ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರಿಗೆ ಇಂದು(ಮೇ 15) ಹುಟ್ಟುಹಬ್ಬದ ಸಂಭ್ರಮ. ಅವರು ಇಂದು 62ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಹೀಗಾಗಿ ಅವರ ಹುಟ್ಟುಹಬ್ಬದ ಪ್ರಯುಕ್ತ ಅವರ ಸದಾಶಿವನಗರದ ನಿವಾಸದ ಮುಂದೆ ಬೆಳಗ್ಗೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಗರನ್ನು ಜಮಾಯಿಸಿದ್ದಾರೆ. ಮನೆಯಿಂದ ಹೊರಬರುತಿದ್ದಂತೆ ಅವರಿಗೆ ಸಿಹಿ ತಿನಿಸಿ ಹೂವಿನ ಹಾರ ಹಾಕುವ ಮೂಲಕ ಬೆಂಬಲಿಗರು ಶುಭ ಕೋರಿದ್ದಾರೆ. ಒಕ್ಕಲಿಗರ ಪ್ರಭಾವಿ ನಾಯಕ ಡಿಕೆ ಶಿವಕುಮಾರ್ ಕಾಂಗ್ರೆಸ್ ಪಕ್ಷದಲ್ಲಿ ಪ್ರಭಾವಶಾಲಿ ನಾಯಕ ಎಂದು ಗುರುತಿಸಿಕೊಂಡಿದ್ದಾರೆ. ಅಲ್ಲದೇ ಕಾಂಗ್ರೆಸ್ ಪಾಲಿನ ಟ್ರಬಲ್ ಶೂಟರ್ ಎಂದೇ ಖ್ಯಾತಿ ಪಡೆದುಕೊಂಡಿದ್ದಾರೆ. ಕನಕಪುರದ ಬಂಡೆ ಅಂತಲೂ ಫೇಮಸ್ ಆಗಿದ್ದಾರೆ. ಹಾಗಾದ್ರೆ, ಕನಕಪುರ ಬಂಡೆ ಖ್ಯಾತಿಗಳಿಸಿದ್ಯಾಕೆ? ಕಾಂಗ್ರೆಸ್ ಟ್ರಬಲ್ ಶೂಟರ್ ಎಂದು ಕರೆಯುವುದ್ಯಾಕೆ? ಎನ್ನುವ ವಿವರ ಇಲ್ಲಿದೆ.
ಇದನ್ನೂ ಓದಿ: Praveen Sood: ಸಿಬಿಐನ ನೂತನ ಸಾರಥಿ ಪ್ರವೀಣ್ ಸೂದ್ ಯಾರು? ಡಿಕೆ ಶಿವಕುಮಾರ್ ಕಿರಿಕ್ ಏನು?
ಪಕ್ಷ ಸಂಕಷ್ಟದಲ್ಲಿದ್ದಾಗ ನೆರವಾಗಿ ಅದರಂದ ಪಾರುಮಾಡಿದ್ದಾರೆ. ಒಂದಲ್ಲ ಎರಡಲ್ಲ ಪಕ್ಷ ಸಂಕಷ್ಟದಲ್ಲಿದ್ದಾಗ ಹಲವು ಬಾರಿ ಆಸರೆಯಾಗಿ ನಿಂತಿರುವ ನಿರ್ದಶನಗಳು ಇವೆ. ಕೇವಲ ಕರ್ನಾಟಕ ಕಾಂಗ್ರೆಸ್ ಮಾತ್ರವಲ್ಲದೇ ಗುಜರಾತ್, ಮಹಾರಾಷ್ಟ್ರ ಕಾಂಗ್ರೆಸ್ ಸಂಕಷ್ಟದಲ್ಲಿದ್ದಾಗ ಕಾಪಾಡಿದ್ದಾರೆ. ಅಲ್ಲದೇ ಯಾವುದೇ ಪ್ರಬಲ ನಾಯಕನನ್ನು ಪಕ್ಷಕ್ಕೆ ಕರೆತರಬೇಕೆಂದರೆ ಡಿಕೆಶಿ ಒಂದು ಕೈ ಮೇಲು. ಹೀಗಾಗಿ ಡಿಕೆ ಶಿವಕುಮಾರ್ ಅವರನ್ನು ರಾಜಕೀಯ ಟ್ರಬಲ್ ಶೂಟರ್ ಎಂದೇ ಕರೆಯಲಾಗುತ್ತದೆ. ಹಾಗಾದ್ರೆ, ಡಿಕೆ ಶಿವಕುಮಾರ್ ಹೇಗೆಲ್ಲ ಪಕ್ಷಕ್ಕೆ ನೆರವಾಗಿ ಟ್ರಬಲ್ ಶೂಟರ್ ಎನಿಸಿಕೊಂಡಿದ್ದಾರೆ ಎನ್ನುವ ಕೆಲ ಅಂಶಗಳು ಈ ಕೆಳಗಿನಂತಿವೆ ನೋಡಿ.
ಸಮ್ಮಿಶ್ರ ಸರ್ಕಾರದ ಟ್ರಬಲ್ ಶೂಟರ್ ಎಂದೇ ಪ್ರಸಿದ್ಧವಾಗಿದ್ದ, ಡಿಕೆ ಶಿವಕುಮಾರ್ ಹಲವು ವರ್ಷಗಳಿಂದ ತಮ್ಮ ರಾಜಕೀಯ ಜೀವನದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ವಿರುದ್ಧ ಹೋರಾಟ ನಡೆಸುತ್ತಲೇ ಬಂದಿದ್ದರು. ಆದರೆ ಕಾಂಗ್ರೆಸ್-ಜೆಡಿಎಸ್ ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾದ ಮೇಲೆ ಹಲವು ಬಾರಿ ಆಪತ್ತಿನಲ್ಲಿದ್ದ ಸರ್ಕಾರವನ್ನು ರಕ್ಷಿಸಿದ್ದರೂ ಕೂಡ. ಅಂದು ಮುಂಬೈಗೆ ತೆರಳಿ ಹೊಟೇಲ್ ನಲ್ಲಿದ್ದ ಅತೃಪ್ತ ಶಾಸಕರ ಭೇಟಿಗೂ ಯತ್ನಿಸಿದ್ದರು.
ವಿಲಾಸ್‌ರಾವ್ ದೇಶಮುಖ್ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಡಿಕೆ ಶಿವಕುಮಾರ್ ಅವರು 2002 ರಲ್ಲಿ ಅವಿಶ್ವಾಸ ನಿರ್ಣಯವನ್ನು ಎದುರಿಸಿದಾಗ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದರು. ಡಿಕೆ ಶಿವಕುಮಾರ್ ಅವರು ಮತದಾನದ ದಿನಾಂಕದವರೆಗೆ ಒಂದು ವಾರದವರೆಗೆ ಬೆಂಗಳೂರಿನ ಹೊರವಲಯದಲ್ಲಿರುವ ತಮ್ಮ ರೆಸಾರ್ಟ್‌ನಲ್ಲಿ ಮಹಾರಾಷ್ಟ್ರದ ಶಾಸಕರಿಗೆ ಆತಿಥ್ಯ ವಹಿಸಿದ್ದರು. ಇದು ದೇಶಮುಖ್ ಅವರ ಸರ್ಕಾರವನ್ನು ಉಳಿಸಿತ್ತು.
ಅಲ್ಲದೇ 2017 ರಲ್ಲಿ ಗುಜರಾತ್ ರಾಜ್ಯಸಭಾ ಚುನಾವಣೆಯ ಸಂದರ್ಭದಲ್ಲಿ ಆಪರೇಷನ್ ಕಮಲದ ಭೀತಿಯಿಂದ ಸೋನಿಯಾ ಗಾಂಧಿ ಆಪ್ತ ಅಹಮದ್ ಪಟೇಲ್ ಅವರನ್ನು ಜಯಗಳಿಸಲು 42 ಗುಜರಾತ್ ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿನ ರೆಸಾರ್ಟಿನಲ್ಲಿ ಹಿಡಿದಿಟ್ಟುಕೊಂಡಿದ್ದರು. ತರುವಾಯ, ಇದು ಅಹ್ಮದ್ ಪಟೇಲ್ ಚುನಾವಣೆಯಲ್ಲಿ ಗೆಲ್ಲಲು ಸಹಾಯ ಮಾಡಿತ್ತು.
ಪಕ್ಷ ಸಂಕಷ್ಟದಲ್ಲಿದ್ದಾಗ ಹಲವು ಬಾರಿ ಸರ್ಕಾರಕ್ಕೆ ಆಸರೆಯಾಗಿ ನಿಂತಿದ್ದರು. ಹೀಗಾಗಿ ಶಿವಕುಮಾರ್ ಅವರ ಬೆಂಬಲಿಗರು ಅವರನ್ನು ಟ್ರಬಲ್ ಶೂಟರ್ ಎಂದೇ ಕರೆಯುತ್ತಾರೆ. ಆದರೆ ಪಕ್ಷದ ಒಳಗಿನ ನಾಯಕರು ಹೇಳುವ ಪ್ರಕಾರ ಸರ್ಕಾರಕ್ಕೆ ಕಂಟಕ ಆರಂಭವಾಗಿದ್ದೆ ಡಿಕೆ ಶಿವಕುಮಾರ್ ಅವರಿಂದ ಎಂದು, ಬೆಳಗಾವಿ ರಾಜಕೀಯದಲ್ಲಿ ಡಿಕೆಶಿ ಅನಗತ್ಯವಾಗಿ ಮಧ್ಯ ಪ್ರವೇಶಿಸಿದರು ಎಂಬುದು ಕಾಂಗ್ರೆಸ್ ನಾಯಕರ ವಾದವಾಗಿದೆ. ಆದರೆ 2018 ರಲ್ಲಿ ಬಳ್ಳಾರಿಯಲ್ಲಿ ನಡೆದ ಲೋಕಸಭೆ ಉಪ ಚುನಾವಣೆ ಮತ್ತು 2019ರ ಕುಂದಗೋಳ ವಿಧಾನಸಭೆ ಉಪ ಚುನಾವಣೆ ಸಾರಥ್ಯವಹಿಸಿದ್ದ ಡಿಕೆ ಶಿವಕುಮಾರ್, ಎರಡೂ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲಲು ಪ್ರಮುಖ ಪಾತ್ರ ವಹಿಸಿದ್ದರು.
ಡಿಕೆ ಶಿವಕುಮಾರ್ ಅವರನ್ನು ಕೇವಲ ಟ್ರಬಲ್ ಶೂಟರ್ ಮಾತ್ರಲ್ಲ ಕನಕಪುರ ಬಂಡೆ ಅಂತಾನೂ ಕರೆಯುತ್ತಾರೆ. ಡಿಕೆ ಶಿವಕುಮಾರ್ ಅವರ ಸ್ವಕ್ಷೇತ್ರ ಕನಕಪುರ. ಇವರು ಯಾವುದಕ್ಕೂ ಹೆದರುವ ನಾಯಕನಲ್ಲ. ಎಂತಹ ಲೀಡರ್ ಆರೋಪ ಮಾಡಿದರೂ ಅವುಗಳಿಗೆಲ್ಲ ಸರಿಯಾದ ಸಮಯಕ್ಕೆ ತಿರುಗೇಟು ನೀಡುತ್ತಾರೆ. ಅವರನ್ನು ರಾಜಕೀಯವಾಗಿ ಇದುವರೆಗೂ ಬಗ್ಗಿಸುವ ಶಕ್ತಿ ಯಾವ ನಾಯಕನಿಗೂ ಇಲ್ಲ. ಡಿಕೆ ಶಿವಕುಮಾರ್ ಅವರು 1980ರ ದಶಕದಲ್ಲಿ ವಿದ್ಯಾರ್ಥಿ ನಾಯಕನಾಗುವ ಮೂಲಕ ರಾಜಕೀಯ ಜೀವನದ ಪುಟ್ಟ ಹೆಜ್ಜೆಗಳನ್ನಿಟ್ಟವರು. ಕ್ರಮೇಣ ಕಾಂಗ್ರೆಸ್ ಪಕ್ಷದತ್ತ ಆಕರ್ಷಿತರಾಗಿ ಹಂತ ಹಂತವಾಗಿ ರಾಜಕೀಯದಲ್ಲಿ ಮೇಲೇರುತ್ತಾ ಬಂದರು. 1989 ರಲ್ಲಿ ಮೈಸೂರು ಜಿಲ್ಲೆಯ ಸಾತನೂರು ಕ್ಷೇತ್ರದಿಂದ ಚುನಾವಣೆ ಗೆಲ್ಲುವ ಮೂಲಕ ಮೊದಲ ಬಾರಿ ವಿಧಾನಸಭೆಗೆ ಆಯ್ಕೆಯಾದರು. ಆಗ ಅವರಿಗೆ 27 ವರ್ಷ ವಯಸ್ಸಾಗಿತ್ತು. ನಂತರದ 1994, 1999 ಮತ್ತು 2004 ರ ವಿಧಾನಸಭಾ ಚುನಾವಣೆಗಳಲ್ಲಿ ಅದೇ ಕ್ಷೇತ್ರದಿಂದ ಮರುಚುನಾವಣೆಯಲ್ಲಿ ಗೆದ್ದರು. 2008, 2013, 2018 ಹಾಗೂ 2023 ರಲ್ಲಿ ಕನಕಪುರ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ. ಆ ನಂತರ ಕನಕಪುರದ ಬಂಡೇ ಎಂದೇ ಪ್ರಸಿದ್ಧರಾಗಿದ್ದಾರೆ.
ಕನಕಪುರ ಮಾತ್ರವಲ್ಲದೇ ರಾಮನಗರದಲ್ಲಿ ತಮ್ಮದೇ ಹಿಡಿತ ಹೊಂದಿದ್ದಾರೆ. ಎಂತಹ ಲೀಡರ್ಗಳು ಬಂದು ಕನಪುರದಲ್ಲಿ ಬಂದು ನಿಂತರೂ ಅಲುಗಾಡಿಸಲು ಸಾಧ್ಯವಾಗಿಲ್ಲ. ಸತತ ಏಳು ಗೆಲುವಿಮೊಂದಿಗೆ ಕನಪುರ ಕ್ಷೇತ್ರದಲ್ಲಿ ಬಂಡೆಯಂತೆ ನಿಂತಿದ್ದ ಶಿವಕುಮಾರ್ ಅವರ ಎದುರು ಬಿಜೆಪಿ ಪ್ರಬಲ ನಾಯಕ ಆರ್ ಅಶೋಕ್ ಅವರನ್ನು ಕಣಕ್ಕಿಳಿಸಿತ್ತು. ಕನಕಪುರ ಬಂಡೆಯನ್ನು ಡೈನಮೈಟ್ನಂತೆ ಸಿಡಿಸಲು ಬಿಜೆಪಿ ತಂತ್ರ ರೂಪಿಸಿತ್ತು. ಆದ್ರೆ, ಡೈನಮೈಟ್ ಠುಸ್ ಆಗಿದೆ.
ಇನ್ನು ತಮ್ಮನ್ನು ತಾವು ಒಕ್ಕಲಿಗರ ಪ್ರಭಾವಿ ನಾಯಕ ಎಂದು ಬಿಂಬಿಸಿಕೊಂಡಿರುವ ಡಿಕೆಶಿ ತಮ್ಮ ಪ್ರಾಬಲ್ಯವನ್ನು ರಾಜ್ಯಾದ್ಯಂತ ವಿಸ್ತರಿಸುವ ಹೆಬ್ಬಯಕೆ ಅವರದ್ದಾಗಿತ್ತು. ಅದನ್ನು ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಪ್ರೂವ್ ಮಾಡಿದ್ದು, ಸಿಎಂ ಕುರ್ಚಿಗಾಗಿ ಸಿದ್ದರಾಮಯ್ಯನವರಿಗೆ ಭಾರೀ ಪೈಪೋಟಿ ನೀಡುತ್ತಿದ್ದಾರೆ.