ವರಿಷ್ಠರು ಚುನಾವಣೆಗೆ ನಿಲ್ಲಲೇಬೇಕು ಅಂದರೆ ಬದ್ಧ; ಯೂಟರ್ನ್ ತಗೊಂಡ್ರಾ ತನ್ವೀರ್ ಸೇಠ್?

|

Updated on: Feb 28, 2023 | 3:04 PM

ಚುನಾವಣಾ ರಾಜಕೀಯ ನಿವೃತ್ತಿಗೆ ನಿರ್ಧರಿಸಿದ್ದು ನಿಜ. ಅನಾರೋಗ್ಯ ಕಾರಣದಿಂದ ಮಾತ್ರ ಈ ನಿರ್ಧಾರ ಮಾಡಿದ್ದೇನೆ. ಆದರೆ, ಪಕ್ಷದ ವರಿಷ್ಠ ನಾಯಕರ ನಿರ್ಧಾರಕ್ಕೆ ನಾನು ಬದ್ಧ. ಪಕ್ಷದ ನಾಯಕರು ಚುನಾವಣೆಗೆ ನಿಲ್ಲಲೇಬೇಕು ಎಂದರೆ ಅದಕ್ಕೆ ಸಿದ್ಧ ಎಂದು ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಹೇಳಿದರು.

ವರಿಷ್ಠರು ಚುನಾವಣೆಗೆ ನಿಲ್ಲಲೇಬೇಕು ಅಂದರೆ ಬದ್ಧ; ಯೂಟರ್ನ್ ತಗೊಂಡ್ರಾ ತನ್ವೀರ್ ಸೇಠ್?
ತನ್ವೀರ್ ಸೇಠ್ (ಸಂಗ್ರಹ ಚಿತ್ರ)
Follow us on

ಮೈಸೂರು: ಚುನಾವಣಾ ರಾಜಕೀಯ ನಿವೃತ್ತಿಗೆ ನಿರ್ಧರಿಸಿದ್ದು ನಿಜ. ಅನಾರೋಗ್ಯ ಕಾರಣದಿಂದ ಮಾತ್ರ ಈ ನಿರ್ಧಾರ ಮಾಡಿದ್ದೇನೆ. ಆದರೆ, ಪಕ್ಷದ ವರಿಷ್ಠ ನಾಯಕರ ನಿರ್ಧಾರಕ್ಕೆ ನಾನು ಬದ್ಧ. ಪಕ್ಷದ ನಾಯಕರು ಚುನಾವಣೆಗೆ ನಿಲ್ಲಲೇಬೇಕು ಎಂದರೆ ಅದಕ್ಕೆ ಸಿದ್ಧ ಎಂದು ಕಾಂಗ್ರೆಸ್ (Congress) ಶಾಸಕ ತನ್ವೀರ್ ಸೇಠ್ (tanveer sait) ಹೇಳಿದರು. ರಾಜಕೀಯ ನಿವೃತ್ತಿ ಬಗ್ಗೆ ಮೈಸೂರಿನಲ್ಲಿ ಸ್ಪಷ್ಟನೆ ನೀಡಿದ ಅವರು, ನನಗೆ ಆರೋಗ್ಯ ಚೆನ್ನಾಗಿಲ್ಲ. ಚುನಾವಣೆಗೆ ನಿಲ್ಲುವುದಿಲ್ಲ ಎಂದು ಪತ್ರ ಬರೆದೆ. ಅದೇ ಕಾರಣಕ್ಕೆ ಚುನಾವಣಾ ರಾಜಕೀಯ ನಿವೃತ್ತಿ ಬಯಸಿದ್ದೇನೆ ಎಂದು ಹೇಳಿದರು. ರಾಜಕೀಯ ನಿವೃತ್ತಿಗೆ ಅಭಿಮಾನಿಗಳಿಂದ ಭಾರೀ ವಿರೋಧ ವ್ಯಕ್ತವಾದ ಬೆನ್ನಲ್ಲೇ ಅವರು ಈ ಹೇಳಿಕೆ ನೀಡಿದ್ದಾರೆ.

ಜನ ನನ್ನನ್ನು 5 ಬಾರಿ ಗೆಲ್ಲಿಸಿದ್ದಾರೆ. ನನ್ನ ತಂದೆ ಅವರನ್ನೂ ಜನ ಬೆಂಬಲಿಸಿದ್ದರು. ಆದರೆ ಸದ್ಯ ರಾಜಕೀಯ ಪರಿಸ್ಥಿತಿ‌ ಕೂಡ ಹದಗೆಟ್ಟಿದೆ. ನರಸಿಂಹರಾಜ ಕ್ಷೇತ್ರದ ಮತದಾರರ ಋಣ ತೀರಿಸಬೇಕಿದೆ. ಕಾಂಗ್ರೆಸ್ ನನಗೆ ಹಲವಾರು ಅವಕಾಶ ನೀಡಿದೆ. ಆ ಬಗ್ಗೆ ಯಾವುದೇ ಬೇಸರ ಇಲ್ಲ. ಬೇರಾವುದೇ ಬೆಳವಣಿಗೆಗಳ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಅವರು ಹೇಳಿದರು. ಜತೆಗೆ, ವರಿಷ್ಠರು ಏನೇ ತೀರ್ಮಾನ ಮಾಡಿದರೂ ಅದಕ್ಕೆ ಸಹಮತ ಇದೆ ಎಂದು ತಿಳಿಸಿದರು.

ತನ್ವೀರ್ ಸೇಠ್​ಗೆ ಟಿಕೆಟ್ ಖಚಿತ; ಕಾಂಗ್ರೆಸ್ ನಾಯಕ ಹೇಳಿಕೆ

ಹಾಲಿ ಶಾಸಕರಿಗೆ ಟಿಕೆಟ್​ ನೀಡುವುದಕ್ಕೆ ಹೈಕಮಾಂಡ್ ಈಗಾಗಲೇ ನಿರ್ಧಾರ ಮಾಡಿದೆ. ಹಾಗಾಗಿ ತನ್ವೀರ್ ಸೇಠ್​ಗೆ ಟಿಕೆಟ್ ಖಚಿತ ಎಂದು ತನ್ವೀರ್ ಸೇಠ್ ನಿವಾಸದಲ್ಲಿ ಮೈಸೂರು ಕಾಂಗ್ರೆಸ್ ಅಧ್ಯಕ್ಷ ಮೂರ್ತಿ ಹೇಳಿದ್ದಾರೆ. ಕಾರ್ಯಕರ್ತರು, ಬೆಂಬಲಿಗರು ಯಾವುದೇ ಕಾರಣಕ್ಕೂ ನಿರಾಸೆ ಪಡುವ ಅಗತ್ಯವಿಲ್ಲ. ಹೈಕಮಾಂಡ್ ಜತೆ ಚರ್ಚೆ ಮಾಡಿ ಅಂತಿಮವಾಗಿ ಇವರನ್ನೇ ಕಣಕ್ಕಿಳಿಸುತ್ತೇವೆ ಎಂದು ಮೂರ್ತಿ ತಿಳಿಸಿದ್ದಾರೆ.

ಇನ್ನೇನು ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಾಗಲೇ ಸೇಠ್ ಅವರು ರಾಜಕೀಯ ನಿವೃತ್ತಿಗೆ ನಿರ್ಧರಿಸಿದ್ದು ಅವರ ಅಭಿಮಾನಿಗಳಿಗೆ, ಕಾಂಗ್ರೆಸ್‌ಗೆ ಆಘಾತ ನೀಡಿತ್ತು. ಸೇಠ್ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ಅವರ ಬೆಂಬಲಿಗರೊಬ್ಬರು ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆಯೂ ನಡೆದಿತ್ತು.

ಇದನ್ನೂ ಓದಿ: ರಾಜಕೀಯ ನಿವೃತ್ತಿ ಘೋಷಿಸಿದ ತನ್ವೀರ್ ಸೇಠ್, ಕಾಂಗ್ರೆಸ್‌ಗೆ ಬಿಗ್ ಶಾಕ್; ಆತ್ಮಹತ್ಯೆಗೆ ಯತ್ನಿಸಿದ ಬೆಂಬಲಿಗ

‘ನನ್ನ ಮೇಲೆ ಹಲ್ಲೆಯಾದ ಬಳಿಕ ಆರೋಗ್ಯ ತುಂಬಾ ಏರುಪೇರಾಗಿದೆ. ಮೊದಲಿನಂತೆ ನಾನು ಮಾನಸಿಕ ಹಾಗೂ ದೈಹಿಕವಾಗಿಯೂ ಶಕ್ತಿಯುತವಾಗಿಲ್ಲ. ಅನಾರೋಗ್ಯದ ಕಾರಣ ನನಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ. ನನಗೆ ಈ ಬಾರಿ ಟಿಕೆಟ್ ಬೇಡ. ನಾನು ಇನ್ಮುಂದೆ ಯಾವುದೇ ಚುನಾವಣೆಯಲ್ಲೂ ಸ್ಪರ್ಧಿಸಲ್ಲ. ಆದ್ರೆ ಕಾಂಗ್ರೆಸ್‌ನಲ್ಲೇ ಇರುತ್ತೇನೆ’ ಎಂದು ರಾಜೀನಾಮೆ ಪತ್ರದಲ್ಲಿ ಸೇಠ್ ಉಲ್ಲೇಖಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ