Kannada News Politics Congress leader Rahul Gandhi holds first press conference after being disqualified from Lok Sabha
Rahul Gandhi Press Conference: ಅದಾನಿ ಜತೆ ಮೋದಿಗಿರುವ ಸಂಬಂಧ ಏನು? ನಾನು ಒಂದೇ ಪ್ರಶ್ನೆ ಕೇಳುತ್ತಿದ್ದೇನೆ, ಉತ್ತರಬೇಕು: ರಾಹುಲ್ ಗಾಂಧಿ
ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಗುಜರಾತ್ ನ್ಯಾಯಾಲಯವು ಅವರನ್ನು ದೋಷಿ ಎಂದು ಘೋಷಿಸಿದ ನಂತರ ರಾಹುಲ್ ಗಾಂಧಿ ಅವರು ತಮ್ಮ ಸಂಸದ ಸ್ಥಾನ ಕಳೆದುಕೊಂಡಿದ್ದಾರೆ
ರಾಹುಲ್ ಗಾಂಧಿ
Follow us on
ದೆಹಲಿ: ಲೋಕಸಭೆಯಿಂದ(Loksabha) ಅನರ್ಹಗೊಂಡ ನಂತರ ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಇಂದು ಮಧ್ಯಾಹ್ನ 1ಗಂಟೆಗೆ ತಮ್ಮ ಮೊದಲ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ್ದಾರೆ. ದೆಹಲಿಯ ಎಐಸಿಸಿ ಕಚೇರಿಯಲ್ಲಿ ರಾಹುಲ್ ಗಾಂಧಿ ಸುದ್ದಿಗೋಷ್ಠಿ ನಡೆಸಿ ರಾಹುಲ್ ಗಾಂಧಿ,ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ಆಕ್ರಮಣ ನಡೆದಿದೆ. ಉದ್ಯಮಿ ಗೌತಮ್ ಅದಾನಿಗೆ ಸೇರಿದ ಹಲವು ಕಂಪನಿಗಳು ಇದೆ. ಮೋದಿ-ಅದಾನಿ ನಡುವಿನ ವ್ಯವಹಾರ ಬಹಳ ಹಿಂದಿನಿಂದ ಇದೆ. ನರೇಂದ್ರ ಮೋದಿ ಗುಜರಾತ್ ಸಿಎಂ ಆಗಿದ್ದಾಗಿನಿಂದಲೂ ಅವರ ನಡುವಿನ ವ್ಯವಹಾರ ಇದೆ.ಈ ಕುರಿತು ಫ್ಲೈಟ್ನಲ್ಲಿ ಫೋಟೋ ಕೂಡ ಬಿಡುಗಡೆ ಮಾಡಿದ್ದೇನೆ.ನಾನು ಎರಡೂ ಬಾರಿ ಪತ್ರ ಬರೆದರೂ ಯಾವುದೇ ಪ್ರತ್ಯುತ್ತರ ಬಂದಿಲ್ಲ ಎಂದು ಅವರು ಹೇಳಿದ್ದಾರೆ. ಅಂದಹಾಗೆ ಲಂಡನ್ ನಲ್ಲಿ ನೀಡಿದ ಹೇಳಿಕೆಗೆ ನೀವು ಕ್ಷಮೆ ಕೇಳುತ್ತೀರಾ ಎಂದು ಪತ್ರಕರ್ತರೊಬ್ಬರು ಕೇಳಿದಾಗ ನನ್ನ ಹೆಸರು ಸಾವರ್ಕರ್ ಅಲ್ಲ, ನಾನು ಕ್ಷಮೆ ಕೇಳಲ್ಲ ಎಂದಿದ್ದಾರೆ ರಾಹುಲ್ ಗಾಂಧಿ.
ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಗುಜರಾತ್ ನ್ಯಾಯಾಲಯವು ಅವರನ್ನು ದೋಷಿ ಎಂದು ಘೋಷಿಸಿದ ನಂತರ ರಾಹುಲ್ ಗಾಂಧಿ ಅವರು ತಮ್ಮ ಸಂಸದ ಸ್ಥಾನ ಕಳೆದುಕೊಂಡಿದ್ದಾರೆ. ಗುರುವಾರ ಪ್ರಕರಣದ ತೀರ್ಪು ಪ್ರಕಟಿಸಿದ ಸೂರತ್ ನ್ಯಾಯಾಲಯ ರಾಹುಲ್ ಗಾಂಧಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.
ಅನರ್ಹತೆ ಬಗ್ಗೆ ಅಧಿಸೂಚನೆ ಪ್ರಕಟವಾದ ನಂತರ ಮಾತನಾಡಿದ ಮಾಜಿ ವಯನಾಡ್ ಸಂಸದ ರಾಹುಲ್, ಯಾವುದೇ ಬೆಲೆ ತೆರಲು ಸಿದ್ಧ ಎಂದು ಹೇಳಿದ್ದರು. ನಾನು ಭಾರತದ ಧ್ವನಿಗಾಗಿ ಹೋರಾಡುತ್ತಿದ್ದೇನೆ. ನಾನು ಯಾವುದೇ ಬೆಲೆ ತೆರಲು ಸಿದ್ಧ ಎಂದು ರಾಹುಲ್ ಶುಕ್ರವಾರ ಟ್ವೀಟ್ ಮಾಡಿದ್ದಾರೆ. ಅನರ್ಹತೆ ಇಂದಾಗಿ ವಯನಾಡ್ ಲೋಕಸಭಾ ಕ್ಷೇತ್ರವೂ ಸಂಸದರಿಲ್ಲದೆ ತೆರವಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ಗಾಂಧಿ ಹೇಳಿದ್ದೇನು?
ದೇಶದಲ್ಲಿ ಪ್ರಜಾಪ್ರಭುತ್ವದ ಮೇಲೆ ದಾಳಿಯಾಗುತ್ತಿದೆ ಎಂದು ಈ ಹಿಂದೆಯೂ ಹಲವು ಬಾರಿ ಹೇಳಿದ್ದೆ. ಇಂತಹ ಉದಾಹರಣೆಗಳನ್ನು ನಾವು ಪ್ರತಿದಿನ ನೋಡುತ್ತಿದ್ದೇವೆ. ಪ್ರಧಾನಿ ಮೋದಿ ಮತ್ತು ಅದಾನಿ ನಡುವಿನ ಸಂಬಂಧದ ಬಗ್ಗೆ ನಾನು ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಿದೆ.
ಸಂಸತ್ತಿನಲ್ಲಿ ಮಾಡಿದ ನನ್ನ ಭಾಷಣವನ್ನು ಅಳಿಸಲಾಯಿತು. ನಂತರ ನಾನು ಲೋಕಸಭೆ ಸ್ಪೀಕರ್‌ಗೆ ವಿವರವಾದ ಉತ್ತರವನ್ನು ಬರೆದೆ. ನಾನು ವಿದೇಶಿ ಶಕ್ತಿಗಳ ಸಹಾಯ ಕೇಳಿದ್ದೇನೆ ಎಂದು ಕೆಲವು ಸಚಿವರು ನನ್ನ ಬಗ್ಗೆ ಸುಳ್ಳು ಹೇಳಿದರು ಆದರೆ ನಾನು ಅಂತಹ ಯಾವುದೇ ಕೆಲಸ ಮಾಡಿಲ್ಲ. ನಾನು ಪ್ರಶ್ನೆ ಕೇಳುವುದನ್ನು ನಿಲ್ಲಿಸುವುದಿಲ್ಲ. ಪ್ರಧಾನಿ ಮೋದಿ ಮತ್ತು ಅದಾನಿ ನಡುವಿನ ಸಂಬಂಧವನ್ನು ನಾನು ಪ್ರಶ್ನಿಸುತ್ತಲೇ ಇರುತ್ತೇನೆ.
ನಾನು ಅದಾನಿ ಬಗ್ಗೆ ಒಂದೇ ಒಂದು ಪ್ರಶ್ನೆ ಕೇಳಿದ್ದೆ.ನಾನು ಪ್ರಶ್ನೆಗಳನ್ನು ಕೇಳುವುದನ್ನು ಮುಂದುವರಿಸುತ್ತೇನೆ ಮತ್ತು ಭಾರತದಲ್ಲಿ ಪ್ರಜಾಪ್ರಭುತ್ವಕ್ಕಾಗಿ ಹೋರಾಡುತ್ತೇನೆ.
ಅದಾನಿ ಶೆಲ್ ಕಂಪನಿಗಳಿಗೆ 20,000 ಕೋಟಿ ರುಪಾಯಿ ಯಾರದ್ದು ಎಂಬ ಸರಳ ಪ್ರಶ್ನೆಯಿಂದ ಪ್ರಧಾನಿಯನ್ನು ರಕ್ಷಿಸಲು ನಡೆಸಲಾದ ಸಂಪೂರ್ಣ ನಾಟಕ ಇದು. ಈ ಬೆದರಿಕೆ, ಅನರ್ಹತೆ ಅಥವಾ ಜೈಲು ಶಿಕ್ಷೆಗೆ ನಾನು ಹೆದರುವುದಿಲ್ಲ.
ನನಗೆ ಸತ್ಯವನ್ನು ಹೊರತುಪಡಿಸಿ ಯಾವುದರಲ್ಲೂ ಆಸಕ್ತಿ ಇಲ್ಲ. ನಾನು ಸತ್ಯವನ್ನು ಮಾತ್ರ ಮಾತನಾಡುತ್ತೇನೆ, ಇದು ನನ್ನ ಕೆಲಸ.ನನ್ನನ್ನು ಅನರ್ಹಗೊಳಿಸಿದರೂ ಅಥವಾ ಬಂಧಿಸಿದರೂ ನಾನು ಅದನ್ನು ಮಾಡುತ್ತೇನೆ. ಈ ದೇಶ ನನಗೆ ಎಲ್ಲವನ್ನೂ ನೀಡಿದೆ ಮತ್ತು ಅದಕ್ಕಾಗಿಯೇ ನಾನು ಇದನ್ನು ಮಾಡುತ್ತೇನೆ.
ಅದಾನಿ ಕುರಿತ ನನ್ನ ಮುಂದಿನ ಭಾಷಣಕ್ಕೆ ಪ್ರಧಾನಿ ಹೆದರಿದ್ದು, ಅವರ ಕಣ್ಣಲ್ಲಿ ನಾನು ಅದನ್ನು ಕಂಡಿದ್ದೇನೆ. ಅವರು ನನಗೆ ಮಾತನಾಡಲು ಬಿಡುವುದಿಲ್ಲ, ಅದಕ್ಕಾಗಿಯೇ ಅವರು ಮೊದಲು ವಿಷಯದ ಗಮನ ಬೇರೆಡೆ ಸೆಳೆದು ನಂತರ ಅನರ್ಹ ಮಾಡುತ್ತಾರೆ.
ನನಗೆ ಒಂದೇ ಒಂದು ಹೆಜ್ಜೆ ಇದೆ. ಅದು ಸತ್ಯಕ್ಕಾಗಿ ಹೋರಾಡುವುದು ಮತ್ತು ಈ ದೇಶದ ಪ್ರಜಾಪ್ರಭುತ್ವದ ಸ್ವರೂಪವನ್ನು ರಕ್ಷಿಸುವುದು. ನನ್ನನ್ನು ಜೀವನಪರ್ಯಂತ ಅನರ್ಹಗೊಳಿಸಿ, ಜೀವಾವಧಿ ಶಿಕ್ಷೆಗೆ ಗುರಿಪಡಿಸಿ, ನಾನು ಮುಂದುವರಿಯುತ್ತೇನೆ .
ನಾನು ಚಿಂತಿತನಾಗಿದ್ದೇನೆ ಎಂದು ನಿಮಗೆ ಅನಿಸುತ್ತಿದೆಯಾ? ಇಲ್ಲ ನಾನು ಉತ್ಸುಕನಾಗಿದ್ದೇನೆ.
ಸರ್ಕಾರಕ್ಕೆ ದೇಶವೇ ಅದಾನಿ, ಅದಾನಿಯೇ ದೇಶ.
ಸರ್ಕಾರದ ಭಯಭೀತ ಪ್ರತಿಕ್ರಿಯೆಯಿಂದ ಪ್ರತಿಪಕ್ಷಗಳಿಗೆ ಹೆಚ್ಚಿನ ಲಾಭವಾಗಿದೆ
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ