ವಿವಾದಿತ ಎಪಿಎಂಸಿ ಕಾಯ್ದೆ ಹಿಂಪಡೆಯಲು ಕರ್ನಾಟಕ ಸರ್ಕಾರ ನಿರ್ಧಾರ: ಕಾನೂನು ಸಚಿವ ಎಚ್​ಕೆ ಪಾಟೀಲ್​

|

Updated on: Jun 15, 2023 | 5:42 PM

ಬಿಜೆಪಿ ಆಡಳಿತದ ಅವಧಿಯಲ್ಲಿ ಜಾರಿಗೆ ತಂದಿದ್ದ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ರದ್ದುಗೊಳಿಸಿ, ಹಳೆ ಕಾಯ್ದೆಗೆ ಸುಧಾರಿತ ರೂಪದಲ್ಲಿ ತಿದ್ದುಪಡಿ ಮಾಡಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್​ಕೆ ಪಾಟೀಲ್​ ಹೇಳಿದರು.

ವಿವಾದಿತ ಎಪಿಎಂಸಿ ಕಾಯ್ದೆ ಹಿಂಪಡೆಯಲು ಕರ್ನಾಟಕ ಸರ್ಕಾರ ನಿರ್ಧಾರ: ಕಾನೂನು ಸಚಿವ ಎಚ್​ಕೆ ಪಾಟೀಲ್​
ಸಚಿವ ಹೆಚ್.ಕೆ.ಪಾಟೀಲ್​ ಸುದ್ದಿಗೋಷ್ಠಿ
Follow us on

ಬೆಂಗಳೂರು: ಬಿಜೆಪಿ ಆಡಳಿತದ ಅವಧಿಯಲ್ಲಿ ಜಾರಿಗೆ ತಂದಿದ್ದ ಎಪಿಎಂಸಿ ತಿದ್ದುಪಡಿ ಕಾಯ್ದೆ (Amend APMC Act) ಯನ್ನು ರದ್ದುಗೊಳಿಸಿ, ಹಳೆ ಕಾಯ್ದೆಗೆ ಸುಧಾರಿತ ರೂಪದಲ್ಲಿ ತಿದ್ದುಪಡಿ ಮಾಡಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್​ಕೆ ಪಾಟೀಲ್​ ಹೇಳಿದರು. ಬುಧವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಪಿಎಂಸಿ ಕಾನೂನು ಹಿಂಪಡೆಯಲು ಕಾಂಗ್ರೆಸ್ ಸರ್ಕಾರ ನಿರ್ಧರಿಸಿದೆ. ಜುಲೈ 3ರಿಂದ ಆರಂಭವಾಗಲಿರುವ ಬಜೆಟ್ ಅಧಿವೇಶನದಲ್ಲಿ ಹೊಸ ಮಸೂದೆ ಮಂಡನೆಯಾಗಬಹುದು ಎಂದು ತಿಳಿಸಿದರು.

ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್​ ಮಾತನಾಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಪ್ರಯೋಜನವಾಗಿಲ್ಲ. ಇದರಿಂದ 1 ಲಕ್ಷ ರೈತ ಕುಟುಂಬಗಳಿಗೆ ಸಮಸ್ಯೆಯಾಗಿದೆ. ರಾಜ್ಯದಲ್ಲಿ ಮಾರುಕಟ್ಟೆ ಕೂಡ ಗಣನೀಯವಾಗಿ ಕಡಿಮೆಯಾಗಿದೆ. ಎಪಿಎಂಸಿ ತಿದ್ದುಪಡಿ ಕಾಯ್ದೆ ಜಾರಿ ನಂತರ 570 ಕೋಟಿಯಿಂದ 200 ಕೋಟಿಗೆ ವ್ಯವಹಾರ ಕುಸಿದಿದೆ ಎಂದು ಹೇಳಿದರು.

ಇದನ್ನೂ ಓದಿ: Cabinet Meeting: ಮತಾಂತರ ನಿಷೇಧ ಕಾಯ್ದೆ ತಿದ್ದುಪಡಿಗೆ ತೀರ್ಮಾನ, ಪಠ್ಯ ಪರಿಷ್ಕರಣೆಗೆ ಅಸ್ತು ಎಂದ ಸಿದ್ದರಾಮಯ್ಯ ಸಂಪುಟ!

ಎಪಿಎಂಸಿ ಕಾಯ್ದೆ ಎಂದರೇನು?

ಕರ್ನಾಟಕ ಕೃಷಿ ಉತ್ತನ್ನಗಳ ಮಾರಾಟ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆಯನ್ನು 1966ರಲ್ಲಿ ಜಾರಿಗೆ ತರಲಾಗಿತ್ತು. ಬಳಿಕ 20 ವರ್ಷಗಳ ನಂತರ ರೈತರನ್ನು ಗಮನದಲ್ಲಿಟ್ಟುಕೊಂಡು ಎಪಿಎಂಸಿ ಕಾಯ್ದೆಗೆ ತಿದುಪಡಿ ಮಾಡಲಾಗಿತ್ತು. ನಂತರ 2017ರಲ್ಲಿ ಎಪಿಎಂಸಿ ಕಾಯ್ದೆ ಜಾರಿಗೆ ತರಲಾಗಿತ್ತು. ರೈತರು ಬೆಳೆಯುವ ಫಸಲನ್ನು ಎಪಿಎಂಸಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಅದನ್ನು ಖರೀದಿ ಮಾಡುವ ವ್ಯಾಪಾರಿಗಳು
ಎಪಿಎಂಸಿಗಳಲ್ಲಿ ನೋಂದಣಿ ಮಾಡಿಸಿಕೊಂಡು ರೈತರು ಬೆಳೆದ ಬೆಳೆಯನ್ನು ಹರಾಜಿನ ಮೂಲಕ ಖರೀದಿಸಲು ಅವಕಾಶವಿರುತ್ತದೆ.

ಎಪಿಎಂಸಿಯ ಜವಾಬ್ದಾರಿಗಳೇನು?

ಎಪಿಎಂಸಿಯಲ್ಲಿ ರೈತರು ಮಾರಾಟ ಮಾಡುವ ಸಮಸ್ಯೆಗಳನ್ನು ಮತ್ತು ಮಧ್ಯವರ್ತಿಗಳ ಶೋಷಣೆಯನ್ನು  ಮುಕ್ತವಾಗಿಸಲು ಪರಿಚಯಿಸಿದ್ದರಿಂದ, ಇದು ರೈತರಿಗೆ ಅವರ ಉತ್ಪನ್ನಗಳಿಗೆ ಯೋಗ್ಯ ಬೆಲೆ ಮತ್ತು ಕಾಲಮಿತಿ ಪಾವತಿಗಳನ್ನು ಖಾತ್ರಿಗೊಳಿಸುತ್ತದೆ. ಇದು ಕೃಷಿ ವ್ಯಾಪಾರ ಪದ್ಧತಿಗಳನ್ನು ನಿಯಂತ್ರಿಸುತ್ತದೆ. ಉತ್ಪಾದಕರು ಮತ್ತು ಮಾರಾಟಗಾರರ ಹಿತಾಸಕ್ತಿಗಳನ್ನು ಕಾಪಾಡಲಾಗುತ್ತದೆ.

ಇದನ್ನೂ ಓದಿ: ಕರ್ನಾಟಕ ಸಾರಿಗೆ ನೌಕರರ ವೇತನ ಶೇಕಡಾ 15ರಷ್ಟು ಹೆಚ್ಚಳಕ್ಕೆ ಸಚಿವ ಸಂಪುಟ ಅನುಮೋದನೆ

ಎಪಿಎಂಸಿ ಅಸ್ತಿತ್ವಕ್ಕೆ ಬಂದದ್ದು ಹೇಗೆ?

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (APMC) ಕಾಯ್ದೆಯನ್ನು ಭಾರತ ಸರ್ಕಾರ ವಿನ್ಯಾಸಗೊಳಿಸಿದ್ದು, ಇದನ್ನು 2003 ರಲ್ಲಿ ಪರಿಚಯಿಸಲಾಯಿತು. ಕೃಷಿ ಮಾರುಕಟ್ಟೆಗಳಿಗೆ ಸುಧಾರಣೆಗಳನ್ನು ತರುವುದು ಈ ಕಾಯ್ದೆಯ ಮುಖ್ಯ ಉದ್ದೇಶವಾಗಿದೆ. ಎಪಿಎಂಸಿ ಜೊತೆಗೆ ಹೊಸ ಮಾರುಕಟ್ಟೆ ಚಾನೆಲ್‌ಗಳಿಂದ ಖರೀದಿದಾರರು ಮತ್ತು ರೈತರ ನಡುವಿನ ಒಪ್ಪಂದಗಳವರೆಗೆ ವಿವಿಧ ನಿಬಂಧನೆಗಳನ್ನು ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.