ಕೇಂದ್ರ ಬಜೆಟ್​ನಿಂದ ರಾಜ್ಯಕ್ಕೆ ಅನ್ಯಾಯ ಆಗಿದೆ: ಡಿಕೆ ಶಿವಕುಮಾರ್​

| Updated By: Ganapathi Sharma

Updated on: Feb 02, 2024 | 10:33 AM

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು(ಫೆ.01) ಮಧ್ಯಂತರ ಬಜೆಟ್​ ಮಂಡನೆ ಮಾಡಿದ್ದಾರೆ. ಈ ಮೂಲಕ ಹಣಕಾಸು ಸಚಿವರಾಗಿ ಮಂಡಿಸಿದ 6ನೇ ಬಜೆಟ್ ಇದಾಗಿದ್ದು, ಇದೀಗ ಬಜೆಟ್​ ಕುರಿತು ಎಲ್ಲೆಡೆ ಅಭಿಪ್ರಾಯ ವ್ಯಕ್ತವಾಗುತ್ತಿದ್ದು, ಇತ್ತ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್​, ಮಾಜಿ ಸಿಎಂ ಡಾ.ಎಂ.ವೀರಪ್ಪ ಮೊಯ್ಲಿ ಸೇರಿದಂತೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಕೇಂದ್ರ ಬಜೆಟ್​ನಿಂದ ರಾಜ್ಯಕ್ಕೆ ಅನ್ಯಾಯ ಆಗಿದೆ: ಡಿಕೆ ಶಿವಕುಮಾರ್​
ಡಿಕೆ ಶಿವಕುಮಾರ್​
Follow us on

ಬೆಂಗಳೂರು, ಫೆ.01: ಇಷ್ಟು ಕಳಪೆ ಬಜೆಟ್​ ನಾನು ಯಾವತ್ತೂ ನೋಡಿಲ್ಲ ಎಂದು ಕೇಂದ್ರದ ಬಜೆಟ್(Central budget)​ ಬಗ್ಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್(DK Shivakumar)​ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ‘ಕೇಂದ್ರ ಬಜೆಟ್​ನಿಂದ ರಾಜ್ಯಕ್ಕೆ ಅನ್ಯಾಯ ಆಗಿದೆ. ಈ ಬಜೆಟ್​ನಿಂದ ನಮಗೆ ಬಹಳ ನಿರಾಸೆಯಾಗಿದೆ. ಬಜೆಟ್​ ಕಳಪೆ ಬಜೆಟ್​ ಎಂದು ಡಿಸಿಎಂ ವಾಗ್ದಾಳಿ ನಡೆಸಿದ್ದಾರೆ.

ಇದೇ ವೇಳೆ ದಕ್ಷಿಣ ಭಾರತದ ಕೂಗು ಎತ್ತಬೇಕಾಗುತ್ತೆ ಎಂಬ ಡಿಕೆ ಸುರೇಶ್ ಹೇಳಿಕೆ ವಿಚಾರ ‘ನಾನು ಅಖಂಡ ಭಾರತದವನು, ಅವರು​ ಜನರ ಅಭಿಪ್ರಾಯ ಹೇಳಿದ್ದಾರೆ ಅಷ್ಟೇ. ‘ನಾವೆಲ್ಲ ಅಖಂಡ ಭಾರತದವರು, ಕಾಶ್ಮೀರದಿಂದ ಕನ್ಯಾಕುಮಾರಿ ತನಕ ಎಲ್ಲವೂ ಒಂದೇ. ಉತ್ತರ ಭಾರತಕ್ಕೆ ಸಿಕ್ಕಿರುವುದು ನಮಗೂ ಸಿಗಬೇಕು ಎಂಬುದು ಜನರ ಭಾವನೆ. 27 ಜನ ಸಂಸದರು ಏನು ತಂದಿದ್ದಾರೆ ನಮಗೆ?, ಆ ಎಲ್ಲ ಸಂಸದರು ಧರಣಿ ಮಾಡಿ ಅನ್ಯಾಯ ಸರಿಪಡಿಸಲಿ. ಹಿಂದಿ ಬೆಲ್ಟ್ ಸೇರಿದಂತೆ ಯಾವ ಹಳ್ಳಿಗೂ ಅನ್ಯಾಯ ಆಗಬಾರದು ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ:ದೇಶ ಮತ್ತು ದೇಶದ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹಣಕಾಸು ಸಚಿವೆ ಬಜೆಟ್ ಮಂಡಿಸಿದ್ದಾರೆ: ಆರ್ ಅಶೋಕ

2024-25ನೆ ಸಾಲಿನ ಬಜೆಟ್ ಪ್ರಗತಿಗೆ ಪೂರಕವಾಗಿದೆ: ಟಿಎ ಶರವಣ

ಆರ್ಥಿಕ ಸ್ಥಿರತೆ, ಸಮಗ್ರ ಅಭಿವೃದ್ದಿ, ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡುವ, ಬಡವರು, ರೈತರು, ಮಾಧ್ಯಮ ವರ್ಗಕ್ಕೆ ಸ್ಪಂದಿಸುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ 2024-2 5ನೆ ಸಾಲಿನ ಬಜೆಟ್ ಪ್ರಗತಿಗೆ ಪೂರಕವಾಗಿದೆ ಎಂದು ಜೆಡಿಎಸ್ ಹಿರಿಯ ನಾಯಕರಾದ ಟಿಎ ಶರವಣ ಅವರು ಹೇಳಿದ್ದಾರೆ. ಕೈಗಾರಿಕೆ, ಉದ್ಯೋಗ ಸೃಷ್ಟಿ, ಬಡತನ ನಿವಾರಣೆ, ರೈತರ ಪ್ರಗತಿ ಹೀಗೆ ಸರ್ವತೋ ಮುಖಿ ಮತ್ತು ಸರ್ವ ಸ್ಪರ್ಶಿಯಾಗಿರುವ ಈ ಬಜೆಟ್, ಭಾರತದ ಭವಿಷ್ಯತ್ತಿನ ದೃಷ್ಟಿಯಿಂದ ಸುಸ್ಥಿರ ವಾಗಿದೆ ಎಂದರು.

ಬರುವ ಎರಡು ದಶಕಗಳಲ್ಲಿ ಭಾರತವನ್ನು ಜಗತ್ತಿನ ಶಕ್ತಿಯಾಗಿ ರೂಪಿಸುವಲ್ಲಿ ಈ ಬಜೆಟ್ ಮಾರ್ಗ ಸೂಚಿ ಆಗಿದೆ.
ಮದ್ಯಮ ವರ್ಗಗಳಿಗೆ ಏಳು ಲಕ್ಷ ವರೆಗಿನ ಶೂನ್ಯ ತೆರಿಗೆ, ಕಾರ್ಪೊರೇಟ್ ತೆರಿಗೆ ಶೇಕಡಾ 22ರವರೆಗೆ ಇಳಿಕೆ, ಯುವ ಉದ್ಯೋಗಿಗಳಿಗೆ ಆಧುನಿಕ ತಂತ್ರಜ್ಞಾನ ಆಧಾರಿತ ಉದ್ಯಮಕ್ಕಾಗಿ ಒಂದು ಲಕ್ಷ ಕೋಟಿ ರೂಪಾಯಿ ನಿಧಿ ಇವೆಲ್ಲ ಸುಧಾರಣೆಯ ನಿಟ್ಟಿನಲ್ಲಿ ಅಭೂತ ಪೂರ್ವ ಯೋಜನೆಗಳಾಗಿವೆ ಎಂದು ಹೇಳಿದರು.

ಮಧ್ಯಮ ವರ್ಗದವರಿಗೂ, ಬಡವರಿಗೂ ಯಾವ ಪ್ರಯೋಜನ ಇಲ್ಲ ಎಂದ ವೀರಪ್ಪ ಮೊಯ್ಲಿ

ಚಿಕ್ಕಬಳ್ಳಾಪುರದಲ್ಲಿ ಬಜೆಟ್​ ಕುರಿತು ಮಾತನಾಡಿದ ಮಾಜಿ ಸಿಎಂ ಡಾ.ಎಂ.ವೀರಪ್ಪ ಮೊಯ್ಲಿ ‘ಇದು ಶ್ರೀಮಂತರ ಪರವಾದ ಬಜೆಟ್​​, ಬಡವರಿಗೆ ಪ್ರಯೋಜನವಿಲ್ಲ ಎಂದರು. ಮಧ್ಯಮ ವರ್ಗದವರಿಗೂ ಹಾಗೂ ಬಡವರಿಗೂ ಈ ಬಜೆಟ್​ನಿಂದ ಯಾವ ಪ್ರಯೋಜನ ಇಲ್ಲ. ಶ್ರೀಮಂತರು ಶ್ರೀಮಂತರಾಗುತ್ತಿದ್ದಾರೆ ಬಡವರು ಬಡವರಾಗಿಯೇ ಉಳಿಯುತ್ತಿದ್ದಾರೆ. ಮಧ್ಯಂತರ ಬಜೆಟ್​ನಿಂದ ನಿರೀಕ್ಷೆಗಳು ಈಡೇರಲ್ಲಎಂದು ಅಭಿಪ್ರಾಯ ಹಂಚಿಕೊಂಡರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:19 pm, Thu, 1 February 24