ನಮ್ಮ ಅಮಾನತು ಸರಿಯಲ್ಲ, ಪರಿಷತ್​ನಲ್ಲಿ ಪ್ರತಿಭಟನೆ ಮುಂದುವರಿಸುತ್ತೇವೆ: ನಾರಾಯಣಸ್ವಾಮಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 15, 2021 | 6:42 PM

ಸಭಾಪತಿ ನಮ್ಮನ್ನು ಅಮಾನತು ಮಾಡಿದ್ದಾರೆ. ನಮ್ಮ ವರ್ತನೆಯಿಂದ ಸಭಾಪತಿಯವರ ಮನಸ್ಸಿಗೆ ನೋವಾಗಿದ್ದರೆ ನಾವು ಕ್ಷಮೆ ಯಾಚಿಸುತ್ತೇವೆ ಎಂದು ಹೇಳಿದರು.

ನಮ್ಮ ಅಮಾನತು ಸರಿಯಲ್ಲ, ಪರಿಷತ್​ನಲ್ಲಿ ಪ್ರತಿಭಟನೆ ಮುಂದುವರಿಸುತ್ತೇವೆ: ನಾರಾಯಣಸ್ವಾಮಿ
ಸಚಿವ ಭೈರತಿ ಬಸವರಾಜ್
Follow us on

ಬೆಳಗಾವಿ: ವಿಧಾನ ಪರಿಷತ್ ಅಧಿವೇಶನದಲ್ಲಿ ನಾವು ನ್ಯಾಯ ಕೇಳುತ್ತಿದ್ದೇವೆ. ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ವಿರುದ್ಧ ನ್ಯಾಯಾಲಯದ ಆದೇಶವೇ ಬಂದಿದೆ. ಅವರು ಕೇವಲ ದಾಖಲೆಗಳನ್ನು ಮಾತ್ರವೇ ಅಲ್ಲ,, ಮಾಲೀಕರನ್ನೇ ನಕಲು ಮಾಡಿದ್ದಾರೆ. ಇದು ₹ 300 ಕೋಟಿ ಮೊತ್ತದ ಹಗರಣ. ಇದನ್ನು ಪ್ರಶ್ನಿಸಿ ನಾವು ಗುರುವಾರವೂ (ಡಿ 16) ಪ್ರತಿಭಟನೆ ಮಾಡುತ್ತೇವೆ. ಆದರೆ ಸಂಸದೀಯ ಸಚಿವರು ಚರ್ಚೆಗೆ ಅವಕಾಶ ಇಲ್ಲ ಎನ್ನುತ್ತಿದ್ದಾರೆ. ಸಭಾಪತಿ ನಮ್ಮನ್ನು ಅಮಾನತು ಮಾಡಿದ್ದಾರೆ. ನಮ್ಮ ವರ್ತನೆಯಿಂದ ಸಭಾಪತಿಯವರ ಮನಸ್ಸಿಗೆ ನೋವಾಗಿದ್ದರೆ ನಾವು ಕ್ಷಮೆ ಯಾಚಿಸುತ್ತೇವೆ ಎಂದು ಸುವರ್ಣಸೌಧದಲ್ಲಿ ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ ಹೇಳಿದರು. ಭೈರತಿ ಬಸವರಾಜ್ ಅವರನ್ನು ತಕ್ಷಣ ಸಂಪುಟದಿಂದ ವಜಾ ಮಾಡಬೇಕು ಎಂದು ಸುವರ್ಣ ಸೌಧದಲ್ಲಿ ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ ಹೇಳಿದರು.

ಸದನದಲ್ಲಿ ನಾವು ನ್ಯಾಯ ಕೇಳುತ್ತಿದ್ದೇವೆ. ಸಚಿವ ಭೈರತಿ ಬಸವರಾಜ ಮಾನನಷ್ಟ ಮೊಕದ್ದಮೆ ಹೂಡುವ ಕುರಿತು ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬೇಕಿದ್ದರೆ ನನ್ನ ಮೇಲೆ ಮಾನನಷ್ಟ ಹಾಕಲಿ. ಎದುರಿಸಲು ನಾನು ಸಿದ್ಧವಾಗಿದ್ದೇನೆ. ನಾನು ಮೇಲೆ ವೃಥಾ ಆರೋಪ ಮಾಡುತ್ತಿಲ್ಲ. ನ್ಯಾಯಲಯವೇ ಈಗ ತೀರ್ಪು ನೀಡಿದೆ. ಇವರು ನ್ಯಾಯಾಲಯದ ವಿರುದ್ಧ ನಡೆದುಕೊಂಡರೆ ಅವರ ವಿರುದ್ಧವೇ ಮಾನನಷ್ಟ ಹಾಕುತ್ತಾರೆ. ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡುತ್ತಾರೆ ಎಂದರು.

ಸಚಿವ ಭೈರತಿ ಬಸವರಾಜ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡು ಜಮೀನು ವರ್ಗಾವಣೆ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಸಚಿವ ಭೈರತಿ ಬಸವರಾಜು ವಿರುದ್ಧ ಸದನದ ಹೊರಗೆ ಸಹ ಆರೋಪ ಮಾಡಿದರು. ಬೆಳಗಾವಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಅವರು, ಜಮೀನು ವರ್ಗಾವಣೆ ವಿಚಾರದಲ್ಲಿ ನ್ಯಾಯಾಲಯದಿಂದ ಆದೇಶ ಹೊರಬಿದ್ದಿದೆ. ಬೆಂಗಳೂರು ಕೆ.ಆರ್.ಪುರಂನ ಕಲ್ಕೆರೆಯಲ್ಲಿ ಅಣ್ಣಯ್ಯಪ್ಪ ಎಂಬ ವ್ಯಕ್ತಿಗೆ ಸೇರಿದ 35 ಎಕರೆ ಜಮೀನು ಕಬಳಿಕೆ ಆಗಿದೆ. ಕಾನೂನುಬಾಹಿರವಾಗಿ ಜಮೀನು ವರ್ಗಾವಣೆ ಮಾಡಲಾಗಿದೆ. ಈ ಪ್ರಕರಣದಲ್ಲಿ ನವೆಂಬರ್ 25ರಂದು ತೀರ್ಪು ಬಂದಿದೆ. ತೀರ್ಪು ಆಧರಿಸಿ ಸಚಿವ ಭೈರತಿ ಬಸವರಾಜ ಅವರಿಂದ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸಿದರು. ವಿಧಾನ ಪರಿಷತ್ ಸದಸ್ಯರಾದ ಎಂ.‌ ನಾರಾಯಣಸ್ವಾಮಿ, ಬಿ.ಕೆ.‌ ಹರಿಪ್ರಸಾದ್ ಮತ್ತು ಪಿ.ಆರ್.ರಮೇಶ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಸದನದಲ್ಲಿ ಚರ್ಚೆಗೆ ಅವಕಾಶವಿಲ್ಲ
10 ವರ್ಷಗಳಷ್ಟು ಹಳೆಯ ಪ್ರಕರಣವನ್ನು ಈಗ ಸದನದಲ್ಲಿ ಏಕೆ ಚರ್ಚಿಸುತ್ತಿದ್ದಾರೆಯೋ ಗೊತ್ತಿಲ್ಲ. ನ್ಯಾಯಾಲಯದಲ್ಲಿರುವ ಪ್ರಕರಣವನ್ನು ಸದನದಲ್ಲಿ ಚರ್ಚಿಸಲು ಅವಕಾಶ ನೀಡಲು ಆಗುವುದಿಲ್ಲ. ವಿರೋಧ ಪಕ್ಷಗಳ ನಾಯಕರು ಏಕೆ ಹೀಗೆ ವರ್ತಿಸುತ್ತಿದ್ದಾರೆಯೋ ಗೊತ್ತಿಲ್ಲ. ಸಭಾಪತಿ ಮಾತಿಗೆ ಬೆಲೆ ಕೊಡದಿರುವುದು ಯಾರಿಗೂ ಶೋಭೆ ತರುವುದಿಲ್ಲ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯಿಸಿದರು.

ಇದನ್ನೂ ಓದಿ: ದೇಶದಲ್ಲೇ ಸ್ವಚ್ಛ ನಗರಗಳಲ್ಲಿ ಮೈಸೂರಿಗೆ ಐದನೇ ಸ್ಥಾನ; ಪ್ರಶಸ್ತಿ ಸ್ವೀಕರಿಸಿದ ಸಚಿವ ಭೈರತಿ ಬಸವರಾಜ್
ಇದನ್ನೂ ಓದಿ: ನಗರಾಭಿವೃದ್ಧಿ ಪ್ರಾಧಿಕಾರಗಳಿಂದ ನೀಡಲಾಗುವ ನಿವೇಶನಗಳಲ್ಲಿ ಶೇ. 5ರಷ್ಟು ಪತ್ರಕರ್ತರಿಗೆ ಮೀಸಲು; ಸಚಿವ ಭೈರತಿ ಬಸವರಾಜ್