ಬೆಂಗಳೂರು, ಸೆಪ್ಟೆಂಬರ್ 23: ಒಂದೆಡೆ ಕಾವೇರಿ ನೀರು ಬಿಡುಗಡೆ ವಿಚಾರವಾಗಿ ಪ್ರತಿಪಕ್ಷಗಳ, ರೈತರ ಪ್ರತಿಭಟನೆ ಭುಗಿಲೆದ್ದಿರುವುದು ರಾಜ್ಯ ಕಾಂಗ್ರೆಸ್ (Congress) ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದ್ದರೆ, ಪಕ್ಷದ ಆಂತರಿಕ ಭಿನ್ನಾಭಿಪ್ರಾಯ ಹೆಚ್ಚುತ್ತಿರುವುದು ಮತ್ತೊಂದೆಡೆ ಸಂಕಟಕ್ಕೆ ಕಾರಣವಾಗಿದೆ. ಸಮುದಾಯವಾರು ಮೂವರು ಉಪ ಮುಖ್ಯಮಂತ್ರಿಗಳನ್ನು ನೇಮಕ ಮಾಡಬೇಕೆಂದು ಕೆಎನ್ ರಾಜಣ್ಣ ಬೇಡಿಕೆ ಇಟ್ಟಿರುವುದು ಕಾಂಗ್ರೆಸ್ ಪಕ್ಷದ ಆಂತರಿಕ ವಲಯದಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಇದೀಗ ಶಾಸಕ ಬಸವರಾಜ ರಾಯರೆಡ್ಡಿ (Basvaraj Rayareddi) ಆರು ಡಿಸಿಎಂ ಹುದ್ದೆಗೆ ಬೇಡಿಕೆ ಇಟ್ಟಿದ್ದಾರೆ.
ಕೆಎನ್ ರಾಜಣ್ಣ ಹೇಳಿಕೆಗೆ ಬೆಂಬಲ ನೀಡಿರುವ ಬಸವರಾಜ ರಾಯರೆಡ್ಡಿ ಆರು ಡಿಸಿಎಂ ಸ್ಥಾನಕ್ಕೆ ಒತ್ತಾಯಿಸಿದ್ದಾರೆ. ಎಲ್ಲ ಜಾತಿ-ಧರ್ಮಗಳು ಕಾಂಗ್ರೆಸ್ಗೆ ಬೆಂಬಲ ನೀಡಿವೆ. ಹೀಗಾಗಿ ಅಲ್ಪಸಂಖ್ಯಾತ, ಎಸ್ಸಿ, ಎಸ್ಟಿ, ಲಿಂಗಾಯತರಿಗೆ ಡಿಸಿಎಂ ಹುದ್ದೆ ನೀಡಿ ಎಂದು ರಾಯರೆಡ್ಡಿ ಆಗ್ರಹಿಸಿದ್ದಾರೆ.
ಆರಂಭದಿಂದಲೂ ರಾಯರೆಡ್ಡಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಸಚಿವರ ಕಾರ್ಯವೈಖರಿ ಕುರಿತು ಅಸಮಾಧಾನ ವ್ಯಕ್ತಪಡಿಸಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದ ಶಾಸಕರ ಪೈಕಿ ರಾಯರೆಡ್ಡಿ ಮೊದಲಿಗರಾಗಿದ್ದರು. ಆ ನಂತರ ಶಾಸಕಾಂಗ ಪಕ್ಷದ ಸಭೆ ಕರೆದ ಸಿಎಂ ಸಿದ್ದರಾಮಯ್ಯ ವಿಚಾರ ತಣ್ಣಗಾಗುವಂತೆ ಮಾಡಿದ್ದರು. ಬಳಿಕವೂ ಸಚಿವ ಸ್ಥಾನದ ವಿಚಾರವಾಗಿ ರಾಯರೆಡ್ಡಿ ಅಸಮಾಧಾನದ ಹೇಳಿಕೆಗಳನ್ನು ನೀಡಿದ್ದರು.
ಶಾಸಕರ ಅನುದಾನ ಬಿಡುಗಡೆ ವಿಚಾರವಾಗಿಯೂ ಸರ್ಕಾರದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದ ರಾಯರೆಡ್ಡಿ, ನಮಗೆ ಅನುದಾನ ಬೇಡ. ನಮ್ಮದೇ ದುಡ್ಡಲ್ಲಿ ಅಭಿವೃದ್ಧಿಕಾರ್ಯ ಮಾಡುತ್ತೇವೆ ಎಂದು ಬಹಿರಂಗವಾಗಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಪ್ರತಿ ಶನಿವಾರ ಪಕ್ಷಾತೀತವಾಗಿ ಶಾಸಕರ ಭೇಟಿಗೆ ಸಿಎಂ ನಿರ್ಧಾರ
ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಎಸ್ಸಿ, ಅಲ್ಪಸಂಖ್ಯಾ ಮತ್ತು ವೀರಶೈವ ಲಿಂಗಾಯತ ಸಮುದಾಯಗಳ ತಲಾ ಓರ್ವ ಮುಖಂಡನನ್ನು ಉಪಮುಖ್ಯಮಂತ್ರಿ ಮಾಡಬೇಕೆಂದು ಸಹಕಾರ ಸಚಿವ ರಾಜಣ್ಣ ಇತ್ತೀಚೆಗೆ ಹೇಳಿದ್ದರು. ಇದಕ್ಕೆ ಕಾಂಗ್ರೆಸ್ ಆಂತರಿಕ ವಲಯದಲ್ಲಿ ಪರ-ವಿರೋಧ ವ್ಯಕ್ತವಾಗಿತ್ತು. ರಾಜಣ್ಣ ಹೇಳಿಕೆ ಬಗ್ಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವ್ಯಂಗ್ಯವಾಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ