಬಾದಾಮಿಗೆ ಹೊತ್ತುಕೊಂಡು ಹೋದವನು ನಾನು. ಎಲ್ಲದಕ್ಕೂ ಕಾಲವೇ ಉತ್ತರ ನೀಡುತ್ತೆ ಎಂದು ಸಿ.ಎಂ. ಇಬ್ರಾಹಿಂ ವಾಗ್ದಾಳಿ ನಡೆಸಿದ್ದಾರೆ.
ಎಂಎಲ್‌ಸಿ ಸಿ.ಎಂ. ಇಬ್ರಾಹಿಂ ಇಂದು ಮೈಸೂರಿಗೆ ಭೇಟಿ ನೀಡಿದ್ದಾರೆ. ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ಭೇಟಿ ಮಾಡಿದ್ದಾರೆ. ಇಬ್ರಾಹಿಂ ಸ್ವಾಗತಕ್ಕೆ ಮೈಸೂರಿನಲ್ಲಿ ಅದ್ಧೂರಿ ಸಿದ್ಧತೆ ನಡೆಸಲಾಗಿದೆ. ಅಬ್ದುಲ್ ಖಾದರ್ ಶಾಹಿದ್‌ನಿಂದ ಅದ್ಧೂರಿ ಸಿದ್ಧತೆ ಮಾಡಲಾಗಿದೆ. ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದ ಆರೋಪದಲ್ಲಿ ಕಾಂಗ್ರೆಸ್‌ನಿಂದ ಅಮಾನತುಗೊಂಡಿರುವ ಶಾಹಿದ್ ಇದೀಗ ಇಬ್ರಾಹಿಂ ಜೊತೆ ಕೈಜೋಡಿಸಿದ್ದಾರೆ. ಈ ಮಧ್ಯೆ ಸಿ.ಎಂ. ಇಬ್ರಾಹಿಂ ನಡೆ ಕುತೂಹಲ ಮೂಡಿಸಿದೆ.
ಸಿಎಂ ಇಬ್ರಾಹಿಂ ಬಂದ ಮೇಲೆ ಅವರಿಗೆ ಎಂಎಲ್ಎ ಟಿಕೆಟ್ ಕೊಟ್ಟು ಎಂಎಲ್‌ಸಿ ಮಾಡಿದ್ದೆವು: ಯತೀಂದ್ರ ಸಿದ್ದರಾಮಯ್ಯ
ಸಿದ್ದರಾಮಯ್ಯ ವಿರುದ್ಧ ಎಂಎಲ್‌ಸಿ ಎಚ್. ವಿಶ್ವನಾಥ್ ವಾಗ್ದಾಳಿ ವಿಚಾರವಾಗಿ ಶಾಸಕ ಡಾ ಯತೀಂದ್ರ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ. ವಿಶ್ವನಾಥ್ ಅವರು ರಾಜಕೀಯಕ್ಕಾಗಿ ಅರೋಪ ಮಾಡುತ್ತಾರೆ. ಅದರಲ್ಲಿ ಯಾವುದೇ ಹುರುಳಿಲ್ಲ. ಅವರ ಪಕ್ಷದಲ್ಲಿ ಅವರಿಗೆ ಯಾವುದೇ ಮಾನ್ಯತೆ ಇಲ್ಲ. ಸಿಎಂ ಇಬ್ರಾಹಿಂ ಬಂದ ಮೇಲೆ ಅವರಿಗೆ ಎಂಎಲ್ಎ ಟಿಕೆಟ್ ಕೊಟ್ಟು ಎಂಎಲ್‌ಸಿ ಮಾಡಿದ್ದೆವು. ಆದರೆ ಈಗ ಅವರಿಗೆ ಯಾವುದೇ ಅಧಿಕಾರ ಇಲ್ಲ ಅಂತ ಪಕ್ಷ ಬಿಟ್ಟು ಹೋಗಿದ್ದಾರೆ. ಇದರಲ್ಲಿ ಪಕ್ಷದ ಯಾವ ತಪ್ಪು ಇಲ್ಲ. ಚುನಾವಣೆ ಹತ್ತಿರ ಬರಲಿ ಬಿಜೆಪಿಯಿಂದ ಎಷ್ಟು ಜನ ವಾಪಸ್ಸು ಬರ್ತಾರೆ ಅಂತ ಗೊತ್ತಾಗುತ್ತೆ. ನಾವು ಭ್ರಷ್ಟಾಚಾರದ ಹಣದಿಂದ ಶಾಸಕರನ್ನು ಖರೀದಿ ಮಾಡಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ರೀತಿ ಸರ್ಕಾರ ಬೀಳಿಸುವ ಕೆಲಸ ಮಾಡಲ್ಲ. ಆ ರೀತಿ ಮಾಡಬೇಕು ಅಂದರೆ ಕೋಟಿ ಕೊಟ್ಟು ಖರೀದಿ ಮಾಡಬೇಕು. ಚುನಾವಣೆ ಹತ್ತಿರ ಬಂದಾಗ ಅವರೇ ನಮ್ಮ ಬಳಿ ಬರುತ್ತಾರೆ ಎಂದು ಮೈಸೂರನಲ್ಲಿ ಶಾಸಕ ಡಾ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಸಿಎಂ ಇಬ್ರಾಹಿಂ ನಮ್ಮ ನಾಯಕರು, ಅವರು ಪಕ್ಷ ಬಿಡಬಾರದು; ಕಾಂಗ್ರೆಸ್ ಶಾಸಕ ಎನ್ಎ ಹ್ಯಾರಿಸ್
ಇದನ್ನೂ ಓದಿ: CM Ibrahim: ಸಿಎಂ ಇಬ್ರಾಹಿಂ, ಎಸ್ಆರ್ ಪಾಟೀಲ ಭೇಟಿ ಅಂತ್ಯ: ವಿವರ ನೀಡದ ಪಾಟೀಲ, ಫಲಪ್ರದ ಎಂದ ಇಬ್ರಾಹಿಂ
Published On - 4:09 pm, Wed, 2 February 22