ಆಪರೇಷನ್ ಹಸ್ತ ಭೀತಿ; ಬಿಜೆಪಿ ಕೋರ್​ ಕಮಿಟಿ ಸಭೆಯಲ್ಲಿ ಕೈಗೊಂಡ ನಿರ್ಣಯಗಳೇನು?

| Updated By: ಗಣಪತಿ ಶರ್ಮ

Updated on: Aug 21, 2023 | 6:12 PM

BJP core committee meeting; ಸೋತ ನೋವಿನಲ್ಲಿರುವ ಕಾರ್ಯಕರ್ತರಿಗೆ ಧೈರ್ಯ ತುಂಬಬೇಕು. ಪಕ್ಷ ಬಿಡುವವರ ಮನವೊಲಿಸಬೇಕು. ಆದರೆ, ಅಂಗಲಾಚುವುದು ಬೇಡ. ಈಗ ನಾವು ಎಡವಿದ್ದೇವೆ. ಮುಂದೆ ಚೇತರಿಸಿಕೊಳ್ಳುತ್ತೇವೆ ಎಂಬ ತೀರ್ಮಾನಕ್ಕೆ ಬಿಜೆಪಿ ಕೋರ್ ಕಮಿಟಿ ಸದಸ್ಯರು ಬಂದಿದ್ದಾರೆ.

ಆಪರೇಷನ್ ಹಸ್ತ ಭೀತಿ; ಬಿಜೆಪಿ ಕೋರ್​ ಕಮಿಟಿ ಸಭೆಯಲ್ಲಿ ಕೈಗೊಂಡ ನಿರ್ಣಯಗಳೇನು?
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಆಗಸ್ಟ್ 21: ಕರ್ನಾಟಕ ರಾಜಕೀಯದಲ್ಲಿ ಆಪರೇಷನ್ ಹಸ್ತದ (Operation Hasta) ಭೀತಿ ಎದುರಾಗಿರುವ ಬೆನ್ನಲ್ಲೇ ಪ್ರಭಾವಿ ನಾಯಕರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಬಿಜೆಪಿ (BJP) ಕಸರತ್ತು ನಡೆಸುತ್ತಿದೆ. ಎಸ್​ಟಿ ಸೋಮಶೇಖರ್ ಹಾಗೂ ಶಿವರಾಮ ಹೆಬ್ಬಾರ್​ ಕಾಂಗ್ರೆಸ್​ (Congress) ಸೇರ್ಪಡೆ ವಿಚಾರಕ್ಕೆ ಸಂಬಂದಿಸಿದಂತೆ ಸೋಮವಾರ ನಡೆದ ಬಿಜೆಪಿ ಕೋರ್​ ಕಮಿಟಿ ಸಭೆಯಲ್ಲಿ ಚರ್ಚೆ ನಡೆಯಿತು. ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ, ಶಾಸಕರ ಜತೆ ಕಾರ್ಯಕರ್ತರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲು ನಿರ್ಧಾರ ಕೈಗೊಳ್ಳಲಾಯಿತು.

ಸೋತ ನೋವಿನಲ್ಲಿರುವ ಕಾರ್ಯಕರ್ತರಿಗೆ ಧೈರ್ಯ ತುಂಬಬೇಕು. ಪಕ್ಷ ಬಿಡುವವರ ಮನವೊಲಿಸಬೇಕು. ಆದರೆ, ಅಂಗಲಾಚುವುದು ಬೇಡ. ಈಗ ನಾವು ಎಡವಿದ್ದೇವೆ. ಮುಂದೆ ಚೇತರಿಸಿಕೊಳ್ಳುತ್ತೇವೆ ಎಂಬ ತೀರ್ಮಾನಕ್ಕೆ ಬಿಜೆಪಿ ಕೋರ್ ಕಮಿಟಿ ಸದಸ್ಯರು ಬಂದಿದ್ದಾರೆ.

ಬಿಜೆಪಿ ಶಾಸಕ ಮತ್ತು ಮಾಜಿ ಸಚಿವ ಎಸ್‌ಟಿ ಸೋಮಶೇಖರ್ ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದರು. ಕೆಲವು ದಿನಗಳ ಹಿಂದೆ ಅವರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನೂ ಭೇಟಿಯಾಗಿ ಮಾತುಕತೆ ನಡೆಸಿದ್ದರು.

ಸೋಮಶೇಖರ್ ಹಾಗೂ ಸಿದ್ದರಾಮಯ್ಯ ಭೇಟಿಗೂ ಮುನ್ನ ಜೆಡಿಎಸ್‌ನ ಆಯನೂರು ಮಂಜುನಾಥ್ ಸಹ ಉಪಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ರಾಜ್ಯ ಮುಖ್ಯಸ್ಥ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಇದು ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ.

ಸದ್ಯ ರಾಜ್ಯ ರಾಜಕೀಯದಲ್ಲಿ ‘ಆಪರೇಷನ್ ಹಸ್ತ’ದ ಕುರಿತ ಚರ್ಚೆ ಜೋರಾಗಿದೆ. ಈ ಹಿಂದೆ ಕಾಂಗ್ರೆಸ್​ನಲ್ಲಿದ್ದು 2019ರಲ್ಲಿ ಬಿಜೆಪಿ ಸೇರಿದ್ದ ಕೆಲವು ನಾಯಕರು ಮತ್ತೆ ಮಾತೃತಪಕ್ಷ ಸೇರುವ ಒಲವು ತೋರಿದ್ದಾರೆ. ಬಿಜೆಪಿಯ ನಾಯಕರು ಹಾಗೂ ಶಾಸಕರನ್ನು ಕಾಂಗ್ರೆಸ್ ತೆಕ್ಕೆಗೆ ಕರೆತರುವ ಹುನ್ನಾರ ನಡೆಯುತ್ತಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: 15ನೇ ಹಣಕಾಸು ಆಯೋಗದ ಶಿಫಾರಸಿನಂತೆ ವಿಶೇಷ ಅನುದಾನ ಬಿಡುಗಡೆಗೆ ಸಚಿವೆ ನಿರ್ಮಲಾ ಸೀತಾರಾಮನ್​​ಗೆ ಪತ್ರ ಬರೆದ ಸಿದ್ದರಾಮಯ್ಯ

2019 ರಲ್ಲಿ ಕಾಂಗ್ರೆಸ್​​ ಮತ್ತು ಜೆಡಿಎಸ್​​ನ 17 ಶಾಸಕರು ಬಿಜೆಪಿಗೆ ‘ಆಪರೇಷನ್ ಕಮಲ’ ಮೂಲಕ ಬಿಜೆಪಿ ಸೇರಿದ್ದರು. ಅದಕ್ಕೆ ಪ್ರತೀಕಾರವಾಗಿ ಇದೀಗ ಕಾಂಗ್ರೆಸ್ ಪಕ್ಷವು ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ‘ಆಪರೇಷನ್ ಹಸ್ತ’ ಕಾರ್ಯಾಚರಣೆಗೆ ಇಳಿದಿದೆ ಎನ್ನಲಾಗಿದೆ.

ಬಿಜೆಪಿಯ ಹಲವು ಶಾಸಕರು ಮತ್ತು ಮುಖಂಡರು ಕಾಂಗ್ರೆಸ್ ನಾಯಕರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿದ್ದು, ಬಿಜೆಪಿ ತನ್ನ ನಾಯಕರ ಮನವೊಲಿಕೆಯ ಕಸರತ್ತು ಆರಂಭಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ