ಪಾಟ್ನಾ ಫೆಬ್ರುವರಿ 16: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಅವರು ಬಿಜೆಪಿ (BJP) ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA)ಕ್ಕೆ ಸೇರಿ ಒಂದು ತಿಂಗಳು ಆಗಿಲ್ಲ. ಈಗಾಗಲೇ ರಾಷ್ಟ್ರೀಯ ಜನತಾ ದಳ (RJD) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ (Lalu Yadav)ನಿತೀಶ್ ಗಾಗಿ ನಮ್ಮ ಬಾಗಿಲು ತೆರೆದಿರುತ್ತದೆ ಎಂದು ಹೇಳುವ ಮೂಲಕ ಅಚ್ಚರಿ ಹುಟ್ಟಿಸಿದ್ದಾರೆ. ಗುರುವಾರ, ಮುಂಬರುವ ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಮನೋಜ್ ಝಾ ಮತ್ತು ಸಂಜಯ್ ಯಾದವ್ ಅವರ ಜತೆಯಾಗಿದ್ದ ಆರ್‌ಜೆಡಿ ನಾಯಕ ನಿತೀಶ್ ಬಗ್ಗೆ ಮಾತನಾಡಿದ್ದಾರೆ. ಮಹಾಘಟಬಂಧನ್‌ನಿಂದ ಹಿಂದೆ ಸರಿಯುವ ನಿತೀಶ್ ಕುಮಾರ್ ನಿರ್ಧಾರದ ನಂತರ ಬಿಹಾರ ವಿಧಾನಸಭೆಯಲ್ಲಿ ಇಬ್ಬರು ನಾಯಕರು ಪರಸ್ಪರ ಮುಖಾಮುಖಿಯಾಗಿದ್ದಾರೆ.
ಲಾಲು ಪ್ರಸಾದ್ ಅವರು ನಿತೀಶ್ ಕುಮಾರ್ ಜೊತೆಗಿನ ಬಾಂಧವ್ಯಕ್ಕೆ ಇನ್ನೂ ತೆರೆದುಕೊಂಡಿದ್ದಾರೆ ಎಂದು ಇದು ಸೂಚಿಸುತ್ತದೆಯೇ ಕೇಳಿದಾಗ, ಆರ್‌ಜೆಡಿ ಮುಖ್ಯಸ್ಥರು “ಅವರು ಹಿಂತಿರುಗಿ ಬರಲಿ. ನಂತರ ನಾವು ನೋಡುತ್ತೇವೆ (ಜಬ್ ಆಯೇಂಗೆ ತಬ್ ದೇಖಾ ಜಾಯೇಗಾ)” ಎಂದು ಉತ್ತರಿಸಿದರು. ಹಿಂದಿನ ಮಿತ್ರನಿಗೆ ಇನ್ನೂ ಬಾಗಿಲು ತೆರೆದಿದೆಯೇ ಎಂದು ಮತ್ತಷ್ಟು ಒತ್ತಿಕೇಳಿದಾಗ “ಬಾಗಿಲು ಯಾವಾಗಲೂ ತೆರೆದಿರುತ್ತದೆ ” ಎಂದು ಲಾಲು ಉತ್ತರಿಸಿದ್ದಾರೆ.
ಆದಾಗ್ಯೂ, ಜೆಡಿಯು ಮುಖ್ಯ ವಕ್ತಾರ ಮತ್ತು ಎಂಎಲ್‌ಸಿ ನೀರಜ್ ಕುಮಾರ್ ಅವರು ಹೆಚ್ಚಿನ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. “ಬಾಗಿಲುಗಳು ಇನ್ನೂ ತೆರೆದಿವೆ ಎಂದು ಲಾಲು ಜಿ ಹೇಳುತ್ತಾರೆ. ಅಲಿಘರ್‌ನ ಪ್ರಸಿದ್ಧ ಬೀಗವನ್ನು ಬಾಗಿಲುಗಳಿಗೆ ಹಾಕಲಾಗಿದೆ ಎಂದು ಅವರು ತಿಳಿದಿರಬೇಕು. ನಮ್ಮ ನಾಯಕ ನಿತೀಶ್ ಕುಮಾರ್ ಅವರು ಆರ್‌ಜೆಡಿ ನಮ್ಮೊಂದಿಗೆ ಅಧಿಕಾರ ಹಂಚಿಕೊಂಡಾಗಲೆಲ್ಲಾ ಅದು ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಹಿಂತಿರುಗುವ ಪ್ರಶ್ನೆಯೇ ಇಲ್ಲ ” ಎಂದಿದ್ದಾರೆ
ಲಾಲು ಪ್ರಸಾದ್ ಅವರ ಪುತ್ರ ಮತ್ತು ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಶುಕ್ರವಾರ ಸಸಾರಾಮ್‌ನಲ್ಲಿ ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನು ಉದ್ದೇಶಿಸಿ ಮಾತನಾಡುವಾಗ ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.
“ನಮ್ಮ ಸಿಎಂ ಹೇಗಿದ್ದಾರೆಂದು ನಿಮಗೆಲ್ಲ ಚೆನ್ನಾಗಿ ಗೊತ್ತಿದೆ, ಯಾರ ಮಾತನ್ನೂ ಕೇಳಲು ಇಷ್ಟಪಡುವುದಿಲ್ಲ. ನಾನು ಸಾಯುತ್ತೇನೆ, ಆದರೆ ಬಿಜೆಪಿ ಸೇರುವುದಿಲ್ಲ ಎಂದು ಹೇಳುತ್ತಿದ್ದರು. ಈಗ ನೋಡಿ ಏನಾಗಿದೆ ಎಂದು.2024ರಲ್ಲಿ ಬಿಜೆಪಿಯನ್ನು ಸೋಲಿಸಲು ನಾವು ಸಾಕಷ್ಟು ತ್ಯಾಗ ಮಾಡಬೇಕಾಗಿದೆ. ನಾವು ಸುಸ್ತಾದ ಮುಖ್ಯಮಂತ್ರಿಯನ್ನು ನೇಮಿಸಿದ್ದೇವೆ ಎಂದು ತೇಜಸ್ವಿ ಯಾದವ್ ಹೇಳಿದರು.
ಇದನ್ನೂ ಓದಿ: ಡ್ರೈವರ್ ಸೀಟ್ನಲ್ಲಿ ತೇಜಸ್ವಿ, ಜೀಪ್ನಲ್ಲಿ ರಾಹುಲ್ ಬಿಹಾರ ಯಾತ್ರೆ
ಲಾಲು ಪ್ರಸಾದ್ ಮತ್ತು ನಿತೀಶ್ ಕುಮಾರ್ ಅವರ ಹಾದಿಯು ದಶಕಗಳಿಂದ ಬಿಹಾರದ ರಾಜಕೀಯದೊಂದಿಗೆ ಹೆಣೆದುಕೊಂಡಿದ್ದು33 ವರ್ಷಗಳಿಗೂ ಹೆಚ್ಚು ಕಾಲ ರಾಜ್ಯದಲ್ಲಿ ಅಧಿಕಾರದಲ್ಲಿದೆ. ಜೆಪಿ ಚಳವಳಿಯ ಸಮಯದಲ್ಲಿ ಮಿತ್ರಪಕ್ಷಗಳಾಗಿ ಪ್ರಾರಂಭವಾದ ಅವರ ನಂಟು ನಂತರ ಪ್ರತಿಸ್ಪರ್ಧಿಗಳಾದರು. ಆಮೇಲೆ ಮಿತ್ರರು, ನಂತರ ಪ್ರತಿಸ್ಪರ್ಧಿಗಳು, ನಂತರ ಮಿತ್ರರು, ನಂತರ ಮತ್ತೆ ಪ್ರತಿಸ್ಪರ್ಧಿಗಳು ಹೀಗೆ ಪಾತ್ರಗಳು ಬದಲಾಗುತ್ತಾ ಇತ್ತು.
ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ