ಮಾಜಿ ಸಿಎಂ ಅಖಿಲೇಶ್ ಯಾದವ್​ ಭೇಟಿ ಮಾಡಿದ ನಿಖಿಲ್ ಕುಮಾರಸ್ವಾಮಿ: ಲೋಕಸಭೆ ಚುನಾವಣೆ ಬಗ್ಗೆ ಸುದೀರ್ಘ ಚರ್ಚೆ

ಉತ್ತರ ಪ್ರದೇಶದ ಮಾಜಿ ಸಿಎಂ ಅಖಿಲೇಶ್ ಯಾದವ್ ಅವರನ್ನು ಜೆಡಿಎಸ್​ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಗುರುವಾರ ಭೇಟಿ ಮಾಡಿದ್ದು, ಲೋಕಸಭೆ ಚುನಾವಣೆ ಸೇರಿದಂತೆ ರಾಜ್ಯ, ರಾಷ್ಟ್ರ ರಾಜಕೀಯದ ಬಗ್ಗೆ ಸುದೀರ್ಘ ಸಮಾಲೋಚನೆ ಮಾಡಿದ್ದಾರೆ.

ಮಾಜಿ ಸಿಎಂ ಅಖಿಲೇಶ್ ಯಾದವ್​ ಭೇಟಿ ಮಾಡಿದ ನಿಖಿಲ್ ಕುಮಾರಸ್ವಾಮಿ: ಲೋಕಸಭೆ ಚುನಾವಣೆ ಬಗ್ಗೆ ಸುದೀರ್ಘ ಚರ್ಚೆ
ಅಖಿಲೇಶ್ ಯಾದವ್, ನಿಖಿಲ್ ಕುಮಾರಸ್ವಾಮಿ
Follow us
ಗಂಗಾಧರ​ ಬ. ಸಾಬೋಜಿ
|

Updated on: Jun 15, 2023 | 8:22 PM

ಲಖನೌ: ಜಾತ್ಯತೀತ ಜನತಾದಳ ರಾಜ್ಯ ಯುವ ಘಟಕ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರು ಇಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ವರಿಷ್ಠ ನಾಯಕ ಅಖಿಲೇಶ್ ಯಾದವ್ (Akhilesh Yadav) ಅವರನ್ನು ಲಖನೌದ ಅವರ ನಿವಾಸದಲ್ಲಿ ಭೇಟಿಯಾಗಿ ಸುದೀರ್ಘ ಮಾತುಕತೆ ನಡೆಸಿದರು. ಭೇಟಿ ಬಳಿಕ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಅತ್ಯಂತ ವಿಶ್ವಾಸಪೂರ್ವಕ ಹಾಗೂ ಸಹೋದರ ವಾತ್ಸಲ್ಯದೊಂದಿಗೆ ನಡೆದ ಈ ಭೇಟಿಯ ಸಂದರ್ಭದಲ್ಲಿ ಲೋಕಸಭೆ ಚುನಾವಣೆಯೂ ಸೇರಿದಂತೆ ಭವಿಷ್ಯದ ರಾಜಕೀಯ ಬೆಳವಣಿಗೆಗಳ ಕುರಿತಂತೆ ಮಹತ್ವದ ಸಮಾಲೋಚನೆ ನಡೆಸಲಾಯಿತು ಎಂದು ಹೇಳಿದರು.

ಸಮಾಜವಾದಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಹಾಗೂ ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ ಅವರ ಕುಟುಂಬ ವಿಶೇಷ ಬಾಂಧವ್ಯ ಹೊಂದಿದ್ದಾರೆ. ಈ ಬಗ್ಗೆ ವಿಶೇಷವಾಗಿ ತಮ್ಮ ನೆನಪುಗಳನ್ನು ಅಖಿಲೇಶ್ ಯಾದವ್ ಅವರು ಮೆಲುಕು ಹಾಕಿದರು ಎಂದರು. ಬಹುಮುಖ್ಯವಾಗಿ ಹೆಚ್.ಡಿ.ದೇವೇಗೌಡರು ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಕ್ಷೇಮವನ್ನು ವಿಚಾರಿಸಿದರು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Cyclone Biparjoy: ಗುಜರಾತ್ ಕರಾವಳಿಗೆ ಅಪ್ಪಳಿಸಿದ ಬಿಪೋರ್​​ಜಾಯ್ ಚಂಡಮಾರುತ; ಜೋರು ಗಾಳಿ ಮಳೆ, ಅಬ್ಬರಿಸಿದ ಕಡಲು

ಕರ್ನಾಟಕ ವಿಧಾನಸಭೆ ಚುನಾವಣೆ ಹಾಗೂ ರಾಷ್ಟ್ರ ಮಟ್ಟದ ರಾಜಕೀಯ ಬೆಳವಣಿಗೆಗಳ ಬಗ್ಗೆ ಸಾಕಷ್ಟು ವಿಷಯಗಳನ್ನು ಅಖಿಲೇಶ್ ಅವರು ಚರ್ಚೆ ಮಾಡಿದ್ದು, ಉತ್ತರ ಪ್ರದೇಶ ರಾಜಕಾರಣದ ಹಲವಾರು ಬೆಳವಣಿಗೆಗಳನ್ನು ಅವರು ಹಂಚಿಕೊಂಡಿದ್ದಾರೆ ಎಂದು ತಿಳಿಸಿದರು.

ಲೋಕಸಭೆ ಚುನಾವಣೆ ಬಗ್ಗೆ ಚರ್ಚೆ:

ಮುಂದಿನ ಲೋಕಸಭೆ ಚುನಾವಣೆಯನ್ನು ಎದುರಿಸುವ ಬಗ್ಗೆ ಅಖಿಲೇಶ್ ಅವರು ತಮ್ಮದೇ ಆದ ವಿಶೇಷ ಕಾರ್ಯಸೂಚಿ ರೂಪಿಸಿಕೊಂಡಿದ್ದಾರೆ ಹಾಗೂ ಈಗಿನಿಂದಲೇ ಚುನಾವಣೆಯ ಸಿದ್ಧತೆಗಳನ್ನು ಭರದಿಂದ ನಡೆಸಿದ್ದಾರೆ. ಜತೆಗೆ, ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ಸಮೀಕರಣಗಳ ಬಗ್ಗೆ ನನ್ನ ಜೊತೆ ಕೂಲಂಕಷವಾಗಿ ಚರ್ಚಿಸಿದರು.

ಇದನ್ನೂ ಓದಿ: ಕಾಂಗ್ರೆಸ್​​​ಗೆ ಮರಳಿದ ಮಧ್ಯ ಪ್ರದೇಶದ ಬಿಜೆಪಿ ನಾಯಕ; 400 ಕಾರುಗಳೊಂದಿಗೆ ಸೈರನ್ ಮೊಳಗಿಸಿ ಗತ್ತು ಪ್ರದರ್ಶನ

ಮೂಲತಃ ಮೈಸೂರು ನಗರದಲ್ಲಿ ವಿದ್ಯಾಭ್ಯಾಸ ಮಾಡಿದ್ದ ಅಖಿಲೇಶ್ ಅವರು ಅಂದಿನ ದಿನಗಳನ್ನು ಸ್ಮರಿಸಿಕೊಂಡರು. ಕರ್ನಾಟಕ, ಕನ್ನಡಿಗರ ಬಗ್ಗೆ ತಮಗಿರುವ ಅಪಾರ ಗೌರವ, ಆದರಾಭಿಮಾನವನ್ನು ಹೃದಯಪೂರ್ವಕವಾಗಿ ವ್ಯಕ್ತಪಡಿಸಿದರು. ಅವರ ವಿಶ್ವಾಸ, ಪ್ರೀತಿಗೆ ನಾನು ಅಭಿನಂದನೆಗಳನ್ನು ಸಲ್ಲಿಸಿದ್ದೇನೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.