Praveen Sood: ಸಿಬಿಐನ ನೂತನ ಸಾರಥಿ ಪ್ರವೀಣ್ ಸೂದ್ ಯಾರು? ಡಿಕೆ ಶಿವಕುಮಾರ್ ಕಿರಿಕ್ ಏನು?
1986ನೇ ಬ್ಯಾಚ್ ಕರ್ನಾಟಕ ಕೇಡರ್‌ನ ಐಪಿಎಸ್ ಅಧಿಕಾರಿ ಪ್ರವೀಣ್ ಸೂದ್ ಅವರನ್ನು ಸಿಬಿಐ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ಹಾಗಾದ್ರೆ, ಯಾರು ಈ ಪ್ರವೀಣ್ ಸೂದ್? ಡಿಕೆ ಶಿವಕುಮಾರ್ ನಡುವಿನ ತಕರಾರು ಏನು? ಎನ್ನುವ ವಿವರ ಇಲ್ಲಿದೆ.
ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿ ಮತ್ತು ಐಜಿಪಿ) ಪ್ರವೀಣ್ ಸೂದ್(Praveen Sood) ಅವರು ಸಿಬಿಐ ನಿರ್ದೇಶಕರಾಗಿ(CBI chief )ನೇಮಕವಾಗಿದ್ದಾರೆ. ಇದೇ ಮೇ. 25 ರಂದು ಹಾಲಿ ಸಿಬಿಐ ನಿರ್ದೇಶಕರಾಗಿರುವ ಸುಬೋಧ್ ಕುಮಾರ್ ಜೈಸ್ವಾಲ್ ಅವರ ಅಧಿಕಾರಾವಧಿ ಮುಕ್ತಾಯಗೊಳ್ಳಲಿದೆ. ಹೀಗಾಗಿ ಮುಂದಿನ ಸಿಬಿಐ ನಿರ್ದೇಶಕರಾಗಿ ಪ್ರವೀಣ್ ಸೂದ್ ಅವರನ್ನು ನೇಮಿಸಲಾಗಿದೆ. 1984ನೇ ಬ್ಯಾಚ್ ಐಪಿಎಸ್ ಅಧಿಕಾರಿ ಸಮಂತ್ ಗೋಯಲ್ ಹೆಸರು ಸಹ ಕೇಳಿಬಂದಿತ್ತು. ಆದ್ರೆ, ಪ್ರಧಾನಿ ನರೇಂದ್ರ ಮೋದಿ, ಮುಖ್ಯ ನ್ಯಾ. ಡಿವೈ ಚಂದ್ರಚೂಡ್ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಂಜನ್ ಚೌಧರಿ ನೇತೃತ್ವದ ಸಮಿತಿಯು 1986ನೇ ಬ್ಯಾಚ್ ಕರ್ನಾಟಕ ಕೇಡರ್‌ನ ಐಪಿಎಸ್ ಅಧಿಕಾರಿ ಪ್ರವೀಣ್ ಸೂದ್ ಅವರ ಹೆಸರನ್ನು ಅಂತಿಮಗೊಳಿಸಿದೆ. ಇನ್ನು ಯಾರು ಈ ಪ್ರವೀಣ್ ಸೂದ್? ಡಿಕೆ ಶಿವಕುಮಾರ್ ನಡುವಿನ ತಕರಾರು ಏನು? ಎನ್ನುವ ವಿವರ ಇಲ್ಲಿದೆ.
ಇದನ್ನೂ ಓದಿ: ಪ್ರವೀದ್ ಸೂದ್ ಈಗ ಸಿಬಿಐ ಮುಖ್ಯಸ್ಥ: ಈ ನಾಲ್ವರಲ್ಲಿ ಯಾರಾಗಲಿದ್ದಾರೆ ಕರ್ನಾಟಕದ ಪೊಲೀಸ್ ಮಹಾ ನಿರ್ದೇಶಕ?
ಪ್ರವೀಣ್ ಸೂದ್ ಯಾರು..?
ಹಿಮಾಚಲ ಪ್ರದೇಶದ ಕಂಗ್ರಾ ಜಿಲ್ಲೆಯ ಮೂಲದ ಪ್ರವೀಣ್ ಸೂದ್ 1986ನೇ ಬ್ಯಾಚ್ ಕರ್ನಾಟಕ ಕೇಡರ್‌ನ ಐಪಿಎಸ್ ಅಧಿಕಾರಿಯಾಗಿದ್ದು, ದೆಹಲಿ ಐಐಟಿಯಲ್ಲಿ ಪದವಿ ಪಡೆದಿದ್ದಾರೆ. ಇನ್ನು ಮುಖ್ಯವಾಗಿ ಪ್ರವೀಣ್ ಸೂದ್, ಕ್ರಿಕೆಟಿಗ ಮಾಯಾಂಕ್ ಅರ್ಗವಾಲ್ ಅವರ ಮಾವ. 1986ರಲ್ಲಿ ಭಾರತೀಯ ಪೊಲೀಸ್ ಸೇವೆಗೆ (ಐಪಿಎಸ್)ಗೆ ಸೇರಿದ್ದು, 1989ರಲ್ಲಿ ಮೈಸೂರಿನಲ್ಲಿ ಅಸಿಸ್ಟೆಂಟ್ ಸೂಪರಿಟೆಂಡೆಂಟ್ ಪೊಲೀಸ್ (ಎಎಸ್‌ಪಿ) ಆಗಿ ವೃತ್ತಿ ಆರಂಭಿಸಿದ್ದರು. ಆ ನಂತರ ಬಳ್ಳಾರಿ ಹಾಗೂ ರಾಯಚೂರಿನಲ್ಲಿ ಎಸ್‌ಪಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ತದನಂತರ ಬೆಂಗಳೂರು ನಗರಕ್ಕೆ ಉಪ ಪೊಲೀಸ್ ಆಯುಕ್ತರಾಗಿ ವರ್ಗಾವಣೆಗೊಂಡಿದ್ದು, 1999ರಲ್ಲಿ 3 ವರ್ಷಗಳ ಅವಧಿಗೆ ಮಾರಿಷಸ್ ಸರ್ಕಾರದ ಪೊಲೀಸ್ ಸಲಹೆಗಾರರಾಗಿದ್ದರು.
ಬಳಿಕ 2003 ರಲ್ಲಿ ಅಧ್ಯಯನ ರಜೆ ಪಡೆದುಕೊಂಡು ಐಐಎಂ ಬೆಂಗಳೂರು, ನ್ಯೂಯಾರ್ಕ್ ಯೂನಿವರ್ಸಿಟಿಯಲ್ಲಿ ಸಾರ್ವಜನಿಕ ನೀತಿ ಮತ್ತು ನಿರ್ವಹಣೆ ವಿಷಯದಲ್ಲಿ ಉನ್ನತ ಶಿಕ್ಷಣ ಪಡೆದ್ದರು. 2004 ರಿಂದ 2007 ರವರೆಗೆ ಮೈಸೂರು ನಗರದ ಪೊಲೀಸ್ ಕಮಿಷನರ್ ಆಗಿ ಸೇವೆ ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕರ ಬಂಧನದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬಳಿಕ 2011 ರವರೆಗೆ ಬೆಂಗಳೂರು ಟ್ರಾಫಿಕ್ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಿದ್ದರು.
2013-14ರಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡು, ವಹಿವಾಟು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ರಾಜ್ಯ ಗೃಹ ಇಲಾಖೆಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ, ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ನ ಎಡಿಜಿಪಿ ಮತ್ತು ಆಡಳಿತದಲ್ಲಿ ಎಡಿಜಿಪಿಯಾಗಿಯೂ ಕೆಲಸ ಮಾಡಿದ್ದಾರೆ. ಮಹಿಳೆಯರು ಸೇರಿದಂತೆ ನಾಗರಿಕರ ಸುರಕ್ಷತೆ ಮತ್ತು ಸುರಕ್ಷತೆಯನ್ನು ಸುಧಾರಿಸುವ ಯೋಜನೆಗಳಿಗಾಗಿ ಸಾರ್ವಜನಿಕ ಮೆಚ್ಚುಗೆ ಗಳಿಸಿದ್ದಾರೆ. ನಂತರ ಫೆಬ್ರವರಿ 1, 2020ರಂದು ಕರ್ನಾಟಕದ ಡಿಜಿ & ಐಜಿಪಿಯಾಗಿ ನೇಮಕಗೊಂಡಿದ್ದರು. ದೆಹಲಿ ಐಐಟಿಯಲ್ಲಿ ವ್ಯಾಸಂಗ ಮಾಡಿರುವ ಅವರು ಸೈಬರ್ ಕ್ರೈಂ ಬಗ್ಗೆ ಅಪಾರ ಜ್ಞಾನ ಹೊಂದಿದ್ದಾರೆ.
ಇದನ್ನೂ ಓದಿ: ಸಿಬಿಐ ನಿರ್ದೇಶಕರಾಗಿ ಕರ್ನಾಟಕ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ನೇಮಕ
ಪ್ರವೀಣ್ ಸೂದ್-ಡಿಕೆ ಶಿವಕುಮಾರ್ ನಡುವಿನ ತಕರಾರು ಏನು?
ಸದ್ಯ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗಿರುವ ಅವರ ಅಧಿಕಾರಾವಧಿ ಇನ್ನೂ ಒಂದು ವರ್ಷ ವಿತ್ತು. ಈಗ ಅವರು ಸಿಬಿಐ ಮುಖ್ಯಸ್ಥರಾಗಿ ನೇಮಕಗೊಂಡಿದ್ದು, ರಾಜ್ಯಕ್ಕೆ ಹೊಸ ಪೊಲೀಸ್ ಮಹಾ ನಿರ್ದೇಶಕರ ನೇಮಕವಾಗಬೇಕಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಪ್ರವೀಣ್ ಸೂದ್ ವಿರುದ್ಧ ಡಿ. ಕೆ. ಶಿವಕುಮಾರ್ ಬಹಿರಂಗಾಗಿ ಅಸಮಾಧಾನ ಹೊರಹಾಕಿದ್ದರು. ಬಿಜೆಪಿ ಸರ್ಕಾರ ಕಾಪಾಡುತ್ತಿರುವುದೇ ಪ್ರವೀಣ್ ಸೂದ್ ಎಂದು ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದರು. ಅಲ್ಲದೇ ಪ್ರವೀಣ್ ಸೂದ್ ನಾಲಾಯಕ್. ಅವರು ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ರಕ್ಷಣೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರ ಮೇಲೆ ವಿನಾಕಾರಣ ಕೇಸ್ ದಾಖಲಿಸುತ್ತಿದ್ದಾರೆ. ನಾವು ಅಧಿಕಾರಿಕ್ಕೆ ಬಂದಾಗ ಬುದ್ಧಿ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು.
ಇದೀಗ ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಘೋಷಣೆ ಬೆನ್ನಲ್ಲೇ ಪ್ರವೀಣ್ ಸೂದ್ ಸಿಬಿಐ ನಿರ್ದೇಶಕರಾಗಿ ನೇಮಕಗೊಂಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಯಾಕಂದ್ರೆ ಈಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಇನ್ನೊಂದೆಡೆ ಡಿಕೆ ಶಿವಕುಮಾರ್ ವಿರುದ್ಧ ಸಿಬಿಐ ಕೇಸ್ಗಳಿದ್ದು, ಇದರ ಮಧ್ಯೆ ಪ್ರವೀಣ್ ಸೂದ್ ಅವರಿಗೆ ಸಿಬಿಐ ಸಾರಥ್ಯ ವಹಿಸಿರುವುದು ಅಚ್ಚರಿ ಮೂಡಿಸಿದೆ.
Published On - 11:27 am, Mon, 15 May 23