ಬೆಂಗಳೂರು: ಮತಾಂತರ ನಿಷೇಧ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯಲು ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಸರ್ಕಾರದ ಈ ತೀರ್ಮಾನ ಸದ್ಯ ಬಿಜೆಪಿ (BJp) ನಾಯಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ನಗರದಲ್ಲಿ ಬಿಜೆಪಿ ಮಾಜಿ ಸಚಿವ ಡಾ.ಅಶ್ವತ್ಥ್ (C. N. Ashwath Narayan) ಮಾತನಾಡಿ, ರಾಜ್ಯ ಸಚಿವ ಸಂಪುಟದ ನಿರ್ಧಾರವನ್ನು ಬಿಜೆಪಿ ಖಂಡಿಸುತ್ತದೆ. ಸಮಾಜದಲ್ಲಿ ಶಾಂತಿ ನೆಲೆಸುವುದು ಕಾಂಗ್ರೆಸ್‌ಗೆ ಬೇಕಿಲ್ಲ. ಅಶಾಂತಿ, ಗಲಭೆ, ಗೊಂದಲ ಇರಬೇಕೆಂದು ಕಾಂಗ್ರೆಸ್ ಬಯಸಿದೆ ಎಂದು ಕಿಡಿಕಾರಿದ್ದಾರೆ.
ಕಾನೂನು ಪ್ರಕಾರವೇ ಮತಾಂತರ ನಿಷೇಧ ಕಾಯ್ದೆ ತಂದಿದ್ದೆವು. ಕಾಯ್ದೆಯಲ್ಲಿ ಲೋಪ ಏನೂ ಇರಲಿಲ್ಲ. ಈಗ ಮತಾಂತರ ತಡೆ ಕಾಯ್ದೆ ವಾಪಸ್ ತಗೆದುಕೊಳ್ಳುತ್ತಿದ್ದಾರೆ. ಕಾಂಗ್ರೆಸ್‌ನ ಹಳೇ ಚಾಳಿ ತುಷ್ಟೀಕರಣ, ಜನ ಪಾಠ ಕಲಿಸುತ್ತಾರೆ. ಅಧಿಕಾರ ಕಾಂಗ್ರೆಸ್‌ನವರ ತಲೆಗೆ ಹೊಡೆದುಬಿಟ್ಟಿದೆ. ಗ್ಯಾರಂಟಿ ಆಧಾರಿತವಾಗಿ ಅಧಿಕಾರಕ್ಕೆ ಬಂದಿರುವುದನ್ನು ಮರೆತಿದ್ದಾರೆ ಎಂದರು.
ರೈತರಿಗೆ ಏನು ಅನುಕೂಲ ಅಂತಾ ತಿಳಿದುಕೊಳ್ಳದೆ ಎಪಿಎಂಸಿ ಕಾಯ್ದೆ ಬದಲಾವಣೆಗೆ ಕಾಂಗ್ರೆಸ್ ನಾಯಕರು ಹೊರಟಿದ್ದಾರೆ. ಏನು ಬದಲಾವಣೆ ಅಂತಾ ಹೇಳದಿರುವುದು ಅದು ಮನೆಯ ಖಾಸಗಿ ಗುಟ್ಟಾ? ಅದ್ಭುತವಾದ ಎಪಿಎಂಸಿ ಕಾಯ್ದೆಗೆ ಮಣ್ಣು ಹಾಕುತ್ತಿದ್ದಾರೆ. ದುಡಿದು ಬದುಕುವ ಜನರ ಬಾಯಿಗೆ ಮಣ್ಣು ಹಾಕುವ ಸರ್ಕಾರ ಇದು.
ಇದನ್ನೂ ಓದಿ: ವಿವಾದಿತ ಎಪಿಎಂಸಿ ಕಾಯ್ದೆ ಹಿಂಪಡೆಯಲು ಕರ್ನಾಟಕ ಸರ್ಕಾರ ನಿರ್ಧಾರ: ಕಾನೂನು ಸಚಿವ ಎಚ್ಕೆ ಪಾಟೀಲ್
ಕಾಂಗ್ರೆಸ್‌ನವ್ರು ಸಂವಿಧಾನದ ಪ್ರಸ್ತಾವನೆಯನ್ನು ಮೊದಲು ಚೆನ್ನಾಗಿ ಓದಲಿ. ಸಂವಿಧಾನದ ಪ್ರಸ್ತಾವನೆಯ ಆಶಯವೇ ಇವರಿಗೆ ಗೊತ್ತಿಲ್ಲ. ಅರ್ಥ ಆಗದವರೆಲ್ಲಾ ಬಂದು ಬಿಟ್ಟಿದ್ದಾರೆ, ಏನು ಮಾಡೋದು ನಮ್ಮ ದುರಂತ ಎಂದು ಹೇಳಿದರು.
ಪಠ್ಯ ಪುಸ್ತಕ ಪರಿಷ್ಕರಣೆ ಬಗ್ಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಮಾತನಾಡಿ, ಸಾವರ್ಕರ್ ಪಾಠ ಓದಿದ್ದರೆ ಮಕ್ಕಳು ದೇಶದ್ರೋಹಿಗಳು ಆಗ್ತಿದ್ದರಾ? ಸಾವರ್ಕರ್ ಹೇಡಿ ಅಲ್ಲ, ಕಾಂಗ್ರೆಸ್‌ನವರು ರಣ ಹೇಡಿಗಳು. ಕಾಂಗ್ರೆಸ್‌ನವರು ದೇಶ ದ್ರೋಹಿಗಳು. ತಾಕತ್ ಇದ್ರೆ ಕಾಂಗ್ರೆಸ್ ಬಗ್ಗೆ ಅಂಬೇಡ್ಕರ್ ಹೇಳಿದ್ದನ್ನು ಪ್ರಕಟಿಸಿ ಎಂದು ವಾಗ್ದಾಳಿ ಮಾಡಿದ್ದಾರೆ.
ಟಿಪ್ಪು ಪಾಠ ನಿಮಗೆ ಬೇಕು, ಯಾಕೆಂದರೆ ತುಷ್ಟೀಕರಣ ಮಾಡಲು. ಇದು ಸಿದ್ದರಾಮಯ್ಯ ಸರ್ಕಾರದ ದೇಶದ್ರೋಹದ ಕೆಲಸವಾಗಿದೆ. ಈ ಮಟ್ಟಕ್ಕೆ ದೇಶ ದ್ರೋಹ ಕಾರ್ಯ ಮಾಡ್ತಾರೆಂದು ಭಾವಿಸಿರಲಿಲ್ಲ. ಇದನ್ನು ನಾವು ರಾಜ್ಯದ ಜನರ ಬಳಿ ತೆಗೆದುಕೊಂಡು ಹೋಗುತ್ತೇವೆ. ಲೋಕಸಭೆ, ಜಿ.ಪಂ ಚುನಾವಣೆ ವೇಳೆ ಜನರ ಮುಂದೆ ಇಡುತ್ತೇವೆ ಎಂದು ಗುಡುಗಿದ್ದಾರೆ.
ಇದನ್ನೂ ಓದಿ: Cabinet Meeting: ಮತಾಂತರ ನಿಷೇಧ ಕಾಯ್ದೆ ತಿದ್ದುಪಡಿಗೆ ತೀರ್ಮಾನ, ಪಠ್ಯ ಪರಿಷ್ಕರಣೆಗೆ ಅಸ್ತು ಎಂದ ಸಿದ್ದರಾಮಯ್ಯ ಸಂಪುಟ!
ಟಿಪ್ಪು ಪಾಠ ಓದಬೇಕು ಅಂತಾ ಮುಸ್ಲಿಮರು ಮನವಿ ಕೊಟ್ಟಿದ್ದಾರಾ? ಹೆಡಗೇವಾರ್ ಏನು ದೇಶದ್ರೋಹಿ ಸಂಘಟನೆಯ ಸಂಸ್ಥಾಪಕರಾ? ಟಿಪ್ಪು ಸುಲ್ತಾನ್ ರೀತಿ ಹೆಡಗೇವಾರ್ ದೇಶದ್ರೋಹಿತನ ಮಾಡಿದ್ರಾ ಎಂದು ಸಾಲು ಸಾಲು ಪ್ರಶ್ನೆ ಮಾಡಿದ್ದಾರೆ.
ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರವಾಗಿ ಚಿತಂಕ ಚಕ್ರವರ್ತಿ ಸೂಲಿಬೆಲೆ ಪ್ರತಿಕ್ರಿಯೆ ನೀಡಿದ್ದು, ಸರ್ಕಾರ ಸೂಲೆಬೆಲೆ ಪಾಠ ಕೈಬಿಟ್ಟಲ್ಲ, ಭಗತಸಿಂಗ್ ಪಾಠ ಕೈಬಿಟ್ಟಿದೆ. ಹೆಡ್ಗೆವಾರ್ ಪಾಠದ ಜೊತೆ ಭಗತಸಿಂಗ್ ರಾಜಗೂರು ಸುಖದೇವ್ ಪಾಠ ಕೈಬಿಟ್ಟಿದ್ದಾರೆ. ಇದು ನನ್ನಮೇಲಿನ ಆಕ್ರಮಣ ಅಲ್ಲ, ಭಗತಸಿಂಗ್ ಮೇಲಿನ ಆಕ್ರಮಣ. ಕಾಂಗ್ರೆಸ್ ಕ್ರಾಂತಿಕಾರಿಗಳನ್ನ ಯಾವಗಲೂ ಭಯೋತ್ಪಾದಕರ ಹಾಗೆ ನೋಡಿದೆ. ಭಗತಸಿಂಗ್ ಪಾಠ ತಗೆದು ಈ ಸರ್ಕಾರ ನೆಹರು ಪಾಠ ಸೇರಿಸುತ್ತಿದೆ ಎಂದು ತಿರಗೇಟು ನೀಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:51 pm, Thu, 15 June 23