ಗ್ಯಾರಂಟಿ ಯೋಜನೆಗಳಿಗೆ ಕಾಂಗ್ರೆಸ್​ ಷರತ್ತು: ಅಸಮಾಧಾನ ಹೊರಹಾಕಿದ ಸ್ವಪಕ್ಷದ ಶಾಸಕ ಶಾಮನೂರು ಶಿವಶಂಕರಪ್ಪ

|

Updated on: Jun 14, 2023 | 4:51 PM

ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳಬಾರದು. ಚುನಾವಣೆ ವೇಳೆ ಕೊಟ್ಟ ಮಾತಿನಂತೆ ಸರ್ಕಾರ ನಡೆದುಕೊಳ್ಳಬೇಕು ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಅವರು ಅಸಮಾಧಾನ ಹೊರಹಾಕಿದ್ದಾರೆ.

ದಾವಣಗೆರೆ: ರಾಜ್ಯ ಕಾಂಗ್ರೆಸ್​ (Congress) ಸರ್ಕಾರವು ಚುನಾವಣಾ ವೇಳೆ ಘೋಷಿಸಿದಂತೆ ಐದು ಗ್ಯಾರಂಟಿಗಳನ್ನು ಜಾರಿ ಮಾಡಿದೆ. ಜೊತೆಗೆ ಪ್ರತಿ ಗ್ಯಾರಂಟಿಗಳಿಗೂ ಕೆಲ ಷರತ್ತುಗಳನ್ನು ಸಹ ಅನ್ವಯ ಮಾಡಿದೆ. ಇದಕ್ಕೆ ಬಿಜೆಪಿ, ಜೆಡಿಎಸ್​​ ಪಕ್ಷಗಳು ಸೇರಿದಂತೆ ಜನರು ಸಹ ವಿರೋಧ ವ್ಯಕ್ತಪಡಿಸಿದ್ದರು. ಸದ್ಯ ಸ್ವಪಕ್ಷದ ಶಾಸಕ ಶಾಮನೂರು ಶಿವಶಂಕರಪ್ಪ (Shamanur Shivashankarappa) ಅವರು ಗ್ಯಾರಂಟಿ ಯೋಜನೆಗಳಿಗೆ ಹಾಕಿರುವುದಕ್ಕೆ ಷರತ್ತುಗಳ ಕುರಿತು ಅಸಮಾಧಾನ ಹೊರಹಾಕಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳಬಾರದು. ಚುನಾವಣೆ ವೇಳೆ ಕೊಟ್ಟ ಮಾತಿನಂತೆ ಸರ್ಕಾರ ನಡೆದುಕೊಳ್ಳಬೇಕು ಎಂದಿದ್ದಾರೆ.

ಈ ಹಿಂದೆ ಇದ್ದ ವಿದ್ಯುತ್​ ದರವನ್ನೇ ಸರ್ಕಾರ ಮುಂದುವರಿಸಬೇಕು 

ವಿದ್ಯುತ್ ದರ ಏರಿಕೆಯಿಂದ ಕೈಗಾರಿಕೆಗಳಿಗೆ ಹೊಡೆತ ಬೀಳುತ್ತೆ. ವಿದ್ಯುತ್ ದರ ಏರಿಕೆ ಬಗ್ಗೆ ಬಿಜೆಪಿಯವರು ನಾವು ಮಾಡಿಲ್ಲ ಅಂತಾರೆ. ಕಾಂಗ್ರೆಸ್ ಸರ್ಕಾರ ಕೂಡ ನಾವು ಮಾಡಿಲ್ಲ ಎನ್ನುತ್ತದೆ. ಬಿಜೆಪಿ ಅವಧಿಯಲ್ಲೇ ವಿದ್ಯುತ್​ ದರ ಏರಿಕೆ ಬಗ್ಗೆ ಕೆಆರ್​​​​ಇಸಿ ಪ್ರಸ್ತಾಪ ಮಾಡಿದೆ. ಆದರೆ ಕಾಂಗ್ರೆಸ್ ಸರ್ಕಾರ ಇದಕ್ಕೆ ಒಪ್ಪಿಗೆ ನೀಡಬಾರದು. ಈ ಹಿಂದೆ ಇದ್ದ ವಿದ್ಯುತ್​ ದರವನ್ನೇ ಸರ್ಕಾರ ಮುಂದುವರಿಸಬೇಕು ಎಂದು ಹೇಳಿದರು.

ಇದನ್ನೂ ಓದಿ: ರೆಸಾರ್ಟ್​ನಲ್ಲಿ ಶಾಮನೂರು ಶಿವಶಂಕರಪ್ಪ ಭೇಟಿಯಾಗಿದ್ಯಾಕೆ? ಕಾರಣ ಕೊಟ್ಟ ಬೊಮ್ಮಾಯಿ

ಕೆಲವೊಂದು ವಿಚಾರಗಳನ್ನು ಬಹಿರಂಗವಾಗಿ ಹೇಳಲು ಆಗುವುದಿಲ್ಲ: ಶಾಮನೂರು ಶಿವಶಂಕರಪ್ಪ

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ನಾವು ಮತ್ತು ಬಸವರಾಜ ಬೊಮ್ಮಾಯಿಯವರು ಬೀಗರು. ವಿಧಾನಸಭಾ ಚುನಾವಣೆ ಆದ ಬಳಿಕ ನಾವು ಭೇಟಿಯಾಗಿರಲಿಲ್ಲ. ನಾವಿಬ್ಬರೂ ಚುನಾವಣೆಯಲ್ಲಿ ಗೆದ್ದಿದ್ದೇವೆ, ಹೀಗಾಗಿ ಭೇಟಿಯಾಗಿದ್ದೆವು. ಬೊಮ್ಮಾಯಿ ನನಗೆ ಹಾರ ಹಾಕಿದ್ರು, ನಾನು ಶಾಲು ಹೊದಿಸಿ ಸನ್ಮಾನಿಸಿದೆ. ನಮ್ಮ ಸಂಬಂಧ ಹೀಗೆ ಮುಂದುವರಿಯಲಿ. ಕೆಲವೊಂದು ವಿಚಾರಗಳನ್ನು ಬಹಿರಂಗವಾಗಿ ಹೇಳಲು ಆಗುವುದಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ಉಚಿತ ಅಕ್ಕಿ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ: ಸಿದ್ದರಾಮಯ್ಯ

ನಿವೃತ ಐಎಎಸ್ ಅಧಿಕಾರಿ ಎಸ್​ಎಂ ಜಾಮದಾರ್​ರನ್ನು ಹುಚ್ಚಾ ಎಂದ ಶಾಮನೂರು ಶಿವಶಂಕರಪ್ಪ

ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಅಖಿಲ ಭಾರತ ವೀರಶೈವ ಮಹಾಸಭೆಯ ಪದಾಧಿಕಾರಿಗಳ ಸಭೆ ಕರೆದು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಸಾಮಾಜಿಕ ಸಮೀಕ್ಷೆ ಸಾಧಕ ಬಾಧಕಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಜಾಗತಿಕ ಲಿಂಗಾಯತ ಮಹಾಸಭಾ ಎಲ್ಲಿದೆ. ಜಾಮದಾರ್ ಒಬ್ಬ ಇದ್ದಾನೆ ಅವನ ಹುಚ್ಚಾಸ್ಪತ್ರೆಗೆ ಕಳಿಸಬೇಕು. ಇಲ್ಲಾ ಅಂದ್ರೆ ನಾವೇ ಕಳಿಸುತ್ತೇವೆ. ಪ್ರತ್ಯೇಕ ಧರ್ಮದ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:50 pm, Wed, 14 June 23