ಕಾಂಗ್ರೆಸ್‌ನ (Congress) ಕೇಂದ್ರ ಚುನಾವಣಾ ಪ್ರಾಧಿಕಾರವು ಎಐಸಿಸಿ (AICC) ಅಧ್ಯಕ್ಷರ ಚುನಾವಣೆಗೆ ಅಧಿಸೂಚನೆಯನ್ನು ಹೊರಡಿಸಿದ್ದು, ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಅವರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಲು ವೇದಿಕೆಯನ್ನು ಸಿದ್ಧಪಡಿಸಿದೆ. ಅಧಿಸೂಚನೆ ಹೊರಡಿಸಿದ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ಅವರು ಅವರು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ನ ಸಂವಿಧಾನದ XVIII ನೇ ವಿಧಿಯ ನಿಬಂಧನೆಯ ಪ್ರಕಾರ ಪಕ್ಷದ ಅಧ್ಯಕ್ಷರ ಆಯ್ಕೆಗಿರುವ ಪ್ರಕ್ರಿಯೆಯ ಬಗ್ಗೆ ವೇಳಾಪಟ್ಟಿ ನೀಡಿದ್ದಾರೆ. ಅಧಿಸೂಚನೆಯ ಪ್ರಕಾರ ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಸೆ.24ರಿಂದ 30ರವರೆಗೆ ನಡೆಯಲಿದೆ. ಅಕ್ಟೋಬರ್ 1 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಅಕ್ಟೋಬರ್ 8 ಕೊನೆಯ ದಿನವಾಗಿರುತ್ತದೆ. ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳಿದ್ದಲ್ಲಿ ಅಕ್ಟೋಬರ್ 17 ರಂದು ಚುನಾವಣೆ ನಡೆಯಲಿದೆ. ಅಕ್ಟೋಬರ್ 19 ರಂದು ಮತ ಎಣಿಕೆ ಮತ್ತು ಫಲಿತಾಂಶ ಘೋಷಣೆಯಾಗಲಿದೆ.
Congress issues notification for the party president elections
Nominations to be filed from Sep 24 to Sep 30. If necessary, voting will be held on Oct 17 and the result for the same will be declared on Oct 19 pic.twitter.com/r032tslwyM
— ANI (@ANI) September 22, 2022
ಎರಡು ದಶಕಗಳ ನಂತರ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಹುದ್ದೆಗೆ ಚುನಾವಣೆ ನಡೆಯಲಿದೆ ಒಂದು ವೇಳೆ ರಾಹುಲ್ ಗಾಂಧಿ ಪಕ್ಷದ ಅಧಿಕಾರ ವಹಿಸಿಕೊಳ್ಳಲು ಒಪ್ಪದಿದ್ದರೆ ತಾನು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಶಶಿ ತರೂರ್ ಹೇಳಿದ್ದಾರೆ. ಸ್ಪರ್ಧಿಗಳ ಬಗ್ಗೆ ಸ್ಪಷ್ಟತೆ ಇಲ್ಲದಿದ್ದರೂ, ತರೂರ್ ಮತ್ತು ರಾಜಸ್ಥಾನದ ಸಿಎಂ ಅಶೋಕ್ ಗೆಹ್ಲೋಟ್ ನಡುವೆ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ.
ಪಕ್ಷದ ಅಧ್ಯಕ್ಷರ ಚುನಾವಣೆಗೆ ನಾಮಪತ್ರ ಸಲ್ಲಿಸಲು ನಿರ್ಧರಿಸಿದರೆ ನವದೆಹಲಿಗೆ ಬರುವಂತೆ ಹೇಳಲಾಗುವುದು ಎಂದು ಗೆಹ್ಲೋಟ್ ಮಂಗಳವಾರ ರಾಜಸ್ಥಾನದ ಕಾಂಗ್ರೆಸ್ ಶಾಸಕರಿಗೆ ತಿಳಿಸಿದ್ದಾರೆ.ಆದರೆ ಅಲ್ಲಿ ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆಯ ನೇತೃತ್ವ ವಹಿಸಿರುವ ರಾಹುಲ್ ಗಾಂಧಿ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವಂತೆ ಮನವೊಲಿಸಲು ಕೊಚ್ಚಿಗೆ ಮೊದಲು ಭೇಟಿ ನೀಡುವುದಾಗಿಯೂ ಅವರು ಹೇಳಿದ್ದಾರೆ. ರಾಜ್ಯ ಕ್ಯಾಬಿನೆಟ್ ಸಚಿವ ಪ್ರತಾಪ್ ಸಿಂಗ್ ಖಚರಿಯಾವಾಸ್ ಪ್ರಕಾರ, ಜೈಪುರದ ತಮ್ಮ ಅಧಿಕೃತ ನಿವಾಸದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಗೆಹ್ಲೋಟ್ ಈ ಹೇಳಿಕೆಗಳನ್ನು ನೀಡಿದ್ದಾರೆ.
2017 ಮತ್ತು 2019 ರ ನಡುವೆ ಎರಡು ವರ್ಷಗಳಲ್ಲಿ ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನದಲ್ಲಿದ್ದುದನ್ನು ಹೊರತುಪಡಿಸಿದೆ 1998 ರಿಂದ ಸೋನಿಯಾ ಗಾಂಧಿಯೇ ಪಕ್ಷದ ಚುಕ್ಕಾಣಿ ಹಿಡಿದಿದ್ದಾರೆ. ಸುದೀರ್ಘ ಕಾಲದಿಂದ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಬದಲಾವಣೆ ಬರುತ್ತಿರುವುದರಿಂದ ಈ ಚುನಾವಣೆ ವಿಶೇಷ ಎಂದೆನಿಸಿದೆ.
ಪಕ್ಷವು ನವೆಂಬರ್ 2000 ರಲ್ಲಿ ಈ ಹುದ್ದೆಗೆ ಕೊನೆಯ ಬಾರಿ ಸ್ಪರ್ಧೆ ನಡೆದಿದೆ. ಜಿತೇಂದ್ರ ಪ್ರಸಾದ ಅವರು 2000 ರಲ್ಲಿ ಸೋನಿಯಾ ಗಾಂಧಿಯವರ ವಿರುದ್ಧ ಸೋತಿದ್ದರು. ಅದಕ್ಕೂ ಮೊದಲು ಸೀತಾರಾಮ್ ಕೇಸರಿ ಅವರು 1997 ರಲ್ಲಿ ಶರದ್ ಪವಾರ್ ಮತ್ತು ರಾಜೇಶ್ ಪೈಲಟ್ ಅವರನ್ನು ಸೋಲಿಸಿದ್ದರು. ರಾಹುಲ್ ಗಾಂಧಿ ಅವರು ಪಕ್ಷದ ಅಧ್ಯಕ್ಷ ಸ್ಥಾನವನ್ನು ತೆಗೆದುಕೊಳ್ಳುವುದಿಲ್ಲ ಎಂಬ ಗಟ್ಟಿ ನಿಲುವು ತಳೆದಿರುವುದರಿಂದಾಗಿ ರಡು ದಶಕಗಳ ನಂತರ ಪಕ್ಷವು ತನ್ನ ಮೊದಲ ಗಾಂಧಿಯೇತರ ಅಧ್ಯಕ್ಷರನ್ನು ಹೊಂದುವ ಸಾಧ್ಯತೆ ಇದೆ.
ಅಲ್ಲದೆ ಸೋನಿಯಾ ಗಾಂಧಿ ಅವರು ಚುನಾವಣೆಯಲ್ಲಿ ತಟಸ್ಥವಾಗಿರುತ್ತಾರೆ. ಯಾವುದೇ ಅಧಿಕೃತ ಅಭ್ಯರ್ಥಿ ಇರುವುದಿಲ್ಲ ಎಂದು ಅವರು ಹೇಳಿದ್ದು ಇದು 2000 ರಲ್ಲಿ ನಡೆದ ಸ್ಪರ್ಧೆಗಿಂತ ತೀವ್ರ ಸ್ಪರ್ಧೆಯಾಗಿರಬಹುದು.
ಸೋಮವಾರ ತರೂರ್ ಅವರು ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ಮುಂಬರುವ ಎಐಸಿಸಿ ಮುಖ್ಯಸ್ಥರ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ, ಆದರೆ ಕಾಂಗ್ರೆಸ್ ಅಧ್ಯಕ್ಷರು ಅವರು ಚುನಾವಣೆಯಲ್ಲಿ “ತಟಸ್ಥ” ವಾಗಿ ಉಳಿಯುವುದಾಗಿ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹೆಚ್ಚಿನ ಜನರು ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸಾಹ ತೋರಿದ್ದನ್ನು ಸೋನಿಯಾ ಗಾಂಧಿ ಸ್ವಾಗತಿಸಿದ್ದಾರೆ.
ಚುನಾವಣೆಗೆ ಮುನ್ನ ನಡೆಯುತ್ತಿರುವ ಬಿರುಸಿನ ಚಟುವಟಿಕೆಗಳ ನಡುವೆ, ಸುಮಾರು 10 ಪಿಸಿಸಿಗಳು ರಾಹುಲ್ ಗಾಂಧಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಬೇಕೆಂದು ಒತ್ತಾಯಿಸಿದ್ದು ಅಂತಹ ಕ್ರಮಗಳು ಪರಿಣಾಮ ಬೀರುವುದಿಲ್ಲ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮಂಗಳವಾರ ಹೇಳಿದ್ದಾರೆ.
“ಇಡೀ ಪಕ್ಷವು ಭಾರತ್ ಜೋಡೋ ಯಾತ್ರೆಯನ್ನು ಯಶಸ್ವಿಗೊಳಿಸುವಲ್ಲಿ ತಲ್ಲೀನವಾಗಿದೆ. ಹಾಗಿದ್ದರೂ, ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಯಾವುದೇ ಸದಸ್ಯರಿಗೆ ಸ್ವಾಗತವಿದೆ ಎಂದು ಪುನರುಚ್ಚರಿಸುವುದು ಮುಖ್ಯವಾಗಿದೆ. ಇದು ಪ್ರಜಾಪ್ರಭುತ್ವ ಮತ್ತು ಪಾರದರ್ಶಕ ಪ್ರಕ್ರಿಯೆಯಾಗಿದೆ. ಪಕ್ಷದ ನಾಯಕತ್ವಕ್ಕಾಗ್ ಸ್ಪರ್ಧಿಸಲು ಯಾರೊಬ್ಬರಿಗೂ ಅನುಮತಿ ಬೇಕಿಲ್ಲ ಎಂದಿದ್ದಾರೆ ಜೈರಾಮ್ ರಮೇಶ್.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಅವರು ಮಂಗಳವಾರ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಎಐಸಿಸಿ ಮುಖ್ಯಸ್ಥರ ಆಯ್ಕೆ ಕುರಿತು ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.
ಯಾರು ನಾಮಪತ್ರ ಸಲ್ಲಿಸಲು ಬಯಸುತ್ತಾರೆ, ಅದನ್ನು ಸಲ್ಲಿಸಬಹುದು, ನಾವು ಅದನ್ನು ಬಹಿರಂಗ ಚುನಾವಣೆ ಎಂದು ಹೇಳಿದ್ದೇವೆ, ಯಾರು ಬೇಕಾದರೂ ಸ್ಪರ್ಧಿಸಬಹುದು, ಇದು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ, ಖಂಡಿತವಾಗಿಯೂ ಇದು ಪಾರದರ್ಶಕ ಚುನಾವಣೆಯಾಗಿದೆ” ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಜೈರಾಮ್ ರಮೇಶ್ ಹೇಳಿದ್ದಾರೆ.
Published On - 12:21 pm, Thu, 22 September 22