ಬೆಂಗಳೂರು: ಕಾಂಗ್ರೆಸ್ನ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ಪಕ್ಷದಲ್ಲಿ ಹೊಂದಿದ್ದ ಎಲ್ಲ ಸ್ಥಾನಗಳಿಗೂ ಶುಕ್ರವಾರ ರಾಜೀನಾಮೆ ನೀಡಿದ್ದಾರೆ. ಇಂದಿರಾ ಗಾಂಧಿ, ಸಂಜಯ್ ಗಾಂಧಿ, ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ಆಪ್ತ ವಲಯದಲ್ಲಿದ್ದ ಈ ಹಿರಿಯ ನಾಯಕನ ರಾಜೀನಾಮೆ ಪಕ್ಷದ ಮೇಲೆ ಬೀರಬಹುದಾದ ಪರಿಣಾಮಗಳು ಬಗ್ಗೆ ಹಲವು ಆಯಾಮಗಳಿಂದ ವಿಶ್ಲೇಷಣೆಗಳು ನಡೆಯುತ್ತಿವೆ. ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ಸುಧಾರಣೆ ಆಗಬೇಕು ಎಂದು ಆಗ್ರಹಿಸಿ ಪತ್ರ ಬರೆದಿದ್ದ ಜಿ-23 ನಾಯಕರ ಪತ್ರದಲ್ಲಿಯೂ ಗುಲಾಂ ನಬಿ ಆಜಾದ್ ಅವರ ಸಹಿಯಿತ್ತು. ಹಲವು ರಾಜ್ಯಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದ ಪ್ರಭಾವಿ ನಾಯಕ ತಮ್ಮ ರಾಜೀನಾಮೆಗೆ ‘ಕಾಂಗ್ರೆಸ್ ಪಕ್ಷದ ಅಸಮರ್ಥ’ ನಾಯಕತ್ವವನ್ನು ಪ್ರತ್ಯಕ್ಷವಾಗಿ ಮತ್ತು ‘ಅಪ್ರಬುದ್ಧ ಸೂತ್ರದ ಗೊಂಬೆ’ ರಾಹುಲ್ ಗಾಂಧಿಯನ್ನು ಪರೋಕ್ಷವಾಗಿ ಕಾರಣ ಎಂದು ಹೇಳಿದ್ದಾರೆ.
ಗುಲಾಂ ನಬಿ ಆಜಾದ್ ಅವರ 5 ಪುಟಗಳ ರಾಜೀನಾಮೆ ಪತ್ರದ ಕನ್ನಡ ಅನುವಾದ ಇದು. ಭಾರತದ ರಾಜಕೀಯ ಚರಿತ್ರೆ ಮತ್ತು ಪ್ರಚಲಿತ ವಿದ್ಯಮಾನಗಳನ್ನು ಪರಿಶೀಲಿಸುವ ದೃಷ್ಟಿಯಿಂದ ಈ ಪತ್ರವು ತನ್ನದೇ ಆದ ಮಹತ್ವ ಪಡೆದುಕೊಂಡಿದೆ.
ಗೌರವಾನ್ವಿತ ಕಾಂಗ್ರೆಸ್ ಅಧ್ಯಕ್ಷರೇ,
ನಾನು ಕಾಂಗ್ರೆಸ್ ಪಕ್ಷಕ್ಕೆ 1970ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸೇರಿದೆ. ಆಗ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಬಗ್ಗೆ ಅಂಥ ಒಳ್ಳೇ ಭಾವನೆ ಇರಲಿಲ್ಲ. ಸೇಖ್ ಮೊಹಮದ್ ಅಬ್ದುಲ್ಲಾ ಅವರನ್ನು 8ನೇ ಆಗಸ್ಟ್ 1953ರಲ್ಲಿ ಬಂಧಿಸಿದ ನಂತರ ಕಾಂಗ್ರೆಸ್ ಬಗ್ಗೆ ರಾಜ್ಯದ ಜನರಲ್ಲಿ ಅಸಮಾಧಾನವಿತ್ತು. ಇದ್ಯಾವುದನ್ನೂ ನಾನು ಗಮನದಲ್ಲಿ ಇರಿಸಿಕೊಳ್ಳಲಿಲ್ಲ. ನನ್ನ ವಿದ್ಯಾರ್ಥಿ ದೆಸೆಯಲ್ಲಿ ಮಹಾತ್ಮಾ ಗಾಂಧಿ, ಜವಾಹರ್ಲಾಲ್ ನೆಹರು, ಸರ್ದಾರ್ ವಲ್ಲಭಭಾಯ್ ಪಟೇಲ್, ಮೌಲಾನಾ ಅಬುಲ್ ಕಲಾಂ ಆಜಾದ್, ಸುಭಾಷ್ ಚಂದ್ರಬೋಸ್ ಸೇರಿದಂತೆ ಹಲವು ಸ್ವಾತಂತ್ರ್ಯ ಹೋರಾಟಗಾರರಿಂದ ಪ್ರೇರಣೆ ಪಡೆದಿದ್ದೆ. ಸಂಜಯ್ ಗಾಂಧಿ ಅವರ ಸೂಚನೆ ಮೇರೆಗೆ 1975-76ರಲ್ಲಿ ಜಮ್ಮು ಮತ್ತು ಕಾಶ್ಮೀರ ಯೂತ್ ಕಾಂಗ್ರೆಸ್ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದೆ.
1977ರ ನಂತರ ಸಂಜಯ್ ಗಾಂಧಿ ಅವರೊಂದಿಗೆ ನಾನು ಜೈಲಿನಿಂದ ಜೈಲಿಗೆ ತಿರುಗಿದೆ. ಇಂದಿರಾಗಾಂಧಿ ಅವರ ಬಂಧನ ಖಂಡಿಸಿ ಮೆರವಣಿಗೆ ನಡೆಸಿದ ಕಾರಣಕ್ಕೆ ನನ್ನನ್ನು ತಿಹಾರ್ ಜೈಲಿನಲ್ಲಿ ಇಟ್ಟಿದ್ದರು. ಜನತಾ ಪಕ್ಷದ ವಿರುದ್ಧ ನಿರಂತರ ಹೋರಾಟದ ಜೊತೆಗೆ ಕಾಂಗ್ರೆಸ್ ಪಕ್ಷ ಸಂಘಟಿಸುವಲ್ಲಿ ಸತತವಾಗಿ ತೊಡಗಿಸಿಕೊಂಡಿದ್ದೆ. ಸಂಘಟಿತ ಪ್ರಯತ್ನದಿಂದಾಗಿ 1980ರಲ್ಲಿ ಪಕ್ಷವು ಮತ್ತೆ ಅಧಿಕಾರಕ್ಕೆ ಬಂತು.
ಭಾರತದ ಯುವ ಕಣ್ಮಣಿ ಸಂಜಯ್ ಗಾಂಧಿ ನಿಧನದ ನಂತರ ನಾನು ಯುವ ಕಾಂಗ್ರೆಸ್ ಅಧ್ಯಕ್ಷನಾಗಿ 1980ರಲ್ಲಿ ಅಧಿಕಾರ ವಹಿಸಿಕೊಂಡೆ. ನಿಮ್ಮ ಪತಿ ದಿವಂಗತ ರಾಜೀವ್ ಗಾಂಧಿ ಅವರನ್ನು ಸಂಜಯ್ ಗಾಂಧಿ ಅವರ ಮೊದಲ ಪುಣ್ಯತಿಥಿಯಂದು ಯುವ ಕಾಂಗ್ರೆಸ್ಗೆ ಸೇರ್ಪಡೆ ಮಾಡಿಕೊಳ್ಳುವ ಅವಕಾಶವೂ ನನಗೆ ಸಿಕ್ಕಿತ್ತು. ಬೆಂಗಳೂರಿನಲ್ಲಿ 1981ರ ಡಿಸೆಂಬರ್ 29, 30ರಲ್ಲಿ ನಡೆದ ಸಮಾವೇಶದಲ್ಲಿ ನನ್ನಿಂದಲೇ ರಾಜೀವ್ ಗಾಂಧಿ ಅವರು ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಸ್ವೀಕರಿಸಿದ್ದರು.
ಇಂದಿರಾಗಾಂಧಿ, ರಾಜೀವ್ ಗಾಂಧಿ, ಪಿ.ವಿ.ನರಸಿಂಹರಾವ್ ಮತ್ತು ಮನಮೋಹನ್ ಸಿಂಗ್ ಅವರ ಆಡಳಿತದಲ್ಲಿ 1982ರಿಂದ 2014ರವರೆಗೆ ಕೇಂದ್ರ ಸಚಿವನಾಗಿ ಸೇವೆ ಸಲ್ಲಿಸುವ ಅವಕಾಶ ನನಗೆ ಸಿಕ್ಕಿತ್ತು. 1980ರ ನಂತರ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ, ಸಂಸದೀಯ ಮಂಡಳಿ ಸದಸ್ಯನಾಗಿ ಸೇವೆ ಸಲ್ಲಿಸಿದ್ದೇನೆ. ಒಂದಲ್ಲ ಒಂದು ಸಂದರ್ಭದಲ್ಲಿ ದೇಶದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಾನು ಉಸ್ತುವಾರಿಯಾಗಿದ್ದೆ. ಈ ಅವಧಿಯಲ್ಲಿ ಶೇ 90ರಷ್ಟು ರಾಜ್ಯಗಳಲ್ಲಿ ಕಾಂಗ್ರೆಸ್ ಜಯಗಳಿಸಿತ್ತು.
ಕಾಂಗ್ರೆಸ್ ಎಂಬ ಮಹಾನ್ ಸಂಸ್ಥೆಗೆ ನಾನು ಹಲವು ವರ್ಷಗಳ ಕಾಲ ನಿಸ್ವಾರ್ಥ ಸೇವೆ ಸಲ್ಲಿಸಿದ್ದೇನೆ. ರಾಜ್ಯಸಭೆಯಲ್ಲಿ 7 ವರ್ಷ ವಿರೋಧ ಪಕ್ಷ ನಾಯಕನಾಗಿ ಕೆಲಸ ಮಾಡಿದೆ. ಪ್ರೌಢನಾದ ನಂತರ ಪ್ರತಿಕ್ಷಣವನ್ನೂ ಪಕ್ಷಕ್ಕಾಗಿ ದುಡಿದಿದ್ದೇನೆ. ಇದು ನನ್ನ ಆರೋಗ್ಯ ಮತ್ತು ಕುಟುಂಬದ ಮೇಲೆಯೂ ಪರಿಣಾಮ ಬೀರಿತು.
ಯುಪಿಎ-1 ಮತ್ತು ಯುಪಿಎ-2 ಸರ್ಕಾರ ಬರುವಲ್ಲಿ ನಿಮ್ಮ ಪಾತ್ರ ದೊಡ್ಡದು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಪಕ್ಷದ ಸಾಧನೆಗೆ ತಮ್ಮೊಂದಿಗೆ ಇದ್ದ ಹಿರಿಯ ನಾಯಕರು, ಅವರಿಗೆ ನೀವು ಕೊಟ್ಟಿದ್ದ ಜವಾಬ್ದಾರಿ ಮತ್ತು ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದ ರೀತಿಯೂ ಮುಖ್ಯ ಕಾರಣವಾಗಿದೆ. ಆದರೆ, ದುರಾದೃಷ್ಟವಶಾತ್ ಜನವರಿ 2013ರಲ್ಲಿ ರಾಹುಲ್ ಗಾಂಧಿ ಅವರು ರಾಜಕಾರಣಕ್ಕೆ ಪ್ರವೇಶಿಸಿದ ನಂತರ, ನೀವು ಅವರಿಗೆ ಉಪಾಧ್ಯಕ್ಷನ ಜವಾಬ್ದಾರಿ ನೀಡಿದ ನಂತರ ಸಮಾಲೋಚನೆಯ ವ್ಯವಸ್ಥೆಯನ್ನೇ ಅವರು ಹಾಳು ಮಾಡಿದರು.
ಹಿರಿಯ ನಾಯಕರನ್ನು ಬದಿಗೊತ್ತಲಾಯಿತು. ಅನನುಭವಿ ಹೊಸಬರ ತಂಡವು ಪಕ್ಷವನ್ನು ಮುನ್ನಡೆಸಲು ಆರಂಭಿಸಿತು. ರಾಹುಲ್ ಗಾಂಧಿ ಅವರು ರಾಜಕಾರಣವನ್ನು ಮಕ್ಕಳಾಟದಂತೆ ನಿರ್ವಹಿಸಿದರು. ರಾಷ್ಟ್ರಪತಿಗಳು ಹೊರಡಿಸಿದ್ದ ಸುಗ್ರೀವಾಜ್ಞೆಯನ್ನು ಅವರು ಮಾಧ್ಯಮಗಳ ಎದುರು ಹರಿದುಹಾಕಿದ್ದು ಅವರ ದಡ್ಡತನದ ವರ್ತನೆಗೆ ದೊಡ್ಡ ನಿದರ್ಶನ. ಈ ಸುಗ್ರೀವಾಜ್ಞೆಯನ್ನು ಕೇಂದ್ರ ಸಚಿವ ಸಂಪುಟ ಅನುಮೋದಿಸಿತ್ತು, ಪಕ್ಷದ ಕೋರ್ ಗ್ರೂಪ್ ಅದನ್ನು ಸಿದ್ಧಪಡಿಸಿತ್ತು.
ರಾಹುಲ್ ಗಾಂಧಿ ಅವರ ಈ ದಡ್ಡತನದ ಕೆಲಸವು ರಾಷ್ಟ್ರಪತಿ ಮತ್ತು ಪ್ರಧಾನಿಯ ಅಧಿಕಾರವನ್ನೇ ಪ್ರಶ್ನಿಸಿತ್ತು. 2014ರಲ್ಲಿ ಕಾಂಗ್ರೆಸ್ ಪಕ್ಷದ ಸೋಲಿಗೆ ರಾಹುಲ್ ಈ ನಡೆಯು ದೊಡ್ಡ ಕೊಡುಗೆ ಕೊಟ್ಟಿದೆ. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಬಲಪಂಥೀಯ ಸಂಘಟನೆಗಳು, ಕೆಲ ಕಾರ್ಪೊರೇಟ್ ಕಂಪನಿಗಳು ಈ ಘಟನೆಯನ್ನು ತಮ್ಮಿಷ್ಟದಂತೆ ಬಳಸಿಕೊಂಡವು. 2013ರಲ್ಲಿ ಜೈಪುರದಲ್ಲಿ ನಡೆದಿದ್ದ ಕಾಂಗ್ರೆಸ್ ಸಮಾವೇಶ ನಡೆದಿತ್ತು. ಈ ಸಮಾವೇಶದಲ್ಲಿ ನಾನು ಪಕ್ಷದ ಇತರ ನಾಯಕರ ನೆರವಿನಿಂದ ಪ್ರಸ್ತಾವವೊಂದನ್ನು ನೀಡಿದ್ದೆ. ಕಾಂಗ್ರೆಸ್ನ ಪುನರುಜ್ಜೀವನಕ್ಕೆ ಏನೆಲ್ಲಾ ಮಾಡಬೇಕು ಎಂಬ ವಿವರಗಳು ಅದರಲ್ಲಿ ಇತ್ತು. 2014ರ ಲೋಕಸಭೆ ಚುನಾವಣೆಯ ಕಾಲಮಿತಿಯಲ್ಲಿ ಜಾರಿಗೊಳಿಸಬೇಕಿದ್ದ ಶಿಫಾರಸುಗಳು ಅದರಲ್ಲಿತ್ತು. ಆದರೆ ಕಳೆದ 9 ವರ್ಷಗಳಿಂದ ಇದು ಪಕ್ಷದ ಕೇಂದ್ರ ಕಚೇರಿಯ ಗೋದಾಮಿನಲ್ಲಿ ಕೊಳೆಯುತ್ತಿದೆ. ತಮಗೆ ಮತ್ತು ಪಕ್ಷದ ಅಂದಿನ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಹಲವು ಬಾರಿ ನಾನು ವೈಯಕ್ತಿಕವಾಗಿ ನೆನಪಿಸಿದ್ದೆ. ಆದರೂ ಪ್ರಯೋಜನವಾಗಲಿಲ್ಲ.
ರಾಹುಲ್ ಗಾಂಧಿ ಅವರ ನಾಯಕತ್ವದಲ್ಲಿ 2014 ಮತ್ತು 2019ರ ಲೋಕಸಭಾ ಚುನಾವಣೆಗಳನ್ನು ಸೋತೆವು. 2014ರಿಂದ 2022ರ ನಡುವೆ ನಡೆದ 49 ವಿಧಾನಸಭಾ ಚುನಾವಣೆಗಳ ಪೈಕಿ 39ರಲ್ಲಿ ಸೋಲನುಭವಿಸಿದೆವು. 2019ರ ನಂತರ ಪಕ್ಷದ ಪರಿಸ್ಥಿತಿ ಇನ್ನಷ್ಟು ಕೆಟ್ಟಿದೆ. ಏಕಾಏಕಿ ರಾಹುಲ್ ಗಾಂಧಿ ನಾಯಕತ್ವದಿಂದ ಕೆಳಗಿಳಿದರು. ಪಕ್ಷಕ್ಕಾಗಿ ತಮ್ಮ ಜೀವನವನ್ನೇ ಧಾರೆ ಎರೆದಿದ್ದ ಹಿರಿಯ ನಾಯಕರ ಬಗ್ಗೆ ಬೇಕಾಬಿಟ್ಟಿಯಾಗಿ ಮಾತನಾಡಿದರು.
ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ‘ರಿಮೋಟ್ ಕಂಟ್ರೋಲ್ ಮಾಡೆಲ್’ ಎನ್ನುವ ಮಾತು ಪ್ರಚಲಿತದಲ್ಲಿತ್ತು. ಇಂದಿಗೂ ಅದು ಬದಲಾಗಿಲ್ಲ. ನೀವು ಅಧಿಕಾರದಲ್ಲಿದ್ದೀರಿ. ಆದರೆ ಎಲ್ಲ ನಿರ್ಧಾರಗಳನ್ನೂ ರಾಹುಲ್ ಗಾಂಧಿ ಅಥವಾ ಅವರ ಸೆಕ್ಯುರಿಟಿ ಗಾರ್ಡ್ ಮತ್ತು ಪಿಎಗಳು ತೆಗೆದುಕೊಳ್ಳುತ್ತಿದ್ದರು.
ಆಗಸ್ಟ್ 2020ರಲ್ಲಿ ನಾನು ಮತ್ತು ಪಕ್ಷದ ಇತರ 22 ನಾಯಕರು (ಮಾಜಿ ಕೇಂದ್ರ ಸಚಿವರು, ಮುಖ್ಯಮಂತ್ರಿಗಳು) ನಿಮಗೆ ಪತ್ರ ಬರೆದು ಪಕ್ಷದಲ್ಲಿ ಆಗಬೇಕಿರುವ ಸುಧಾರಣೆಗಳ ಬಗ್ಗೆ ಪ್ರಸ್ತಾಪಿಸಿದ್ದೆವು. ಆದರೆ ಈ ಪತ್ರಕ್ಕಾಗಿ ನಮ್ಮನ್ನು ಅಪ್ರಬುದ್ಧರು ವಾಚಾಮಗೋಚರ ನಿಂದಿಸಿದರು. ತೀರಾ ಕೆಟ್ಟದಾಗಿ ಮಾತನಾಡಿದರು. ಇಂದು ಎಐಸಿಸಿ ಮುನ್ನಡೆಸುತ್ತಿರುವ ಹಲವರು ಅಂದು ನನ್ನ ಅಣಕು ಶವಯಾತ್ರೆ ಮಾಡಿದ್ದರು. ನಿಮ್ಮನ್ನು ಮತ್ತು ನಿಮ್ಮ ಮಕ್ಕಳು, ಸಂಬಂಧಿಕರನ್ನು ನ್ಯಾಯಾಲಯಗಳಲ್ಲಿ ಸಮರ್ಥಿಸಿಕೊಳ್ಳುವ ಹಿರಿಯ ನಾಯಕ ಕಪಿಲ್ ಸಿಬಲ್ ಅವರ ಮನೆ ಮೇಲೆ ದಾಳಿ ನಡೆಸಲಾಯಿತು.
ನಾವು, ಕಾಂಗ್ರೆಸ್ ಪಕ್ಷದ 23 ಹಿರಿಯರು ಮಾಡಿದ ಒಂದೇ ಒಂದು ತಪ್ಪೆಂದರೆ ಪಕ್ಷದ ಸುಧಾರಣೆಗಾಗಿ ನೇರವಾಗಿ ತಮಗೆ ಪತ್ರ ಬರೆದಿದ್ದು. ಪತ್ರದಲ್ಲಿದ್ದ ಅಂಶಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸುವುದು ಬಿಟ್ಟು ವಿಶೇಷ ಸಭೆಯಲ್ಲಿಯೂ ನಮ್ಮ ಮೇಲೆ ವಾಗ್ದಾಳಿ ನಡೆಯಿತು.
ಕಾಂಗ್ರೆಸ್ ಪಕ್ಷವು ಇಂದು ಮತ್ತೆಂದು ಸರಿಪಡಿಸಲು ಆಗದ ಸ್ಥಿತಿ ತಲುಪಿದೆ. ‘ಬೇನಾಮಿ’ಗಳು ಹುಟ್ಟಿಕೊಂಡಿದ್ದಾರೆ. ಅವರೇ ಪಕ್ಷದ ನಾಯಕತ್ವವನ್ನು ನಿರ್ವಹಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷವು ಪುನರುಜ್ಜೀವನ ಸಾಧ್ಯವೇ ಇಲ್ಲ ಎನ್ನುವ ಸ್ಥಿತಿಗೆ ಬಂದಿದೆ. ಪಕ್ಷವು ಸಮಗ್ರವಾಗಿ ನಾಶವಾಗಿದೆ, ಪರಿಸ್ಥಿತಿ ಸಂಪೂರ್ಣ ವ್ಯತಿರಿಕ್ತವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಪಕ್ಷದ ನಾಯಕತ್ವ ವಹಿಸಿಕೊಳ್ಳುವವರು ಸೂತ್ರದ ಗೊಂಬೆಯಂತೆ ವರ್ತಿಸುತ್ತಿದ್ದಾರೆ.
ರಾಷ್ಟ್ರಮಟ್ಟದಲ್ಲಿ ನಮ್ಮ ಅವಕಾಶವನ್ನು ಬಿಜೆಪಿ ಒತ್ತೆಯಿಟ್ಟಿದ್ದೇವೆ. ರಾಜ್ಯಗಳ ಮಟ್ಟದಲ್ಲಿ ಗೆಲುವಿನ ಅವಕಾಶವನ್ನು ಪ್ರಾದೇಶಿಕ ಪಕ್ಷಗಳಿಗೆ ಬಿಟ್ಟುಕೊಟ್ಟಿದ್ದೇವೆ. ಕಳೆದ 8 ವರ್ಷಗಳಲ್ಲಿ ಗಾಂಭೀರ್ಯವೇ ಇಲ್ಲದ ವ್ಯಕ್ತಿಯ ಮೇಲೆ ಉನ್ನತ ನಾಯಕತ್ವ ಹಲವು ಪ್ರಯೋಗಗಳನ್ನು ನಡೆಸಿದ್ದೇ ಇದಕ್ಕೆ ಮುಖ್ಯ ಕಾರಣ.
ಪಕ್ಷದ ಸಂಘಟನೆಯ ಯಾವುದೇ ಹಂತಕ್ಕೆ ದೇಶದಲ್ಲಿ ಎಲ್ಲಿಯೂ ಚುನಾವಣೆಗಳು ನಡೆಯಲಿಲ್ಲ. ಎಐಸಿಸಿ ಆರಿಸಿಕೊಂಡ ಕೆಲವೇ ನಾಯಕರು 24, ಅಕ್ಬರ್ ರೋಡ್ನಲ್ಲಿ ಕುಳಿತು ಪಟ್ಟಿಗಳಿಗೆ ಸಹಿ ಹಾಕಬೇಕಿದೆ. ಬೂತ್, ಬ್ಲಾಕ್, ಜಿಲ್ಲೆ ಅಥವಾ ರಾಜ್ಯಮಟ್ಟದಲ್ಲಿ ಪಕ್ಷದ ಸಂಘಟನೆಗೆ ಮತ ಹಾಕಬೇಕಾದ ಮತದಾರರ ಪಟ್ಟಿ ಪ್ರಕಟಿಸಿಲ್ಲ. ಭಾರತದ ಸ್ವಾತಂತ್ರ್ಯಕ್ಕೆ ಶ್ರಮಿಸಿದ ಮಹಾನ್ ಸಂಘಟನೆಯು ಇಂದು ಒಂದು ಪಳೆಯುಳಿಕೆಯಂತಾಗಿದೆ. ಈ ಪಳೆಯುಳಿಕೆಯ ಆಳ್ವಿಕೆಗಾಗಿ ಉನ್ನತ ನಾಯಕತ್ವವು ಮೋಸದ ಮೇಲೆ ಮೋಸ ಮಾಡುತ್ತಿದೆ. ಸ್ವತಂತ್ರ ಭಾರತದ 75ನೇ ಸಂಭ್ರಮದಲ್ಲಿ ಇಂಥ ಪರಿಸ್ಥಿತಿ ಕಾಂಗ್ರೆಸ್ ಪಕ್ಷಕ್ಕೆ ಬೇಕಿತ್ತೇ ಎಂಬ ಪ್ರಶ್ನೆಯನ್ನು ಪಕ್ಷದ ಉನ್ನತ ನಾಯಕತ್ವ ಕೇಳಿಕೊಳ್ಳಬೇಕಿದೆ.
ನನಗೆ ತಮ್ಮ ಕುಟುಂಬದೊಂದಿಗೆ ಅತ್ಯಂತ ಹತ್ತಿರದ ಸಂಬಂಧವಿದೆ. ದಿವಂಗತರಾದ ಇಂದಿರಾ ಗಾಂಧಿ, ಸಂಜಯ್ ಗಾಂಧಿ ಮತ್ತು ರಾಹುಲ್ ಗಾಂಧಿ ಅವರೊಂದಿಗೆ ನನಗೆ ಆಪ್ತ ಒಡನಾಟವಿತ್ತು. ವೈಯಕ್ತಿಕವಾಗಿ ನಿಮ್ಮ ವ್ಯಕ್ತಿತ್ವದ ಬಗ್ಗೆ ನನಗೆ ಗೌರವ ಇದೆ. ಮುಂದಿನ ದಿನಗಳಲ್ಲಿಯೂ ಅದು ಮುಂದುವರಿಯುತ್ತದೆ. ನಾನು ಮತ್ತು ನನ್ನ ಕೆಲ ಮಿತ್ರರು ಕಾಂಗ್ರೆಸ್ ಪಕ್ಷದ ಸಾರ್ವಕಾಲಿಕ ಆದರ್ಶ ಮತ್ತು ಗುರಿಗಳನ್ನು ನಮ್ಮ ಜೀವನದ ಭಾಗವೇ ಆಗಿಸಿಕೊಂಡಿದ್ದೇವೆ. ಅದಕ್ಕಾಗಿ ನಮ್ಮ ಇಡೀ ಜೀವನ ಮುಡಿಪಾಗಿಟ್ಟಿದ್ದೇವೆ.
ಮೇಲೆ ಉಲ್ಲೇಖಿಸಿದ ಎಲ್ಲ ಕಾರಣಗಳಿಂದ, ಮುಖ್ಯವಾಗಿ ಎಐಸಿಸಿಯನ್ನು ನಿರ್ವಹಿಸುತ್ತಿರುವ ಕೂಟದ ಸಾಮರ್ಥ್ಯ ಮತ್ತು ಇಚ್ಛಾಶಕ್ತಿಯ ಬಗ್ಗೆ ವಿಶ್ವಾಸ ಕಳೆದುಕೊಂಡಿದ್ದೇನೆ. ಪಕ್ಷವು ಈಗ ಭಾರತ್ ಜೋಡೋ ಯಾತ್ರೆ ಆರಂಭಿಸಿದೆ. ಅದಕ್ಕಿಂತ ಮೊದಲು ಕಾಂಗ್ರೆಸ್ ಜೋಡೋ ಯಾತ್ರೆ ನಡೆಯಬೇಕಿತ್ತು. ಅತ್ಯಂತ ವಿಷಾದದಿಂದ ಪಕ್ಷದೊಂದಿಗಿನ ನನ್ನ 50 ವರ್ಷಗಳ ಸಂಬಂಧವನ್ನು ಕಡಿದುಕೊಳ್ಳುತ್ತಿದ್ದೇನೆ. ಪಕ್ಷದ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ಎಲ್ಲ ಸ್ಥಾನಗಳಿಗೂ ರಾಜೀನಾಮೆ ಕೊಡುತ್ತಿದ್ದೇನೆ.
Congress leader Ghulam Nabi Azad severs all ties with Congress Party pic.twitter.com/RuVvRqGSj5
— ANI (@ANI) August 26, 2022