ಪಕ್ಷದೊಳಗೆ ಸಿಎಂ ಕುರ್ಚಿ ಅಲುಗಾಡಿಸುವ ಕೆಲಸ ಆಗುತ್ತಿದೆ: ಡಿಕೆ ಶಿವಕುಮಾರ್ ಹೇಳಿಕೆಗೆ ಅಶ್ವತ್ಥ ನಾರಾಯಣ ತಿರುಗೇಟು

| Updated By: Rakesh Nayak Manchi

Updated on: Jul 24, 2023 | 5:54 PM

ಸಿಂಗಾಪುರದಲ್ಲಿ ಕುಳಿತುಕೊಂಡು ಕರ್ನಾಟಕ ಸರ್ಕಾರದ ವಿರುದ್ಧ ಷಡ್ಯಂತರ ಮಾಡಲಾಗುತ್ತಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದರು. ಈ ಹೇಳಿಕೆಗೆ ಬಿಜೆಪಿ ನಾಯಕರು ತಿರುಗೇಟು ನೀಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದೊಳಗೇ ಸಿಎಂ ಕುರ್ಚಿ ಅಲುಗಾಡಿಸುವ ಕೆಲಸಗಳು ಆಗುತ್ತಿವೆ ಎಂದು ಸಿಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ.

ಪಕ್ಷದೊಳಗೆ ಸಿಎಂ ಕುರ್ಚಿ ಅಲುಗಾಡಿಸುವ ಕೆಲಸ ಆಗುತ್ತಿದೆ: ಡಿಕೆ ಶಿವಕುಮಾರ್ ಹೇಳಿಕೆಗೆ ಅಶ್ವತ್ಥ ನಾರಾಯಣ ತಿರುಗೇಟು
ಡಾ.ಸಿಎನ್ ಅಶ್ವತ್ಥ ನಾರಾಯಣ ಮತ್ತು ಡಿಕೆ ಶಿವಕುಮಾರ್
Follow us on

ಬೆಂಗಳೂರು, ಜುಲೈ 24: ಸಿಂಗಾಪುರದಲ್ಲಿ ಕುಳಿತುಕೊಂಡು ಕರ್ನಾಟಕ ಸರ್ಕಾರದ ವಿರುದ್ಧ ತಂತ್ರ ರೂಪಿಸುತ್ತಿದ್ದಾರೆ ಎಂಬ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು ಹೇಳಿಕೆಗೆ ತಿರುಗೇಟು ನೀಡಿದ ಮಾಜಿ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ (Dr .C N Ashwath Narayan), ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಹಲವು ದೃಷ್ಟಿಕೋನ ಇದೆ. ಸರ್ಕಾರದಲ್ಲಿ ಏನೂ ಸರಿಯಿಲ್ಲ ಅನ್ನೋದು ಗೊತ್ತಾಗುತ್ತಿದೆ. ಒಳಗಿನಿಂದಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡಿಸುವ ಕೆಲಸಗಳು ಆಗುತ್ತಿವೆ ಎಂದರು.

ಕಾಂಗ್ರೆಸ್​ ನಾಯಕರ ಸಹಕಾರ ಇಲ್ಲದೆ ಏನೂ ಆಗುವುದಿಲ್ಲ. ಬಹಳ ದೊಡ್ಡವರೇ ಇದಕ್ಕೆ ಸಹಕಾರ ಕೊಟ್ಟಂತೆ ಕಾಣುತ್ತಿದೆ ಎಂದು ಹೇಳಿದ ಅಶ್ವತ್ಥ ನಾರಾಯಣ, ನನ್ನನ್ನು ಸಿಎಂ‌ ಮಾಡಲಿಲ್ಲ ಅಂದರೆ ಈ ಸರ್ಕಾರ ಉಳಿಸಲ್ಲ ಅಂತ ಡಿ.ಕೆ. ಶಿವಕುಮಾರ್ ಪರೋಕ್ಷವಾಗಿ ಎಚ್ಚರಿಕೆ ಕೊಟ್ಟಂತಿದೆ. ಕುಮಾರಸ್ವಾಮಿ ಅವರು ಯಾವ ರೀತಿ ಸರ್ಕಾರ ಬೀಳಿಸುತ್ತಾರೆ ಅಂತನೂ ಶಿ‌ವಕುಮಾರ್ ಹೇಳಬೇಕು ಎಂದರು.

ಇದನ್ನೂ ಓದಿ: ಕಾಂಗ್ರೆಸ್‌ ಸರ್ಕಾರ ಬೀಳಿಸಲು ಸಿಂಗಾಪುರದಲ್ಲಿ ಕಾರ್ಯತಂತ್ರ, ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ

ಕಾಂಗ್ರೆಸ್​​ನವರೇ ಈ ಸರ್ಕಾರ ಬಹಳ ದಿನ ಇರುವುದಿಲ್ಲ ಅಂತಿದ್ದರು. ಯಾಕೋ ಕಾಂಗ್ರೆಸ್ಸಿಗರ ಹೇಳಿಕೆ ನಿಜವಾಗುವ ಹಾಗೆ ಕಾಣುತ್ತಿದೆ. ಸಿಂಗಾಪುರದಲ್ಲಿ ಹೆಚ್​.ಡಿ.ಕುಮಾರಸ್ವಾಮು ಏನೇನು ಮಾಡುತ್ತಿದ್ದಾರೆ, ಯಾವ ರೀತಿ ಸರ್ಕಾರ ಬೀಳಿಸುತ್ತಾರೆ ಅಂತಾ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಲಿ. ಅವರ ಸರ್ಕಾರವೇ ಇದೆ, ಇಂಟೆಲಿಜೆನ್ಸ್ ಇದೆ ಎಂದರು.

ಕಾಂಗ್ರೆಸ್ ಎಂಎಲ್​ಸಿ ಬಿಕೆ ಹರಿಪ್ರಸಾದ್ ಅವರು ಸಿಎಂ ಆಯ್ಕೆ ಮಾಡುವುದು ಗೊತ್ತು, ಇಳಿಸೋದು ಗೊತ್ತು ಅಂತಾರೆ. ಡಿ.ಕೆ.ಶಿವಕುಮಾರ್​ ಸಿಎಂ ಆಗುವುದನ್ನು ಈ ಮೂಲಕ ವ್ಯಕ್ತಪಡಿಸುತ್ತಿದ್ದಾರೆ ಅಷ್ಟೆ. ಆದರೆ ಬಿಜೆಪಿ ಈ ಸರ್ಕಾರ ಬೀಳಿಸುವ ಯಾವುದೇ ಪ್ರಯತ್ನ ಮಾಡುತ್ತಿಲ್ಲ. ನಾವು ಇಂತಹ ಆಲೋಚನೆ ಇಟ್ಟುಕೊಂಡಿಲ್ಲ. ನಾವು ರಾಜ್ಯದ ಜನರ ಆಶೀರ್ವಾದ ಪಡೆದೇ ಅಧಿಕಾರಕ್ಕೆ ಬರುತ್ತೇವೆ ಎಂದರು.

ಹೋಗುವವರೆಲ್ಲರೂ ಹೋಗಿ ಎನ್ನುತ್ತಿರುವ ಡಿಕೆ ಶಿವಕುಮಾರ್

ತಮ್ಮ ಹೇಳಿಕೆಗೆ ಮತ್ತೆ ಸ್ಪಷ್ಟನೆ ನೀಡಿದ ಡಿಕೆ ಶಿವಕುಮಾರ್, ಹೋಗುವವರೆಲ್ಲರೂ ಹೋಗಿ ಅಲ್ಲೇ ಚರ್ಚೆ ಮಾಡಲಿ, ಪಕ್ಷದಲ್ಲಿ ಇರುವವರೆಲ್ಲಾ ಇಲ್ಲೇ ಚರ್ಚೆ ಮಾಡಲಿ ಎಂದು ಹೇಳಿ ಮತ್ತೆ ಕುತೂಹಲ ಕೆರಳಿಸಿದ್ದಾರೆ. ಎಲ್ಲೆಲ್ಲಿ ಏನೇನಾಗುತ್ತಿದೆ ಅಂತಾ ನಮಗೆ ಮಾಹಿತಿ ಇದೆ. ಎಲ್ಲವೂ ಚರ್ಚೆ ಆಗಬೇಕಲ್ವಾ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:51 pm, Mon, 24 July 23