ತುಮಕೂರು, ಆಗಸ್ಟ್ 27: ಕಾಂಗ್ರೆಸ್ ಸರ್ಕಾರದ ವಿರುದ್ಧ ಕಮಿಷನ್ ಆರೋಪ ಕೇಳಿಬಂದಿತ್ತು. ಅದರಲ್ಲೂ ಡಿಸಿಎಂ ಡಿಕೆ ಶಿವಕುಮಾರ್ (D.K.Shivakumar) ವಿರುದ್ಧ ಬಿಬಿಎಂಪಿ ಗುತ್ತಿಗೆದಾರರು 15 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದರು. ಸದ್ಯ ಈ ಎಲ್ಲದರ ಬಗ್ಗೆ ತುಮಕೂರು (Tumkur) ಜಿಲ್ಲೆಯಲ್ಲಿರುವ ನೊಣವಿನಕೆರೆ ಅಜ್ಜಯ್ಯನ ಮಠದ ಬಳಿ ಪ್ರತಿಕ್ರಿಯೆ ನೀಡಿದ ಶಿವಕುಮಾರ್, ಗುತ್ತಿಗೆದಾರರದ್ದು ತಪ್ಪಿಲ್ಲ, ಕೆಲವು ರಾಜಕೀಯದವರು ಮಾಡಿದ್ದು ಎಂದಿದ್ದಾರೆ.
ತಿಪಟೂರು ತಾಲೂಕಿನ ನೊಣವಿನಕೆರೆ ಬಳಿ ಇರುವ ನೊಣವಿನಕೆರೆ ಅಜ್ಜಯ್ಯನ ಮಠದ ಬಳಿ ಮಾತನಾಡಿದ ಡಿಕೆ ಶಿವಕುಮಾರ್, ನೊಣವಿನಕೆರೆ ಅಜ್ಜಯ್ಯನ ಮಠಕ್ಕೆ ಬಂದಾಗ ನನ್ನ ಎನರ್ಜಿ ಹೆಚ್ಚಾಗುತ್ತದೆ. ನಾನು ಅತಿ ಹೆಚ್ಚು ಪ್ರೀತಿಸುವ ಸ್ಥಳ ಇದು, ಶ್ರೀಗಳು ಆಶೀರ್ವದಿಸುತ್ತಾರೆ ಎಂದರು.
ಇದನ್ನೂ ಓದಿ: ಡಿ.ಕೆ.ಶಿವಕುಮಾರ್ ಅವರ ಸಿಎಂ ಕನಸು ಬಿಚ್ಚಿಟ್ಟ ತಿಪಟೂರು ಶಾಸಕ ಷಡಕ್ಷರಿ
ಅಜ್ಜಯ್ಯನ ಮೇಲೆ ಪ್ರಮಾಣ ಮಾಡು ಅಂದವರೆಲ್ಲ ಈಗ ಏನಾದರು ಎಂದು ಪ್ರಶ್ನಿಸಿದ ಡಿಕೆ ಶಿವಕುಮಾರ್, ಅಜ್ಜಯ್ಯನ ಹೆಸರು ತೆಗೆದುಕೊಂಡವರು ಈಗ ಉಲ್ಟಾ ಹೊಡೆದಿದ್ದಾರೆ. ಅವರು ಯಾಕೆ ಉಲ್ಟಾ ಹೊಡೆದರು ಅಂದರೆ, ಅದೇ ಅಜ್ಜಯ್ಯನ ಶಕ್ತಿ. ನಾನೇನಾದರು ತಪ್ಪು ಮಾಡಿದ್ದರೆ ತಾನೆ ಯೋಚನೆ ಮಾಡಬೇಕಿರುತ್ತದೆ. ಪಾಪ, ಗುತ್ತಿಗೆದಾರರದ್ದು ತಪ್ಪಿಲ್ಲ, ಕೆಲ ರಾಜಕೀಯದವರು ಮಾಡಿದ್ದು. ರಾಜಕೀಯದವರು ಮಿಸ್ ಗೈಡ್ ಮಾಡಿ ಗುತ್ತಿಗೆದಾರರ ದಿಕ್ಕು ತಪ್ಪಿಸಿದರು ಎಂದರು.
ಸದ್ಯ ರಾಜ್ಯ ರಾಜಕೀಯದಲ್ಲಿ ಆಪರೇಷನ್ ಹಸ್ತ ಭಾರೀ ಕುತೂಹಲ ಕೆರಳಿಸಿದೆ. ಬಿಜೆಪಿ ಶಾಸಕರಾದ ಎಸ್ಟಿ ಸೋಮಶೇಖರ್, ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ ಬಲೆಗೆ ಬಿದ್ದಿದ್ದಾರೆ ಎಂಬ ವದಂತಿ ಹಬ್ಬುತ್ತಿದೆ. ಈ ನಡುವೆ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಅವರು ಕಾಂಗ್ರೆಸ್ ಬರುತ್ತಾರೆ ಎಂಬ ಮಾತುಗಳು ಕೇಳಿಬರಲು ಆರಂಭವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್, ಅವೆಲ್ಲ ಪಟ್ಟಿ ಇಲ್ಲಿ ಹೇಳಲು ಸಾಧ್ಯವಿಲ್ಲ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ