ಮುಖ್ಯಮಂತ್ರಿ ಆಗಲು ಸಿದ್ಧ, ನಾನೂ 50 ಶಾಸಕರನ್ನು ಕರೆದೊಯ್ಯಬಹುದು; ಪರಮೇಶ್ವರ ಹೇಳಿಕೆಯ ಮರ್ಮವೇನು?

|

Updated on: May 16, 2023 | 9:41 PM

ಮುಖ್ಯಮಂತ್ರಿ ಆಯ್ಕೆ ವಿಚಾರ ಕಾಂಗ್ರೆಸ್ ಪಕ್ಷದ ಹೈಕಮಾಂಡ್​ಗೆ ಕಗ್ಗಂಟಾಗಿ ಪರಿಣಮಿಸಿರುವ ಬೆನ್ನಲ್ಲೇ, ನಾನೂ ಸಿಎಂ ಆಗಲು ಸಿದ್ಧ ಎಂದು ಜಿ ಪರಮೇಶ್ವರ ಹೇಳಿರುವುದಾಗಿ ವರದಿಯಾಗಿದೆ.

ಮುಖ್ಯಮಂತ್ರಿ ಆಗಲು ಸಿದ್ಧ, ನಾನೂ 50 ಶಾಸಕರನ್ನು ಕರೆದೊಯ್ಯಬಹುದು; ಪರಮೇಶ್ವರ ಹೇಳಿಕೆಯ ಮರ್ಮವೇನು?
ಮಂಡ್ಯ ಜಿಲ್ಲೆಯ ಮದ್ದೂರ ತಾಲೂಕಿನ ಮರಳಿಗ ಗ್ರಾಮದ ಯುವಕ ಶಿವರಾಜ್ ಗೃಹ ಸಚಿವ ಪರಮೇಶ್ವರ್ ವಿರುದ್ಧ ಪೋಸ್ಟ್ ಹಾಕಿದ್ದ
Follow us on

ಬೆಂಗಳೂರು: ಮುಖ್ಯಮಂತ್ರಿ ಆಯ್ಕೆ ವಿಚಾರ ಕಾಂಗ್ರೆಸ್ ಪಕ್ಷದ ಹೈಕಮಾಂಡ್​ಗೆ ಕಗ್ಗಂಟಾಗಿ ಪರಿಣಮಿಸಿರುವ ಬೆನ್ನಲ್ಲೇ, ನಾನೂ ಸಿಎಂ ಆಗಲು ಸಿದ್ಧ ಎಂದು ಜಿ ಪರಮೇಶ್ವರ ಹೇಳಿರುವುದಾಗಿ ವರದಿಯಾಗಿದೆ. ಮುಖ್ಯಮಂತ್ರಿ ಆಗಲು ಸಿದ್ಧನಿದ್ದೇನೆ. ನಾನೂ 50 ಶಾಸಕರನ್ನು ಕರೆದೊಯ್ಯಬಹುದು. ಆದರೆ, ಎಂದಿಗೂ ಲಾಬಿ ಮಾಡುವುದಿಲ್ಲ ಎಂದು ಪರಮೇಶ್ವರ ಹೇಳಿದ್ದಾರೆ. ಈ ಮೂಲಕ, ತಮ್ಮನ್ನು ಮುಖ್ಯಮಂತ್ರಿ ಮಾಡಿದರೆ ಸರ್ಕಾರ ಮುನ್ನಡೆಸಲು ಸಿದ್ಧ ಎಂದು ಕೊರಟಗೆರೆ ಕ್ಷೇತ್ರದ ಶಾಸಕರಾಗಿರುವ ಅವರು ಹೇಳಿದ್ದಾರೆ.

ನನಗೆ ಹೈಕಮಾಂಡ್ ಮೇಲೆ ನಂಬಿಕೆ ಇದೆ. ನನಗೆ ಕೆಲವು ತತ್ವಗಳಿವೆ. ನಾನೂ ಸಹ 50 ಶಾಸಕರನ್ನು ಕರೆದುಕೊಂಡು ಹೋಗಿ ಗುಲ್ಲೆಬ್ಬಿಸಬಹುದು. ಆದರೆ ನನಗೆ ಪಕ್ಷದ ಶಿಸ್ತು ಹೆಚ್ಚು ಮುಖ್ಯ ಎಂದು ಪರಮೇಶ್ವರ ಹೇಳಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.

ಹೈಕಮಾಂಡ್ ತೀರ್ಮಾನ ಕೈಗೊಂಡು ಸರ್ಕಾರ ಮುನ್ನಡೆಸಲು ಹೇಳಿದರೆ, ನಾನು ಆ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಿದ್ಧನಿದ್ದೇನೆ. ನಾನು ಅವಕಾಶವನ್ನು ನಿರಾಕರಿಸುತ್ತೇನೆ ಎಂದಲ್ಲ, ನಾನು ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ ಎಂಬುದು ಹೈಕಮಾಂಡ್‌ಗೆ ತಿಳಿದಿದೆ. ನಾನೂ ಸಹ ಪಕ್ಷಕ್ಕೆ ಸಹಾಯ ಮಾಡಿದ್ದೇನೆ. ಅಧಿಕಾರದ ವಿಚಾರದಲ್ಲಿ ಹೇಳುವುದಾದರೆ ನಾನು ಉಪ ಮುಖ್ಯಮಂತ್ರಿಯಾಗಿದ್ದೆ. ಹೀಗಾಗಿ ಲಾಬಿ ಮಾಡುವ ಬದಲು ಸುಮ್ಮನಿದ್ದೇನೆ. ಸುಮ್ಮನಿದ್ದೇನೆ ಎಂದ ಮಾತ್ರಕ್ಕೆ ನಾನು ಅನರ್ಹ ಎಂದು ಅರ್ಥವಲ್ಲ ಎಂದೂ ಅವರು ಹೇಳಿದ್ದಾರೆ.

ಇದನ್ನೂ ಓದಿ: ಮುಗಿಯದ ಸಿಎಂ ಸ್ಥಾನದ ಜಟಾಪಟಿ; ಕಾಂಗ್ರೆಸ್​ ಹೈಕಮಾಂಡ್​ನಿಂದ ನಾಳೆ ಬೆಳಗ್ಗೆ ದೆಹಲಿಯಲ್ಲಿ ಅಂತಿಮ ಸಭೆ

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗುವುದೇ ಸೂಕ್ತ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ ಎಂದು ವರದಿ ಉಲ್ಲೇಖಿಸಿದೆ. ಸಿಎಂ ಹುದ್ದೆಯ ಪೈಪೋಟಿ ಶೀಘ್ರದಲ್ಲೇ ಕೊನೆಗೊಳ್ಳಬಹುದು ಎಂಬ ಆಶಾವಾದವನ್ನೂ ಅವರು ವ್ಯಕ್ತಪಡಿಸಿದ್ದಾರೆ.

ಉಪ ಮುಖ್ಯಮಂತ್ರಿಗಳ ನೇಮಕ ಸಾಧ್ಯತೆಯನ್ನು ಅವರು ತಳ್ಳಿ ಹಾಕಿಲ್ಲ. ಆ ಬಗ್ಗೆ ಈಗಲೇ ಏನೂ ಹೇಳಲಾಗದು ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ