ನನ್ನನ್ನು ಮಂತ್ರಿ ಮಾಡದಿದ್ದಕ್ಕೆ ರಾಜ್ಯದ ಮುಖ್ಯಮಂತ್ರಿಗಳಿಗೆ ಧನ್ಯವಾದ: ಸಿಎಂ ವಿರುದ್ಧ ಬಿಕೆ ಹರಿಪ್ರಸಾದ್ ವ್ಯಂಗ್ಯ ​

| Updated By: ವಿವೇಕ ಬಿರಾದಾರ

Updated on: Sep 09, 2023 | 1:35 PM

ನಾನು ಮಂತ್ರಿ ಆಗಿದ್ದರೆ ಸಮುದಾಯದ ಜನರ ಜೊತೆಗೆ ಇರಲು ಸಾಧ್ಯವಾಗುತ್ತಿರಲ್ಲಿ. ನಾನು ಮುಖ್ಯಮಂತ್ರಿ ಅಥವಾ ಮಂತ್ರಿ ಆಗುತ್ತೇನೆ ಅಂತ ಸಮುದಾಯದ ಯಾರೂ ಭ್ರಮೆಯಲ್ಲಿ ಇರಬೇಡಿ. ಈಡಿಗ, ಬಿಲ್ಲವ, ನಾಮಧಾರಿ ಸಮುದಾಯದವರು ಕೇವಲ ರಾಜ್ಯದಲ್ಲಿ ಮಾತ್ರ ಅಲ್ಲ, ಎಲ್ಲ ರಾಜ್ಯಗಳಲ್ಲೂ ಇದ್ದಾರೆ ಎಂದು ಕಾಂಗ್ರೆಸ್​ ಮುಖಂಡ ಬಿಕೆ ಹರಿಪ್ರಸಾದ್​ ಹೇಳಿದರು.

ನನ್ನನ್ನು ಮಂತ್ರಿ ಮಾಡದಿದ್ದಕ್ಕೆ ರಾಜ್ಯದ ಮುಖ್ಯಮಂತ್ರಿಗಳಿಗೆ ಧನ್ಯವಾದ: ಸಿಎಂ ವಿರುದ್ಧ ಬಿಕೆ ಹರಿಪ್ರಸಾದ್ ವ್ಯಂಗ್ಯ ​
ಕಾಂಗ್ರೆಸ್​ ನಾಯಕ ಬಿಕೆ ಹರಿಪ್ರಸಾದ್​
Follow us on

ಬೆಂಗಳೂರು ಸೆ.09: ಸಚಿವ ಸ್ಥಾನ ಸಿಗದ ಕಾರಣಕ್ಕಾಗಿ ಅಸಮಾಧಾನ ಹೊಂದಿರುವ ಕಾಂಗ್ರೆಸ್​ ಹಿರಿಯ ಮುಖಂಡ ಬಿಕೆ ಹರಿಪ್ರಸಾದ್​ (BK Hariprasad) ಇತ್ತೀಚಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದರು.ಇದೀಗ ಬಿಕೆ ಹರಿಪ್ರಸಾದ್​ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದು, ಈಡಿಗ, ಬಿಲ್ಲವ, ನಾಮಧಾರಿ, ದೀವರು ಮತ್ತು ಅತಿ ಹಿಂದುಳಿದ ವರ್ಗಗಳ ಬೃಹತ್​​ ಸಮಾವೇಶ ಆಯೋಜಿಸಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನನ್ನನ್ನು ಮಂತ್ರಿ ಮಾಡದಿದ್ದಕ್ಕೆ ರಾಜ್ಯದ ಮುಖ್ಯಮಂತ್ರಿಗಳಿಗೆ ಧನ್ಯವಾದ ಹೇಳುತ್ತೇನೆ ಎಂದು ಮತ್ತೊಮ್ಮೆ ವ್ಯಂಗ್ಯವಾಗಿ ಅಸಮಾಧಾನ ಹೊರಹಾಕಿದ್ದಾರೆ.

ನಾನು ಮಂತ್ರಿ ಆಗಿದ್ದರೆ ಸಮುದಾಯದ ಜನರ ಜೊತೆಗೆ ಇರಲು ಸಾಧ್ಯವಾಗುತ್ತಿರಲ್ಲಿ. ನಾನು ಮುಖ್ಯಮಂತ್ರಿ ಅಥವಾ ಮಂತ್ರಿ ಆಗುತ್ತೇನೆ ಅಂತ ಸಮುದಾಯದ ಯಾರೂ ಭ್ರಮೆಯಲ್ಲಿ ಇರಬೇಡಿ. ಈಡಿಗ, ಬಿಲ್ಲವ, ನಾಮಧಾರಿ ಸಮುದಾಯದವರು ಕೇವಲ ರಾಜ್ಯದಲ್ಲಿ ಮಾತ್ರ ಅಲ್ಲ, ಎಲ್ಲ ರಾಜ್ಯಗಳಲ್ಲೂ ಇದ್ದಾರೆ. ದೇವರಾಜ ಅರಸು ಅವರ ಬಗ್ಗೆ ಭಾಷಣದಲ್ಲಿ ಪುಂಕಾನು ಪುಂಕವಾಗಿ ಹಾಡಿ ಹೊಗಳುವ ನಾವು ಅವರ ಮೊಮ್ಮಗನಿಗೆ ಯಾವ ಅಧಿಕಾರವನ್ನೂ ಕೊಟ್ಟಿಲ್ಲ ಅಂತ ಅವಮಾನ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಮ್ಮ ಸಮುದಾಯ ಅತಂತ್ರವಾಗಿದೆ. ಇದು ಅತಂತ್ರ ಸಮುದಾಯದ ವೇದಿಕೆ. ಚುನಾವಣೆ ಬರುವಾಗ ಘೋಷಣೆ ಮಾಡಿದ್ದೇ ಮಾಡಿದ್ದು. ಅಧಿಕಾರಕ್ಕೆ ಬರಲು ಏನೇನೋ ಭರವಸೆ ನೀಡಿದರು. ಆದರೆ ಅಧಿಕಾರಕ್ಕೆ ಬಂದ ಮೇಲೆ ಅತೀ ಹಿಂದುಳಿದ ವರ್ಗಗಳು ನೆನಪೇ ಆಗಿಲ್ಲ. ಅಧಿಕಾರ ಸಿಕ್ಕ ತಕ್ಷಣವೇ ಸಮುದಾಯಕ್ಕೆ ಕೊಡಬೇಕಾಗಿರುವುದು ಇನ್ನೂ ಸಿಕ್ಕಿಲ್ಲ. ಸಮುದಾಯದ ಶಕ್ತಿ ಏನೂ ಎನ್ನುವುದನ್ನು ನಾವೇ ಇನ್ನೂ ತಿಳಿದುಕೊಂಡಿಲ್ಲ ಎಂದು ಪರೋಕ್ಷವಾಗಿ ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ದೇವರಾಜ ಅರಸು ಕಾರಿನಲ್ಲಿ ಕುಳಿತರೆ ದೇವರಾಜ ಅರಸು ಆಗಲ್ಲ

ಹಿಂದಿನ ಯಾವ ಮುಖ್ಯಮಂತ್ರಿಗಳೂ ಜಾತಿ ರಾಜಕಾರಣ ಮಾಡಲಿಲ್ಲ. ಕಾಗೋಡು ತಿಮ್ಮಪ್ಪ, ಬಂಗಾರಪ್ಪ ಜಾತಿ ರಾಜಕಾರಣ ಮಾಡಲಿಲ್ಲ. ಪಂಚೆ ಹಾಕಿಕೊಂಡು ವಾಚ್ ಕಟ್ಟಿಕೊಂಡು ಖಾಕಿ ಚಡ್ಡಿ ಹಾಕೊಂಡು, ಸಮಾಜವಾದಿ ಅಂತಾ ಹೇಳಿದರೆ ಆಗುವುದಿಲ್ಲ. ನಾನು ಮೂರು ಬಾರಿ ಸೋತಿರಬಹುದು, ಆದರೆ ಇನ್ನೂ ಸತ್ತಿಲ್ಲ. ಸೈಟು ಕಳ್ಳತನ ಮಾಡಿ ಮಾರುವವನು ನನ್ನ ಬಗ್ಗೆ ಮಾತನಾಡುತ್ತಾನೆ. ಆದರೆ ಸ್ವಾಭಿಮಾನ ಬಿಟ್ಟು ಸಹನೆ ಕಳೆದುಕೊಂಡವನಲ್ಲ ನಾನು. ದೇವರಾಜ ಅರಸು ಕಾರಿನಲ್ಲಿ ಕುಳಿತರೆ ದೇವರಾಜ ಅರಸು ಆಗಲ್ಲ. ದೇವರಾಜ ಅರಸು ಚಿಂತನೆ ಇರಬೇಕು ಎಂದು ಪರೋಕ್ಷವಾಗಿ ಸಿಎಂ ವಿರುದ್ಧ ಬಿಕೆ ಹರಿಪ್ರಸಾದ್​ ವಾಗ್ದಾಳಿ ಮಾಡಿದರು.

ಬಿಕೆ ಹರಿಪ್ರಸಾದ್​​ ಸಿಎಂ ಆಗಲು ನಾವು ಒಗ್ಗಟ್ಟಾಗಬೇಕು ಮುಖ್ಯಮಂತ್ರಿ ಚಂದ್ರು ಕರೆ

ಮೂವತ್ತು, ನಾಲವತ್ತು ವರ್ಷಗಳ ಕಾಲ ರಾಜಕೀಯ ಮಾಡಿದ ಬಿಕೆ ಹರಿಪ್ರಸಾದ್ ಶೋಷಣೆಗೆ ಒಳಗಾಗಿದ್ದಾರೆ. ನಾನು ಖಾಯಂ ಮುಖ್ಯಮಂತ್ರಿ ಆಗಿದ್ದೇನೆ. ನನಗೆ ಮುಖ್ಯಮಂತ್ರಿ ಆಗಿ ಸಾಕಾಗಿದೆ. ಬಿಕೆ ಹರಿಪ್ರಸಾದ್ ಅವರನ್ನು ಮುಖ್ಯಮಂತ್ರಿ ಮಾಡುವುದಾದರೇ ನಾವು ಒಗ್ಗಟ್ಟಾಗೋಣ ಎಂದು ಆಮ್​ ಆದ್ಮಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ, ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಕರೆ ಕೊಟ್ಟರು. ಈಡಿಗ ಸಮುದಾಯದ ಡಾ. ರಾಜಕುಮಾರ ಅವರ ಜೊತೆ ನಾನು ಪಾತ್ರ ಮಾಡಿದ್ದೇನೆ. ಅಲ್ಪಸಂಖ್ಯಾತರಲ್ಲಿ ಸ್ವಲ ಸಂಖ್ಯಾತರು ನಾವು ಆಗಿದ್ದೇವೆ ಎಂದರು.

ಇದನ್ನೂ ಓದಿ:  ಸಿಎಂ ಸಿದ್ದರಾಮಯ್ಯ ವಿರುದ್ಧ ಹೇಳಿಕೆ, ಬಿಕೆ ಹರಿಪ್ರಸಾದ್​ ವಿರುದ್ಧ ಕಾಂಗ್ರೆಸ್​ನಲ್ಲೇ ಭುಗಿಲೆದ್ದ ಆಕ್ರೋಶ

ನಮ್ಮ ಸಮುದಾಯದ ಐದು ಲಕ್ಷ ಜನ ಇದ್ದೇವೆ. ಅತೀ ಹಿಂದುಳಿದ 70 ಜಾತಿಗಳಿಗೆ ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ. ಸಿದ್ದರಾಮಯ್ಯ ಅವರು ಸಹ ಸಂಪೂರ್ಣವಾಗಿ ಮಾಡಿಲ್ಲ. ಹಿಂದುಳಿದ ವರ್ಗಗಳಲ್ಲಿ ಒಳ ವರ್ಗೀಕರಣ ಮಾಡಬೇಕು. ಒಳ‌‌ ಮೀಸಲಾತಿ ಆಗಬೇಕು. ಜನಗಣತಿ ಮೇಲೆ ಮೀಸಲಾತಿ ಸಿಕ್ಕಿದೆ. ಅದು ವೈಜ್ಞಾನಿಕವಾಗಿಲ್ಲ, ಜಾತಿಗಣತಿ ಆಧಾರಿತವಾಗಿ ಮೀಸಲಾತಿ ಆಗಬೇಕು. ಕಾಂತರಾಜ್ ವರದಿ ಜಾರಿ ಆದರೆ ಸಣ್ಣ ಸಣ್ಣ ಸಮುದಾಯಕ್ಕೆ ನ್ಯಾಯ ಸಿಗಲಿದೆ. ಕಾಂತರಾಜ್ ಅವರು ವರದಿ ಕೊಡಲು ತಯಾರಿದ್ದರೂ ಸಿದ್ದರಾಮಯ್ಯ ಸ್ವೀಕರಿಸಲಿಲ್ಲ. ಕಾರಣ ತಮ್ಮ ಸಮುದಾಯಕ್ಕೆ ಮೀಸಲಾತಿ ತೊಂದರೆ ಆಗುತ್ತೆ ಅಂತ ವರದಿ ಪಡೆಯಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಗಂಭೀರ ಆರೋಪ ಮಾಡಿದರು.

ಬಳಿಕ ಕಾಂತರಾಜ್ ಅವರು ಕುಮಾರಸ್ವಾಮಿ ಅವರಿಗೆ ಪತ್ರ ಬರೆದರು. ಅವರು ಕೂಡ ಜಾತಿಗಣತಿ ವರದಿ ಸ್ವೀಕರಿಸಲಿಲ್ಲ. ಕಾರಣ ಒಕ್ಕಲಿಗರ ಮೀಸಲಾತಿಗೆ ಸಮಸ್ಯೆ ಆಗತ್ತೆ ಅಂತ. ವರದಿಗೆ ಸಹಿ ಹಾಕಿಲ್ಲ ಅದು ಇದೂ ಅಂತ ಹೇಳುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದರು.

ಈಡಿಗ, ಬಿಲ್ಲವ, ನಾಮಧಾರಿ ಸಮುದಾಯ ಭಿಕ್ಷೆ ಬೇಡುವವರ ಅಲ್ಲ: ಪ್ರಣವಾನಂದ ಸ್ವಾಮೀಜಿ

ಹಿಂದುಳಿದ ವರ್ಗಕ್ಕೆ ಶಕ್ತಿ ಕೊಟ್ಟ ನಾಯಕರು ಎಲ್ಲಿದ್ದಾರೆ? ಇಂಥ ನಾಯಕರನ್ನು ನಡೆಸುಕೊಳ್ಳುತ್ತಿರುವ ರೀತಿ ಸರಿ ಇಲ್ಲ. ಅತಿ ಹಿಂದುಳಿದ ವರ್ಗಗಳ ಸಮುದಾಯಕ್ಕೆ ಎಲ್ಲಿ ಅವಕಾಶ ಕೊಟ್ಡಿದ್ದೀರಿ? ವಿಧಾನಸಭೆಯಲ್ಲಿ ಪ್ರವೇಶ ಮಾಡುವುದಕ್ಕೆ ಸಣ್ಣ ಸಣ್ಣ ಹಿಂದುಳಿದ ವರ್ಗಗಳ ಸಮುದಾಯಕ್ಕೆ ಅವಕಾಶ ಕೊಟ್ಟಿದ್ದೀರಾ? ಈಡಿಗ, ಬಿಲ್ಲವ, ನಾಮಧಾರಿ ಸಮುದಾಯ ಭಿಕ್ಷೆ ಬೇಡುವ ಸಮುದಾಯ ಅಲ್ಲ. ಅಂಥ ಸಮುದಾಯಗಳ ನಾಯಕರನ್ನೇ ಷಡ್ಯಂತ್ರದಿಂದ ದೂರ ಮಾಡಲಾಗುತ್ತಿದೆ ಎಂದು ಈಡಿಗ ಸಮುದಾಯದ ಪ್ರಣವಾನಂದ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.

ಹಿಂದೆ ದೇವರಾಜ ಅರಸು ಅವರ ಸಂಪುಟದಲ್ಲಿ ಬಂಗಾರಪ್ಪ ಅವರನ್ನು ಸೇರ್ಪಡೆ ಮಾಡಿಕೊಳ್ಳಬಾರದು ಅಂತ ಪತ್ರ ದೆಹಲಿಯಿಂದ ಬಂದಿತ್ತು. ನಾವು ಈಡಿಗ ಸಮುದಾಯದ ನಾಯಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಈಗ ಇಲ್ಲಿಂದಲೇ ಪತ್ರ ಹೋಗುತ್ತದೆ. ಮಂಗಳೂರು ಉಡುಪಿ ಕಾರವಾರ ಶಿವಮೊಗ್ಗ ನಾಲ್ಕು ಜಿಲ್ಲೆಯಲ್ಲಿ ನಾವೇ ನಿರ್ಣಾಯಕ ಸಮುದಾಯ ಎಂಬುದನ್ನು ಮರೆಯಬೇಡಿ ಎಂದು ಎಚ್ಚರಿಕೆ ಕೊಟ್ಟರು.

ಈಡಿಗ, ಬಿಲ್ಲವ, ನಾಮಧಾರಿ, ದೀವರು ಮತ್ತು ಅತೀ ಹಿಂದುಳಿದ ವರ್ಗಗಳ ಸಮಾವೇಶ ಭಾಗಿಯಾದ ವಿವಿಧ ಸಮುದಾಯಗಳ ಮಠಾಧೀಶರು, ಕಾಂಗ್ರೆಸ್ ಹಿರಿಯ ನಾಯಕ ಬಿಕೆ ಹರಿಪ್ರಸಾದ್, ವಿಧಾನಪರಿಷತ್ ಮಾಜಿ ಸದಸ್ಯ ಎಚ್.ಆರ್ ಶ್ರೀನಾಥ್, ಮಾಜಿ ಸಚಿವ ಶಿವಮೂರ್ತಿ ನಾಯಕ್, ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ದ್ವಾರಕನಾಥ್, ಬಿಜೆಪಿ ಮುಖಂಡ ನೆಲ ನರೇಂದ್ರಬಾಬು, ಮುಖ್ಯಮಂತ್ರಿ ಚಂದ್ರು ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:25 pm, Sat, 9 September 23