ಕಾಂಗ್ರೆಸ್‌ನಲ್ಲಿ ನಾಮನಿರ್ದೇಶಿತ ಎಂಎಲ್‌ಸಿಗಳ ಆಯ್ಕೆ ಕಗ್ಗಂಟು: ಬಹಿರಂಗ ಪತ್ರ ವೈರಲ್

ಮೂವರು ನಾಮನಿರ್ದೇಶಿತ ಸದಸ್ಯರ ಆಯ್ಕೆ ವಿಚಾರಕ್ಕೆ ಕಾಂಗ್ರೆಸ್​ನಲ್ಲಿ ಅಪಸ್ವರ ಕೇಳಿಬಂದಿದ್ದು, ಈ ಬಗ್ಗೆ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕಾಂಗ್ರೆಸ್‌ನಲ್ಲಿ ನಾಮನಿರ್ದೇಶಿತ ಎಂಎಲ್‌ಸಿಗಳ ಆಯ್ಕೆ ಕಗ್ಗಂಟು: ಬಹಿರಂಗ ಪತ್ರ ವೈರಲ್
Updated By: ರಮೇಶ್ ಬಿ. ಜವಳಗೇರಾ

Updated on: Jul 14, 2023 | 10:12 AM

ಬೆಂಗಳೂರು: ಕಾಂಗ್ರೆಸ್ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ 135 ಸ್ಥಾನಗಳಲ್ಲಿ ಗೆಲ್ಲುವುದರ ಮೂಲಕ ಅಧಿಕಾರಕ್ಕೇರಿದ್ದು, ಇದೀಗ ಲೋಕಸಭಾ ಚುನಾವಣೆಗೆ ತಯಾರಿ ಆರಂಭಿಸಿದೆ. ಇದರ ಮಧ್ಯೆ ಕಾಂಗ್ರೆಸ್‌ನಲ್ಲಿ ನಾಮನಿರ್ದೇಶಿತ ಎಂಎಲ್‌ಸಿಗಳ ಆಯ್ಕೆ ಕಗ್ಗಂಟಾಗಿದೆ. ಹೌದು.. ವಿಧಾನಪರಿಷತ್​ಗೆ ಮೂರು ನಾಮನಿರ್ದೇಶನ ಆಯ್ಕೆ ವಿಚಾರದಲ್ಲಿ ಕಾರ್ಯಕರ್ತರ ಮುನಿಸು ಬಹಿರಂಗವಾಗಿದೆ. ಕಾಂಗ್ರೆಸ್ ಕಾರ್ಯಕರ್ತ ಪತ್ರದ ಮೂಲಕ ಅಸಮಾಧಾನ ಹೊರಹಾಕಿದ್ದು, ಪಕ್ಷದ‌‌ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಬಹಿರಂಗ ಪತ್ರ ಇದೀಗ ವೈರಲ್ ಆಗಿದೆ.

ಎಂ.ಆರ್‌ ಸೀತಾರಾಂ, ಮನ್ಸೂರ್ ಖಾನ್, ಸುಧಾಮ್ ದಾಸ್ ಆಯ್ಕೆ ವಿಚಾರಕ್ಕೆ ಕಾಂಗ್ರೆಸ್ ಕಾರ್ಯಕರ್ತ ಶಕೀಲ್ ಅಹಮದ್ ಎನ್ನುವವರು ಪತ್ರದ ಮೂಲಕ ಅಸಮಾಧಾನ ಹೊರಹಾಕಿದ್ದು, ಹಲವು ಮುಸ್ಲಿಂ ಹಿರಿಯ ಕಾಂಗ್ರೆಸ್ ಕಾರ್ಯಕರ್ತರು 4 ರಿಂದ 5 ದಶಕಗಳಿಂದ ಕೆಲಸ ಮಾಡುತ್ತಿದ್ದಾರೆ. ಮನ್ಸೂರ್ s/o ರೆಹಮಾನ್ ಖಾನ್ ಅವರನ್ನು MLC ಗೆ ಏಕೆ ಆಯ್ಕೆ ಮಾಡಲಾಗಿದೆ? ಇದು ಮುಸ್ಲಿಂ ಸಮುದಾಯಕ್ಕೆ ತಪ್ಪು ಸಂದೇಶ ರವಾನಿಸುತ್ತೆ ಎಂದು ಪತ್ರದಲ್ಲಿ ಬರೆದಿದ್ದಾರೆ.

ಇನ್ನು ಎಂ.ಆರ್ ಸೀತಾರಾಂ ಅವರ ಆಯ್ಕೆಯನ್ನು ಪ್ರಶ್ನಿಸಿದ್ದು, ಮಲ್ಲೇಶ್ವರಂ ಶಾಸಕ ಕ್ಷೇತ್ರದಲ್ಲಿ ಪ್ರತಿ ಬಾರಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸುವ ವ್ಯಕ್ತಿ ಯಾರು? ಅವರು ಶಾಸಕ ಮತ್ತು ಎಂಎಲ್ಸಿ ಮತ್ತು ಸಚಿವರಾಗಿದ್ದರು. ಒಬಿಸಿ ಅಡಿಯಲ್ಲಿ ದೀರ್ಘಕಾಲ ಪಕ್ಷಕ್ಕಾಗಿ ದುಡಿಯುತ್ತಿರುವವರನ್ನು ಆಯ್ಕೆ ಮಾಡಿ ಎಂದಿದ್ದಾರೆ. ಅಲ್ಲದೇ ಇತ್ತೀಚೆಗೆ ಕಾಂಗ್ರೆಸ್‌ಗೆ ಸೇರ್ಪಡೆಗೊಂಡ ಮಾಜಿ ಇಡಿ ಅಧಿಕಾರಿ (ಸುಧಾಮ್ ದಾಸ್) ಯನ್ನು ಎಂಎಲ್‌ಸಿಗೆ ಏಕೆ ಆಯ್ಕೆ ಮಾಡಲಾಗಿದೆ? ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಬೆನ್ನೆಲುಬು ಮತ್ತು ಬಹುಮತಕ್ಕೆ ಕೊಂಡೊಯ್ಯುವ ದಲಿತರಿಗೆ ಯಾವ ರೀತಿಯ ಸಂದೇಶವನ್ನು ರವಾನಿಸುತ್ತದೆ? ಅವರಿಂದ ಯಾವ ರೀತಿಯ ಸೇವೆಯನ್ನು ನಿರೀಕ್ಷಿಸಬಹುದು? ಇವರೆಲ್ಲರನ್ನೂ ಎಂಎಲ್‌ಸಿಗೆ ಯಾವ ವರ್ಗಗಳ ಅಡಿಯಲ್ಲಿ ನೇಮಿಸಲು ಕಾಂಗ್ರೆಸ್ ಹೊರಟಿದೆ. ಬಿಜೆಪಿಯಿಂದ ನೇಮಕಗೊಂಡ ಗೌರವಾನ್ವಿತ ರಾಜ್ಯಪಾಲರು ಅದನ್ನು ತಿರಸ್ಕರಿಸಬಹುದು ಎಂದು ಬಹಿರಂಗ ‌ಪತ್ರ ಬರೆದಲ್ಲಿ ಬರೆದಿದ್ದು, ಇದೀಗ ಈ ಪತ್ರ ವೈರಲ್ ಆಗಿದೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ